ಮತ್ತಾಯ 5:1-48

5  ಅವನು ಜನರ ಗುಂಪುಗಳನ್ನು ನೋಡಿ ಬೆಟ್ಟದ ಮೇಲೆ ಹೋಗಿ ಕುಳಿತು​ಕೊಂಡ ನಂತರ ಶಿಷ್ಯರು ಅವನ ಬಳಿಗೆ ಬಂದರು;  ಅವನು ಅವರಿಗೆ ಬೋಧಿಸುತ್ತಾ ಹೀಗಂದನು:  “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು; ಸ್ವರ್ಗದ ರಾಜ್ಯವು ಅವರದು.  “ದುಃಖಿಸುವವರು ಸಂತೋಷಿತರು; ಅವರಿಗೆ ಸಾಂತ್ವನ ದೊರೆಯುವುದು.  “ಸೌಮ್ಯಭಾವದವರು ಸಂತೋಷಿತರು; ಅವರು ಭೂಮಿಗೆ ಬಾಧ್ಯರಾಗುವರು.  “ನೀತಿಗಾಗಿ ಹಸಿಯುತ್ತಾ ಬಾಯಾ​ರುತ್ತಾ ಇರುವವರು ಸಂತೋಷಿತರು; ಅವರು ತೃಪ್ತರಾಗುವರು.  “ಕರುಣೆಯುಳ್ಳವರು ಸಂತೋಷಿತರು; ಅವರಿಗೆ ಕರುಣೆಯು ತೋರಿಸಲ್ಪಡುವುದು.  “ಹೃದಯದಲ್ಲಿ ಶುದ್ಧರಾಗಿರುವವರು ಸಂತೋಷಿತರು; ಅವರು ದೇವರನ್ನು ನೋಡುವರು.  “ಶಾಂತಿಶೀಲರು ಸಂತೋಷಿತರು; ಅವರು ‘ದೇವರ ಪುತ್ರರು’ ಎಂದು ಕರೆಯಲ್ಪಡುವರು. 10  “ನೀತಿಯ ನಿಮಿತ್ತ ಹಿಂಸಿಸಲ್ಪಟ್ಟಿರುವವರು ಸಂತೋಷಿತರು; ಸ್ವರ್ಗದ ರಾಜ್ಯವು ಅವರದು. 11  “ನನ್ನ ನಿಮಿತ್ತ ಜನರು ನಿಮ್ಮನ್ನು ದೂಷಿಸಿ ಹಿಂಸೆಪಡಿಸಿ ನಿಮ್ಮ ವಿರುದ್ಧ ಪ್ರತಿಯೊಂದು ರೀತಿಯ ಕೆಟ್ಟ ವಿಷಯವನ್ನು ಸುಳ್ಳಾಗಿ ಹೇಳುವಾಗ ನೀವು ಸಂತೋಷಿತರು. 12  ಉಲ್ಲಾಸಪಡಿರಿ, ಅತ್ಯಾನಂದಪಡಿರಿ; ಸ್ವರ್ಗದಲ್ಲಿ ನಿಮಗೆ ಬಹಳ ಪ್ರತಿಫಲವಿದೆ; ಏಕೆಂದರೆ ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಅವರು ಅದೇ ರೀತಿಯಲ್ಲಿ ಹಿಂಸೆಪಡಿಸಿದರು. 13  “ನೀವು ಭೂಮಿಯ ಉಪ್ಪಾಗಿದ್ದೀರಿ; ಆದರೆ ಉಪ್ಪು ಅದರ ಸಾರವನ್ನು ಕಳೆದುಕೊಳ್ಳುವುದಾದರೆ ಅದಕ್ಕೆ ಇನ್ನಾವುದರಿಂದ ಉಪ್ಪಿನ ರುಚಿ ಬಂದೀತು? ಅದು ಹೊರಗೆ ಎಸೆಯಲ್ಪಟ್ಟು ಜನರಿಂದ ತುಳಿಯಲ್ಪಡುವುದಕ್ಕೆ ಯೋಗ್ಯವೇ ಹೊರತು ಬೇರೆ ಯಾವ ಉಪಯೋಗಕ್ಕೂ ಬಾರದು. 14  “ನೀವು ಲೋಕದ ಬೆಳಕಾಗಿದ್ದೀರಿ. ಬೆಟ್ಟದ ಮೇಲೆ ಸ್ಥಾಪಿತವಾಗಿರುವ ಊರು ಮರೆಯಾಗಿರಲು ಸಾಧ್ಯವಿಲ್ಲ. 15  ಜನರು ದೀಪವನ್ನು ಹಚ್ಚಿ ಕೊಳಗದೊಳಗೆ * ಇಡುವುದಿಲ್ಲ; ದೀಪ​ಸ್ತಂಭದ ಮೇಲೆ ಇಡುತ್ತಾರೆ ಮತ್ತು ಅದು ಮನೆಯಲ್ಲಿರುವವರೆಲ್ಲರ ಮೇಲೆ ಪ್ರಕಾಶಿಸುತ್ತದೆ. 