ಪ್ರಕಟನೆ 18:1-24

18  ಇವುಗಳಾದ ಮೇಲೆ ಇನ್ನೊಬ್ಬ ದೇವದೂತನು ಸ್ವರ್ಗದಿಂದ ಮಹಾ ಅಧಿಕಾರವುಳ್ಳವನಾಗಿ ಇಳಿಯುವುದನ್ನು ನಾನು ನೋಡಿದೆನು. ಅವನ ಮಹಿಮೆಯಿಂದ ಭೂಮಿಯು ಬೆಳಗಿತು.  ಅವನು ಗಟ್ಟಿಯಾದ ಧ್ವನಿಯಿಂದ ಕೂಗುತ್ತಾ, “ಅವಳು ಬಿದ್ದಿದ್ದಾಳೆ! ಮಹಾ ಬಾಬೆಲ್‌ ಬಿದ್ದಿದ್ದಾಳೆ. ಅವಳು ದೆವ್ವಗಳ ವಾಸಸ್ಥಳವೂ ಪ್ರತಿಯೊಂದು ಅಶುದ್ಧ ಹಬೆಯು ಅವಿತುಕೊಳ್ಳುವ ಸ್ಥಳವೂ ಪ್ರತಿಯೊಂದು ಅಶುದ್ಧ ಮತ್ತು ದ್ವೇಷಿಸಲ್ಪಟ್ಟ ಪಕ್ಷಿಯು ಅವಿತುಕೊಳ್ಳುವ ಸ್ಥಳವೂ ಆಗಿದ್ದಾಳೆ.  ಅವಳ ಜಾರತ್ವದ ಕೋಪದ ದ್ರಾಕ್ಷಾಮದ್ಯದ ಕಾರಣ ಎಲ್ಲ ಜನಾಂಗಗಳು ಬಲಿಯಾಗಿವೆ ಮತ್ತು ಭೂರಾಜರು ಅವಳೊಂದಿಗೆ ಜಾರತ್ವಮಾಡಿದರು; ಅವಳ ನಿರ್ಲಜ್ಜೆಯ ಸುಖಭೋಗದ ಬಲದಿಂದ ಭೂಲೋಕದ ಸಂಚಾರಿ ವರ್ತಕರು ಐಶ್ವರ್ಯವಂತರಾದರು” ಎಂದು ​ಹೇಳಿದನು.  ಇದಲ್ಲದೆ ಸ್ವರ್ಗದಿಂದ ಇನ್ನೊಂದು ಧ್ವನಿಯು ಹೀಗೆ ಹೇಳುವುದನ್ನು ನಾನು ಕೇಳಿಸಿಕೊಂಡೆನು: “ನನ್ನ ಜನರೇ, ನೀವು ಅವಳೊಂದಿಗೆ ಅವಳ ಪಾಪಗಳಲ್ಲಿ ಪಾಲುಗಾರರಾಗಲು ಬಯಸದಿರುವಲ್ಲಿ ಮತ್ತು ಅವಳ ಉಪದ್ರವಗಳಲ್ಲಿ ಪಾಲನ್ನು ಪಡೆಯಲು ಬಯಸದಿರುವಲ್ಲಿ ಅವಳನ್ನು ಬಿಟ್ಟು ಹೊರಗೆ ಬನ್ನಿರಿ.  ಏಕೆಂದರೆ ಅವಳ ಪಾಪಗಳು ಒಂದಕ್ಕೊಂದು ಸೇರಿ ಆಕಾಶದ ತನಕವೂ ಬೆಳೆದಿವೆ ಮತ್ತು ದೇವರು ಅವಳ ಅನ್ಯಾಯದ ಕೃತ್ಯಗಳನ್ನು ಗಮನಕ್ಕೆ ತಂದುಕೊಂಡಿದ್ದಾನೆ.  ಅವಳು ಮಾಡಿದ್ದಕ್ಕೆ ಸರಿ​ಯಾಗಿ ಅವಳಿಗೂ ಮಾಡಿರಿ; ಅವಳು ಮಾಡಿದ್ದಕ್ಕೆ ಪ್ರತಿಯಾಗಿ ಇಮ್ಮಡಿಯಾಗಿ ಮಾಡಿರಿ, ಹೌದು ಅವಳು ಮಾಡಿದ್ದರ ಎರಡರಷ್ಟು ಮಾಡಿರಿ; ಅವಳು ಮಿಶ್ರಣವನ್ನು ಹಾಕಿದ ಬಟ್ಟಲಿನಲ್ಲಿ ಅವಳಿಗಾಗಿ ಎರಡರಷ್ಟು ಮಿಶ್ರಣವನ್ನು ಹಾಕಿರಿ.  