ಗಲಾತ್ಯ 5:1-26

5  ಇಂಥ ಸ್ವಾತಂತ್ರ್ಯಕ್ಕಾಗಿ ಕ್ರಿಸ್ತನು ನಮ್ಮನ್ನು ಬಿಡುಗಡೆಮಾಡಿದನು. ಆದುದರಿಂದ ಸ್ಥಿರವಾಗಿ ನಿಲ್ಲಿರಿ; ದಾಸತ್ವದ ನೊಗಕ್ಕೆ ಪುನಃ ನಿಮ್ಮನ್ನು ಸಿಕ್ಕಿಸಿಕೊಳ್ಳಬೇಡಿ.  ನೋಡಿರಿ! ಪೌಲನೆಂಬ ನಾನು ನಿಮಗೆ ಹೇಳುವುದೇನೆಂದರೆ, ನೀವು ಸುನ್ನತಿಮಾಡಿಸಿಕೊಂಡರೆ ಕ್ರಿಸ್ತನಿಂದ ನಿಮಗೆ ಯಾವುದೇ ಪ್ರಯೋಜನವಿರುವುದಿಲ್ಲ.  ಇದಲ್ಲದೆ, ಸುನ್ನತಿಮಾಡಿಸಿಕೊಳ್ಳುವ ಪ್ರತಿಯೊಬ್ಬನು ಪೂರ್ಣವಾಗಿ ಧರ್ಮಶಾಸ್ತ್ರವನ್ನು ಕೈಕೊಳ್ಳುವ ಹಂಗಿನಲ್ಲಿದ್ದಾನೆ ಎಂದು ನಾನು ಪುನಃ ಸಾಕ್ಷಿಹೇಳುತ್ತೇನೆ.  ನಿಮ್ಮಲ್ಲಿ ನಿಯಮದ ಮೂಲಕ ನೀತಿವಂತರೆಂದು ನಿರ್ಣಯಿಸಲ್ಪಡಲು ಪ್ರಯತ್ನಿಸುವವರು ಯಾರೇ ಆಗಿರಲಿ ಕ್ರಿಸ್ತನಿಂದ ನೀವು ಅಗಲಿಸಲ್ಪಟ್ಟಿದ್ದೀರಿ; ನೀವು ಅವನ ಅಪಾತ್ರ ದಯೆಯಿಂದ ಬಿದ್ದುಹೋಗಿದ್ದೀರಿ.  ನಾವಾದರೋ ಪವಿತ್ರಾತ್ಮದ ಮೂಲಕ ನಂಬಿಕೆಯ ಫಲವಾಗಿ ದೊರಕುವ ನೀತಿಯ ನಿರೀಕ್ಷೆಗಾಗಿ ಅತ್ಯಾಸಕ್ತಿಯಿಂದ ಎದುರುನೋಡುತ್ತಿದ್ದೇವೆ.  ಏಕೆಂದರೆ ಕ್ರಿಸ್ತ ಯೇಸುವಿನ ಸಂಬಂಧದಲ್ಲಿ ಸುನ್ನತಿಯಾದರೂ ಸುನ್ನತಿಯಾಗದಿದ್ದರೂ ಅದಕ್ಕೆ ಯಾವುದೇ ಪ್ರಯೋಜನವಿಲ್ಲ; ಪ್ರೀತಿಯಿಂದ ಕಾರ್ಯನಡಿಸುವ ನಂಬಿಕೆಯೇ ಪ್ರಯೋಜನವುಳ್ಳದ್ದಾಗಿದೆ.  ನೀವು ಚೆನ್ನಾಗಿ ಓಡುತ್ತಿದ್ದಿರಿ. ನೀವು ಸತ್ಯಕ್ಕೆ ವಿಧೇಯರಾಗುತ್ತಾ ಮುಂದುವರಿಯದಂತೆ ನಿಮ್ಮನ್ನು ತಡೆದವರು ಯಾರು?  ಈ ರೀತಿಯ ಒಡಂಬಡಿಸುವಿಕೆಯು ನಿಮ್ಮನ್ನು ಕರೆದಾತನಿಂದ ಬಂದದ್ದಲ್ಲ.  ಸ್ವಲ್ಪ ಕಿಣ್ವವು ಕಣಕವನ್ನೆಲ್ಲ ಹುಳಿಮಾಡುತ್ತದೆ. 