ಮಾರ್ಕ 2:1-28

2  ಆದರೂ, ಕೆಲವು ದಿನಗಳಾದ ಮೇಲೆ ಅವನು ಪುನಃ ಕಪೆರ್ನೌಮಿಗೆ ಬಂದನು ಮತ್ತು ಅವನು ಮನೆಯಲ್ಲಿದ್ದಾನೆಂಬ ಸುದ್ದಿಯು ಜನರಲ್ಲಿ ಹಬ್ಬಿತು.  ಪರಿಣಾಮ​ವಾಗಿ ಅನೇಕರು ಸೇರಿಬಂದರು. ಎಷ್ಟೆಂದರೆ ಅಲ್ಲಿ ಇನ್ನು ಸ್ಥಳವೇ ಇರಲಿಲ್ಲ, ಬಾಗಿಲಿನ ಬಳಿಯಲ್ಲಿಯೂ ಇರಲಿಲ್ಲ. ಮತ್ತು ಅವನು ಅವರಿಗೆ ವಾಕ್ಯವನ್ನು ವಿವರಿಸ​ತೊಡಗಿದನು.  ಅಷ್ಟರಲ್ಲಿ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ಕು ಮಂದಿಯಿಂದ ಹೊರಿಸಿಕೊಂಡು ಅವನ ಬಳಿಗೆ ಬಂದರು.  ಆದರೆ ಅಲ್ಲಿ ಬಹುಜನರಿದ್ದ ಕಾರಣ ಅವನನ್ನು ಯೇಸುವಿನ ಹತ್ತಿರ ತರಲು ಸಾಧ್ಯವಾಗದೆ ಹೋದುದರಿಂದ ಅವರು ಅವನಿದ್ದ ಕಡೆ ಮನೆಯ ಮೇಲ್ಚಾವಣಿಯನ್ನು ಅಗೆದು ತೆರೆದು, ದಾರಿಮಾಡಿ ಪಾರ್ಶ್ವವಾಯು ರೋಗಿಯನ್ನು ಅವನು ​ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು.  ಯೇಸು ಅವರ ನಂಬಿಕೆಯನ್ನು ನೋಡಿ, ಆ ಪಾರ್ಶ್ವವಾಯು ರೋಗಿಗೆ, “ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದನು.  ಅಲ್ಲಿ ​ಕುಳಿತಿದ್ದ ಕೆಲವು ಶಾಸ್ತ್ರಿಗಳು,  “ಈ ಮನುಷ್ಯನು ಹೀಗೇಕೆ ಮಾತಾಡುತ್ತಿದ್ದಾನೆ? ಇವನು ದೇವದೂಷಣೆಮಾಡುತ್ತಿದ್ದಾನೆ. ದೇವರೊಬ್ಬನೇ ಹೊರತು ಇನ್ನಾರು ಪಾಪಗಳನ್ನು ಕ್ಷಮಿಸಬಲ್ಲರು?” ಎಂದು ತಮ್ಮ ಹೃದಯಗಳಲ್ಲಿ ಆಲೋಚಿಸುತ್ತಿದ್ದರು.  ಅವರು ಹೀಗೆ ಆಲೋಚಿಸುತ್ತಿರುವುದನ್ನು ಯೇಸು ಕೂಡಲೆ ತನ್ನ ಆಂತರ್ಯದಲ್ಲಿ ಗ್ರಹಿಸಿಕೊಂಡು ಅವರಿಗೆ, “ನಿಮ್ಮ ಹೃದಯಗಳಲ್ಲಿ ಹೀಗೆ ಆಲೋಚಿಸುತ್ತಿರುವುದೇಕೆ?  ಯಾವುದು ಸುಲಭ? ಪಾರ್ಶ್ವವಾಯು ರೋಗಿಗೆ, ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎನ್ನುವುದೊ ಅಥವಾ ‘ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ಹೇಳುವುದೊ? 10  ಆದರೆ ಭೂಮಿಯ ಮೇಲೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯ​ಕುಮಾರನಿಗೆ ಅಧಿಕಾರವಿದೆ ಎಂದು ನೀವು ತಿಳಿದುಕೊಳ್ಳುವುದಕ್ಕೋಸ್ಕರವೇ” ಎಂದು ಹೇಳಿ​—⁠ಅವನು ಪಾರ್ಶ್ವವಾಯು ರೋಗಿಗೆ, 11  “ನೀನೆದ್ದು ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ” ಅಂದನು. 