ಅವಳು ಎಷ್ಟು ಹೆಚ್ಚಾಗಿ ತನ್ನನ್ನು ಮಹಿಮೆಪಡಿಸಿಕೊಂಡು ಲಜ್ಜಾಹೀನ ಸುಖಭೋಗದಲ್ಲಿ ಜೀವಿಸಿದಳೋ ಅಷ್ಟು ಹೆಚ್ಚಾಗಿ ಅವಳಿಗೆ ಯಾತನೆಯನ್ನೂ ಶೋಕವನ್ನೂ ಕೊಡಿರಿ, ಏಕೆಂದರೆ ಅವಳು ತನ್ನ ಹೃದಯದಲ್ಲಿ, ‘ನಾನು ರಾಣಿಯಾಗಿ ಕುಳಿತುಕೊಂಡಿದ್ದೇನೆ; ನಾನು ವಿಧವೆಯಲ್ಲ ಮತ್ತು ನಾನು ಶೋಕವನ್ನು ಎಂದಿಗೂ ಕಾಣುವುದೇ ಇಲ್ಲ’ ಎಂದು ಹೇಳಿಕೊಳ್ಳುತ್ತಿದ್ದಾಳೆ.  ಆದುದರಿಂದಲೇ ಒಂದೇ ದಿನದಲ್ಲಿ ಅವಳಿಗೆ ಮರಣ, ಶೋಕ, ಕ್ಷಾಮ ಎಂಬೀ ಉಪದ್ರವಗಳು ಬರುವವು; ಅವಳು ಬೆಂಕಿಯಿಂದ ಸಂಪೂರ್ಣವಾಗಿ ಸುಡಲ್ಪಡುವಳು, ಏಕೆಂದರೆ ಅವಳಿಗೆ ನ್ಯಾಯತೀರ್ಪು ನೀಡಿದ ಯೆಹೋವ ದೇವರು ಬಲಿಷ್ಠನಾಗಿದ್ದಾನೆ.  “ಅವಳೊಂದಿಗೆ ಜಾರತ್ವಮಾಡಿ ನಿರ್ಲಜ್ಜವಾದ ಸುಖಭೋಗದಲ್ಲಿ ಜೀವಿಸಿದ ಭೂರಾಜರು ಅವಳ ದಹನದಿಂದ ಏರುವ ಹೊಗೆಯನ್ನು ನೋಡುವಾಗ ಅವಳ ವಿಷಯ​ದಲ್ಲಿ ಅತ್ತು ದುಃಖದಿಂದ ಎದೆಬಡಿದುಕೊಳ್ಳುವರು. 10  ಅವಳ ಯಾತನೆಯ ಕಾರಣ ಅವರು ಭಯಪಟ್ಟು ದೂರದಲ್ಲಿ ನಿಂತು, ‘ತೀರಾ ವಿಷಾದನೀಯ, ತೀರಾ ವಿಷಾದನೀಯ, ಮಹಾ ನಗರಿಯೇ, ಬಲಿಷ್ಠ ನಗರವಾದ ಬಾಬೆಲೇ, ನಿನ್ನ ನ್ಯಾಯತೀರ್ಪು ಒಂದೇ ತಾಸಿನಲ್ಲಿ ಬಂತಲ್ಲಾ!’ ಎಂದು ಹೇಳುವರು. 11  “ಇದಲ್ಲದೆ ಭೂಮಿಯ ಸಂಚಾರಿ ವರ್ತಕರು ಅವಳ ವಿಷಯದಲ್ಲಿ ಅತ್ತು ಗೋಳಾಡುತ್ತಿದ್ದಾರೆ, ಏಕೆಂದರೆ ಅವರ ತುಂಬಿದ ಸರಕುಗಳನ್ನು 12  ಅಂದರೆ ಚಿನ್ನ, ಬೆಳ್ಳಿ, ಅಮೂಲ್ಯವಾದ ರತ್ನ, ಮುತ್ತುಗಳು, ನಯವಾದ ನಾರುಮಡಿ, ನೇರಳೆ ವಸ್ತ್ರ, ರೇಷ್ಮೆ ಮತ್ತು ಕಡುಗೆಂಪು ಬಣ್ಣದ ತುಂಬಿದ ಸರಕು, ಸುಗಂಧ ಮರದಿಂದ ಮಾಡಲ್ಪಟ್ಟ ಎಲ್ಲ ವಸ್ತುಗಳು, ಸಕಲ ವಿಧವಾದ ದಂತದ ವಸ್ತು, ಅತ್ಯಮೂಲ್ಯವಾದ ಮರದಿಂದ, ತಾಮ್ರದಿಂದ, ಕಬ್ಬಿಣ​ದಿಂದ ಮತ್ತು ಚಂದ್ರಕಾಂತ ಶಿಲೆಯಿಂದ ಮಾಡಿದ ಎಲ್ಲ ರೀತಿಯ ವಸ್ತುಗಳು, 