ಮಾರ್ಕ 12:1-44

12  ಅವನು ಅವರೊಂದಿಗೆ ದೃಷ್ಟಾಂತಗಳ ಮೂಲಕ ಮಾತಾಡ​ಲಾರಂಭಿಸಿ ಹೇಳಿದ್ದು: “ಒಬ್ಬ ಮನುಷ್ಯನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ ಅದರ ಸುತ್ತಲೂ ಬೇಲಿ ಹಾಕಿಸಿ ದ್ರಾಕ್ಷಾಮದ್ಯದ ಗಾಣಕ್ಕೆ ಒಂದು ಭಾರಿ ತೊಟ್ಟಿಯನ್ನು ಅಗೆಸಿ, ಒಂದು ಬುರುಜನ್ನು ಕಟ್ಟಿ, ಅದನ್ನು ವ್ಯವಸಾಯಗಾರರಿಗೆ ವಹಿಸಿ​ಕೊಟ್ಟು ವಿದೇಶಕ್ಕೆ ಹೊರಟುಹೋದನು.  ತಕ್ಕ ಕಾಲ ಬಂದಾಗ ಅವನು ದ್ರಾಕ್ಷಿಯ ತೋಟದ ಫಲದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಬರಲಿಕ್ಕಾಗಿ ಆ ವ್ಯವಸಾಯಗಾರರ ಬಳಿಗೆ ಒಬ್ಬ ಆಳನ್ನು ಕಳುಹಿಸಿದನು.  ಆದರೆ ಅವರು ಅವನನ್ನು ಹಿಡಿದು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು.  ಪುನಃ ಅವನು ಮತ್ತೊಬ್ಬ ಆಳನ್ನು ಅವರ ಬಳಿಗೆ ಕಳುಹಿಸಿದನು; ಅವರು ಅವನ ತಲೆಗೆ ಹೊಡೆದು ಅವನಿಗೆ ಅವಮಾನಮಾಡಿದರು.  ಅನಂತರ ಅವನು ಇನ್ನೊಬ್ಬನನ್ನು ಕಳುಹಿಸಿದಾಗ ಅವರು ಅವನನ್ನು ಕೊಂದುಹಾಕಿದರು; ಇನ್ನೂ ಅನೇಕರನ್ನು ಕಳುಹಿಸಿದನು. ಅವರಲ್ಲಿ ಕೆಲವರಿಗೆ ಅವರು ಹೊಡೆದರು ಮತ್ತು ಕೆಲವರನ್ನು ಕೊಂದುಹಾಕಿದರು.  ಅವನಿಗೆ ಇನ್ನೊಬ್ಬನು, ಅತಿ ಪ್ರಿಯನಾಗಿದ್ದ ಒಬ್ಬ ಮಗನು ಇದ್ದನು. ‘ಅವರು ನನ್ನ ಮಗನಿಗೆ ಗೌರವ ತೋರಿಸುವರು’ ಎಂದು ಭಾವಿಸಿ ಕಡೆಯದಾಗಿ ಅವನನ್ನು ಅವರ ಬಳಿಗೆ ಕಳುಹಿಸಿದನು.  ಆದರೆ ಆ ವ್ಯವಸಾಯಗಾರರು ತಮ್ಮತಮ್ಮೊಳಗೆ, ‘ಇವನೇ ಬಾಧ್ಯಸ್ಥನು. ಬನ್ನಿರಿ ಇವನನ್ನು ಕೊಂದು​ಹಾಕೋಣ, ಆಗ ಆಸ್ತಿಯು ನಮ್ಮದಾಗುವುದು’ ಎಂದು ಮಾತಾಡಿಕೊಂಡರು.  ಹೀಗೆ ಅವರು ಅವನನ್ನು ಹಿಡಿದು ಕೊಂದುಹಾಕಿ ದ್ರಾಕ್ಷಿಯ ತೋಟದ ಹೊರಗೆ ಎಸೆದುಬಿಟ್ಟರು.  ಹಾಗಾದರೆ ದ್ರಾಕ್ಷಿಯ ತೋಟದ ಯಜಮಾನನು ಏನು ಮಾಡುವನು? ಅವನು ಬಂದು ವ್ಯವಸಾಯಗಾರರನ್ನು ಸಂಹಾರಮಾಡಿ ದ್ರಾಕ್ಷಿಯ ತೋಟವನ್ನು ಬೇರೆಯವರಿಗೆ ವಹಿಸಿಕೊಡುವನು. 