ಎಫೆಸ 2:1-22

2  ಅಷ್ಟುಮಾತ್ರವಲ್ಲದೆ, ನೀವು ನಿಮ್ಮ ಅಪರಾಧಗಳಲ್ಲಿಯೂ ಪಾಪಗಳಲ್ಲಿಯೂ ಸತ್ತವರಾಗಿದ್ದರೂ ದೇವರು ನಿಮ್ಮನ್ನು ಬದುಕಿಸಿದನು.  ನೀವು ಪೂರ್ವದಲ್ಲಿ ಈ ಲೋಕದ ವಿಷಯಗಳ ವ್ಯವಸ್ಥೆಗನುಸಾರವಾಗಿ ನಡೆದಿರಿ, ಅವಿಧೇಯತೆಯ ಪುತ್ರರಲ್ಲಿ ಈಗ ಕಾರ್ಯನಡೆಸುತ್ತಿರುವ ಮಾನಸಿಕ ಪ್ರವೃತ್ತಿಗೆ, ಅಂದರೆ ವಾಯುಮಂಡಲದಲ್ಲಿ ಅಧಿಕಾರ ನಡೆಸುವ ಅಧಿಪತಿಗೆ ಅನುಸಾರವಾಗಿ ನಡೆದಿರಿ.  ಹೌದು, ಒಂದು ಕಾಲದಲ್ಲಿ ನಾವೆಲ್ಲರೂ ಅವರ ಮಧ್ಯೆ ನಮ್ಮ ಶರೀರಭಾವದ ಇಚ್ಛೆಗಳಿಗೆ ಹೊಂದಿಕೆಯಲ್ಲಿ ನಡೆದೆವು; ಶರೀರ ಮತ್ತು ಆಲೋಚನೆಗಳು ಬಯಸುವಂಥ ವಿಷಯಗಳನ್ನು ಮಾಡುತ್ತಾ ಉಳಿದವರಂತೆ ಸ್ವಾಭಾವಿಕವಾಗಿ ಕ್ರೋಧದ ಮಕ್ಕಳಾಗಿದ್ದೆವು.  ಆದರೆ ಕರುಣಾಭರಿತನಾಗಿರುವ ದೇವರು ತನ್ನ ಮಹಾ ಪ್ರೀತಿಯಿಂದ ನಮ್ಮನ್ನು ಪ್ರೀತಿಸಿ  ನಾವು ಅಪರಾಧಗಳಲ್ಲಿ ಸತ್ತವರಾಗಿದ್ದಾಗಲೇ ಕ್ರಿಸ್ತನೊಂದಿಗೆ ನಮ್ಮನ್ನು ಬದುಕಿಸಿದನು​—⁠ದೇವರ ಅಪಾತ್ರ ದಯೆಯಿಂದಲೇ ನೀವು ರಕ್ಷಿಸಲ್ಪಟ್ಟಿದ್ದೀರಿ.  ಆತನು ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ನಮ್ಮನ್ನು ಎಬ್ಬಿಸಿ ಸ್ವರ್ಗೀಯ ಸ್ಥಳಗಳಲ್ಲಿ ಅವನೊಂದಿಗೆ ಕೂರಿಸಿದ್ದಾನೆ.  ಹೀಗೆ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿರುವವರಾದ ನಮ್ಮ ಕಡೆಗಿನ ಆತನ ಕೃಪೆಯಿಂದ ಕೂಡಿದ ಅಪಾತ್ರ ದಯೆಯು ಎಷ್ಟು ಅತ್ಯಧಿಕವಾಗಿದೆ ಎಂಬುದನ್ನು ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿ ತೋರಿಸಿಕೊಡುವಂತಾಗುವುದು.  