10  ನೀವು ಬೇರೆ ರೀತಿಯಲ್ಲಿ ಯೋಚಿಸುವುದಿಲ್ಲ ಎಂದು ಕರ್ತನೊಂದಿಗೆ ಐಕ್ಯದಲ್ಲಿರುವ ನಿಮ್ಮ ಕುರಿತು ನನಗೆ ಭರವಸೆಯಿದೆ. ನಿಮಗೆ ತೊಂದರೆಯನ್ನು ಉಂಟುಮಾಡುತ್ತಿರುವವನು ಯಾವನೇ ಆಗಿರಲಿ ಅವನು ತನ್ನ ನ್ಯಾಯತೀರ್ಪನ್ನು ಪಡೆದೇ ತೀರುವನು. 11  ಸಹೋದರರೇ, ನಾನು ಇನ್ನೂ ಸುನ್ನತಿಯ ವಿಷಯದಲ್ಲೇ ಸಾರುತ್ತಿರುವುದಾದರೆ, ಈಗಲೂ ನಾನು ಹಿಂಸಿಸಲ್ಪಡುತ್ತಿರುವುದು ಏಕೆ? ಯಾತನಾ ಕಂಬದ ಎಡವುಗಲ್ಲು ತೆಗೆದುಹಾಕಲ್ಪಟ್ಟಿತಲ್ಲಾ. 12  ನಿಮ್ಮನ್ನು ಉರುಳಿಸಲು ಪ್ರಯತ್ನಿಸುತ್ತಿರುವವರು ತಮ್ಮನ್ನು ನಿರ್ವೀರ್ಯಗೊಳಿಸುವುದು ಲೇಸೆಂದು ನಾನು ನೆನಸುತ್ತೇನೆ. 13  ಸಹೋದರರೇ, ನೀವು ಸ್ವಾತಂತ್ರ್ಯಕ್ಕಾಗಿ ಕರೆಯಲ್ಪಟ್ಟಿದ್ದೀರಿ; ಆದರೆ ಈ ಸ್ವಾತಂತ್ರ್ಯವನ್ನು ಶಾರೀರಿಕ ಇಚ್ಛೆಯನ್ನು ಮಾಡಲು ಪ್ರಚೋದನೆಯಾಗಿ ಬಳಸಬೇಡಿರಿ, ಬದಲಾಗಿ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆಮಾಡಿರಿ. 14  ಏಕೆಂದರೆ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಒಂದೇ ಮಾತಿನಲ್ಲಿ ಸಂಪೂರ್ಣ ಧರ್ಮಶಾಸ್ತ್ರವೇ ಅಡಕವಾಗಿದೆ. 15  ನೀವು ಒಬ್ಬರಿಗೊಬ್ಬರು ಕಚ್ಚಾಡುತ್ತಾ ಒಬ್ಬರನ್ನೊಬ್ಬರು ನುಂಗುತ್ತಾ ಇರುವುದಾದರೆ, ನೀವು ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರಿಕೆ. 16  ನಾನು ಹೇಳುವುದೇನೆಂದರೆ, ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ ಇರಿ, ಆಗ ನೀವು ಶಾರೀರಿಕ ಬಯಕೆಗಳನ್ನು ಎಂದಿಗೂ ನಡೆಸುವವರಾಗಿರುವುದಿಲ್ಲ. 17  ಏಕೆಂದರೆ, ಶರೀರಭಾವವು ಪವಿತ್ರಾತ್ಮಕ್ಕೆ ವಿರುದ್ಧವಾದದ್ದನ್ನು ಬಯಸುತ್ತದೆ ಮತ್ತು ಪವಿತ್ರಾತ್ಮವು ಶರೀರ​ಭಾವಕ್ಕೆ ವಿರುದ್ಧವಾದದ್ದನ್ನು ಬಯಸುತ್ತದೆ; ನೀವು ಮಾಡಲು ಇಷ್ಟಪಡುವುದನ್ನು ಮಾಡದಿರುವಂತೆ ಇವು ಒಂದಕ್ಕೊಂದು ಹೋರಾಡುತ್ತವೆ. 