ಪ್ರಕಟನೆ 21:1-27

21  ನಾನು ನೂತನ ಆಕಾಶವನ್ನೂ ನೂತನ ಭೂಮಿಯನ್ನೂ ನೋಡಿದೆನು; ಮೊದಲಿದ್ದ ಆಕಾಶವೂ ಮೊದಲಿದ್ದ ಭೂಮಿಯೂ ಇಲ್ಲದೆ ಹೋಗಿದ್ದವು ಮತ್ತು ಸಮುದ್ರವು ಇನ್ನಿಲ್ಲ.  ಇದಲ್ಲದೆ ಸ್ವರ್ಗದಿಂದ ದೇವರ ಬಳಿಯಿಂದ ಪವಿತ್ರ ನಗರವಾದ ಹೊಸ ಯೆರೂಸಲೇಮ್‌ ಸಹ ಇಳಿದುಬರುವುದನ್ನು ನಾನು ನೋಡಿದೆನು; ಅದು ತನ್ನ ಗಂಡನಿಗಾಗಿ ಅಲಂಕರಿಸಿಕೊಂಡ ವಧುವಿನಂತೆ ಸಿದ್ಧವಾಗಿತ್ತು.  ಆಗ ಸಿಂಹಾಸನದಿಂದ ಬಂದ ಗಟ್ಟಿಯಾದ ಧ್ವನಿಯು, “ಇಗೋ, ದೇವರ ಗುಡಾರವು ಮಾನವಕುಲದೊಂದಿಗೆ ಇದೆ; ಆತನು ಅವರೊಂದಿಗೆ ವಾಸಮಾಡುವನು ಮತ್ತು ಅವರು ಆತನ ಜನರಾಗಿರುವರು. ದೇವರು ತಾನೇ ಅವರೊಂದಿಗಿರುವನು.  ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ” ಎಂದು ಹೇಳುವುದನ್ನು ನಾನು ಕೇಳಿಸಿಕೊಂಡೆನು.  ಆಗ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾತನು, “ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ” ಎಂದು ಹೇಳಿದನು. ಇದಲ್ಲದೆ ಆತನು “ಬರೆ, ಏಕೆಂದರೆ ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ” ಎಂದೂ ಹೇಳಿದನು.  ಆತನು ನನಗೆ, “ಅವು ನೆರವೇರಿವೆ! ನಾನು ಆಲ್ಫ ಮತ್ತು ಒಮೇಗ ಅಂದರೆ ಆದಿಯೂ ಅಂತ್ಯವೂ ಆಗಿದ್ದೇನೆ. ದಾಹಪಡು​ತ್ತಿರುವ ಯಾವನಿಗೂ ನಾನು ಜೀವ​ಜಲದ ಬುಗ್ಗೆಯಿಂದ ಉಚಿತವಾಗಿ ​ಕೊಡುವೆನು.   ಜಯಹೊಂದುತ್ತಿರುವ ಯಾವನೂ ಈ ವಿಷಯಗಳನ್ನು ಬಾಧ್ಯತೆಯಾಗಿ ಹೊಂದುವನು; ನಾನು ಅವನಿಗೆ ದೇವರಾಗಿರುವೆನು ಮತ್ತು ಅವನು ನನಗೆ ಮಗನಾಗಿರುವನು.  ಆದರೆ ​ಹೇಡಿಗಳು, ನಂಬಿಕೆಯಿಲ್ಲದವರು, ತಮ್ಮ ಹೊಲಸು​ತನದಲ್ಲಿ ಅಸಹ್ಯರಾಗಿರುವವರು, ಕೊಲೆಗಾರರು, ಜಾರರು, ಪ್ರೇತವ್ಯವಹಾರವನ್ನು ಆಚರಿಸುತ್ತಿರುವವರು, ವಿಗ್ರಹಾರಾಧಕರು ಮತ್ತು ಎಲ್ಲ ಸುಳ್ಳುಗಾರರು, ಇಂಥವರಿಗೆ ಸಿಗುವ ಪಾಲು ಬೆಂಕಿಗಂಧಕಗಳು ಉರಿಯುವ ಕೆರೆಯೇ ಆಗಿರುವುದು. ಇದು ಎರಡನೆಯ ಮರಣವನ್ನು ಸೂಚಿಸುತ್ತದೆ” ಎಂದು ಹೇಳಿದನು.  