ಕೊಲೊಸ್ಸೆ 1:1-29

1  ದೇವರ ಚಿತ್ತಕ್ಕನುಸಾರ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನೂ ನಮ್ಮ ಸಹೋದರನಾದ ತಿಮೊಥೆಯನೂ  ಕೊಲೊಸ್ಸೆಯಲ್ಲಿ ಕ್ರಿಸ್ತನೊಂದಿಗೆ ಐಕ್ಯದಲ್ಲಿರುವ ಪವಿತ್ರ ಜನರಿಗೂ ನಂಬಿಗಸ್ತರಾದ ಸಹೋದರರಿಗೂ ಬರೆಯುವುದೇನೆಂದರೆ, ನಮ್ಮ ತಂದೆಯಾದ ದೇವರಿಂದ ನಿಮಗೆ ಅಪಾತ್ರ ದಯೆಯೂ * ಶಾಂತಿಯೂ ಉಂಟಾಗಲಿ.  ನಾವು ನಿಮಗಾಗಿ ಪ್ರಾರ್ಥನೆ ಮಾಡುವಾಗೆಲ್ಲ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.  ಏಕೆಂದರೆ ಕ್ರಿಸ್ತ ಯೇಸುವಿನಲ್ಲಿ ನಿಮಗಿರುವ ನಂಬಿಕೆ ಮತ್ತು ಪವಿತ್ರ ಜನರೆಲ್ಲರ ಕಡೆಗೆ ನಿಮಗಿರುವ ಪ್ರೀತಿಯ ಕುರಿತು ನಾವು ಕೇಳಿಸಿಕೊಂಡಿದ್ದೇವೆ.  ಸ್ವರ್ಗದಲ್ಲಿ ನಿಮಗಾಗಿ ಕಾದಿರಿಸಲ್ಪಟ್ಟಿರುವ ನಿರೀಕ್ಷೆಯಿಂದಾಗಿ ಈ ಪ್ರೀತಿಯನ್ನು ನೀವು ಹೊಂದಿದ್ದೀರಿ. ನಿಮಗೆ ಆ ಸುವಾರ್ತೆಯ ಕುರಿತಾದ ಸತ್ಯವು ತಿಳಿಸಲ್ಪಟ್ಟಾಗಲೇ ಈ ನಿರೀಕ್ಷೆಯ ಕುರಿತು ನೀವು ಕೇಳಿಸಿಕೊಂಡಿರಿ.  ನಿಮಗೆ ಪ್ರಕಟವಾದ ಈ ಸುವಾರ್ತೆಯನ್ನು ನೀವು ಕೇಳಿಸಿಕೊಂಡು ಸತ್ಯದಲ್ಲಿನ ದೇವರ ಅಪಾತ್ರ ದಯೆಯ ಕುರಿತು ನಿಷ್ಕೃಷ್ಟವಾಗಿ ತಿಳಿದುಕೊಂಡ ದಿನದಿಂದ ನಿಮ್ಮ ಮಧ್ಯೆ ಇದು ಫಲವನ್ನು ಫಲಿಸುತ್ತಾ ಇರುವಂತೆಯೇ ಲೋಕದಲ್ಲೆಲ್ಲಾ ಫಲವನ್ನು ಫಲಿಸುತ್ತಾ ಅಭಿವೃದ್ಧಿ ಹೊಂದುತ್ತಾ ಇದೆ.  ನಮ್ಮ ಪ್ರಿಯ ಜೊತೆ ಸೇವಕನೂ ನಮ್ಮ ಪರವಾಗಿ ಕ್ರಿಸ್ತನ ನಂಬಿಗಸ್ತ ಶುಶ್ರೂಷಕನೂ ಆಗಿರುವ ಎಪಫ್ರನಿಂದ ಅದನ್ನೇ ನೀವು ಕಲಿತುಕೊಂಡಿರಿ.  ಆಧ್ಯಾತ್ಮಿಕ ರೀತಿಯಲ್ಲಿ ನಿಮ್ಮ ಪ್ರೀತಿಯ ಬಗ್ಗೆ ನಮಗೆ ತಿಳಿಯಪಡಿಸಿದವನು ಅವನೇ.  