16  ಅದರಂತೆಯೇ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ; ಆಗ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ಮಹಿಮೆಯನ್ನು ಸಲ್ಲಿಸುವರು. 17  “ನಾನು ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ವಚನಗಳನ್ನಾಗಲಿ ರದ್ದುಗೊಳಿಸಲು ಬಂದೆನೆಂದು ನೆನಸಬೇಡಿರಿ. ನಾನು ತೆಗೆದುಹಾಕುವುದಕ್ಕೆ ಬಂದಿಲ್ಲ, ನೆರವೇರಿಸುವುದಕ್ಕಾಗಿ ಬಂದಿದ್ದೇನೆ; 18  ಆಕಾಶವೂ ಭೂಮಿಯೂ ಬೇಗನೆ ಗತಿಸಿಹೋಗ​ಬಹುದು, ಆದರೆ ಧರ್ಮಶಾಸ್ತ್ರವೆಲ್ಲಾ ನೆರವೇರಿದ ಹೊರತು ಅದರೊಳಗಿಂದ ಒಂದು ಅತಿ ಚಿಕ್ಕ ಅಕ್ಷರವಾದರೂ ಒಂದು ಅಕ್ಷರದ ಸೂಕ್ಷ್ಮಭಾಗವಾದರೂ ಅಳಿದುಹೋಗಲಾರದು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 19  ಆದುದರಿಂದ ಈ ಕನಿಷ್ಠ ಆಜ್ಞೆಗಳಲ್ಲಿ ಒಂದನ್ನು ಮೀರಿ, ಮಾನವಕುಲಕ್ಕೂ ಹಾಗೆ ಮಾಡುವಂತೆ ಬೋಧಿಸುವವನು ಸ್ವರ್ಗದ ರಾಜ್ಯದ ಸಂಬಂಧದಲ್ಲಿ ‘ಕನಿಷ್ಠನು’ ಎಂದು ಕರೆಯಲ್ಪಡುವನು. ಆದರೆ ಆ ಆಜ್ಞೆಗಳನ್ನು ಪಾಲಿಸಿ ಅವುಗಳನ್ನು ಇತರರಿಗೂ ಬೋಧಿಸುವವನು ಸ್ವರ್ಗದ ರಾಜ್ಯದ ಸಂಬಂಧದಲ್ಲಿ ‘ಶ್ರೇಷ್ಠನು’ ಎಂದು ಕರೆಯಲ್ಪಡುವನು. 20  ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತ ಹೆಚ್ಚಾಗಿರದಿದ್ದರೆ ಖಂಡಿತ​ವಾಗಿಯೂ ನೀವು ಸ್ವರ್ಗದ ರಾಜ್ಯವನ್ನು ಪ್ರವೇಶಿಸುವುದಿಲ್ಲ ಎಂದು ನಿಮಗೆ ಹೇಳುತ್ತೇನೆ. 21  “ ‘ನರಹತ್ಯ ಮಾಡಬಾರದು; ಯಾವನಾದರೂ ನರಹತ್ಯ ಮಾಡುವುದಾದರೆ ಅವನು ನ್ಯಾಯಸ್ಥಾನಕ್ಕೆ ಉತ್ತರವಾದಿಯಾಗಿರುವನು’ ಎಂದು ಪೂರ್ವಕಾಲದವರಿಗೆ ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ. 22  ಆದರೆ ನಾನು ನಿಮಗೆ ಹೇಳುವುದೇನೆಂದರೆ, ತನ್ನ ಸಹೋದರನ ವಿರುದ್ಧ ಕ್ರೋಧ ​ತೋರಿಸುತ್ತಾ ಮುಂದುವರಿಯುವ ಪ್ರತಿ​ಯೊಬ್ಬನೂ ನ್ಯಾಯಸ್ಥಾನಕ್ಕೆ ಉತ್ತರವಾದಿಯಾಗಿರುವನು; ತನ್ನ ಸಹೋದರನನ್ನು ಹೇಳಲಾಗದಷ್ಟು ಹೊಲಸಾದ ಮಾತುಗಳಿಂದ ಸಂಬೋಧಿಸುವವನು ಸರ್ವೋಚ್ಚ ನ್ಯಾಯಾಲಯಕ್ಕೆ ಉತ್ತರವಾದಿಯಾಗಿರುವನು; ಮತ್ತು ‘ತುಚ್ಛ ಮೂರ್ಖನೇ!’ ಎನ್ನುವವನು ಬೆಂಕಿ ಉರಿಯುತ್ತಿರುವ ಗೆಹೆನ್ನಕ್ಕೆ * ಗುರಿಯಾಗುವನು. 23  “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಮುಂದೆ ತರುತ್ತಿರುವಾಗ, ನಿನ್ನ ಸಹೋದರನಿಗೆ ನಿನ್ನ ವಿರುದ್ಧ ಏನೋ ಅಸಮಾಧಾನವಿದೆ ಎಂದು ನಿನಗೆ ಅಲ್ಲಿ ನೆನಪಾದರೆ 24  ನಿನ್ನ ಕಾಣಿಕೆಯನ್ನು ಅಲ್ಲಿ ಯಜ್ಞವೇದಿಯ ಮುಂದೆ ಬಿಟ್ಟುಹೋಗಿ, ಮೊದಲು ನಿನ್ನ ಸಹೋದರನೊಂದಿಗೆ ಸಮಾಧಾನ ಮಾಡಿಕೊ; ಹಿಂದಿರುಗಿ ಬಂದ ಬಳಿಕ ನಿನ್ನ ಕಾಣಿಕೆಯನ್ನು ಅರ್ಪಿಸು. 25  “ನಿನ್ನ ವಿರುದ್ಧ ಮೊಕದ್ದಮೆ ಹೂಡುವವನ ಸಂಗಡ ನೀನು ದಾರಿಯಲ್ಲಿರುವಾಗಲೇ ಬೇಗನೆ ವಿಷಯಗಳನ್ನು ಇತ್ಯರ್ಥಮಾಡಿಕೊ; ಇಲ್ಲದಿದ್ದರೆ ಅವನು ಹೇಗಾದರೂ ಮಾಡಿ ನಿನ್ನನ್ನು ನ್ಯಾಯಾಧಿ​ಪತಿಗೆ ಒಪ್ಪಿಸ​ಬಹುದು ಮತ್ತು ನ್ಯಾಯಾಧಿ​ಪತಿಯು ನ್ಯಾಯಾಲಯದ ಸೇವಕನಿಗೆ ಒಪ್ಪಿಸಿ ನಿನ್ನನ್ನು ಸೆರೆಮನೆಗೆ ಹಾಕಿಸಬಹುದು. 26  ನೀನು ಅತಿ ಕೊಂಚ ಬೆಲೆಯ ಕೊನೆಯ ಕಾಸನ್ನು ಸಲ್ಲಿಸಿ ತೀರಿಸುವ ತನಕ ಸೆರೆಮನೆಯಿಂದ ಹೊರಗೆ ಬರಲಾಗುವುದಿಲ್ಲ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ. 27  “ ‘ವ್ಯಭಿಚಾರ ಮಾಡಬಾರದು’ ಎಂದು ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ. 28  ಆದರೆ ನಾನು ನಿಮಗೆ ಹೇಳುವುದೇನೆಂದರೆ, ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯ​ದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ. 29  ಆದುದರಿಂದ ನಿನ್ನ ಬಲಗಣ್ಣು ನಿನ್ನನ್ನು ಎಡವಿಸುತ್ತಿರುವುದಾದರೆ ಅದನ್ನು ಕಿತ್ತು ಬಿಸಾಡು; ನಿನ್ನ ಇಡೀ ದೇಹವು ಗೆಹೆನ್ನಕ್ಕೆ ಎಸೆಯಲ್ಪಡುವುದಕ್ಕಿಂತ ನಿನ್ನ ಅಂಗಗಳಲ್ಲಿ ಒಂದನ್ನು ಕಳೆದು​ಕೊಳ್ಳುವುದು ಹೆಚ್ಚು ಪ್ರಯೋಜನಕರ. 30  ಇದಲ್ಲದೆ ನಿನ್ನ ಬಲಗೈ ನಿನ್ನನ್ನು ಎಡವಿಸುತ್ತಿರುವುದಾದರೆ ಅದನ್ನು ಕತ್ತರಿಸಿ ಬಿಸಾಡು. ನಿನ್ನ ಇಡೀ ದೇಹವು ಗೆಹೆನ್ನಕ್ಕೆ ಸೇರುವುದಕ್ಕಿಂತ ನಿನ್ನ ಅಂಗಗಳಲ್ಲಿ ಒಂದನ್ನು ಕಳೆದುಕೊಳ್ಳುವುದು ಹೆಚ್ಚು ಪ್ರಯೋಜನಕರ. 31  “ ‘ತನ್ನ ಪತ್ನಿಯನ್ನು ವಿಚ್ಛೇದಿಸುವವನು ಅವಳಿಗೆ ತ್ಯಾಗಪತ್ರವನ್ನು ಕೊಡಲಿ’ ಎಂದು ಹೇಳಲಾಗಿತ್ತು. 32  ಆದರೆ ನಾನು ನಿಮಗೆ ಹೇಳುವುದೇನೆಂದರೆ, ಹಾದರದ ಕಾರಣದಿಂದಲ್ಲದೆ ತನ್ನ ಪತ್ನಿಯನ್ನು ವಿಚ್ಛೇದಿಸುವ ಪ್ರತಿಯೊಬ್ಬನು ಅವಳು ವ್ಯಭಿಚಾರ ಮಾಡುವುದಕ್ಕೆ ಕಾರಣನಾಗುತ್ತಾನೆ. ಮತ್ತು ಒಬ್ಬ ವಿಚ್ಛೇದಿತ ಸ್ತ್ರೀಯನ್ನು ಮದುವೆ​ಯಾಗುವವನು ವ್ಯಭಿಚಾರ ಮಾಡುವವನಾಗಿದ್ದಾನೆ. 33  “ ‘ನೀನು ಸುಳ್ಳಾಣೆಯಿಡಬಾರದು; ನೀನು ಯೆಹೋವನಿಗೆ ಮಾಡಿಕೊಂಡ ಹರಕೆ​ಗಳನ್ನು ಸಲ್ಲಿಸಬೇಕು’ ಎಂದು ಪೂರ್ವಕಾಲದವರಿಗೆ ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ. 34  ಆದರೆ ನಾನು ನಿಮಗೆ ಹೇಳುವುದೇನೆಂದರೆ, ಆಣೆಯಿಡಲೇ ಬೇಡಿ; ಆಕಾಶದ ಮೇಲೆ ಆಣೆಯಿಡಬೇಡಿ, ಏಕೆಂದರೆ ಅದು ದೇವರ ಸಿಂಹಾಸನವಾಗಿದೆ; 35  ಭೂಮಿಯ ಮೇಲೆ ಆಣೆಯಿಡಬೇಡಿ, ಏಕೆಂದರೆ ಅದು ಆತನ ಪಾದಪೀಠವಾಗಿದೆ; ಯೆರೂಸಲೇಮಿನ ಮೇಲೆ ಆಣೆಯಿಡಬೇಡಿ, ಏಕೆಂದರೆ ಅದು ಮಹಾ ರಾಜನ ಪಟ್ಟಣವಾಗಿದೆ. 36  ನಿನ್ನ ತಲೆಯ ಮೇಲೂ ಆಣೆಯಿಡಬೇಡ, ಏಕೆಂದರೆ ನೀನು ಒಂದು ಕೂದಲನ್ನೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲಾರಿ. 37  ಆದುದರಿಂದ ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ; ಏಕೆಂದರೆ ಇವುಗಳಿಗಿಂತ ಹೆಚ್ಚಿನದ್ದು ಕೆಡುಕನಿಂದ ಬಂದದ್ದಾಗಿದೆ. 38  “ ‘ಕಣ್ಣಿಗೆ ಪ್ರತಿಯಾಗಿ ಕಣ್ಣು ಹಲ್ಲಿಗೆ ಪ್ರತಿಯಾಗಿ ಹಲ್ಲು’ ಎಂದು ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ. 39  ಆದರೆ ನಾನು ನಿಮಗೆ ಹೇಳುವುದೇನೆಂದರೆ, ದುಷ್ಟನನ್ನು ಎದುರಿಸಬೇಡಿ; ನಿನ್ನ ಬಲಗೆನ್ನೆಯ ಮೇಲೆ ಹೊಡೆಯುವವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು. 