ಇಬ್ರಿಯ 6:1-20

6  ಈ ಕಾರಣಕ್ಕಾಗಿ ನಾವು ಕ್ರಿಸ್ತನ ​ಕುರಿತಾದ ಪ್ರಾಥಮಿಕ ಸಿದ್ಧಾಂತವನ್ನು ಬಿಟ್ಟುಬಿಟ್ಟಿರುವುದರಿಂದ ಪ್ರೌಢತೆಯ ಕಡೆಗೆ ಮುಂದೊತ್ತೋಣ; ನಿರ್ಜೀವ ಕ್ರಿಯೆಗಳಿಂದ ಪಶ್ಚಾತ್ತಾಪ, ದೇವರ ಕಡೆಗೆ ನಂಬಿಕೆ,  ದೀಕ್ಷಾಸ್ನಾನಗಳ ಕುರಿತಾದ ಬೋಧನೆ, ಹಸ್ತಾರ್ಪಣೆ, ಸತ್ತವರ ಪುನರುತ್ಥಾನ ಮತ್ತು ನಿತ್ಯ ನ್ಯಾಯತೀರ್ಪು ಮುಂತಾದವುಗಳನ್ನು ಪುನಃ ಅಸ್ತಿವಾರವಾಗಿ ಹಾಕದಿರೋಣ.  ಮತ್ತು ದೇವರು ನಿಜವಾಗಿಯೂ ​ಅನುಮತಿಸುವುದಾದರೆ ನಾವಿದನ್ನು ಮಾಡುವೆವು.  ಅಂತಿಮವಾಗಿ ಜ್ಞಾನೋದಯಗೊಳಿಸಲ್ಪಟ್ಟು ಸ್ವರ್ಗೀಯ ಉಚಿತ ವರವನ್ನು ಸವಿದು ಪವಿತ್ರಾತ್ಮದಲ್ಲಿ ಪಾಲುಗಾರರಾಗಿ  ದೇವರ ಒಳ್ಳೇ ವಾಕ್ಯವನ್ನೂ ಬರಲಿರುವ ವಿಷಯಗಳ ವ್ಯವಸ್ಥೆಯ ಶಕ್ತಿಗಳನ್ನೂ ಸವಿದಿರುವವರು  ಬಿದ್ದುಹೋಗಿರುವಲ್ಲಿ ಅಂಥವರನ್ನು ಪಶ್ಚಾತ್ತಾಪಕ್ಕೆ ಪುನಶ್ಚೈತನ್ಯಗೊಳಿಸುವುದು ಅಸಾಧ್ಯ; ಏಕೆಂದರೆ ಅವರು ದೇವರ ಮಗನನ್ನು ತಮಗೋಸ್ಕರ ಪುನಃ ಶೂಲಕ್ಕೇರಿಸುತ್ತಾರೆ ಮತ್ತು ಅವನನ್ನು ಎಲ್ಲರ ಮುಂದೆ ಅವಮಾನಕ್ಕೆ ಗುರಿಪಡಿಸುತ್ತಾರೆ.  ಉದಾಹರಣೆಗೆ, ನೆಲವು ತನ್ನ ಮೇಲೆ ಅನೇಕ ಬಾರಿ ಬೀಳುವ ಮಳೆಯನ್ನು ಹೀರಿಕೊಂಡು ಅದು ಯಾರ ನಿಮಿತ್ತವಾಗಿ ವ್ಯವಸಾಯಮಾಡಲ್ಪಡುತ್ತದೋ ಅವರಿಗೆ ಸೂಕ್ತವಾದ ಬೆಳೆಯನ್ನು ಫಲಿಸುವಾಗ ದೇವರಿಂದ ಆಶೀರ್ವಾದವನ್ನು ಪ್ರತಿಫಲವಾಗಿ ಹೊಂದುತ್ತದೆ.  ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಉತ್ಪತ್ತಿಮಾಡುವುದಾದರೆ ತ್ಯಜಿಸಲ್ಪಟ್ಟು ಶಾಪಕ್ಕೆ ಗುರಿಯಾಗುವ ಹಂತಕ್ಕೆ ಬರುತ್ತದೆ; ಕೊನೆಗೆ ಅದು ಸುಡಲ್ಪಡುತ್ತದೆ.  ಪ್ರಿಯರೇ, ನಾವು ಈ ರೀತಿ ಮಾತಾಡಿದರೂ ನೀವು ಉತ್ತಮ ಸ್ಥಿತಿಯಲ್ಲಿದ್ದೀರಿ ಮತ್ತು ರಕ್ಷಣೆಯೊಂದಿಗೆ ಜೊತೆಗೂಡಿರುವ ವಿಷಯಗಳನ್ನೇ ಹಿಡಿದುಕೊಂಡಿದ್ದೀರಿ ಎಂಬ ಖಾತ್ರಿ ನಮಗಿದೆ. 10  ನೀವು ಪವಿತ್ರ ಜನರಿಗೆ ಶುಶ್ರೂಷೆ ಮಾಡಿದಿರಿ ಮತ್ತು ಇನ್ನೂ ಮಾಡುತ್ತಾ ಇದ್ದೀರಿ; ನಿಮ್ಮ ಈ ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ ಮರೆಯುವುದಕ್ಕೆ ಆತನು ಅನೀತಿವಂತನಲ್ಲ. 11  ನಿಮ್ಮಲ್ಲಿ ಪ್ರತಿಯೊಬ್ಬನು ಕೊನೇ ತನಕ ನಿರೀಕ್ಷೆಯ ಪೂರ್ಣ ಭರವಸೆಯನ್ನು ಹೊಂದಲಿಕ್ಕಾಗಿ ಇದೇ ರೀತಿಯ ಶ್ರಮಶೀಲತೆಯನ್ನು ತೋರಿಸಬೇಕೆಂದು ನಾವು ಬಯಸುತ್ತೇವೆ. 