ಎಫೆಸ 4:1-32

4  ಆದುದರಿಂದ, ನಿಮಗೆ ಕೊಡಲ್ಪಟ್ಟ ಕರೆಗೆ ಯೋಗ್ಯರಾಗಿ ನಡೆದುಕೊಳ್ಳುವಂತೆ ಕರ್ತನಲ್ಲಿ ಸೆರೆಯವನಾಗಿರುವ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.  ನೀವು ಪೂರ್ಣ ದೀನಮನಸ್ಸಿನಿಂದಲೂ ಸೌಮ್ಯಭಾವದಿಂದಲೂ ದೀರ್ಘ ಸಹನೆಯಿಂದಲೂ ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಸಹಿಸಿ​ಕೊಳ್ಳಿರಿ.  ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಲಿಕ್ಕಾಗಿ ಶ್ರದ್ಧೆಯಿಂದ ಪ್ರಯತ್ನಿಸುವವರಾಗಿರಿ.  ಇರುವುದು ಒಂದೇ ದೇಹ ಮತ್ತು ಒಂದೇ ಪವಿತ್ರಾತ್ಮ. ನೀವು ಯಾವುದಕ್ಕಾಗಿ ಕರೆಯಲ್ಪಟ್ಟಿರೋ ಆ ನಿರೀಕ್ಷೆ ಒಂದೇ;  ಒಬ್ಬನೇ ಕರ್ತ, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ  ಮತ್ತು ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ; ಆತನು ಎಲ್ಲರ ಮೇಲೆಯೂ ಎಲ್ಲರ ಮೂಲಕವೂ ಎಲ್ಲರಲ್ಲಿಯೂ ಇರುವಾತನಾಗಿದ್ದಾನೆ.  ಕ್ರಿಸ್ತನು ಉಚಿತಾರ್ಥ ವರವನ್ನು ಅಳೆದುಕೊಟ್ಟದ್ದಕ್ಕೆ ಅನುಸಾರವಾಗಿ ಈಗ ನಮ್ಮಲ್ಲಿ ಪ್ರತಿಯೊಬ್ಬನಿಗೆ ಅಪಾತ್ರ ದಯೆಯು ಕೊಡಲ್ಪಟ್ಟಿತು.  ಆದುದರಿಂದ, “ಅವನು ಉನ್ನತ ಸ್ಥಾನಕ್ಕೆ ಏರಿಹೋದಾಗ ತನ್ನೊಂದಿಗೆ ಸೆರೆಯಾಳುಗಳನ್ನು ಕೊಂಡೊಯ್ದನು; ಅವನು ಮನುಷ್ಯರಲ್ಲಿ ದಾನಗಳನ್ನು ಕೊಟ್ಟನು” ಎಂದು ಆತನು ಹೇಳುತ್ತಾನೆ.  ‘ಅವನು ಏರಿಹೋದನು’ ಎಂಬ ಅಭಿವ್ಯಕ್ತಿಯು, ಅವನು ಕೆಳಗಣ ಸ್ಥಳಗಳಿಗೆ ಅಂದರೆ ಭೂಮಿಗೆ ಇಳಿದುಬಂದಿದ್ದನು ಎಂಬುದನ್ನು ಸೂಚಿಸುತ್ತದಲ್ಲವೆ? 10  ಇಳಿದುಬಂದವನೇ ಇಡೀ ಸ್ವರ್ಗೀಯ ಕ್ಷೇತ್ರಕ್ಕಿಂತ ಎಷ್ಟೋ ಮೇಲೆ ಏರಿಹೋದವನಾಗಿದ್ದಾನೆ. ಅವನು ಎಲ್ಲ ವಿಷಯಗಳಿಗೂ ಸಂಪೂರ್ಣತೆ​ಯನ್ನು ಕೊಡುವಂತೆ ಹೀಗಾಯಿತು. 11  ಅವನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸೌವಾರ್ತಿಕರನ್ನಾಗಿಯೂ ಕೆಲವರನ್ನು ಕುರುಬರು ಮತ್ತು ಬೋಧಕರನ್ನಾಗಿಯೂ ಕೊಟ್ಟನು. 12  ಇವರು ಪವಿತ್ರ ಜನರನ್ನು ಸರಿಹೊಂದಿಸುವ ದೃಷ್ಟಿಯಿಂದಲೂ ಶುಶ್ರೂಷೆಯ ಕೆಲಸಕ್ಕಾಗಿಯೂ ಕ್ರಿಸ್ತನ ದೇಹವನ್ನು ಕಟ್ಟುವುದಕ್ಕಾಗಿಯೂ ಕೊಡಲ್ಪಟ್ಟರು. 