ಮತ್ತಾಯ 15:1-39

15  ಆಗ ಯೆರೂಸಲೇಮಿನಿಂದ ಫರಿಸಾಯರೂ ಶಾಸ್ತ್ರಿಗಳೂ ಯೇಸು​ವಿನ ಬಳಿಗೆ ಬಂದು,  “ನಿನ್ನ ಶಿಷ್ಯರು ಪೂರ್ವಿಕರ ಸಂಪ್ರದಾಯವನ್ನು ಏಕೆ ಮೀರುತ್ತಾರೆ? ಉದಾಹರಣೆಗೆ, ಅವರು ಊಟಮಾಡುವುದಕ್ಕೆ ಮುಂಚೆ ತಮ್ಮ ಕೈಗಳನ್ನು ತೊಳೆದುಕೊಳ್ಳುವುದಿಲ್ಲ” ಎಂದು ಹೇಳಿದರು.  ಅದಕ್ಕೆ ಉತ್ತರವಾಗಿ ಅವನು ಅವರಿಗೆ, “ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತ ದೇವರ ಆಜ್ಞೆಯನ್ನು ಏಕೆ ಮೀರುತ್ತೀರಿ?  ಉದಾಹರಣೆಗೆ, ‘ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು’ ಮತ್ತು ‘ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣ​ದಂಡನೆ ಆಗಲಿ’ ಎಂದು ದೇವರು ಹೇಳಿದನು.  ನೀವಾದರೋ ‘ಯಾವನಾದರೂ ತನ್ನ ತಂದೆಗೆ ಅಥವಾ ತಾಯಿಗೆ, “ನನ್ನಿಂದ ನಿನಗೆ ಪ್ರಯೋಜನವಾಗತಕ್ಕದ್ದು ದೇವರಿಗಾಗಿ ಮುಡಿಪಿಟ್ಟ ಕಾಣಿಕೆಯಾಗಿದೆ” ಎಂದು ಹೇಳುವುದಾದರೆ,  ಅವನು ತನ್ನ ತಂದೆಯನ್ನು ಸನ್ಮಾನಿಸಬೇಕಾಗಿಲ್ಲ’ ಎನ್ನುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತ ನೀವು ದೇವರ ವಾಕ್ಯವನ್ನು ನಿರರ್ಥಕ​ಮಾಡಿದ್ದೀರಿ.  ಕಪಟಿಗಳೇ, ನಿಮ್ಮ ಕುರಿತು ಯೆಶಾಯನು ಸರಿಯಾಗಿಯೇ ಪ್ರವಾದಿಸಿದನು; ಅವನಂದದ್ದು:  ‘ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಗೌರವಿಸುತ್ತಾರೆ, ಆದರೆ ಅವರ ಹೃದಯವು ನನ್ನಿಂದ ಬಹಳ ದೂರವಾಗಿದೆ.  ಅವರು ಮನುಷ್ಯರ ಆಜ್ಞೆಗಳನ್ನೇ ಸಿದ್ಧಾಂತಗಳಾಗಿ ಬೋಧಿಸುವುದರಿಂದ ನನ್ನನ್ನು ಆರಾಧಿಸುತ್ತಿರುವುದು ವ್ಯರ್ಥ’ ” ಎಂದು ಹೇಳಿದನು. 10  ಅನಂತರ ಅವನು ಜನರ ಗುಂಪನ್ನು ತನ್ನ ಬಳಿಗೆ ಕರೆದು ಅವರಿಗಂದದ್ದು: “ನನಗೆ ಕಿವಿಗೊಡಿರಿ ಮತ್ತು ಇದರ ಅರ್ಥವನ್ನು ಗ್ರಹಿಸಿರಿ; 11  ಬಾಯೊಳಗೆ ಹೋಗು​ವಂಥದ್ದು ಒಬ್ಬ ಮನುಷ್ಯನನ್ನು ಹೊಲೆಮಾಡುವುದಿಲ್ಲ; ಆದರೆ ಬಾಯೊಳಗಿಂದ ಹೊರಗೆ ಬರುವಂಥದ್ದು ಅವನನ್ನು ಹೊಲೆ​ಮಾಡುತ್ತದೆ.” 