13  ಮಾತ್ರವಲ್ಲದೆ ದಾಲ್ಚಿನ್ನಿ, ಏಲಕ್ಕಿ, ಧೂಪ, ಸುಗಂಧ ತೈಲ, ಲೋಬಾನ, ದ್ರಾಕ್ಷಾಮದ್ಯ, ಆಲೀವ್‌ ಎಣ್ಣೆ, ನಯವಾದ ಹಿಟ್ಟು, ಗೋದಿ, ದನಕುರಿಗಳು, ಕುದುರೆ​ಗಳು, ಬಂಡಿಗಳು, ಗುಲಾಮರು ಮತ್ತು ಮಾನವರು​—⁠ಇವುಗಳನ್ನು ಇನ್ನು ಮುಂದೆ ಕೊಂಡುಕೊಳ್ಳುವವನು ಯಾವನೂ ಇಲ್ಲ. 14  ಹೌದು, ನಿನ್ನ ಪ್ರಾಣವು ಬಯಸಿದ ಅತ್ಯುತ್ತಮ ಫಲವು ನಿನ್ನಿಂದ ಅಗಲಿಹೋಗಿದೆ; ನಯನಾಜೂಕಿನ ಮತ್ತು ಶೋಭಾಯಮಾನವಾದ ಎಲ್ಲವೂ ನಿನ್ನಿಂದ ನಾಶವಾಗಿ ಹೋಗಿದೆ; ಇವುಗಳನ್ನು ಜನರು ಇನ್ನು ಮುಂದೆ ಕಂಡುಕೊಳ್ಳುವುದೇ ಇಲ್ಲ. 15  “ಅವಳಿಂದ ಐಶ್ವರ್ಯವಂತರಾದ ಈ ಸರಕುಗಳ ಸಂಚಾರಿ ವರ್ತಕರು ಅವಳ ಯಾತನೆಯನ್ನು ನೋಡಿ ಭಯಪಟ್ಟು ದೂರದಲ್ಲಿ ನಿಲ್ಲುವರು ಮತ್ತು ಅಳುತ್ತಾ ಗೋಳಾಡುತ್ತಾ, 16  ‘ನಯವಾದ ನಾರುಮಡಿಯನ್ನೂ ನೇರಳೆ ಮತ್ತು ಕಡುಗೆಂಪು ಬಣ್ಣದ ವಸ್ತ್ರಗಳನ್ನೂ ಧರಿಸಿಕೊಂಡು ಚಿನ್ನದ ಆಭರಣ, ಅಮೂಲ್ಯ ರತ್ನ ಮತ್ತು ಮುತ್ತಿನಿಂದ ಶೋಭಾಯಮಾನವಾಗಿ ತನ್ನನ್ನು ಅಲಂಕರಿಸಿಕೊಂಡಿರುವ ಮಹಾ ನಗರಕ್ಕೆ ಹೀಗಾದದ್ದು ತೀರಾ ವಿಷಾದನೀಯ, ತೀರಾ ವಿಷಾದನೀಯ, 17  ಏಕೆಂದರೆ ಇಂಥ ಮಹಾ ಐಶ್ವರ್ಯವು ಒಂದೇ ಗಳಿಗೆಯಲ್ಲಿ ನಾಶಗೊಳಿಸಲ್ಪಟ್ಟಿತಲ್ಲಾ!’ ಎಂದು ​ಹೇಳುವರು. “ಇದಲ್ಲದೆ ಪ್ರತಿಯೊಂದು ಹಡಗಿನ ಕಫ್ತಾನನೂ ಎಲ್ಲಿಗಾದರೂ ಸಮುದ್ರಯಾನ ಮಾಡುವವನೂ ನಾವಿಕರೂ ಸಮುದ್ರದಿಂದ ಜೀವನೋಪಾಯ ಮಾಡುವವರೆಲ್ಲರೂ ದೂರದಲ್ಲಿ ನಿಂತುಕೊಂಡು 18  ಅವಳ ದಹನದಿಂದ ಬರುವ ಹೊಗೆಯನ್ನು ನೋಡಿ, ‘ಈ ಮಹಾ ನಗರಕ್ಕೆ ಸಮಾನವಾದ ನಗರವು ಯಾವುದು?’ ಎಂದು ಗಟ್ಟಿಯಾಗಿ ಕೂಗಿ ಹೇಳಿದರು. 