ಪ್ರಕಟನೆ 11:1-19

11  ಅಳತೆದಂಡದಂತಿದ್ದ ಒಂದು ಕೋಲು ನನಗೆ ಕೊಡಲ್ಪಟ್ಟಿತು; ಬಳಿಕ ಅವನು ನನಗೆ, “ನೀನು ಎದ್ದು ದೇವರ ಆಲಯದ ಪವಿತ್ರಸ್ಥಳವನ್ನೂ ಯಜ್ಞವೇದಿಯನ್ನೂ ಅದರಲ್ಲಿ ಆರಾಧಿಸುವವರನ್ನೂ ಅಳತೆಮಾಡು. 2   ಆದರೆ ಆಲಯದ ಪವಿತ್ರಸ್ಥಳದ ಹೊರಗಿರುವ ಅಂಗಳದ ವಿಷಯದಲ್ಲಾದರೋ ಅದನ್ನು ಬಿಟ್ಟುಬಿಡು, ಅಳೆಯಬೇಡ; ಏಕೆಂದರೆ ಅದನ್ನು ಅನ್ಯಜನಾಂಗಗಳಿಗೆ ಕೊಡಲಾಗಿದೆ ಮತ್ತು ಅವರು ಆ ಪವಿತ್ರ ನಗರವನ್ನು ನಲ್ವತ್ತೆರಡು ತಿಂಗಳು ತುಳಿದಾಡುವರು.  ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟುಗಳನ್ನು ಧರಿಸಿಕೊಂಡು ಸಾವಿರದ ಇನ್ನೂರ ಅರುವತ್ತು ದಿನಗಳ ವರೆಗೆ ಪ್ರವಾದಿಸುವ ಹಾಗೆ ಮಾಡುವೆನು” ಎಂದು ಹೇಳಿದನು.  ಇವರು ಎರಡು ಆಲೀವ್‌ ಮರಗಳಿಂದಲೂ ಎರಡು ದೀಪಸ್ತಂಭಗಳಿಂದಲೂ ಸಂಕೇತಿಸಲ್ಪಡುತ್ತಾರೆ ಮತ್ತು ಭೂಮಿಯ ಪ್ರಭುವಿನ ಮುಂದೆ ನಿಂತಿದ್ದಾರೆ.  ಇವರಿಗೆ ಯಾವನಾದರೂ ಕೇಡನ್ನು ಉಂಟುಮಾಡಲು ಬಯಸುವಲ್ಲಿ ಇವರ ಬಾಯೊಳಗಿಂದ ಬೆಂಕಿಯು ಹೊರಟು ಇವರ ಶತ್ರುಗಳನ್ನು ದಹಿಸಿಬಿಡುತ್ತದೆ; ಇವರಿಗೆ ಯಾವನಾದರೂ ಕೇಡನ್ನು ಉಂಟುಮಾಡಲು ಬಯಸುವುದಾದರೆ ಅವನು ಈ ರೀತಿ ಕೊಲ್ಲಲ್ಪಡಬೇಕು.  ತಾವು ಪ್ರವಾದಿಸುವ ದಿನಗಳಲ್ಲಿ ಮಳೆಯೇ ಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗಿದೆ; ಇವರಿಗೆ ತಾವು ಬಯಸಿದಷ್ಟು ಸಲ ನೀರುಗಳನ್ನು ರಕ್ತವನ್ನಾಗಿ ಮಾರ್ಪಡಿಸಲು ಮತ್ತು ಭೂಮಿಯನ್ನು ಎಲ್ಲ ರೀತಿಯ ಉಪದ್ರವದಿಂದ ಬಾಧಿಸಲು ಅಧಿಕಾರವಿದೆ.  ಇವರು ತಮ್ಮ ಸಾಕ್ಷಿಕಾರ್ಯವನ್ನು ಮುಗಿಸಿದಾಗ ಅಗಾಧ ಸ್ಥಳದಿಂದ ಏರಿ​ಬರುವ ಕಾಡುಮೃಗವು ಇವರೊಂದಿಗೆ ಯುದ್ಧಮಾಡಿ ಇವರನ್ನು ಜಯಿಸುವುದು ಮತ್ತು ಇವರನ್ನು ಕೊಲ್ಲುವುದು.  ಆಧ್ಯಾತ್ಮಿಕ ಅರ್ಥದಲ್ಲಿ ಸೊದೋಮ್‌ ಮತ್ತು ಈಜಿಪ್ಟ್‌ ಎಂದು ಕರೆಯಲ್ಪಡುವ ಮಹಾ ನಗರದ ವಿಶಾಲವಾದ ಬೀದಿಯಲ್ಲಿ ಇವರ ಶವಗಳು ಬಿದ್ದಿರುವವು; ಇವರ ಒಡೆಯನು ಸಹ ಇಲ್ಲಿಯೇ ಶೂಲಕ್ಕೇರಿಸಲ್ಪಟ್ಟನು.  ಸಕಲ ಪ್ರಜೆ ಕುಲ ಭಾಷೆ ಜನಾಂಗಗಳಿಗೆ ಸೇರಿದವರು ಇವರ ಶವಗಳನ್ನು ಮೂರೂವರೆ ದಿನಗಳ ವರೆಗೆ ನೋಡುವರು ಮತ್ತು ಇವರ ಶವಗಳನ್ನು ಸಮಾಧಿಯಲ್ಲಿಡಲು ಬಿಡುವುದಿಲ್ಲ. 10  ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಪೀಡಿಸಿದ್ದರಿಂದ ಭೂನಿವಾಸಿಗಳು ಅವರ ಸ್ಥಿತಿಯನ್ನು ನೋಡಿ ಉಲ್ಲಾಸಿಸುವರು, ಆನಂದಪಡುವರು ಮತ್ತು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿ​ಸುವರು. 