12  ಬಳಿಕ ಶಿಷ್ಯರು ಅವನ ಬಳಿಗೆ ಬಂದು, “ನೀನು ಹೇಳಿದ್ದನ್ನು ಕೇಳಿ ಫರಿಸಾಯರು ಕೋಪಗೊಂಡರು ಎಂಬುದು ನಿನಗೆ ಗೊತ್ತೊ?” ಎಂದು ಕೇಳಿದರು. 13  ಅದಕ್ಕೆ ಅವನು, “ಸ್ವರ್ಗದಲ್ಲಿರುವ ನನ್ನ ತಂದೆಯು ನೆಡದೇ ಇರುವಂಥ ಪ್ರತಿಯೊಂದು ಗಿಡವು ಬೇರುಸಹಿತ ಕಿತ್ತುಹಾಕಲ್ಪಡುವುದು. 14  ಅವರನ್ನು ಬಿಡಿರಿ. ಅವರು ಕುರುಡ ಮಾರ್ಗದರ್ಶಕರು. ಒಬ್ಬ ಕುರುಡನು ಮತ್ತೊಬ್ಬ ಕುರುಡನಿಗೆ ದಾರಿತೋರಿಸುವಲ್ಲಿ ಅವರಿಬ್ಬರೂ ಹೊಂಡದಲ್ಲಿ ಬೀಳುವರು” ಎಂದನು. 15  ಆಗ ಪೇತ್ರನು ಅವನಿಗೆ, “ನಮಗೆ ದೃಷ್ಟಾಂತದ ಅರ್ಥವನ್ನು ತಿಳಿಯಪಡಿಸು” ಎಂದು ಹೇಳಿದನು. 16  ಅದಕ್ಕೆ ಅವನು, “ನೀವು ಸಹ ಇನ್ನೂ ಅರ್ಥಮಾಡಿಕೊಳ್ಳ​ಲಾರದೆ ಇದ್ದೀರೊ? 17  ಬಾಯೊಳಗೆ ಹೋಗುವಂಥದ್ದೆಲ್ಲವೂ ಹೊಟ್ಟೆಯನ್ನು ಸೇರಿ ಬಳಿಕ ಚರಂಡಿಗೆ ವಿಸರ್ಜಿತ​ವಾಗುತ್ತದೆ ಎಂಬುದು ನಿಮಗೆ ತಿಳಿಯದೊ? 18  ಆದರೆ ಬಾಯೊಳಗಿಂದ ಹೊರಡು​ವಂಥದ್ದು ಹೃದಯದಿಂದ ಬರುತ್ತದೆ ಮತ್ತು ಇಂಥ ವಿಷಯಗಳು ಒಬ್ಬನನ್ನು ಹೊಲೆಮಾಡುತ್ತವೆ. 19  ಉದಾಹರಣೆಗೆ, ಹೃದಯ​ದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಹಾದರ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೇವದೂಷಣೆಗಳು ಹೊರ​ಬರುತ್ತವೆ. 20  ಇವು ಮನುಷ್ಯನನ್ನು ಹೊಲೆಮಾಡುತ್ತವೆ; ಆದರೆ ಕೈಗಳನ್ನು ತೊಳೆಯದೆ ಊಟಮಾಡುವುದು ಒಬ್ಬನನ್ನು ಹೊಲೆ​ಮಾಡುವುದಿಲ್ಲ” ಎಂದು ಹೇಳಿದನು. 21  ಯೇಸು ಅಲ್ಲಿಂದ ಹೊರಟು ತೂರ್‌ ಮತ್ತು ಸೀದೋನ್‌ ಪಟ್ಟಣಗಳ ಪ್ರಾಂತಗಳಿಗೆ ಹೋದನು. 