40  ಒಬ್ಬ ವ್ಯಕ್ತಿಯು ನಿನ್ನ ಒಳ ಅಂಗಿಯನ್ನು ಸ್ವಾಧೀನಪಡಿಸಿಕೊಳ್ಳಲಿಕ್ಕಾಗಿ ನಿನ್ನೊಂದಿಗೆ ನ್ಯಾಯಸ್ಥಾನಕ್ಕೆ ಹೋಗಲು ಬಯಸುವುದಾದರೆ, ನಿನ್ನ ಮೇಲಂಗಿಯೂ ಅವನದ್ದಾಗುವಂತೆ ಬಿಡು. 41  ಅಧಿಕಾರದಲ್ಲಿರುವ ಯಾವನಾದರೂ ಒಂದು ಮೈಲು ದೂರ ಬರುವಂತೆ ನಿನ್ನನ್ನು ಒತ್ತಾಯಿಸುವಲ್ಲಿ ಅವನೊಂದಿಗೆ ಎರಡು ಮೈಲು ದೂರ ಹೋಗು. 42  ಕೇಳುವವನಿಗೆ ಕೊಡು; ಬಡ್ಡಿಯಿಲ್ಲದೆ ನಿನ್ನಿಂದ ಸಾಲವನ್ನು ಪಡೆದುಕೊಳ್ಳಲು ಬಯಸುವವನಿಗೆ ಮುಖ ತಿರುಗಿಸಬೇಡ. 43  “ ‘ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ದ್ವೇಷಿಸಬೇಕು’ ಎಂದು ಹೇಳಿರುವುದನ್ನು ನೀವು ಕೇಳಿಸಿ​ಕೊಂಡಿದ್ದೀರಿ. 44  ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ; ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸುತ್ತಾ ಇರಿ. 45  ಇದರಿಂದ ನೀವು ಸ್ವರ್ಗದಲ್ಲಿರುವ ನಿಮ್ಮ ತಂದೆಯ ಮಕ್ಕಳಾಗುವಿರಿ; ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ. 46  ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸುವುದಾದರೆ ನಿಮಗೆ ಯಾವ ಪ್ರತಿಫಲವಿದೆ? ತೆರಿಗೆ ವಸೂಲಿಮಾಡುವವರು ಸಹ ಇದನ್ನೇ ಮಾಡುತ್ತಾರಲ್ಲವೆ? 47  ನೀವು ನಿಮ್ಮ ಸಹೋದರರನ್ನು ಮಾತ್ರ ವಂದಿಸುವುದಾದರೆ ಯಾವ ಅಸಾಮಾನ್ಯ ಕಾರ್ಯವನ್ನು ಮಾಡಿದಂತಾಯಿತು? ಅನ್ಯಜನರು ಸಹ ಇದನ್ನೇ ಮಾಡುತ್ತಾರಲ್ಲವೆ? 48  ಸ್ವರ್ಗದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣ​ನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರತಕ್ಕದ್ದು.

ಪಾದಟಿಪ್ಪಣಿ

ಮತ್ತಾ 5:15  ಅಥವಾ, “ಅಳತೆಮಾಡುವ ಹೆಡಿಗೆಯ ಕೆಳಗೆ.”
ಮತ್ತಾ 5:22  “ಗೆಹೆನ್ನ.” ಯೆರೂಸಲೇಮಿನ ಹೊರಗೆ ತ್ಯಾಜ್ಯವಸ್ತುವನ್ನು ಸುಡುತ್ತಿದ್ದ ಸ್ಥಳ. ಪರಿಶಿಷ್ಟ 8 ನ್ನು ನೋಡಿ.