ತೀತ 3:1-15

3  ಸರಕಾರಗಳಿಗೆ ಮತ್ತು ಅಧಿಕಾರಿಗಳಿಗೆ ಅಧೀನರಾಗಿ ವಿಧೇಯರಾಗಿರಬೇಕೆಂತಲೂ ಸಕಲ ಸತ್ಕಾರ್ಯಕ್ಕೆ ಸಿದ್ಧರಾಗಿರಬೇಕೆಂತಲೂ  ಯಾರ ವಿಷಯ​ವಾಗಿಯೂ ಹಾನಿಕರವಾಗಿ ಮಾತಾಡದೆ ಆಕ್ರಮಣಶೀಲರಾಗಿರದೆ ನ್ಯಾಯಸಮ್ಮತರೂ ಎಲ್ಲ ಮನುಷ್ಯರ ಕಡೆಗೆ ಪೂರ್ಣ ಸೌಮ್ಯಭಾವವನ್ನು ತೋರಿಸುವವರೂ ಆಗಿರುವಂತೆ ಅವರಿಗೆ ಜ್ಞಾಪಕಹುಟ್ಟಿಸುತ್ತಾ ಇರು.  ನಾವು ಸಹ ಮೊದಲು ಬುದ್ಧಿಹೀನರೂ ಅವಿಧೇಯರೂ ಮೋಸಗೊಳಿಸಲ್ಪಟ್ಟವರೂ ವಿವಿಧ ಆಶೆಗಳಿಗೆ ಮತ್ತು ಸುಖಭೋಗಗಳಿಗೆ ದಾಸರೂ ಆಗಿದ್ದು, ಕೆಟ್ಟತನ ಮತ್ತು ಅಸೂಯೆಗಳಲ್ಲಿ ಮುಂದುವರಿಯುತ್ತಾ ಅಸಹ್ಯರೂ ಒಬ್ಬರನ್ನೊಬ್ಬರು ದ್ವೇಷಿಸುವವರೂ ಆಗಿದ್ದೆವು.  ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಮನುಷ್ಯರಿಗಾಗಿ ಪ್ರೀತಿಯೂ ಪ್ರತ್ಯಕ್ಷವಾದಾಗ  ನಾವು ಮಾಡಿದ ನೀತಿಯ ಕಾರ್ಯಗಳ ನಿಮಿತ್ತವಾಗಿ ಅಲ್ಲ ಆತನ ಕರುಣೆಯಿಂದಾಗಿ ನಮಗೆ ಜೀವವನ್ನು ತಂದ ಸ್ನಾನದ ಮೂಲಕವಾಗಿಯೂ ಪವಿತ್ರಾತ್ಮದಿಂದ * ನಮ್ಮನ್ನು ಹೊಸದು ಮಾಡುವ ಮೂಲಕವಾಗಿಯೂ ಆತನು ನಮ್ಮನ್ನು ರಕ್ಷಿಸಿದನು.  ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೂಲಕ ಆತನು ಈ ಪವಿತ್ರಾತ್ಮವನ್ನು ನಮ್ಮ ಮೇಲೆ ಸಮೃದ್ಧವಾಗಿ ಸುರಿದನು;  ಇದರಿಂದಾಗಿ ನಾವು ಆತನ ಅಪಾತ್ರ ದಯೆಯ ಮುಖಾಂತರ ನೀತಿವಂತರೆಂದು ನಿರ್ಣಯಿಸಲ್ಪಟ್ಟು ನಿತ್ಯಜೀವದ ಒಂದು ನಿರೀಕ್ಷೆಗನುಸಾರ ಬಾಧ್ಯರಾಗುವಂತಾಯಿತು.  ಈ ಹೇಳಿಕೆಯು ನಂಬತಕ್ಕದ್ದಾಗಿದೆ ಮತ್ತು ದೇವರಲ್ಲಿ ನಂಬಿಕೆಯಿಟ್ಟಿರುವವರು ಸತ್ಕ್ರಿಯೆಗಳನ್ನು ಮಾಡುತ್ತಾ ಇರುವುದರ ಮೇಲೆ ಮನಸ್ಸಿಡುವಂತೆ ನೀನು ಈ ವಿಷಯಗಳ ಕುರಿತು ಸದಾ ದೃಢವಾದ ಸಮರ್ಥನೆಗಳನ್ನು ಮಾಡಬೇಕೆಂದು ನಾನು ಬಯಸುತ್ತೇನೆ. ಈ ವಿಷಯಗಳು ಉತ್ತಮವೂ ಮನುಷ್ಯರಿಗೆ ಪ್ರಯೋಜನಕರವೂ ಆಗಿವೆ.  ಆದರೆ ಮೂರ್ಖ ಪ್ರಶ್ನೆಗಳಿಗೂ ವಂಶಾವಳಿಗಳಿಗೂ ಜಗಳಗಳಿಗೂ ಧರ್ಮಶಾಸ್ತ್ರದ ಕುರಿತಾದ ವಾಗ್ವಾದಗಳಿಗೂ ದೂರವಾಗಿರು; ಅವು ನಿಷ್ಪ್ರಯೋಜಕವೂ ವ್ಯರ್ಥವೂ ಆಗಿವೆ. 10  ಭಿನ್ನಪಂಥಕ್ಕೆ ಉತ್ತೇಜನ ನೀಡುವ ಮನುಷ್ಯನಿಗೆ ಪ್ರಥಮ ಮತ್ತು ಎರಡನೆಯ ಬುದ್ಧಿವಾದವನ್ನು ಕೊಟ್ಟ ಮೇಲೆ 11  ಸ್ವಖಂಡನೆಗೆ ಒಳಗಾದವನಾಗಿರುವ ಅಂಥವನು ದಾರಿತಪ್ಪಿದವನೂ ಪಾಪಮಾಡುವವನೂ ಆಗಿದ್ದಾನೆಂದು ತಿಳಿದು ಅವನನ್ನು ತೊರೆದುಬಿಡು. 12  ನಾನು ನಿಕೊಪೊಲಿಯಲ್ಲಿ ಚಳಿ​ಗಾಲ​ವನ್ನು ಕಳೆಯಬೇಕೆಂದು ನಿರ್ಧರಿಸಿರುವುದರಿಂದ, ನಾನು ಅರ್ತೆಮನನ್ನು ಅಥವಾ ತುಖಿಕನನ್ನು ನಿನ್ನ ಬಳಿಗೆ ಕಳುಹಿಸಿದಾಗ ನೀನು ನನ್ನ ಬಳಿಗೆ ಬರಲು ನಿನ್ನಿಂದಾಗುವ ಎಲ್ಲ ಪ್ರಯತ್ನವನ್ನು ಮಾಡು. 13  ಧರ್ಮಶಾಸ್ತ್ರದಲ್ಲಿ ಪ್ರವೀಣನಾಗಿರುವ ಜೇನನಿಗೂ ಅಪೊಲ್ಲೋಸನಿಗೂ ಪ್ರಯಾಣಕ್ಕೆ ಬೇಕಾಗಿರುವುದನ್ನು ಜಾಗರೂಕತೆಯಿಂದ ಒದಗಿಸಿ ಕಳುಹಿಸು; ಅವರಿಗೆ ಏನೂ ಕೊರತೆಯಾಗದಿರಲಿ. 14  ನಮ್ಮ ಜನರು ಸಹ ನಿಷ್ಫಲರಾಗದೆ ಇರುವಂತೆ ಅವರೂ ಸಹೋದರರ ತುರ್ತಿನ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಸತ್ಕ್ರಿಯೆಗಳನ್ನು ಕಾಪಾಡಿಕೊಳ್ಳಲು ಕಲಿಯಲಿ. 15  ನನ್ನೊಂದಿಗಿರುವವರೆಲ್ಲರು ನಿನಗೆ ತಮ್ಮ ವಂದನೆಗಳನ್ನು ಕಳುಹಿಸುತ್ತಾರೆ. ನಂಬುವವರಾಗಿ ನಮ್ಮ ಮೇಲೆ ಮಮತೆಯಿಟ್ಟಿರುವವರಿಗೆ ನನ್ನ ವಂದನೆಗಳನ್ನು ತಿಳಿಸು. ಅಪಾತ್ರ ದಯೆಯು ನಿಮ್ಮೆಲ್ಲರೊಂದಿಗಿರಲಿ.

ಪಾದಟಿಪ್ಪಣಿ

ತೀತ 3:5  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.