ಈ ಅಪಾತ್ರ ದಯೆಯಿಂದಾಗಿಯೇ ನೀವು ನಿಮ್ಮ ನಂಬಿಕೆಯ ಮೂಲಕ ರಕ್ಷಿಸಲ್ಪಟ್ಟಿದ್ದೀರಿ; ಇದು ನಿಮ್ಮಿಂದ ಉಂಟಾದದ್ದಲ್ಲ, ಇದು ದೇವರ ಉಡುಗೊರೆಯೇ.  ಇದು ನಮ್ಮ ಕ್ರಿಯೆಗಳಿಂದ ಉಂಟಾದದ್ದೂ ಅಲ್ಲ; ಆದುದರಿಂದ ಹೊಗಳಿಕೊಳ್ಳುವುದಕ್ಕೆ ಯಾವ ಮನುಷ್ಯನಿಗೂ ಆಧಾರವಿಲ್ಲ. 10  ನಾವು ದೇವರ ಕೆಲಸದ ಉತ್ಪನ್ನವಾಗಿದ್ದೇವೆ ಮತ್ತು ಸತ್ಕಾರ್ಯಗಳಿಗಾಗಿ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ಸೃಷ್ಟಿಸಲ್ಪಟ್ಟೆವು; ನಾವು ಸತ್ಕಾರ್ಯಗಳನ್ನು ಅನುಸರಿಸಿ ನಡೆಯುವಂತೆ ದೇವರು ಅವುಗಳನ್ನು ನಮಗೋಸ್ಕರ ಮುಂದಾಗಿಯೇ ಸಿದ್ಧಪಡಿಸಿದನು. 11  ಆದುದರಿಂದ ನೀವು ಮುಂಚೆ ಶಾರೀರಿಕವಾಗಿ ಅನ್ಯಜನಾಂಗಗಳ ಜನರಾಗಿದ್ದಿರಿ ಎಂಬುದನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡಿರಿ; ಶರೀರದಲ್ಲಿ ಕೈಯಿಂದ ಸುನ್ನತಿಮಾಡಿಸಿಕೊಂಡ ಜನರು ನಿಮ್ಮನ್ನು ಸುನ್ನತಿಯಿಲ್ಲದವರೆಂದು ಕರೆದರು⁠—⁠ 12  ಆ ನಿರ್ದಿಷ್ಟ ಸಮಯದಲ್ಲಿ ನೀವು ಕ್ರಿಸ್ತನಿಲ್ಲದವರೂ ಇಸ್ರಾಯೇಲ್‌ ಜನಾಂಗದಿಂದ ದೂರಸರಿದವರೂ ವಾಗ್ದಾನದ ಒಡಂಬಡಿಕೆಗಳಿಗೆ ಅಪರಿಚಿತರೂ ಆಗಿದ್ದಿರಿ; ಈ ಲೋಕದಲ್ಲಿ ನೀವು ಯಾವುದೇ ನಿರೀಕ್ಷೆಯಿಲ್ಲದೆಯೂ ದೇವರಿಲ್ಲದೆಯೂ ಇದ್ದಿರಿ. 13  ಆದರೆ ಮೊದಲು ದೂರವಾಗಿದ್ದ ನೀವು ಈಗ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ಕ್ರಿಸ್ತನ ರಕ್ತದ ಮೂಲಕ ಹತ್ತಿರಕ್ಕೆ ಬಂದಿದ್ದೀರಿ. 14  ಎರಡೂ ಪಕ್ಷಗಳನ್ನು ಒಂದುಗೂಡಿಸಿ ನಮ್ಮನ್ನು ಪ್ರತ್ಯೇಕಿಸುತ್ತಿದ್ದ ಅಡ್ಡಗೋಡೆಯನ್ನು ನಾಶಮಾಡಿದವನಾದ ಅವನೇ ನಮ್ಮ ಶಾಂತಿಯಾಗಿದ್ದಾನೆ. 