18  ಇದಲ್ಲದೆ, ನೀವು ಪವಿತ್ರಾತ್ಮದಿಂದ ನಡೆಸಲ್ಪಡುವವರಾದರೆ ಧರ್ಮಶಾಸ್ತ್ರದ ಕೆಳಗಿರುವವರಲ್ಲ. 19  ಶರೀರಭಾವದ ಕಾರ್ಯಗಳು ವ್ಯಕ್ತವಾಗಿಯೇ ಇವೆ. ಅವು ಯಾವುವೆಂದರೆ, ಜಾರತ್ವ, ಅಶುದ್ಧತೆ, ಸಡಿಲು ನಡತೆ, 20  ವಿಗ್ರಹಾರಾಧನೆ, ಪ್ರೇತವ್ಯವಹಾರ, ಹಗೆತನ, ಜಗಳ, ಹೊಟ್ಟೆಕಿಚ್ಚು, ಕೋಪದ ಕೆರಳುವಿಕೆಗಳು, ಕಲಹ, ಬೇಧಗಳು, ಪಂಥಗಳು, 21  ಮತ್ಸರ, ಕುಡಿದು ಮತ್ತೇರಿದ ಸರದಿಗಳು, ಭಾರೀ ಮೋಜು ಇಂಥವುಗಳೇ. ಇವುಗಳ ವಿಷಯದಲ್ಲಿ ಇಂಥ ವಿಷಯಗಳನ್ನು ನಡೆಸುತ್ತಿರುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ ಎಂದು ನಾನು ಈ ಮುಂಚೆ ನಿಮಗೆ ಎಚ್ಚರಿಕೆ ನೀಡಿದಂತೆಯೇ ಈಗಲೂ ಎಚ್ಚರಿಕೆ ನೀಡುತ್ತಿದ್ದೇನೆ. 22  ಆದರೆ ಪವಿತ್ರಾತ್ಮದಿಂದ ಉಂಟಾಗುವ ಫಲವೇನೆಂದರೆ, ಪ್ರೀತಿ, ಆನಂದ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, 23  ಸೌಮ್ಯಭಾವ, ಸ್ವನಿಯಂತ್ರಣ. ಇವುಗಳನ್ನು ಯಾವ ಧರ್ಮಶಾಸ್ತ್ರವೂ ವಿರೋಧಿಸುವುದಿಲ್ಲ. 24  ಇದಲ್ಲದೆ, ಕ್ರಿಸ್ತ ಯೇಸುವಿಗೆ ಸೇರಿದವರು ತಮ್ಮ ಶರೀರಭಾವವನ್ನು ಅದರ ಭಾವೋದ್ರೇಕಗಳು ಮತ್ತು ಬಯಕೆಗಳೊಂದಿಗೆ ಶೂಲಕ್ಕೆ ಜಡಿದಿದ್ದಾರೆ. 25  ನಾವು ಪವಿತ್ರಾತ್ಮದಿಂದ ಜೀವಿಸುತ್ತಿರುವುದಾದರೆ ಪವಿತ್ರಾತ್ಮದಿಂದಲೇ ಕ್ರಮಬದ್ಧವಾದ ರೀತಿಯಲ್ಲಿ ನಡೆಯುತ್ತಾ ಇರೋಣ. 26  ಅಹಂಕಾರಿಗಳೂ ಒಬ್ಬರೊಂದಿಗೊಬ್ಬರು ಸ್ಪರ್ಧೆಗಿಳಿಯುವವರೂ ಒಬ್ಬರ ಮೇಲೊಬ್ಬರು ಅಸೂಯೆಪಡುವವರೂ ಆಗದೆ ಇರೋಣ.

ಪಾದಟಿಪ್ಪಣಿ