ಕೊನೆಯ ಏಳು ಉಪದ್ರವಗಳಿಂದ ತುಂಬಿದ್ದ ಏಳು ಬೋಗುಣಿಗಳನ್ನು ಹಿಡಿದುಕೊಂಡಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನೊಂದಿಗೆ ಮಾತಾಡುತ್ತಾ, “ಇಲ್ಲಿಗೆ ಬಾ, ನಾನು ನಿನಗೆ ವಧುವನ್ನು ಅಂದರೆ ಕುರಿಮರಿಯ ಪತ್ನಿಯನ್ನು ತೋರಿಸುವೆನು” ಎಂದು ಹೇಳಿದನು. 10  ಅವನು ನನ್ನನ್ನು ಪವಿತ್ರಾತ್ಮದ ಶಕ್ತಿಯಿಂದ ದೊಡ್ಡದಾದ ಮತ್ತು ಎತ್ತರವಾದ ಒಂದು ಬೆಟ್ಟಕ್ಕೆ ಎತ್ತಿಕೊಂಡು ಹೋಗಿ, ಸ್ವರ್ಗದಿಂದ ದೇವರ ಬಳಿಯಿಂದ ಪವಿತ್ರ ನಗರವಾದ ಯೆರೂಸಲೇಮ್‌ ​ಇಳಿದುಬರುತ್ತಿರುವುದನ್ನೂ 11  ಅದು ದೇವರ ಮಹಿಮೆಯನ್ನು ಹೊಂದಿರುವುದನ್ನೂ ನನಗೆ ತೋರಿಸಿದನು. ಅದರ ತೇಜಸ್ಸು ಅತ್ಯಮೂಲ್ಯ ರತ್ನದ ಹೊಳಪಿನಂತೆ, ಸ್ಫಟಿಕದಂತೆ ಸ್ವಚ್ಛವಾಗಿ ಥಳಥಳಿಸುವ ಸೂರ್ಯಕಾಂತ ಮಣಿಯಂತಿತ್ತು. 12  ಅದಕ್ಕೆ ದೊಡ್ಡದಾದ ಮತ್ತು ಎತ್ತರವಾದ ಪ್ರಾಕಾರವಿತ್ತು; ಹನ್ನೆರಡು ಹೆಬ್ಬಾಗಿಲುಗಳಿದ್ದವು ಮತ್ತು ಆ ಹೆಬ್ಬಾಗಿಲುಗಳಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು; ಅವುಗಳ ಮೇಲೆ ಇಸ್ರಾಯೇಲನ ಪುತ್ರರ ಹನ್ನೆರಡು ಕುಲಗಳ ಹೆಸರುಗಳು ಕೆತ್ತಲ್ಪಟ್ಟಿದ್ದವು. 13  ಪೂರ್ವ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು ಮತ್ತು ಪಶ್ಚಿಮ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು ಇದ್ದವು. 14  ನಗರದ ಪ್ರಾಕಾರಕ್ಕೆ ಹನ್ನೆರಡು ಅಸ್ತಿವಾರದ ಕಲ್ಲುಗಳೂ ಇದ್ದವು; ಅವುಗಳ ಮೇಲೆ ಕುರಿಮರಿಯ ಹನ್ನೆರಡು ಮಂದಿ ಅಪೊಸ್ತಲರ ಹನ್ನೆರಡು ಹೆಸರುಗಳಿದ್ದವು. 15  ನನ್ನೊಂದಿಗೆ ಮಾತಾಡುತ್ತಿದ್ದವನು ಆ ನಗರವನ್ನೂ ಅದರ ಹೆಬ್ಬಾಗಿಲುಗಳನ್ನೂ ಅದರ ಪ್ರಾಕಾರವನ್ನೂ ಅಳತೆಮಾಡುವುದಕ್ಕಾಗಿ ತನ್ನ ಕೈಯಲ್ಲಿ ಅಳತೇಕೋಲಿನಂಥ ಒಂದು ಚಿನ್ನದ ಜೊಂಡು ಕೋಲನ್ನು ಹಿಡಿದುಕೊಂಡಿದ್ದನು. 16  ನಗರವು ಚಚ್ಚೌಕವಾಗಿದೆ ಮತ್ತು ಅದರ ಉದ್ದವು ಅದರ ಅಗಲದಷ್ಟೇ ಇದೆ. ಅವನು ಆ ನಗರವನ್ನು ಜೊಂಡು ಕೋಲಿನಿಂದ ಅಳತೆ​ಮಾಡಿದನು ಮತ್ತು ಅದು ಸುಮಾರು ಎರಡು ಸಾವಿರದ ಇನ್ನೂರ ಇಪ್ಪತ್ತು ಕಿಲೊಮೀಟರುಗಳಷ್ಟಿದೆ; ಅದರ ಉದ್ದ, ಅಗಲ ಮತ್ತು ಎತ್ತರವು ಸಮವಾಗಿದೆ. 17  ಇದಲ್ಲದೆ ಅವನು ಅದರ ಪ್ರಾಕಾರವನ್ನು ಅಳತೆಮಾಡಿದನು; ಮನುಷ್ಯನ ಅಳತೆಗನುಸಾರ, ಅದೇ ಸಮಯದಲ್ಲಿ ದೇವದೂತನ ಅಳತೆಗನುಸಾರವಾಗಿ ಅದು ನೂರ ನಲ್ವತ್ತನಾಲ್ಕು ಮೊಳವಾಗಿತ್ತು. 