13  ನಾವೆಲ್ಲರೂ ನಂಬಿಕೆಯಲ್ಲಿಯೂ ದೇವಕುಮಾರನ ಕುರಿತಾದ ನಿಷ್ಕೃಷ್ಟ ಜ್ಞಾನದಲ್ಲಿಯೂ ಏಕತೆಯನ್ನು ಹೊಂದಿ ಪೂರ್ಣವಾಗಿ ಬೆಳೆದ ಮನುಷ್ಯರಾಗಿ ಕ್ರಿಸ್ತನ ಸಂಪೂರ್ಣತೆಗೆ ಸೇರಿರುವ ಪರಿಪಕ್ವತೆಯ ಪ್ರಮಾಣವನ್ನು ಮುಟ್ಟುವ ತನಕ ಇವರನ್ನು ಅನುಗ್ರಹಿಸಿದನು. 14  ಆದುದರಿಂದ ನಾವು ಇನ್ನು ಮುಂದೆ ಕೂಸುಗಳಾಗಿರಬಾರದು ಮತ್ತು ಅಲೆಗಳಿಂದ ಅತ್ತಿತ್ತ ಹೊಯ್ದಾಡಲ್ಪಟ್ಟು ಮನುಷ್ಯರ ಕುಯುಕ್ತಿಯಿಂದಲೂ ವಂಚನಾತ್ಮಕ ಕುತಂತ್ರ​ದಿಂದಲೂ ಕೂಡಿದ ಬೋಧನೆಯ ಪ್ರತಿಯೊಂದು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವವರ ಹಾಗಿರಬಾರದು. 15  ಆದರೆ ಸತ್ಯವನ್ನು ಮಾತಾಡುವವರಾಗಿ ಎಲ್ಲ ವಿಷಯಗಳಲ್ಲಿಯೂ ನಾವು ಶಿರಸ್ಸಾಗಿರುವ ಕ್ರಿಸ್ತನಲ್ಲಿ ಪ್ರೀತಿಯಿಂದ ಬೆಳೆಯೋಣ. 16  ಅವನಿಂದ ಇಡೀ ದೇಹವು, ಅಗತ್ಯವಿರುವುದನ್ನು ಒದಗಿಸುವಂಥ ಪ್ರತಿಯೊಂದು ಕೀಲಿನ ಮೂಲಕ ಹೊಂದಿಕೆಯಿಂದ ಒಟ್ಟಿಗೆ ಜೋಡಿಸಲ್ಪಟ್ಟು ಸಹಕರಿಸುವಂತೆ ಮಾಡಲ್ಪಟ್ಟಿದೆ ಮತ್ತು ಪ್ರತಿಯೊಂದು ಅಂಗವು ಸೂಕ್ತವಾದ ಪ್ರಮಾಣದಲ್ಲಿ ಅದರದರ ಕಾರ್ಯವನ್ನು ಮಾಡುವ ಮೂಲಕ ಪ್ರೀತಿಯಲ್ಲಿ ತನ್ನದೇ ಅಭಿವೃದ್ಧಿಗೋಸ್ಕರ ದೇಹದ ಬೆಳವಣಿಗೆಗೆ ನೆರವಾಗುತ್ತದೆ. 17  ಆದುದರಿಂದ ಅನ್ಯಜನಾಂಗಗಳು ನಿಷ್ಪ್ರಯೋಜಕವಾದ ಮನಸ್ಸುಳ್ಳವ​ರಾಗಿ ನಡೆಯುವಂತೆ ನೀವು ಇನ್ನು ಮೇಲೆ ನಡೆಯಬಾರದೆಂದು ಕರ್ತನಲ್ಲಿ ನಿಮಗೆ ಹೇಳುತ್ತೇನೆ ಮತ್ತು ಸಾಕ್ಷಿಕೊಡುತ್ತೇನೆ. 18  ಅವರಲ್ಲಿರುವ ಅಜ್ಞಾನದಿಂದಾಗಿಯೂ ಅವರ ಹೃದಯಗಳ ವಿಚಾರಹೀನತೆಯಿಂದಾಗಿಯೂ ಅವರು ಮಾನಸಿಕವಾಗಿ ಕತ್ತಲೆಯಲ್ಲಿದ್ದಾರೆ ಮತ್ತು ದೇವರಿಗೆ ಸೇರಿರುವ ಜೀವದಿಂದ ದೂರವಾಗಿದ್ದಾರೆ. 19  ಸಂಪೂರ್ಣ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡವರಾಗಿ ಅವರು ಪ್ರತಿಯೊಂದು ರೀತಿಯ ಅಶುದ್ಧತೆಯನ್ನು ಅತ್ಯಾಶೆಯಿಂದ ನಡಿಸಲಿಕ್ಕಾಗಿ ತಮ್ಮನ್ನು ತಾವೇ ಸಡಿಲು ನಡತೆಗೆ ಒಪ್ಪಿಸಿಕೊಟ್ಟರು. 20  ಆದರೆ ಕ್ರಿಸ್ತನು ಅಂಥವನೆಂದು ನೀವು ಕಲಿಯಲಿಲ್ಲ. 21  ನೀವು ಯೇಸು​ವಿನಲ್ಲಿರುವ ಸತ್ಯಕ್ಕನುಸಾರ ಅವನಿಂದ ಕೇಳಿಸಿಕೊಂಡಿರಿ ಮತ್ತು ಅವನ ಮೂಲಕವೇ ಬೋಧಿಸಲ್ಪಟ್ಟಿರಿ. 