ಆದುದರಿಂದಲೇ ನಾವು ಅದರ ಕುರಿತು ಕೇಳಿಸಿಕೊಂಡ ದಿನದಿಂದ ನಿಮಗೋಸ್ಕರ ಪ್ರಾರ್ಥನೆ ಮಾಡುವುದನ್ನೂ ನೀವು ಸಕಲ ವಿವೇಕ ಮತ್ತು ಆಧ್ಯಾತ್ಮಿಕ ಗ್ರಹಿಕೆಯನ್ನು ಹೊಂದಿ ಆತನ ಚಿತ್ತದ ನಿಷ್ಕೃಷ್ಟ ಜ್ಞಾನದಿಂದ ತುಂಬಿದವರಾಗಬೇಕೆಂದು ಬೇಡಿಕೊಳ್ಳುವುದನ್ನೂ ನಿಲ್ಲಿಸಿಲ್ಲ. 10  ಮಾತ್ರವಲ್ಲದೆ, ನೀವು ಪ್ರತಿಯೊಂದು ಸತ್ಕಾರ್ಯದಲ್ಲಿ ಫಲಕೊಡುತ್ತಾ ಯೆಹೋವನಿಗೆ ಯೋಗ್ಯರಾಗಿ ನಡೆದು ಆತನನ್ನು ಸಂಪೂರ್ಣವಾಗಿ ಮೆಚ್ಚಿಸುವವರಾಗಿರಬೇಕೆಂತಲೂ ದೇವರ ನಿಷ್ಕೃಷ್ಟ ಜ್ಞಾನದಲ್ಲಿ ಅಭಿವೃದ್ಧಿಯಾಗಬೇಕೆಂತಲೂ 11  ಆತನ ಮಹಿಮಾಭರಿತ ಶಕ್ತಿಯಿಂದಾಗಿ ಪೂರ್ಣ ಬಲವನ್ನು ಹೊಂದಿ ಬಲಿಷ್ಠರಾಗಿ ಸಂಪೂರ್ಣವಾಗಿ ತಾಳಿಕೊಳ್ಳುವಂತೆ ಮತ್ತು ಆನಂದದಿಂದ ದೀರ್ಘ ಸಹನೆಯುಳ್ಳವರಾಗಿರುವಂತೆ 12  ಬೆಳಕಿನಲ್ಲಿರುವ ಪವಿತ್ರ ಜನರ ಬಾಧ್ಯತೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ನಿಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. 13  ಆತನು ನಮ್ಮನ್ನು ಅಂಧಕಾರದ ಅಧಿಕಾರದಿಂದ ಬಿಡಿಸಿ ತನ್ನ ಪ್ರೀತಿಯ ಮಗನ ರಾಜ್ಯದೊಳಕ್ಕೆ ವರ್ಗಾಯಿಸಿದನು. 14  ಅವನ ವಿಮೋಚನಾ ಮೌಲ್ಯದ ಮೂಲಕ ನಮ್ಮ ಪಾಪಗಳಿಗೆ ಕ್ಷಮಾಪಣೆ ದೊರೆತು ನಮಗೆ ಬಿಡುಗಡೆಯಾಯಿತು. 15  ಅವನು ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನೂ ಆಗಿದ್ದಾನೆ. 16  ಏಕೆಂದರೆ ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಇರುವ ದೃಶ್ಯವಾದ ಮತ್ತು ಅದೃಶ್ಯವಾದ ಇತರ ಎಲ್ಲವುಗಳು, ಅವು ಸಿಂಹಾಸನಗಳಾಗಿರಲಿ ಪ್ರಭುತ್ವಗಳಾಗಿರಲಿ ಸರಕಾರಗಳಾಗಿರಲಿ ಅಧಿಕಾರಗಳಾಗಿರಲಿ ಎಲ್ಲವೂ ಅವನ ಮೂಲಕವೇ ಸೃಷ್ಟಿಸಲ್ಪಟ್ಟವು; ಅವನ ಮೂಲಕವೂ ಅವನಿಗಾಗಿಯೂ ಸೃಷ್ಟಿಸಲ್ಪಟ್ಟವು. 