22  ಅಲ್ಲಿ ಫೊಯಿನಿಕೆ ಪ್ರಾಂತಕ್ಕೆ ಸೇರಿದ ಒಬ್ಬ ಸ್ತ್ರೀಯು ಬಂದು, “ಕರ್ತನೇ, ದಾವೀದನ ಕುಮಾರನೇ, ನನಗೆ ಕರುಣೆ ತೋರಿಸು. ನನ್ನ ಮಗಳಿಗೆ ದೆವ್ವದ ಕಾಟ ಬಹಳವಾಗಿದೆ” ಎಂದು ಗಟ್ಟಿಯಾಗಿ ಕೂಗಿಹೇಳಿದಳು. 23  ಆದರೆ ಅವನು ಅವಳಿಗೆ ಉತ್ತರವಾಗಿ ಏನೂ ಹೇಳಲಿಲ್ಲ. ಆದುದರಿಂದ ಶಿಷ್ಯರು ಅವನ ಬಳಿಗೆ ಬಂದು, “ಅವಳನ್ನು ಕಳುಹಿಸಿಬಿಡು; ಏಕೆಂದರೆ ಅವಳು ಕೂಗುತ್ತಾ ನಮ್ಮ ಹಿಂದೆ ಬರುತ್ತಿದ್ದಾಳೆ” ಎಂದು ಕೇಳಿಕೊಂಡರು. 24  ಅದಕ್ಕೆ ಅವನು, “ನಾನು ಇಸ್ರಾಯೇಲ್‌ ಮನೆತನದ ತಪ್ಪಿಹೋದ ಕುರಿಗಳ ಬಳಿಗೇ ಹೊರತು ಇನ್ನಾರ ಬಳಿಗೂ ಕಳುಹಿಸಲ್ಪಟ್ಟವನಲ್ಲ” ಎಂದು ಹೇಳಿದನು. 25  ಆ ಸ್ತ್ರೀಯು ಬಂದು ಅವನಿಗೆ ಪ್ರಣಾಮಮಾಡಿ, “ಕರ್ತನೇ ನನಗೆ ಸಹಾಯಮಾಡು” ಎಂದು ಕೇಳಿಕೊಂಡಳು. 26  ಅದಕ್ಕೆ ಅವನು, “ಮಕ್ಕಳಿಗೆ ಕೊಡುವ ರೊಟ್ಟಿಯನ್ನು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಎಂದು ಹೇಳಿದನು. 27  ಆಗ ಅವಳು, “ಕರ್ತನೇ, ಅದು ನಿಜ. ಆದರೆ ನಾಯಿಮರಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿಯ ತುಣುಕುಗಳನ್ನು ತಿನ್ನುತ್ತವಲ್ಲಾ” ಎಂದಳು. 28  ಅದಕ್ಕೆ ಉತ್ತರವಾಗಿ ಯೇಸು ಅವಳಿಗೆ, “ಸ್ತ್ರೀಯೇ, ನಿನ್ನ ನಂಬಿಕೆಯು ಅಪಾರವಾದದ್ದು; ನೀನು ಬಯಸಿದಂತೆಯೇ ನಿನಗಾಗಲಿ” ಎಂದನು. ಅದೇ ಗಳಿಗೆಯಲ್ಲಿ ಅವಳ ಮಗಳು ವಾಸಿಯಾದಳು. 29  ಯೇಸು ಆ ಸ್ಥಳವನ್ನು ದಾಟಿ ಗಲಿಲಾಯ ಸಮುದ್ರದ ಬಳಿಗೆ ಬಂದು ಬೆಟ್ಟವನ್ನು ಹತ್ತಿ ಅಲ್ಲಿ ಕುಳಿತುಕೊಂಡಿದ್ದನು. 30  ಆಗ ಜನರು ಗುಂಪು​ಗುಂಪಾಗಿ ಅವನ ಬಳಿಗೆ ಬಂದರು ಮತ್ತು ಅವರು ತಮ್ಮೊಂದಿಗೆ ಕುಂಟರು, ಅಂಗಹೀನರು, ಕುರುಡರು, ಮೂಕರು ಹಾಗೂ ಅಸ್ವಸ್ಥರಾಗಿದ್ದ ಬೇರೆ ಅನೇಕರನ್ನು ಕರೆತಂದು ಅವನ ಪಾದಗಳ ಬಳಿಯಲ್ಲಿ ಬಿಟ್ಟರು; ಅವನು ಅವರನ್ನು ವಾಸಿಮಾಡಿದನು. 