10  ‘ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು. 11  ಇದು ಯೆಹೋವನಿಂದಲೇ ಆಗಿದೆ; ನಮಗೆ ಇದು ಆಶ್ಚರ್ಯವಾಗಿ ತೋರುತ್ತದೆ’ ಎಂಬ ಶಾಸ್ತ್ರವಚನವನ್ನು ನೀವು ಎಂದೂ ಓದಲಿಲ್ಲವೆ?” 12  ಅವನು ತಮ್ಮನ್ನು ಮನಸ್ಸಿನಲ್ಲಿಟ್ಟುಕೊಂಡೇ ಈ ದೃಷ್ಟಾಂತವನ್ನು ಹೇಳಿದನು ಎಂಬುದನ್ನು ಗ್ರಹಿಸಿದ ಯೆಹೂದಿ ಮುಖಂಡರು ಅವನನ್ನು ಹಿಡಿಯುವುದಕ್ಕೆ ಸಂದರ್ಭ ನೋಡುತ್ತಿದ್ದರು; ಆದರೆ ಜನರಿಗೆ ಭಯಪಟ್ಟು ಅವನನ್ನು ಬಿಟ್ಟುಹೋದರು. 13  ಆ ಮೇಲೆ ಅವರು ಅವನನ್ನು ಮಾತಿನಲ್ಲಿ ಹಿಡಿಯುವುದಕ್ಕಾಗಿ ಫರಿಸಾಯರಲ್ಲಿ ಮತ್ತು ಹೆರೋದ್ಯರಲ್ಲಿ ಕೆಲವರನ್ನು ಅವನ ಬಳಿಗೆ ಕಳುಹಿಸಿದರು. 14  ಅವರು ಬಂದು ಅವನಿಗೆ, “ಬೋಧಕನೇ, ನೀನು ಸತ್ಯವಂತನೂ ಯಾರಿಗೂ ಭಯಪಡದವನೂ ಆಗಿದ್ದೀ; ನೀನು ಮನುಷ್ಯರ ಹೊರತೋರಿಕೆಯನ್ನು ನೋಡದೆ ದೇವರ ಮಾರ್ಗವನ್ನು ಸತ್ಯಕ್ಕೆ ಅನುಗುಣವಾಗಿ ಬೋಧಿಸುವವನಾಗಿದ್ದೀ ಎಂಬುದನ್ನು ನಾವು ಬಲ್ಲೆವು. ಕೈಸರನಿಗೆ ತಲೆಗಂದಾಯವನ್ನು ನೀಡುವುದು ನ್ಯಾಯಸಮ್ಮತವೋ ಅಲ್ಲವೊ? 15  ನಾವು ನೀಡಬೇಕೊ ನೀಡಬಾರದೊ?” ಎಂದು ಕೇಳಿದರು. ಅವರ ಕಪಟವನ್ನು ಗ್ರಹಿಸಿ ಅವನು ಅವರಿಗೆ, “ನೀವು ನನ್ನನ್ನು ಪರೀಕ್ಷಿಸುವುದೇಕೆ? ನನಗೆ ಒಂದು ದಿನಾರ ನಾಣ್ಯವನ್ನು ತಂದು ತೋರಿಸಿರಿ” ಎಂದನು. 16  ಅವರು ಅದನ್ನು ತಂದುಕೊಟ್ಟರು. ಆಗ ಅವನು ಅವರಿಗೆ, “ಇದರ ಮೇಲಿರುವ ಬಿಂಬವೂ ಮೇಲ್ಬರಹವೂ ಯಾರದು?” ಎಂದು ಕೇಳಿದಾಗ, “ಕೈಸರನದು” ಎಂದು ಅವರು ಹೇಳಿದರು. 17  ಅದಕ್ಕೆ ಯೇಸು, “ಕೈಸರನದನ್ನು ಕೈಸರನಿಗೆ ಕೊಡಿರಿ, ಆದರೆ ದೇವರದನ್ನು ದೇವರಿಗೆ ಕೊಡಿರಿ” ಅಂದನು. ಆಗ ಅವರು ಅವನ ವಿಷಯದಲ್ಲಿ ಆಶ್ಚರ್ಯಪಟ್ಟರು. 