11  ಮೂರೂವರೆ ದಿವಸಗಳಾದ ಮೇಲೆ ದೇವರಿಂದ ಜೀವಶಕ್ತಿ ಬಂದು ಅವುಗಳೊಳಗೆ ಪ್ರವೇಶಿಸಿತು; ಅವು ತಮ್ಮ ಕಾಲೂರಿ ನಿಂತವು ಮತ್ತು ಅವರನ್ನು ನೋಡಿದವರಿಗೆ ಮಹಾ ಭಯಹಿಡಿಯಿತು. 12  ಬಳಿಕ ಸ್ವರ್ಗದಿಂದ ಬಂದ ಮಹಾ ಧ್ವನಿಯು ಅವರಿಗೆ, “ಇಲ್ಲಿ ಮೇಲಕ್ಕೆ ಬನ್ನಿರಿ” ಎಂದು ಹೇಳುವುದನ್ನು ಅವರು ಕೇಳಿಸಿಕೊಂಡರು. ಅವರು ಮೇಘದಲ್ಲಿ ಆಕಾಶಕ್ಕೆ ಏರಿಹೋದರು ಮತ್ತು ಅವರ ಶತ್ರುಗಳು ಅವರನ್ನು ನೋಡಿದರು. 13  ಅದೇ ಗಳಿಗೆಯಲ್ಲಿ ಒಂದು ಮಹಾ ಭೂಕಂಪ ಉಂಟಾಯಿತು; ಆ ನಗರದ ಹತ್ತನೆಯ ಒಂದು ಭಾಗವು ಬಿದ್ದುಹೋಯಿತು; ಆ ಭೂಕಂಪದಿಂದ ಏಳು ಸಾವಿರ ಮಂದಿ ಕೊಲ್ಲಲ್ಪಟ್ಟರು, ಉಳಿದವರು ಭಯಗ್ರಸ್ತರಾಗಿ ಸ್ವರ್ಗದಲ್ಲಿರುವ ದೇವರಿಗೆ ಮಹಿಮೆಯನ್ನು ಸಲ್ಲಿಸಿದರು. 14  ಎರಡನೆಯ ವಿಪತ್ತು ಗತಿಸಿತು. ಇಗೋ, ಮೂರನೆಯ ವಿಪತ್ತು ಬೇಗನೆ ಬರುತ್ತದೆ. 15  ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಸ್ವರ್ಗದಲ್ಲಿ ಮಹಾ ಧ್ವನಿಗಳು ಉಂಟಾಗಿ, “ಲೋಕದ ರಾಜ್ಯವು ಖಂಡಿತವಾಗಿ ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯವಾಗಿ ಪರಿಣಮಿಸಿತು; ಆತನು ಸದಾಸರ್ವದಾ ರಾಜನಾಗಿ ಆಳುವನು” ಎಂದು ಹೇಳಿದವು. 16  ದೇವರ ಮುಂದೆ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತುಕೊಂಡಿದ್ದ ಇಪ್ಪತ್ತನಾಲ್ಕು ಮಂದಿ ಹಿರಿಯರು ಅಧೋಮುಖವಾಗಿ ಬಿದ್ದು ಆತನನ್ನು ಆರಾಧಿಸುತ್ತಾ, 17  “ಯೆಹೋವ ದೇವರೇ, ಸರ್ವಶಕ್ತನೇ, ಇರುವಾತನೂ ಇದ್ದಾತನೂ ಆಗಿರುವಾತನೇ, ನೀನು ನಿನ್ನ ಮಹಾ ಅಧಿಕಾರವನ್ನು ವಹಿಸಿಕೊಂಡು ರಾಜನಾಗಿ ಆಳಲು ಆರಂಭಿಸಿದ್ದರಿಂದ ನಾವು ನಿನಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. 18  ಆದರೆ ಜನಾಂಗಗಳು ಕ್ರೋಧಗೊಂಡವು, ನಿನ್ನ ಕ್ರೋಧವೂ ಬಂತು ಮತ್ತು ಸತ್ತವರು ನ್ಯಾಯತೀರ್ಪನ್ನು ಹೊಂದುವ ಮತ್ತು ನಿನ್ನ ದಾಸರಾದ ಪ್ರವಾದಿಗಳಿಗೂ ಪವಿತ್ರ ಜನರಿಗೂ ನಿನ್ನ ನಾಮಕ್ಕೆ ಭಯಪಡುತ್ತಿರುವ ಚಿಕ್ಕವರಿಗೂ ದೊಡ್ಡವರಿಗೂ ಪ್ರತಿಫಲವನ್ನು ಕೊಡುವ ಹಾಗೂ ಭೂಮಿಯನ್ನು ನಾಶಮಾಡುತ್ತಿರುವವರನ್ನು ನಾಶಗೊಳಿಸುವ ನೇಮಿತ ಸಮಯವು ಬಂತು” ಎಂದು ಹೇಳಿದರು. 19  ಆಗ ಸ್ವರ್ಗದಲ್ಲಿರುವ ದೇವರ ಆಲಯದ ಪವಿತ್ರಸ್ಥಳವು ತೆರೆಯಿತು ಮತ್ತು ಆತನ ಆಲಯದ ಪವಿತ್ರಸ್ಥಳದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ, ಮಿಂಚುಗಳೂ ವಾಣಿಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆಲಿಕಲ್ಲಿನ ಮಳೆಯೂ ಉಂಟಾದವು.

ಪಾದಟಿಪ್ಪಣಿ