12  ಹೀಗಾದರೆ ನೀವು ಆಲಸಿಗಳಾಗಿರದೆ ಯಾರು ನಂಬಿಕೆ ಮತ್ತು ತಾಳ್ಮೆಯ ಮೂಲಕ ವಾಗ್ದಾನಗಳನ್ನು ಬಾಧ್ಯತೆಯಾಗಿ ಹೊಂದುತ್ತಾರೊ ಅವರನ್ನು ಅನುಕರಿಸುವವರಾಗಿರುವಿರಿ. 13  ದೇವರು ಅಬ್ರಹಾಮನಿಗೆ ವಾಗ್ದಾನಮಾಡಿದಾಗ ತನಗಿಂತ ಹೆಚ್ಚಿನವನ ಮೇಲೆ ಆಣೆಯಿಡುವುದಕ್ಕಾಗದೆ ಇದ್ದುದರಿಂದ ತನ್ನ ಮೇಲೆಯೇ ಆಣೆಯಿಟ್ಟುಕೊಂಡು, 14  “ನಿಶ್ಚಯವಾಗಿಯೂ ನಾನು ನಿನ್ನನ್ನು ಆಶೀರ್ವದಿಸಿಯೇ ಆಶೀರ್ವದಿಸುವೆನು, ನಿನ್ನನ್ನು ಹೆಚ್ಚಿಸೇ ಹೆಚ್ಚಿಸುವೆನು” ಎಂದು ಹೇಳಿದನು. 15  ಅಬ್ರಹಾಮನು ತಾಳ್ಮೆಯನ್ನು ತೋರಿಸಿದ ಬಳಿಕ ಈ ವಾಗ್ದಾನವನ್ನು ಪಡೆದುಕೊಂಡನು. 16  ಮನುಷ್ಯರು ತಮಗಿಂತ ಹೆಚ್ಚಿನವನ ಮೇಲೆ ಆಣೆಯಿಡುತ್ತಾರೆ; ಅವರ ಆಣೆಯು ಅವರಿಗೆ ಕಾನೂನುಬದ್ಧ ಖಾತ್ರಿಯಾಗಿರುವುದರಿಂದ ಅದು ಪ್ರತಿಯೊಂದು ವಿವಾದಕ್ಕೂ ಅಂತ್ಯವಾಗಿದೆ. 17  ಇದೇ ರೀತಿಯಲ್ಲಿ ದೇವರು ತನ್ನ ಸಂಕಲ್ಪವು ಬದಲಾಗುವುದಿಲ್ಲ ಎಂಬುದನ್ನು ವಾಗ್ದಾನಕ್ಕೆ ಬಾಧ್ಯರಾಗುವವರಿಗೆ ಹೆಚ್ಚು ಹೇರಳವಾಗಿ ತೋರಿಸಬೇಕೆಂದು ಉದ್ದೇಶಿಸಿದಾಗ ಆತನು ಆಣೆಯಿಂದ ತನ್ನ ಮಾತನ್ನು ದೃಢೀಕರಿಸಿದನು. 18  ಹೀಗೆ ದೇವರ ಆಶ್ರಯಕ್ಕಾಗಿ ಓಡಿಬಂದಿರುವ ನಾವು, ಆತನು ಯಾವುದರ ಕುರಿತು ಸುಳ್ಳಾಡಲಾರನೋ ಆ ಬದಲಾಗದ ಎರಡು ಸಂಗತಿಗಳ ಮೂಲಕ ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಳ್ಳಲು ಬಲವಾದ ಉತ್ತೇಜನವನ್ನು ಹೊಂದಸಾಧ್ಯವಾಯಿತು. 19  ಈ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದಂತಿದ್ದು ನಿಶ್ಚಯವಾದದ್ದೂ ದೃಢವಾದದ್ದೂ ಆಗಿದೆ; ಇದು ತೆರೆಯೊಳಗಿನಿಂದ ಪ್ರವೇಶಿಸುತ್ತದೆ. 20  ನಮಗೋಸ್ಕರ ಮುಂದೂತ​ನಾದ ಯೇಸು ಈಗಾಗಲೇ ಆ ತೆರೆಯ ಒಳಗೆ ಪ್ರವೇಶಿಸಿದ್ದಾನೆ; ಅವನು ಮೆಲ್ಕಿಜೆದೇಕನ ರೀತಿಗನುಸಾರ ಸದಾಕಾಲಕ್ಕೂ ಮಹಾ ಯಾಜಕನಾಗಿದ್ದಾನೆ.

ಪಾದಟಿಪ್ಪಣಿ