31  ಮೂಕರು ಮಾತಾಡುತ್ತಿರುವುದನ್ನೂ ಕುಂಟರು ನಡೆಯುತ್ತಿರುವುದನ್ನೂ ಕುರುಡರು ನೋಡುತ್ತಿರುವುದನ್ನೂ ಜನರು ಕಂಡು ಆಶ್ಚರ್ಯಪಟ್ಟು ಇಸ್ರಾಯೇಲ್ಯರ ದೇವರನ್ನು ಮಹಿಮೆಪಡಿಸಿದರು. 32  ಆದರೆ ಯೇಸು ಶಿಷ್ಯರನ್ನು ತನ್ನ ಬಳಿಗೆ ಕರೆದು, “ಈ ಜನರ ಗುಂಪನ್ನು ನೋಡಿ ನನಗೆ ಕನಿಕರವಾಗುತ್ತಿದೆ, ಏಕೆಂದರೆ ಈಗಾಗಲೇ ಮೂರು ದಿವಸಗಳಿಂದ ಇವರು ನನ್ನೊಂದಿಗಿದ್ದಾರೆ ಮತ್ತು ಇವರ ಬಳಿ ಊಟಕ್ಕೆ ಏನೂ ಇಲ್ಲ; ಇವರನ್ನು ಉಪವಾಸ ಕಳುಹಿಸಿಬಿಡಲು ನನಗೆ ಇಷ್ಟವಿಲ್ಲ. ಇವರು ದಾರಿಯಲ್ಲಿ ಬಳಲಿಹೋಗಬಹುದು” ಎಂದನು. 33  ಆಗ ಶಿಷ್ಯರು ಅವನಿಗೆ, “ಈ ನಿರ್ಜನ ಸ್ಥಳದಲ್ಲಿ ಇಷ್ಟು ದೊಡ್ಡ ಜನರ ಗುಂಪನ್ನು ತೃಪ್ತಿಪಡಿಸಲು ಸಾಕಾಗುವಷ್ಟು ರೊಟ್ಟಿಗಳನ್ನು ನಾವು ಎಲ್ಲಿಂದ ತರುವುದು?” ಎಂದು ಕೇಳಿದರು. 34  ಯೇಸು ಅವರಿಗೆ, “ನಿಮ್ಮ ಬಳಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದನು. ಅದಕ್ಕವರು, “ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮೀನುಗಳಿವೆ” ಎಂದು ಉತ್ತರಿಸಿದರು. 35  ಆಗ ಅವನು ಜನರ ಗುಂಪಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಿ, 36  ಆ ಏಳು ರೊಟ್ಟಿಗಳನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತೆ ಸಲ್ಲಿಸಿದ ಬಳಿಕ ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು ಮತ್ತು ಅವರು ಜನರ ಗುಂಪಿಗೆ ಹಂಚಿಕೊಟ್ಟರು. 37  ಅವರೆಲ್ಲರೂ ಊಟಮಾಡಿ ತೃಪ್ತರಾದರು ಮತ್ತು ಉಳಿದ ತುಂಡುಗಳನ್ನು ಕೂಡಿಸಲಾಗಿ ಏಳು ಬುಟ್ಟಿಗಳು ತುಂಬಿದವು. 38  ಊಟಮಾಡಿದವರು ​ಹೆಂಗಸರು ಮತ್ತು ಮಕ್ಕಳಲ್ಲದೆ ಗಂಡಸರೇ ನಾಲ್ಕು ಸಾವಿರ ಮಂದಿ ಇದ್ದರು. 39  ಕೊನೆಗೆ ಅವನು ಜನರ ಗುಂಪುಗಳನ್ನು ಕಳುಹಿಸಿಬಿಟ್ಟು ದೋಣಿಯನ್ನು ಹತ್ತಿ ಮಗದಾನದ ಪ್ರಾಂತಗಳಿಗೆ ಬಂದನು.

ಪಾದಟಿಪ್ಪಣಿ