17  ಇದಲ್ಲದೆ ಅವನು ಇತರ ಎಲ್ಲವುಗಳಿಗಿಂತ ಮೊದಲು ಇದ್ದವನು ಮತ್ತು ಅವನ ಮೂಲಕವಾಗಿಯೇ ಎಲ್ಲವೂ ಅಸ್ತಿತ್ವಕ್ಕೆ ತರಲ್ಪಟ್ಟಿತು. 18  ಅವನು ಸಭೆಯೆಂಬ ದೇಹಕ್ಕೆ ಶಿರಸ್ಸಾಗಿದ್ದಾನೆ. ಅವನೇ ಆರಂಭವಾಗಿದ್ದು ಎಲ್ಲದರಲ್ಲಿ ಪ್ರಥಮನಾಗುವಂತೆ ಸತ್ತವರೊಳಗಿಂದ ಮೊದಲು ಎಬ್ಬಿಸಲ್ಪಟ್ಟವನಾಗಿದ್ದಾನೆ. 19  ಅವನಲ್ಲಿ ಸರ್ವ ಸಂಪೂರ್ಣತೆಯು ವಾಸವಾಗಿರುವುದು 20  ಮತ್ತು ಅವನು ಯಾತನಾ ಕಂಬದ ಮೇಲೆ ಸುರಿಸಿದ ರಕ್ತದ ಮೂಲಕ ಶಾಂತಿಯನ್ನು ಮಾಡಿಕೊಂಡು, ಭೂಮಿಯಲ್ಲಿರುವ ವಿಷಯಗಳನ್ನಾಗಲಿ ಸ್ವರ್ಗದಲ್ಲಿರುವ ವಿಷಯಗಳನ್ನಾಗಲಿ ಹೀಗೆ ಎಲ್ಲವನ್ನೂ ಅವನ ಮೂಲಕ ಪುನಃ ತನ್ನೊಂದಿಗೆ ಸಮಾಧಾನದ ಸಂಬಂಧಕ್ಕೆ ತರುವುದು ಒಳ್ಳೇದೆಂದು ದೇವರಿಗೆ ಅನಿಸಿತು. 21  ವಾಸ್ತವದಲ್ಲಿ ನಿಮ್ಮ ಮನಸ್ಸುಗಳು ದುಷ್ಕೃತ್ಯಗಳ ಮೇಲಿದ್ದ ಕಾರಣ ಈ ಹಿಂದೆ ದೇವರಿಂದ ದೂರಸರಿದವರೂ ವೈರಿಗಳೂ ಆಗಿದ್ದ ನಿಮ್ಮನ್ನು 22  ಆತನು ಈಗ ಪುನಃ ಆ ಒಬ್ಬನ ಐಹಿಕ ದೇಹದ ಮರಣದ ಮೂಲಕ ಸಮಾಧಾನ ಸಂಬಂಧಕ್ಕೆ ತಂದು, ನಿಮ್ಮನ್ನು ಪವಿತ್ರರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ನಿರಪರಾಧಿಗಳನ್ನಾಗಿಯೂ ತನ್ನ ಮುಂದೆ ನಿಲ್ಲಿಸಿದನು. 23  ಆದರೆ ನೀವು ಕೇಳಿಸಿಕೊಂಡಂಥ ಮತ್ತು ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೆ ಸಾರಲ್ಪಟ್ಟಂಥ ಸುವಾರ್ತೆಯ ನಿರೀಕ್ಷೆಯಿಂದ ತೊಲಗಿಹೋಗದೆ, ಅಸ್ತಿವಾರದ ಮೇಲೆ ಸ್ಥಾಪಿಸಲ್ಪಟ್ಟು ಸ್ಥಿರವಾಗಿರುವ ನಂಬಿಕೆಯಲ್ಲಿ ಮುಂದುವರಿಯಬೇಕು. ಈ ಸುವಾರ್ತೆಗೆ ಪೌಲನಾದ ನಾನು ಶುಶ್ರೂಷಕನಾದೆನು. 