ಪ್ರಕಟನೆ 10:1-11

10  ಒಂದು ಮೇಘವನ್ನು ಧರಿಸಿಕೊಂಡಿದ್ದ ಬಲಿಷ್ಠನಾದ ಮತ್ತೊಬ್ಬ ದೇವದೂತನು ಸ್ವರ್ಗದಿಂದ ಇಳಿದುಬರುವುದನ್ನು ಕಂಡೆನು; ಅವನ ತಲೆಯ ಮೇಲೆ ಒಂದು ಮುಗಿಲುಬಿಲ್ಲು ಇತ್ತು, ಅವನ ಮುಖವು ಸೂರ್ಯನಂತಿತ್ತು ಮತ್ತು ಅವನ ಪಾದಗಳು ಬೆಂಕಿಯ ಕಂಬಗಳಂತಿದ್ದವು.  ಅವನ ಕೈಯಲ್ಲಿ ತೆರೆದ ಒಂದು ಚಿಕ್ಕ ಸುರುಳಿ ಇತ್ತು. ಅವನು ತನ್ನ ಬಲಗಾಲನ್ನು ಸಮುದ್ರದ ಮೇಲೆಯೂ ಎಡಗಾಲನ್ನು ಭೂಮಿಯ ಮೇಲೆಯೂ ಇಟ್ಟನು.  ಅವನು ಸಿಂಹವು ಗರ್ಜಿಸುವಾಗ ಹೇಗೋ ಹಾಗೆಯೇ ಮಹಾ ಧ್ವನಿಯಿಂದ ಕೂಗಿದನು. ಅವನು ಕೂಗಿದಾಗ ಏಳು ಗುಡುಗುಗಳು ತಮ್ಮ ಧ್ವನಿಗಳನ್ನು ​ಮೊಳಗಿದವು.  ಆ ಏಳು ಗುಡುಗುಗಳು ನುಡಿದಾಗ ನಾನು ಇನ್ನೇನು ಬರೆಯಬೇಕೆಂದಿದ್ದೆನು, ಆದರೆ ಸ್ವರ್ಗದಿಂದ ಒಂದು ಧ್ವನಿಯು, “ಆ ಏಳು ಗುಡುಗುಗಳು ನುಡಿದ ಸಂಗತಿಗಳಿಗೆ ಮುದ್ರೆಹಾಕು, ಅವುಗಳನ್ನು ಬರೆದಿಡಬೇಡ” ಎಂದು ಹೇಳುವುದನ್ನು ನಾನು ಕೇಳಿಸಿಕೊಂಡೆನು.  ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತಿರುವವನಾಗಿ ನನಗೆ ಕಾಣಿಸಿಕೊಂಡ ದೇವದೂತನು ತನ್ನ ಬಲಗೈಯನ್ನು ಸ್ವರ್ಗದ ಕಡೆಗೆ ಎತ್ತಿ,  ಸ್ವರ್ಗವನ್ನೂ ಅದರಲ್ಲಿ ಇರುವವುಗಳನ್ನೂ ಭೂಮಿಯನ್ನೂ ಅದರಲ್ಲಿ ಇರುವವುಗಳನ್ನೂ ಸಮುದ್ರವನ್ನೂ ಅದರಲ್ಲಿ ಇರುವವುಗಳನ್ನೂ ಸೃಷ್ಟಿಸಿದವನೂ ಸದಾಸರ್ವದಾ ಜೀವಿಸುವವನೂ ಆಗಿರುವಾತನ ಮೇಲೆ ಆಣೆಯಿಟ್ಟು, “ಇನ್ನು ಮುಂದೆ ತಡವಾಗುವುದಿಲ್ಲ;  ಏಳನೆಯ ದೇವದೂತನು ಶಬ್ದಮಾಡುವ ದಿನಗಳಲ್ಲಿ ಅಂದರೆ ಅವನು ತನ್ನ ತುತೂರಿಯನ್ನು ಊದುವುದಕ್ಕಿರುವಾಗ, ದೇವರು ಪ್ರವಾದಿಗಳಾದ ತನ್ನ ದಾಸರಿಗೆ ಪ್ರಕಟಪಡಿಸಿದ ಸುವಾರ್ತೆಗೆ ಅನುಸಾರವಾದ ಆತನ ಪವಿತ್ರ ರಹಸ್ಯವು ನಿಶ್ಚಯವಾಗಿಯೂ ಮುಕ್ತಾಯಕ್ಕೆ ತರಲ್ಪಡುವುದು” ಎಂದು ಹೇಳಿದನು.  ಮತ್ತು ಸ್ವರ್ಗದಿಂದ ನಾನು ಕೇಳಿಸಿ​ಕೊಂಡಿದ್ದ ಧ್ವನಿಯು ನನ್ನೊಂದಿಗೆ ಪುನಃ ಮಾತಾಡುತ್ತಾ, “ಹೋಗು, ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತಿರುವ ಆ ದೇವದೂತನ ಕೈಯಿಂದ ಆ ಬಿಚ್ಚಿದ ಸುರುಳಿಯನ್ನು ತೆಗೆದುಕೊ” ಎಂದು ಹೇಳಿತು.  ನಾನು ಆ ದೇವದೂತನ ಬಳಿಗೆ ಹೋಗಿ ಆ ಚಿಕ್ಕ ಸುರುಳಿಯನ್ನು ನನಗೆ ಕೊಡುವಂತೆ ಹೇಳಿದೆನು. ಅದಕ್ಕೆ ಅವನು ನನಗೆ, “ಇದನ್ನು ತೆಗೆದುಕೊಂಡು ತಿನ್ನು; ಇದು ನಿನ್ನ ಹೊಟ್ಟೆಯನ್ನು ಕಹಿಮಾಡುವುದು, ಆದರೆ ನಿನ್ನ ಬಾಯಲ್ಲಿ ಇದು ಜೇನಿನಂತೆ ಸಿಹಿಯಾಗಿರುವುದು” ಎಂದು ಹೇಳಿದನು. 10  ಆಗ ನಾನು ಆ ದೇವದೂತನ ಕೈಯಿಂದ ಚಿಕ್ಕ ಸುರುಳಿ​ಯನ್ನು ತೆಗೆದುಕೊಂಡು ತಿಂದೆನು; ನನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿತ್ತು, ಆದರೆ ತಿಂದ ಬಳಿಕ ನನ್ನ ಹೊಟ್ಟೆಯು ಕಹಿಯಾಯಿತು. 11  ಆಮೇಲೆ ಅವರು ನನಗೆ, “ನೀನು ಪ್ರಜೆಗಳ, ಜನಾಂಗಗಳ, ಭಾಷೆಗಳ ಮತ್ತು ಅನೇಕ ರಾಜರ ವಿಷಯ​ದಲ್ಲಿ ಪುನಃ ಪ್ರವಾದಿಸಬೇಕು” ಎಂದು ​ಹೇಳಿದರು.

ಪಾದಟಿಪ್ಪಣಿ