18  ಅದರ ಪ್ರಾಕಾರದ ರಚನೆಯು ಸೂರ್ಯಕಾಂತ ಶಿಲೆಯದ್ದಾಗಿತ್ತು ಮತ್ತು ಆ ನಗರವು ಸ್ಪಷ್ಟವಾದ ಗಾಜಿನಂತಿರುವ ಅಪ್ಪಟ ಚಿನ್ನವಾಗಿತ್ತು. 19  ಆ ನಗರದ ಪ್ರಾಕಾರದ ಅಸ್ತಿವಾರಗಳು ಸಕಲ ವಿಧವಾದ ಅಮೂಲ್ಯ ರತ್ನದಿಂದ ಅಲಂಕೃತ​ವಾಗಿದ್ದವು: ಮೊದಲನೆಯ ಅಸ್ತಿವಾರವು ಸೂರ್ಯಕಾಂತಶಿಲೆ, ಎರಡನೆಯದು ನೀಲಮಣಿ, ಮೂರನೆಯದು ಕ್ಯಾಲ್ಸೆಡನಿ ಪ್ರಶಸ್ತಶಿಲೆ, ನಾಲ್ಕನೆಯದು ಹಸಿರು ಬಣ್ಣದ ರತ್ನ, 20  ಐದನೆಯದು ಸಾರ್ಡ್‌ ಗೋಮೇಧಿಕ, ಆರನೆಯದು ಕೆಂಪು ಮಾಣಿಕ್ಯ, ಏಳನೆಯದು ಕ್ರಿಸಲೈಟ್‌ ಪಚ್ಚೆಮಣಿ, ಎಂಟನೆಯದು ಬೆರಿಲ್‌ ರತ್ನ, ಒಂಭತ್ತನೆಯದು ಪುಷ್ಪರಾಗ, ಹತ್ತನೆಯದು ಕ್ರಿಸಪ್ರೇಸ್‌ ಹಸಿರು​ಮಣಿ, ಹನ್ನೊಂದನೆಯದು ಕಿತ್ತಳೆ ಬಣ್ಣದ ಹೈಅಸಿಂತ್‌, ಹನ್ನೆರಡನೆಯದು ಪದ್ಮರಾಗ. 21  ಇದಲ್ಲದೆ ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು; ಪ್ರತಿಯೊಂದು ಹೆಬ್ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ನಗರದ ವಿಶಾಲವಾದ ಮಾರ್ಗವು ಪಾರದರ್ಶಕ ಗಾಜಿನಂತೆ ಅಪ್ಪಟ ಚಿನ್ನವಾಗಿತ್ತು. 22  ಆ ನಗರದಲ್ಲಿ ನಾನು ದೇವಾಲಯವನ್ನು ಕಾಣಲಿಲ್ಲ, ಏಕೆಂದರೆ ಸರ್ವಶಕ್ತನಾದ ಯೆಹೋವ ದೇವರು ಮತ್ತು ಕುರಿಮರಿಯು ಅದರ ದೇವಾಲಯವಾಗಿದ್ದಾರೆ. 23  ಆ ನಗರದ ಮೇಲೆ ಸೂರ್ಯನಾಗಲಿ ಚಂದ್ರನಾಗಲಿ ಪ್ರಕಾಶಿಸುವ ಅಗತ್ಯವಿಲ್ಲ, ಏಕೆಂದರೆ ದೇವರ ಮಹಿಮೆಯು ಅದನ್ನು ಬೆಳಗಿಸಿತು ಮತ್ತು ಕುರಿಮರಿಯು ಅದರ ದೀಪವಾಗಿದ್ದನು. 24  ಜನಾಂಗಗಳು ಅದರ ಬೆಳಕಿನಲ್ಲಿ ನಡೆಯುವವು ಮತ್ತು ಭೂರಾಜರು ತಮ್ಮ ಮಹಿಮೆಯನ್ನು ಅದರೊಳಗೆ ತರುವರು. 25  ಅದರ ಹೆಬ್ಬಾಗಿಲುಗಳು ಹಗಲಿನಲ್ಲಿ ಮುಚ್ಚಲ್ಪಡುವುದೇ ಇಲ್ಲ, ರಾತ್ರಿಯಂತೂ ಅಸ್ತಿತ್ವದಲ್ಲೇ ಇರದು. 26  ಅವರು ಜನಾಂಗಗಳ ಮಹಿಮೆಯನ್ನೂ ಗೌರವವನ್ನೂ ಅದರೊಳಗೆ ತರುವರು. 27  ಆದರೆ ಪರಿಶುದ್ಧವಲ್ಲದ ಯಾವುದೂ, ಅಸಹ್ಯವಾದ ವಿಷಯಗಳನ್ನು ನಡಿಸುತ್ತಾ ಮತ್ತು ಸುಳ್ಳನ್ನು ಆಡುತ್ತಾ ಇರುವ ಯಾವನೂ ಅದರೊಳಗೆ ಪ್ರವೇಶಿಸಲಾರನು; ಕುರಿಮರಿಯ ಜೀವದ ಸುರುಳಿಯಲ್ಲಿ ಯಾರ ಹೆಸರುಗಳು ಬರೆಯಲ್ಪಟ್ಟಿವೆಯೋ ಅವರು ಮಾತ್ರ ಪ್ರವೇಶಿಸುವರು.

ಪಾದಟಿಪ್ಪಣಿ