18  ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅವನ ಬಳಿಗೆ ಬಂದು, 19  “ಬೋಧಕನೇ, ಒಬ್ಬನ ಅಣ್ಣನು ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಅವನ ತಮ್ಮನು ಮದುವೆಮಾಡಿಕೊಂಡು ತನ್ನ ಅಣ್ಣನಿಗಾಗಿ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಬರೆದನು. 20  ಏಳು ಮಂದಿ ಅಣ್ಣತಮ್ಮಂದಿರಿದ್ದರು; ಮೊದಲನೆಯವನು ಮದುವೆಮಾಡಿಕೊಂಡು ಸಂತಾನವಿಲ್ಲದೆ ಸತ್ತನು. 21  ಎರಡನೆಯವನು ಅವಳನ್ನೇ ಮದುವೆಮಾಡಿಕೊಂಡು ಸಂತಾನವಿಲ್ಲದೆ ಸತ್ತನು; ಅದರಂತೆಯೇ ಮೂರನೆಯವನಿಗೂ ಸಂಭವಿಸಿತು. 22  ಇದೇ ಪ್ರಕಾರ ಏಳು ಮಂದಿಯೂ ಸಂತಾನವಿಲ್ಲದೆ ಸತ್ತರು. ಕೊನೆಗೆ ಆ ಸ್ತ್ರೀಯೂ ಸತ್ತಳು. 23  ​ಪುನರುತ್ಥಾನದಲ್ಲಿ ಅವಳು ಅವರಲ್ಲಿ ಯಾರಿಗೆ ಹೆಂಡತಿಯಾಗಿರುವಳು? ಏಕೆಂದರೆ ಏಳು ಮಂದಿಯೂ ಅವಳನ್ನು ಮದುವೆಮಾಡಿಕೊಂಡಿದ್ದರಲ್ಲಾ” ಎಂದು ಅವನನ್ನು ಪ್ರಶ್ನಿಸಿದರು. 24  ಯೇಸು ಅವರಿಗೆ, “ನೀವು ಶಾಸ್ತ್ರ​ಗ್ರಂಥ​ವನ್ನಾಗಲಿ ದೇವರ ಶಕ್ತಿಯನ್ನಾಗಲಿ ತಿಳಿಯದಿರುವುದರಿಂದಲೇ ತಪ್ಪರ್ಥಮಾಡಿಕೊಂಡಿದ್ದೀರಲ್ಲವೆ? 25  ಸತ್ತವರು ಜೀವಿತರಾಗಿ ಎದ್ದುಬರುವಾಗ, ಪುರುಷರು ಮದುವೆಮಾಡಿಕೊಳ್ಳುವುದೂ ಇಲ್ಲ, ಸ್ತ್ರೀಯರನ್ನು ಮದುವೆಯಲ್ಲಿ ಕೊಡುವುದೂ ಇಲ್ಲ; ಅವರು ಸ್ವರ್ಗದಲ್ಲಿರುವ ದೇವದೂತರಂತೆ ಇರುತ್ತಾರೆ. 26  ಆದರೆ ಸತ್ತವರು ಜೀವಿತರಾಗಿ ಎದ್ದುಬರುವ ವಿಷಯದಲ್ಲಿ ಮೋಶೆಯ ಗ್ರಂಥದಲ್ಲಿರುವ ಮುಳ್ಳಿನ ಪೊದೆಯ ​ಕುರಿತಾದ ವೃತ್ತಾಂತದಲ್ಲಿ ದೇವರು ಮೋಶೆಗೆ, ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ಹೇಳಿದ್ದನ್ನು ನೀವು ಓದಲಿಲ್ಲವೊ? 27  ಆತನು ಸತ್ತವರಿಗಲ್ಲ, ಜೀವಿತರಿಗೆ ದೇವರಾಗಿದ್ದಾನೆ. ನೀವು ತೀರ ತಪ್ಪರ್ಥ​ಮಾಡಿಕೊಂಡಿದ್ದೀರಿ” ಎಂದು ಹೇಳಿದನು. 28  ಅಲ್ಲಿ ಬಂದಿದ್ದ ಶಾಸ್ತ್ರಿಗಳಲ್ಲಿ ಒಬ್ಬನು ಅವರ ವಾಗ್ವಾದವನ್ನು ಕೇಳಿ, ಯೇಸು ಒಳ್ಳೆಯ ಉತ್ತರವನ್ನು ಕೊಟ್ಟನೆಂದು ತಿಳಿದು, “ಎಲ್ಲ ಆಜ್ಞೆಗಳಲ್ಲಿ ಮೊದಲನೆಯದು ಯಾವುದು?” ಎಂದು ಅವನನ್ನು ಕೇಳಿದನು. 