22  ಆ ಬೋಧನೆ ಯಾವುದೆಂದರೆ, ನೀವು ನಿಮ್ಮ ಹಿಂದಿನ ನಡತೆಗೆ ಹೊಂದಿಕೆಯಲ್ಲಿರುವ ಮತ್ತು ಅದರ ಮೋಸಕರವಾದ ಇಚ್ಛೆಗಳಿಗನುಸಾರ ಭ್ರಷ್ಟಗೊಳಿಸಲ್ಪಡುತ್ತಿರುವ ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿ​ಬಿಡಬೇಕು; 23  ನೀವು ನಿಮ್ಮ ಮನಸ್ಸನ್ನು ಪ್ರಚೋದಿಸುವಂಥ ಶಕ್ತಿಯಲ್ಲಿ ನವೀಕರಿಸಲ್ಪಡಬೇಕು 24  ಮತ್ತು ದೇವರ ಚಿತ್ತಕ್ಕನುಸಾರ ಸತ್ಯಾನುಗುಣವಾದ ನೀತಿಯಲ್ಲಿಯೂ ನಿಷ್ಠೆಯಲ್ಲಿಯೂ ಸೃಷ್ಟಿಸಲ್ಪಟ್ಟ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕು. 25  ಆದಕಾರಣ ಈಗ ನೀವು ಸುಳ್ಳು​ತನ​ವನ್ನು ತೆಗೆದುಹಾಕಿರುವುದರಿಂದ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನೊಂದಿಗೆ ಸತ್ಯವನ್ನೇ ಆಡಲಿ; ಏಕೆಂದರೆ ನಾವು ಒಬ್ಬರಿಗೊಬ್ಬರು ಸೇರಿರುವ ಅಂಗಗಳಾಗಿದ್ದೇವೆ. 26  ನೀವು ಕೋಪಗೊಂಡರೂ ಪಾಪ​ಮಾಡಬೇಡಿರಿ; ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ. 27  ಪಿಶಾಚನಿಗೆ ಅವಕಾಶಕೊಡಬೇಡಿ. 28  ಕಳ್ಳತನ ಮಾಡುವವನು ಇನ್ನು ಮುಂದೆ ಕಳ್ಳತನ ಮಾಡದೆ ತನ್ನ ಕೈಯಿಂದ ಒಳ್ಳೇ ಕೆಲಸವನ್ನು ಮಾಡುವ ಮೂಲಕ ಕಷ್ಟಪಟ್ಟು ದುಡಿಯಲಿ; ಆಗ ಅಗತ್ಯದಲ್ಲಿರುವ ಒಬ್ಬನಿಗೆ ಕೊಡಲು ಅವನ ಬಳಿ ಏನಾದರೂ ಇರುವುದು. 29  ನಿಮ್ಮ ಬಾಯಿಂದ ಯಾವ ಹೊಲಸು * ಮಾತೂ ಹೊರಡದಿರಲಿ; ಆದರೆ ಅಗತ್ಯಕ್ಕನುಸಾರ ಭಕ್ತಿವೃದ್ಧಿ​ಮಾಡಲು ಯೋಗ್ಯವಾಗಿರುವ ಮಾತನ್ನು ಆಡಿರಿ; ಇದು ಕೇಳುವವರಿಗೆ ಪ್ರಯೋಜನವನ್ನು ಉಂಟುಮಾಡಬಹುದು. 30  ಇದಲ್ಲದೆ, ದೇವರ ಪವಿತ್ರಾತ್ಮವನ್ನು ದುಃಖಪಡಿಸ​ಬೇಡಿರಿ; ಅದರಿಂದಲೇ ನೀವು ವಿಮೋಚನಾ ಮೌಲ್ಯದ ಮೂಲಕ ಬಿಡುಗಡೆಯ ದಿನಕ್ಕಾಗಿ ಮುದ್ರೆಯೊತ್ತಲ್ಪಟ್ಟಿದ್ದೀರಿ. 31  ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು ಸಕಲ ವಿಧವಾದ ಕೆಟ್ಟತನದೊಂದಿಗೆ ನಿಮ್ಮಿಂದ ತೆಗೆದುಹಾಕಿರಿ. 32  ಒಬ್ಬರಿಗೊಬ್ಬರು ದಯೆ​ಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ ದೇವರು ಕ್ರಿಸ್ತನ ಮೂಲಕ ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿಯೂ ಇರಿ.

ಪಾದಟಿಪ್ಪಣಿ

ಎಫೆ 4:29  ಅಕ್ಷರಾರ್ಥವಾಗಿ, “ಕೊಳೆತ.”