15  ತನ್ನ ಶರೀರದ ಮೂಲಕ ಅವನು ಶಾಸನಗಳಿಂದ ಕೂಡಿರುವ ಆಜ್ಞೆಗಳ ಧರ್ಮಶಾಸ್ತ್ರವನ್ನು ತೆಗೆದುಹಾಕಿ ವೈರತ್ವವನ್ನು ನಿರ್ಮೂಲಮಾಡಿದನು; ಹೀಗೆ ಎರಡೂ ಪಕ್ಷಗಳನ್ನು ತನ್ನೊಂದಿಗೆ ಐಕ್ಯದಲ್ಲಿ ಒಬ್ಬ ನೂತನ ಪುರುಷನನ್ನಾಗಿ ಸೃಷ್ಟಿಸಿ ಶಾಂತಿಯನ್ನು ಸ್ಥಾಪಿಸುವಂತಾಯಿತು. 16  ತನ್ನ ಮೂಲಕ ಅವನು ವೈರತ್ವವನ್ನು ಕೊಂದುಹಾಕಿದ್ದರಿಂದ, ಯಾತನಾ ಕಂಬದ ಮೂಲಕ ಎರಡೂ ಪಕ್ಷಗಳು ಒಂದೇ ದೇಹದಲ್ಲಿ ದೇವರೊಂದಿಗೆ ಸಂಪೂರ್ಣವಾಗಿ ಸಮಾಧಾನದ ಸಂಬಂಧಕ್ಕೆ ಬರುವಂತೆ ಮಾಡಶಕ್ತನಾದನು. 17  ಅವನು ಬಂದು ದೂರವಾಗಿದ್ದ ನಿಮಗೆ ಶಾಂತಿಯ ಸುವಾರ್ತೆಯನ್ನು ಮತ್ತು ಹತ್ತಿರದಲ್ಲಿದ್ದವರಿಗೆ ಶಾಂತಿಯನ್ನು ಪ್ರಕಟಪಡಿಸಿದನು. 18  ಏಕೆಂದರೆ ಅವನ ಮೂಲಕ ನಾವು ಅಂದರೆ ಎರಡೂ ಪಕ್ಷಗಳವರು ಒಂದೇ ಪವಿತ್ರಾತ್ಮದಿಂದ ತಂದೆಯನ್ನು ಸಮೀಪಿಸುತ್ತೇವೆ. 19  ಆದುದರಿಂದ ಇನ್ನು ಮುಂದೆ ನೀವು ಖಂಡಿತವಾಗಿಯೂ ಅಪರಿಚಿತರೂ ಪರದೇಶದ ನಿವಾಸಿಗಳೂ ಆಗಿರದೆ ಪವಿತ್ರ ಜನರ ಜೊತೆ ನಾಗರಿಕರೂ ದೇವರ ಮನೆವಾರ್ತೆಯ ಸದಸ್ಯರೂ ಆಗಿದ್ದೀರಿ. 20  ಅಪೊಸ್ತಲರ ಮತ್ತು ಪ್ರವಾದಿಗಳ ಅಸ್ತಿವಾರದ ಮೇಲೆ ನೀವು ಕಟ್ಟಲ್ಪಟ್ಟಿದ್ದೀರಿ; ಕ್ರಿಸ್ತ ಯೇಸು ತಾನೇ ಆ ಅಸ್ತಿವಾರದ ಮೂಲೆಗಲ್ಲಾಗಿದ್ದಾನೆ. 21  ಇಡೀ ಕಟ್ಟಡವು ಅವನೊಂದಿಗೆ ಐಕ್ಯದಲ್ಲಿ ಹೊಂದಿಕೆಯಿಂದ ಒಟ್ಟಿಗೆ ಜೋಡಿಸಲ್ಪಟ್ಟು ಯೆಹೋವನಿಗಾಗಿರುವ ಒಂದು ಪವಿತ್ರ ಆಲಯವಾಗಿ ವೃದ್ಧಿಯಾಗುತ್ತಾ ಇದೆ. 22  ನೀವು ಸಹ ಅವನೊಂದಿಗೆ ಐಕ್ಯದಲ್ಲಿ ಪವಿತ್ರಾತ್ಮದ ಮೂಲಕ ದೇವರಿಗೆ ಒಂದು ವಾಸಸ್ಥಳವಾಗಲು ಒಟ್ಟಿಗೆ ಕಟ್ಟಲ್ಪಡುತ್ತಾ ಇದ್ದೀರಿ.

ಪಾದಟಿಪ್ಪಣಿ