12  ಕೂಡಲೆ ಅವನು ಎದ್ದು ತನ್ನ ಹಾಸಿಗೆಯನ್ನು ಎತ್ತಿಕೊಂಡು ಅವರೆಲ್ಲರ ಮುಂದಿನಿಂದ ಹೊರಟುಹೋದನು. ಆಗ ನೆರೆದಿದ್ದವರೆಲ್ಲರೂ ಬೆರಗಾಗಿ, “ಇಂಥದನ್ನು ನಾವು ಎಂದಿಗೂ ನೋಡಿದ್ದೇ ಇಲ್ಲ” ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು. 13  ಯೇಸು ಪುನಃ ಸಮುದ್ರ ತೀರಕ್ಕೆ ಹೋದನು; ಜನರ ಗುಂಪು ಅವನ ಬಳಿಗೆ ಬರುತ್ತಾ ಇತ್ತು ಮತ್ತು ಅವನು ಅವರಿಗೆ ಬೋಧಿಸಲು ಆರಂಭಿಸಿದನು. 14  ಅವನು ಅಲ್ಲಿಂದ ಹೋಗುತ್ತಿರುವಾಗ, ತೆರಿಗೆ ಕಟ್ಟೆಯಲ್ಲಿ ಕುಳಿತುಕೊಂಡಿದ್ದ ಅಲ್ಫಾಯನ ಮಗನಾದ ಲೇವಿಯನ್ನು ಕಂಡು, “ನನ್ನ ಹಿಂಬಾಲಕನಾಗು” ಎಂದು ಹೇಳಿದನು. ಆಗ ಅವನೆದ್ದು ಅವನನ್ನು ಹಿಂಬಾಲಿಸಿದನು. 15  ಅನಂತರ ಅವನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತಿದ್ದಾಗ, ಅನೇಕ ಮಂದಿ ತೆರಿಗೆ ವಸೂಲಿಮಾಡುವವರೂ ಪಾಪಿಗಳೂ ಅವನ ಮತ್ತು ಅವನ ಶಿಷ್ಯರ ಪಂಕ್ತಿಯಲ್ಲೇ ಕುಳಿತು​ಕೊಂಡರು. ಅಂಥವರು ಬಹಳ ಮಂದಿ ಇದ್ದರು ಮತ್ತು ಅವರು ಅವನನ್ನು ಹಿಂಬಾಲಿಸತೊಡಗಿದರು. 16  ಆದರೆ ಫರಿಸಾಯರಾದ ಶಾಸ್ತ್ರಿಗಳು ಅವನು ಪಾಪಿಗಳ ಮತ್ತು ತೆರಿಗೆ ವಸೂಲಿಮಾಡುವವರ ಸಂಗಡ ಊಟಮಾಡುತ್ತಿರುವುದನ್ನು ನೋಡಿ, “ಈತನು ತೆರಿಗೆ ವಸೂಲಿಮಾಡುವವರ ಮತ್ತು ಪಾಪಿಗಳ ಸಂಗಡ ಊಟಮಾಡುತ್ತಾನಲ್ಲಾ” ಎಂದು ಅವನ ಶಿಷ್ಯರಿಗೆ ಹೇಳಿದರು. 17  ಇದನ್ನು ಕೇಳಿ ಯೇಸು ಅವರಿಗೆ, “ಆರೋಗ್ಯವಂತರಿಗೆ ವೈದ್ಯನ ಆವಶ್ಯಕತೆ ಇಲ್ಲ, ಆದರೆ ರೋಗಿಗಳಿಗೆ ಇದೆ. ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲಿಕ್ಕಾಗಿ ಬಂದಿದ್ದೇನೆ” ಅಂದನು. 18  ಯೋಹಾನನ ಶಿಷ್ಯರೂ ಫರಿಸಾಯರೂ ಉಪವಾಸವನ್ನು ಆಚರಿಸುತ್ತಿದ್ದರು. ಆದುದರಿಂದ ಅವರು ಅವನ ಬಳಿಗೆ ಬಂದು, “ಯೋಹಾನನ ಶಿಷ್ಯರೂ ಫರಿಸಾಯರ ಶಿಷ್ಯರೂ ಉಪವಾಸವನ್ನು ಆಚರಿಸುತ್ತಾರೆ, ಆದರೆ ನಿನ್ನ ಶಿಷ್ಯರು ಏಕೆ ಆಚರಿಸುವುದಿಲ್ಲ?” ಎಂದು ಕೇಳಿದರು. 