29  ಅದಕ್ಕೆ ಅವನು, “ ‘ಇಸ್ರಾಯೇಲ್‌ ಜನವೇ ಕೇಳು, ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು, 30  ಮತ್ತು ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಬಲದಿಂದಲೂ ಪ್ರೀತಿಸಬೇಕು’ ಎಂಬುದೇ ಮೊದಲನೆಯ ಆಜ್ಞೆಯಾಗಿದೆ. 31  ಎರಡನೆಯ ಆಜ್ಞೆಯು, ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದಾಗಿದೆ. ಇವುಗಳಿಗಿಂತ ದೊಡ್ಡ ಆಜ್ಞೆ ಮತ್ತೊಂದಿಲ್ಲ” ಎಂದು ಉತ್ತರಿಸಿದನು. 32  ಆಗ ಆ ಶಾಸ್ತ್ರಿಯು ಅವನಿಗೆ, “ಬೋಧಕನೇ, ನೀನು ಸತ್ಯಕ್ಕನುಗುಣ​ವಾಗಿ ಸರಿಯಾಗಿಯೇ ಹೇಳಿದೆ; ‘ಆತನು ಒಬ್ಬನೇ, ಆತನ ಹೊರತು ಬೇರೊಬ್ಬನು ಇಲ್ಲ’; 33  ಆತನನ್ನು ಒಬ್ಬನು ತನ್ನ ಪೂರ್ಣ ಹೃದಯದಿಂದಲೂ ತನ್ನ ಪೂರ್ಣ ತಿಳಿವಳಿಕೆಯಿಂದಲೂ ತನ್ನ ಪೂರ್ಣ ಬಲದಿಂದಲೂ ಪ್ರೀತಿಸುವುದು ಮತ್ತು ತನ್ನ ನೆರೆಯವನನ್ನು ತನ್ನಂತೆಯೇ ಪ್ರೀತಿಸುವುದು ಎಲ್ಲ ಸರ್ವಾಂಗಹೋಮಗಳಿಗಿಂತಲೂ ಯಜ್ಞಗಳಿಗಿಂತಲೂ ಎಷ್ಟೋ ಹೆಚ್ಚು ಬೆಲೆಯುಳ್ಳದ್ದಾಗಿದೆ” ಅಂದನು. 34  ಅವನು ಬುದ್ಧಿವಂತಿಕೆಯಿಂದ ಉತ್ತರಿಸಿದ್ದನ್ನು ಗ್ರಹಿಸಿ ಯೇಸು ಅವನಿಗೆ, “ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ” ಎಂದು ಹೇಳಿದನು. ಅಂದಿನಿಂದ ಅವನನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇರಲಿಲ್ಲ. 35  ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ಪ್ರತ್ಯುತ್ತರವನ್ನು ಕೊಡುತ್ತಾ, “ಕ್ರಿಸ್ತನು ದಾವೀದನ ಮಗನೆಂದು ಶಾಸ್ತ್ರಿಗಳು ಏಕೆ ಹೇಳುತ್ತಾರೆ? 36  ‘ “ನಾನು ನಿನ್ನ ವೈರಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಯೆಹೋವನು ನನ್ನ ಕರ್ತನಿಗೆ ನುಡಿದನು’ ಎಂಬುದಾಗಿ ದಾವೀದನು ತಾನೇ ಪವಿತ್ರಾತ್ಮ ಪ್ರೇರಿತನಾಗಿ ಹೇಳಿದನು. 