24  ನಿಮಗೋಸ್ಕರ ನಾನು ಅನುಭವಿಸುತ್ತಿರುವ ಕಷ್ಟಗಳಲ್ಲಿ ಈಗ ನಾನು ಹರ್ಷಿಸುತ್ತಿದ್ದೇನೆ; ಕ್ರಿಸ್ತನ ಸಂಕಟಗಳಲ್ಲಿ ಉಳಿದಿರುವುದನ್ನು ಸಭೆಯೆಂಬ ಅವನ ದೇಹದ ಪರವಾಗಿ ನನ್ನ ಶರೀರದಲ್ಲಿ ಅನುಭವಿಸಿ ತೀರಿಸುತ್ತಿದ್ದೇನೆ. 25  ದೇವರ ವಾಕ್ಯವನ್ನು ಸಂಪೂರ್ಣವಾಗಿ ಸಾರಲಿಕ್ಕಾಗಿ ನಿಮ್ಮ ಪ್ರಯೋಜನಕ್ಕೋಸ್ಕರ ದೇವರಿಂದ ನನಗೆ ಕೊಡಲ್ಪಟ್ಟ ಮನೆವಾರ್ತೆಯ ಕೆಲಸಕ್ಕೆ ಅನುಸಾರವಾಗಿ ನಾನು ಈ ಸಭೆಯ ಶುಶ್ರೂಷಕನಾದೆನು. 26  ಆ ವಾಕ್ಯವು ಹಿಂದಿನ ವಿಷಯಗಳ ವ್ಯವಸ್ಥೆಗಳಿಂದ ಮತ್ತು ಹಿಂದಿನ ಸಂತತಿಗಳಿಂದ ಮರೆಯಾಗಿಡಲ್ಪಟ್ಟಿದ್ದ ಪವಿತ್ರ ರಹಸ್ಯವಾಗಿದೆ. ಆದರೆ ಈಗ ಅದು ಆತನ ಪವಿತ್ರ ಜನರಿಗೆ ತಿಳಿಯಪಡಿಸಲ್ಪಟ್ಟಿದೆ. 27  ಅನ್ಯಜನಾಂಗಗಳ ಮಧ್ಯೆ ಈ ಪವಿತ್ರ ರಹಸ್ಯದ ಮಹಿಮಾಭರಿತ ಐಶ್ವರ್ಯವು ಎಷ್ಟೆಂಬುದನ್ನು ಪವಿತ್ರ ಜನರಿಗೆ ತಿಳಿಯಪಡಿಸಲು ದೇವರು ಸಂತೋಷಪಟ್ಟನು. ಅದೇನೆಂದರೆ, ನಿಮ್ಮೊಂದಿಗೆ ಐಕ್ಯದಲ್ಲಿರುವ ಕ್ರಿಸ್ತನೇ; ಅವನೊಂದಿಗೆ ಮಹಿಮೆಗೊಳಿಸಲ್ಪಡುವುದು ನಿಮ್ಮ ನಿರೀಕ್ಷೆಯಾಗಿದೆ. 28  ನಾವು ಪ್ರಸಿದ್ಧಪಡಿಸುತ್ತಿರುವುದು ಅವನ ಕುರಿತಾಗಿಯೇ; ನಾವು ಪ್ರತಿಯೊಬ್ಬ ಮನುಷ್ಯನನ್ನು ಕ್ರಿಸ್ತನೊಂದಿಗೆ ಐಕ್ಯದಲ್ಲಿ ಸಂಪೂರ್ಣವಾಗಿ ನೀಡುವಂತೆ ಪ್ರತಿಯೊಬ್ಬನಿಗೂ ಬುದ್ಧಿಹೇಳಿ ಪ್ರತಿಯೊಬ್ಬನಿಗೂ ಸಕಲ ವಿವೇಕದಿಂದ ಬೋಧಿಸುತ್ತಾ ಇದ್ದೇವೆ. 29  ಇದನ್ನು ಸಾಧಿಸುವುದಕ್ಕೋಸ್ಕರ ನನ್ನಲ್ಲಿ ಕಾರ್ಯನಡಿಸುತ್ತಿರುವ ಆತನ ಶಕ್ತಿಯ ಮೂಲಕ ನಾನು ನಿಶ್ಚಯವಾಗಿ ಪ್ರಯಾಸಪಟ್ಟು ದುಡಿಯುತ್ತಿದ್ದೇನೆ.

ಪಾದಟಿಪ್ಪಣಿ

ಕೊಲೊ 1:2  ಅಥವಾ, “ಅಪಾರ ದಯೆಯೂ.”