19  ಅದಕ್ಕೆ ಯೇಸು ಅವರಿಗೆ ಹೇಳಿದ್ದು: “ಮದುಮಗನು ತಮ್ಮೊಂದಿಗಿರುವಾಗ ಅವನ ಸ್ನೇಹಿತರು ಉಪವಾಸಮಾಡಲಾರರು, ಅಲ್ಲವೆ? ಮದುಮಗನು ಅವರೊಂದಿಗಿರುವಷ್ಟು ಸಮಯ ಅವರು ​ಉಪವಾಸಮಾಡಲಾಗದು. 20  ಆದರೆ ಮದುಮಗನನ್ನು ಅವರ ಬಳಿಯಿಂದ ತೆಗೆದು​ಕೊಂಡುಹೋಗುವ ದಿವಸಗಳು ಬರುವವು. ಆ ದಿವಸದಲ್ಲಿ ಅವರು ಉಪವಾಸಮಾಡುವರು. 21  ಯಾರೂ ಹಳೆಯ ಮೇಲಂಗಿಗೆ ಮುದುರಿಸದಿರುವ ಬಟ್ಟೆ ತುಂಡನ್ನು ತೇಪೆಹಚ್ಚುವುದಿಲ್ಲ; ಹಚ್ಚಿದರೆ ಆ ಹೊಸ ತೇಪೆಯು ಹಳೆಯ ಬಟ್ಟೆಯನ್ನು ಎಳೆಯಲಾಗಿ ಹರಿದ ಭಾಗವು ಇನ್ನೂ ದೊಡ್ಡದಾಗುವುದು. 22  ಮಾತ್ರವಲ್ಲ, ಯಾರೂ ಹೊಸ ದ್ರಾಕ್ಷಾಮದ್ಯವನ್ನು ಹಳೆಯ ಚರ್ಮದ ಚೀಲಗಳಲ್ಲಿ ಹಾಕಿಡುವುದಿಲ್ಲ; ಹಾಕಿಟ್ಟರೆ ದ್ರಾಕ್ಷಾಮದ್ಯವು ಚರ್ಮದ ಚೀಲಗಳನ್ನು ಬಿರಿದುಹಾಕುತ್ತದೆ. ಇದರಿಂದ ದ್ರಾಕ್ಷಾಮದ್ಯ ಮತ್ತು ಚರ್ಮದ ಚೀಲಗಳು ಎರಡೂ ನಷ್ಟವಾಗುತ್ತವೆ. ಆದರೆ ಜನರು ಹೊಸ ದ್ರಾಕ್ಷಾಮದ್ಯವನ್ನು ಹೊಸ ಚರ್ಮದ ಚೀಲಗಳಲ್ಲಿ ಹಾಕಿಡುತ್ತಾರೆ.” 23  ಒಂದು ಸಬ್ಬತ್‌ ದಿನದಂದು ಅವನು ಪೈರಿನ ಹೊಲಗಳ ಮೂಲಕ ಹಾದುಹೋಗುತ್ತಿರುವಾಗ, ಅವನ ಶಿಷ್ಯರು ನಡೆಯುತ್ತಾ ತೆನೆಗಳನ್ನು ಕೀಳು​ತ್ತಿದ್ದರು. 24  ಆಗ ಫರಿಸಾಯರು ಅವನಿಗೆ, “ನೋಡು! ಇವರು ಸಬ್ಬತ್‌ ದಿನದಲ್ಲಿ ಧರ್ಮಸಮ್ಮತವಲ್ಲದ್ದನ್ನು ಏಕೆ ಮಾಡು​ತ್ತಿದ್ದಾರೆ?” ಎಂದು ಕೇಳಿದರು. 25  ಅವನು ಅವರಿಗಂದದ್ದು: “ದಾವೀದನು ತಾನೂ ತನ್ನೊಂದಿಗಿದ್ದವರೂ ಹಸಿದಿದ್ದು ಉಣ್ಣಲು ಏನೂ ಇಲ್ಲದಿದ್ದಾಗ ಅವನು ಏನು ಮಾಡಿದನೆಂಬುದನ್ನು ನೀವು ಒಮ್ಮೆಯಾದರೂ ಓದಲಿಲ್ಲವೊ? 26  ಮುಖ್ಯ ಯಾಜಕನಾದ ಅಬಿಯಾತರನ ಕಾಲದಲ್ಲಿ ಅವನು ದೇವಾಲಯವನ್ನು ಪ್ರವೇಶಿಸಿ ಯಾಜಕರು ಹೊರತು ಮತ್ತಾರಿಗೂ ತಿನ್ನಲು ಧರ್ಮಸಮ್ಮತವಲ್ಲದ ನೈವೇದ್ಯದ ರೊಟ್ಟಿಗಳನ್ನು ತಿಂದು, ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ?” 27  ಹೀಗೆ ಅವನು ಮುಂದುವರಿಸುತ್ತಾ ಹೇಳಿದ್ದು: “ಮನುಷ್ಯನು ಸಬ್ಬತ್ತಿಗೋಸ್ಕರ ಅಲ್ಲ, ಸಬ್ಬತ್ತು ಮನುಷ್ಯನಿಗೋಸ್ಕರ ಅಸ್ತಿತ್ವಕ್ಕೆ ಬಂತು; 28  ಆದುದರಿಂದ ಮನುಷ್ಯಕುಮಾರನು ಸಬ್ಬತ್ತಿಗೆ ಸಹ ಒಡೆಯನಾಗಿದ್ದಾನೆ.”

ಪಾದಟಿಪ್ಪಣಿ