19  ಅವರು ತಮ್ಮ ತಲೆಗಳ ಮೇಲೆ ಮಣ್ಣನ್ನು ಎರಚಿಕೊಂಡು ಅಳುತ್ತಾ ಗೋಳಾಡುತ್ತಾ, ‘ಸಮುದ್ರದಲ್ಲಿ ಹಡಗುಗಳಿದ್ದವರೆಲ್ಲರೂ ಯಾರ ದುಬಾರಿತನದಿಂದ ಐಶ್ವರ್ಯವಂತರಾದರೋ ಆ ಮಹಾ ನಗರಕ್ಕೆ ಹೀಗಾದದ್ದು ತೀರಾ ವಿಷಾದನೀಯ, ತೀರಾ ವಿಷಾದನೀಯ, ಏಕೆಂದರೆ ಅವಳು ಒಂದೇ ಗಳಿಗೆಯಲ್ಲಿ ಧ್ವಂಸಮಾಡಲ್ಪಟ್ಟಿ​ದ್ದಾಳೆ!’ ಎಂದು ಕೂಗಿಹೇಳಿದರು. 20  “ಸ್ವರ್ಗವೇ, ಪವಿತ್ರ ಜನರೇ, ಅಪೊಸ್ತಲರೇ, ಪ್ರವಾದಿಗಳೇ, ಅವಳ ವಿಷಯ​ದಲ್ಲಿ ಹರ್ಷಿಸಿರಿ, ಏಕೆಂದರೆ ದೇವರು ನಿಮ್ಮ ಪರವಾಗಿ ಅವಳಿಗೆ ನ್ಯಾಯಾತ್ಮಕವಾಗಿ ಶಿಕ್ಷೆಯನ್ನು ಬರಮಾಡಿದ್ದಾನೆ!” 21  ಇದಾದ ಮೇಲೆ ಬಲಿಷ್ಠನಾದ ಒಬ್ಬ ದೇವದೂತನು ದೊಡ್ಡ ಬೀಸುವ ಕಲ್ಲಿನಂತಿರುವ ಕಲ್ಲನ್ನು ಎತ್ತಿ ಸಮುದ್ರದೊಳಗೆ ಎಸೆಯುತ್ತಾ, “ಹೀಗೆ ಮಹಾ ನಗರವಾದ ಬಾಬೆಲ್‌ ಕ್ಷಿಪ್ರ ಎಸೆತಕ್ಕೊಳಗಾಗಿ ಕೆಳಗೆ ತಳ್ಳಲ್ಪಡುವಳು ಮತ್ತು ಅವಳು ಇನ್ನೆಂದಿಗೂ ಕಾಣಸಿಗಳು. 22  ಕಿನ್ನರಿಯನ್ನು ನುಡಿಸುತ್ತಾ ಹಾಡುತ್ತಿರುವ ಗಾಯಕರ ಸ್ವರವಾಗಲಿ ಸಂಗೀತಗಾರರ, ಕೊಳಲೂದುವವರ ಮತ್ತು ತುತೂರಿಯವರ ಸ್ವರವಾಗಲಿ ನಿನ್ನಲ್ಲಿ ಇನ್ನೆಂದಿಗೂ ಪುನಃ ಕೇಳಿಬರದು; ಯಾವುದೇ ವಿಧದ ಕುಶಲಕರ್ಮಿಯು ನಿನ್ನಲ್ಲಿ ಇನ್ನೆಂದಿಗೂ ಕಂಡುಬರನು; ಬೀಸುವ ಕಲ್ಲಿನ ಶಬ್ದವು ನಿನ್ನಲ್ಲಿ ಇನ್ನೆಂದಿಗೂ ಕೇಳಿಬರದು. 23  ದೀಪದ ಬೆಳಕು ನಿನ್ನಲ್ಲಿ ಇನ್ನೆಂದಿಗೂ ಪ್ರಕಾಶಿಸದು; ವರನ ಮತ್ತು ವಧುವಿನ ಸ್ವರವು ನಿನ್ನಲ್ಲಿ ಇನ್ನೆಂದಿಗೂ ಕೇಳಿಬರದು; ಏಕೆಂದರೆ ನಿನ್ನ ಸಂಚಾರಿ ವರ್ತಕರು ಭೂಮಿಯ ಉನ್ನತ ದರ್ಜೆಯ ಜನರಾಗಿದ್ದರು; ನಿನ್ನ ಪ್ರೇತ​ವ್ಯವಹಾರಗಳ ಮೂಲಕ ಎಲ್ಲ ಜನಾಂಗಗಳು ತಪ್ಪುದಾರಿಗೆಳೆಯಲ್ಪಟ್ಟವು. 24  ಹೌದು, ಪ್ರವಾದಿಗಳ, ಪವಿತ್ರ ಜನರ ಮತ್ತು ಭೂಮಿಯ ಮೇಲೆ ವಧಿಸಲ್ಪಟ್ಟವರೆಲ್ಲರ ರಕ್ತವು ಅವಳಲ್ಲಿ ಕಂಡುಬಂತು” ಎಂದು ಹೇಳಿದನು.

ಪಾದಟಿಪ್ಪಣಿ