37  ದಾವೀದನೇ ಅವನನ್ನು ‘ಕರ್ತನು’ ಎಂದು ಕರೆದಿರುವಾಗ ಅವನು ಅವನಿಗೆ ಮಗನಾಗುವುದು ಹೇಗೆ?” ಎಂದು ಕೇಳಿದನು. ಜನರ ದೊಡ್ಡ ಗುಂಪು ಸಂತೋಷದಿಂದ ಅವನಿಗೆ ಕಿವಿಗೊಡುತ್ತಾ ಇತ್ತು. 38  ಅವನು ಬೋಧನೆಮಾಡುತ್ತಿರುವಾಗ, “ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾ ಮಾರುಕಟ್ಟೆಗಳಲ್ಲಿ ವಂದನೆ​ಗಳನ್ನು, 39  ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳನ್ನು ಮತ್ತು ಸಂಧ್ಯಾ ಭೋಜನ​ಗಳಲ್ಲಿ ಅತಿ ಶ್ರೇಷ್ಠ ಸ್ಥಾನಗಳನ್ನು ಇಷ್ಟಪಡುತ್ತಾರೆ. 40  ಇವರು ವಿಧವೆಯರ ಮನೆಗಳನ್ನು ನುಂಗುವವರಾಗಿದ್ದಾರೆ ಮತ್ತು ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ; ಇವರು ಹೆಚ್ಚು ತೀಕ್ಷ್ಣವಾದ ನ್ಯಾಯತೀರ್ಪನ್ನು ಹೊಂದುವರು” ಎಂದು ಹೇಳಿದನು. 41  ತರುವಾಯ ಅವನು ಕಾಣಿಕೆ ಪೆಟ್ಟಿಗೆಗಳಿಗೆ ಎದುರಾಗಿ ಕುಳಿತುಕೊಂಡು ಜನರು ಅವುಗಳೊಳಗೆ ಹಣಹಾಕುತ್ತಿರುವುದನ್ನು ಗಮನಿಸುತ್ತಿದ್ದನು; ಅನೇಕ ಮಂದಿ ಐಶ್ವರ್ಯವಂತರು ತುಂಬ ಹಣವನ್ನು ಹಾಕುತ್ತಿದ್ದರು. 42  ಆಗ ಒಬ್ಬ ಬಡ ವಿಧವೆಯು ಅಲ್ಲಿಗೆ ಬಂದು ತೀರ ಕಡಮೆ ಬೆಲೆಯ ಎರಡು ಚಿಕ್ಕ ನಾಣ್ಯಗಳನ್ನು ಹಾಕಿದಳು. 43  ಇದನ್ನು ನೋಡಿ ಅವನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು, “ಕಾಣಿಕೆ ಪೆಟ್ಟಿಗೆಗಳೊಳಗೆ ಹಣಹಾಕುತ್ತಿರುವ ಎಲ್ಲರಿಗಿಂತ ಈ ಬಡ ವಿಧವೆಯು ಹೆಚ್ಚನ್ನು ಹಾಕಿದ್ದಾಳೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ; 44  ಏಕೆಂದರೆ ಅವರೆಲ್ಲರೂ ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಹಾಕಿದರು, ಇವಳಾದರೋ ತನ್ನ ಬಡತನದಲ್ಲಿಯೂ ತನಗಿದ್ದುದನ್ನೆಲ್ಲ ಹಾಕಿದಳು, ತನ್ನ ಜೀವ​ನಾಧಾರವನ್ನೇ ಕೊಟ್ಟುಬಿಟ್ಟಳು” ಎಂದು ​ಹೇಳಿದನು.

ಪಾದಟಿಪ್ಪಣಿ