ಮತ್ತಾಯ 4:1-25

4  ತದನಂತರ ಪಿಶಾಚನಿಂದ ಪ್ರಲೋಭಿಸಲ್ಪಡಲಿಕ್ಕಾಗಿ ಪವಿತ್ರಾತ್ಮವು ಯೇಸು​ವನ್ನು ಅರಣ್ಯಕ್ಕೆ ನಡೆಸಿತು.  ಅವನು ನಲವತ್ತು ದಿವಸ ಹಗಲಿರುಳು ಉಪವಾಸಮಾಡಿದ ಬಳಿಕ ಅವನಿಗೆ ಹಸಿವಾಯಿತು.  ಮತ್ತು ಪ್ರಲೋಭಕನು ಬಂದು ಅವನಿಗೆ, “ನೀನು ದೇವರ ಮಗನಾಗಿರುವಲ್ಲಿ ಈ ಕಲ್ಲುಗಳಿಗೆ ರೊಟ್ಟಿಗಳಾಗುವಂತೆ ಹೇಳು” ಅಂದನು.  ಇದಕ್ಕೆ ಪ್ರತ್ಯುತ್ತರವಾಗಿ ಅವನು, “ ‘ಮನುಷ್ಯನು ರೊಟ್ಟಿ ತಿಂದಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಬೇಕು’ ಎಂದು ಬರೆದಿದೆ” ಎಂದು ಹೇಳಿದನು.  ಆ ಬಳಿಕ ಪಿಶಾಚನು ಅವನನ್ನು ಪವಿತ್ರ ಪಟ್ಟಣಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಕೈಪಿಡಿ ಗೋಡೆಯ ಮೇಲೆ ನಿಲ್ಲಿಸಿ  ಅವನಿಗೆ, “ನೀನು ದೇವರ ಮಗನಾಗಿರುವಲ್ಲಿ ಕೆಳಕ್ಕೆ ಧುಮುಕು; ಏಕೆಂದರೆ ‘ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು ಮತ್ತು ನಿನ್ನ ಪಾದವು ಎಂದೂ ಕಲ್ಲಿಗೆ ಬಡಿಯದಂತೆ ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು’ ಎಂದು ಬರೆದಿದೆ” ಅಂದನು.  ಆಗ ಯೇಸು ಅವನಿಗೆ, “ ‘ನಿನ್ನ ದೇವರಾಗಿರುವ ಯೆಹೋವನನ್ನು ಪರೀಕ್ಷಿಸ​ಬಾರದು’ ಎಂದು ಸಹ ಬರೆದಿದೆ” ಎಂದು ಹೇಳಿದನು.  ಪುನಃ ಪಿಶಾಚನು ಅವನನ್ನು ​ಅಸಾಮಾನ್ಯವಾಗಿ ಎತ್ತರವಾಗಿದ್ದ ಒಂದು ಬೆಟ್ಟಕ್ಕೆ ಕರೆದುಕೊಂಡು ಹೋಗಿ ಲೋಕದ ಎಲ್ಲ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಅವನಿಗೆ ತೋರಿಸುತ್ತಾ,  “ನೀನು ಅಡ್ಡಬಿದ್ದು ನನಗೆ ಒಂದು ಆರಾಧನಾ ಕ್ರಿಯೆಯನ್ನು ಮಾಡಿದರೆ ನಾನು ಇವೆಲ್ಲವನ್ನೂ ನಿನಗೆ ಕೊಡುವೆನು” ಎಂದು ಹೇಳಿದನು. 10  ಅದಕ್ಕೆ ಯೇಸು ಅವನಿಗೆ, “ಸೈತಾನನೇ ತೊಲಗಿಹೋಗು! ‘ನಿನ್ನ ದೇವರಾಗಿರುವ ಯೆಹೋವನನ್ನೇ ನೀನು ಆರಾಧಿಸ​ಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆಯನ್ನು ಸಲ್ಲಿಸಬೇಕು’ ಎಂದು ಬರೆದಿದೆ” ಅಂದನು. 11  ಆಗ ಪಿಶಾಚನು ಅವನನ್ನು ಬಿಟ್ಟುಹೋದನು ಮತ್ತು ದೇವದೂತರು ಬಂದು ಅವನಿಗೆ ಉಪಚಾರಮಾಡಲು ಆರಂಭಿಸಿದರು. 12  ಯೋಹಾನನು ಬಂಧಿಸಲ್ಪಟ್ಟಿದ್ದಾನೆ ಎಂಬುದನ್ನು ಕೇಳಿಸಿಕೊಂಡಾಗ ಯೇಸು ಗಲಿಲಾಯಕ್ಕೆ ಹೊರಟು​ಹೋದನು. 13  ಅಲ್ಲದೆ ನಜರೇತನ್ನು ಬಿಟ್ಟ ಬಳಿಕ, ಅವನು ಜೆಬುಲೂನ್‌ ಮತ್ತು ನಫ್ತಾಲಿ ಪ್ರಾಂತಗಳ ಸಮುದ್ರದ ಬಳಿಯಿದ್ದ ಕಪೆರ್ನೌಮಿನಲ್ಲಿ ವಾಸಿಸಿದನು. 14  ಇದರಿಂದಾಗಿ ಪ್ರವಾದಿಯಾದ ಯೆಶಾಯನ ಮೂಲಕ ತಿಳಿಸಲ್ಪಟ್ಟ ಮಾತು ನೆರವೇರುವಂತಾಯಿತು; ಅದೇನೆಂದರೆ,  15  “ಯೋರ್ದ​ನಿನ ಆಚೆ, ಸಮುದ್ರದ ಉದ್ದಕ್ಕೂ ಇರುವ ಜೆಬುಲೂನ್‌ ನಫ್ತಾಲಿ ನಾಡುಗಳೇ ಮತ್ತು ಅನ್ಯಜನಾಂಗಗಳ ಗಲಿಲಾಯವೇ! 16  ಕತ್ತಲಲ್ಲಿ ಕುಳಿತಿದ್ದ ಜನರು ದೊಡ್ಡ ಬೆಳಕನ್ನು ಕಂಡರು, ಮತ್ತು ಮರಣಕಾರಕ ಛಾಯೆಯ ಪ್ರದೇಶದಲ್ಲಿದ್ದವರ ಮೇಲೆ ಬೆಳಕು ಬಂತು.” 17  ಆ ಸಮಯದಿಂದ ಯೇಸು, “ಜನರೇ ಪಶ್ಚಾತ್ತಾಪ​ಪಡಿರಿ, ಸ್ವರ್ಗದ ರಾಜ್ಯವು ಸಮೀಪಿಸಿದೆ” ಎಂದು ಸಾರಿಹೇಳಲು ಆರಂಭಿಸಿದನು. 18  ಬಳಿಕ ಅವನು ಗಲಿಲಾಯ ಸಮುದ್ರ ತೀರದಲ್ಲಿ ನಡೆಯುತ್ತಿದ್ದಾಗ ಇಬ್ಬರು ಅಣ್ಣತಮ್ಮಂದಿರನ್ನು ಕಂಡನು; ಅವರು ಪೇತ್ರನೆಂದು ಕರೆಯಲ್ಪಡುವ ಸೀಮೋನ ಮತ್ತು ಅವನ ತಮ್ಮನಾದ ಅಂದ್ರೆಯರಾಗಿದ್ದರು. ಅವರು ಬೆಸ್ತರಾಗಿದ್ದು ಸಮುದ್ರದಲ್ಲಿ ಮೀನಿನ ಬಲೆ ಇಳಿಸುತ್ತಿದ್ದರು. 19  ಆಗ ಅವನು ಅವರಿಗೆ, “ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು” ಎಂದು ಹೇಳಿದನು. 20  ಆ ಕೂಡಲೆ ಅವರು ಬಲೆಗಳನ್ನು ಬಿಟ್ಟು ಅವನನ್ನು ಹಿಂಬಾಲಿಸಿದರು. 21  ಅಲ್ಲಿಂದ ಮುಂದೆ ಹೋಗುತ್ತಿರುವಾಗ ಅವನು ಇನ್ನಿಬ್ಬರು ಅಣ್ಣತಮ್ಮಂದಿರನ್ನು, ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನನ್ನೂ ಕಂಡನು; ಅವರು ತಮ್ಮ ತಂದೆಯಾದ ಜೆಬೆದಾಯನೊಂದಿಗೆ ದೋಣಿಯಲ್ಲಿದ್ದು ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದಾಗ ಅವನು ಅವರನ್ನು ಕರೆದನು. 22  ತಕ್ಷಣವೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಅವನನ್ನು ಹಿಂಬಾಲಿಸಿದರು. 23  ಬಳಿಕ ಅವನು ಗಲಿಲಾಯದಾದ್ಯಂತ ಸಂಚರಿಸಿ ಅವರ ಸಭಾಮಂದಿರಗಳಲ್ಲಿ * ಬೋಧಿಸುತ್ತಾ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರ ಎಲ್ಲ ರೀತಿಯ ರೋಗಗಳನ್ನೂ ದೇಹದೌರ್ಬಲ್ಯಗಳನ್ನೂ ಗುಣಪಡಿಸುತ್ತಾ ಬಂದನು. 24  ಅವನ ಕುರಿತಾದ ಸುದ್ದಿಯು ಸಿರಿಯದಾದ್ಯಂತ ಹಬ್ಬಿತು; ಜನರು ಎಲ್ಲ ಅಸ್ವಸ್ಥರನ್ನು ಅಂದರೆ ಬೇರೆ ಬೇರೆ ರೋಗಗಳಿಂದ ಮತ್ತು ಯಾತನೆಗಳಿಂದ ಬಾಧೆಪಡುತ್ತಿದ್ದವರನ್ನೂ ದೆವ್ವಹಿಡಿದವರನ್ನೂ ಮೂರ್ಛೆ​ರೋಗಿಗಳನ್ನೂ ಪಾರ್ಶ್ವವಾಯು ರೋಗಿಗಳನ್ನೂ ಅವನ ಬಳಿಗೆ ತಂದರು ಮತ್ತು ಅವನು ಅವರನ್ನು ಗುಣಪಡಿಸಿದನು. 25  ಇದರ ಪರಿಣಾಮವಾಗಿ ಗಲಿಲಾಯದಿಂದಲೂ ದೆಕಪೊಲಿ​ಯಿಂದಲೂ ಯೆರೂಸಲೇಮಿನಿಂದಲೂ ಯೂದಾಯದಿಂದಲೂ ಯೋರ್ದನ್‌ ನದಿಯ ಆಚೇ ಕಡೆಯಿಂದಲೂ ಜನರ ದೊಡ್ಡ ಗುಂಪು ಅವನನ್ನು ಹಿಂಬಾಲಿಸಿತು.

ಪಾದಟಿಪ್ಪಣಿ

ಮತ್ತಾ 4:23  ಯೆಹೂದ್ಯರು ಪ್ರಾರ್ಥಿಸಲಿಕ್ಕಾಗಿ ಮತ್ತು ಶಾಸ್ತ್ರವಚನಗಳನ್ನು ಓದಲಿಕ್ಕಾಗಿ ಕೂಡಿಬರುತ್ತಿದ್ದ ಸ್ಥಳ.