ಇಬ್ರಿಯ 3:1-19

3  ಆದುದರಿಂದ ಪವಿತ್ರ ಸಹೋದರರೇ, ಸ್ವರ್ಗೀಯ ಕರೆಯಲ್ಲಿ ಪಾಲುಗಾರರಾಗಿರುವವರೇ, ನಾವು ಯಾರಲ್ಲಿ ನಂಬಿಕೆಯನ್ನು ಬಹಿರಂಗವಾಗಿ ಅರಿಕೆ​ಮಾಡುತ್ತೇವೋ ಆ ಅಪೊಸ್ತಲನು ಮತ್ತು ಮಹಾ ಯಾಜಕನಾಗಿರುವ ಯೇಸುವನ್ನು ಪರಿಗಣಿಸಿರಿ.  ಮೋಶೆಯು ದೇವರ ಮನೆಯಲ್ಲೆಲ್ಲ ನಂಬಿಗಸ್ತನಾಗಿದ್ದಂತೆಯೇ ಯೇಸುವೂ ತನ್ನನ್ನು ನೇಮಿಸಿದಾತನಿಗೆ ನಂಬಿಗಸ್ತನಾಗಿದ್ದನು.  ಮನೆಗಿಂತ ಅದನ್ನು ಕಟ್ಟಿದವನಿಗೆ ಹೆಚ್ಚು ಮಾನವಿರುವಂತೆಯೇ ಮೋಶೆಗಿಂತ ಇವನು ಹೆಚ್ಚು ಮಹಿಮೆಗೆ ಯೋಗ್ಯನೆಂದೆಣಿಸಲ್ಪಡುತ್ತಾನೆ.  ವಾಸ್ತವದಲ್ಲಿ ಪ್ರತಿಯೊಂದು ಮನೆಯು ಯಾರೋ ಒಬ್ಬನಿಂದ ಕಟ್ಟಲ್ಪಟ್ಟಿದೆ, ಆದರೆ ಎಲ್ಲವನ್ನೂ ಕಟ್ಟಿದಾತನು ದೇವರೇ.  ಮೋಶೆಯು ಪರಿಚಾರಕನಾಗಿದ್ದು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದನು; ಅವನ ಸೇವೆಯು ಮುಂದೆ ತಿಳಿಸಲ್ಪಡಬೇಕಾಗಿದ್ದ ವಿಷಯಗಳಿಗೆ ಸಾಕ್ಷಿಯಾಗಿತ್ತು.  ಆದರೆ ದೇವರ ಮನೆಯ ಮೇಲೆ ನೇಮಿಸಲ್ಪಟ್ಟ ಕ್ರಿಸ್ತನು ಒಬ್ಬ ಮಗನಂತೆ ನಂಬಿಗಸ್ತನಾಗಿದ್ದನು. ನಾವು ನಮ್ಮ ವಾಕ್ಸರಳತೆಯನ್ನೂ ನಿರೀಕ್ಷೆಯ ​ಕುರಿತಾದ ನಮ್ಮ ಹೊಗಳಿಕೊಳ್ಳುವಿಕೆಯನ್ನೂ ಕೊನೆಯ ತನಕ ದೃಢವಾಗಿ ಹಿಡಿದುಕೊಂಡಿರುವುದಾದರೆ ನಾವೇ ದೇವರ ಮನೆಯವರಾಗಿದ್ದೇವೆ.  ಆದಕಾರಣ ಪವಿತ್ರಾತ್ಮವು ಹೇಳುವಂತೆ, “ನೀವು ಈ ದಿನ ಆತನ ಸ್ವರಕ್ಕೆ ಕಿವಿಗೊಡುವುದಾದರೆ,  ಅರಣ್ಯದಲ್ಲಿ ಆತನನ್ನು ಪರೀಕ್ಷಿಸಿದ ದಿನದಲ್ಲಿ, ಕಡುಕೋಪವನ್ನು ಎಬ್ಬಿಸಿದ ಸಂದರ್ಭದಲ್ಲಿ ಮಾಡಿದಂತೆ ನಿಮ್ಮ ಹೃದಯಗಳನ್ನು ಕಠಿನಮಾಡಿಕೊಳ್ಳಬೇಡಿರಿ;  ನಿಮ್ಮ ಪೂರ್ವಜರು ನಲವತ್ತು ವರ್ಷಗಳಲ್ಲಿ ನನ್ನ ಕಾರ್ಯಗಳನ್ನು ನೋಡಿದ್ದರೂ ನನ್ನನ್ನು ಪರೀಕ್ಷೆಯ ಮೂಲಕ ಶೋಧಿಸಿದರು. 10  ಆದಕಾರಣ ನಾನು ಈ ಸಂತತಿಯವರ ವಿಷಯದಲ್ಲಿ ಜಿಗುಪ್ಸೆಗೊಂಡು, ‘ಅವರು ಯಾವಾಗಲೂ ತಮ್ಮ ಹೃದಯಗಳಲ್ಲಿ ತಪ್ಪಿಹೋಗುತ್ತಾರೆ ಮತ್ತು ಅವರು ನನ್ನ ಮಾರ್ಗಗಳನ್ನು ತಿಳಿದುಕೊಂಡಿಲ್ಲ’ ಎಂದು ಹೇಳಿದೆನು. 11  ಆದುದರಿಂದ ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದಿಲ್ಲ’ ಎಂದು ನಾನು ಕೋಪದಿಂದ ಪ್ರಮಾಣ​ಮಾಡಿದೆನು.” 12  ಸಹೋದರರೇ, ಜೀವವುಳ್ಳ ದೇವರಿಂದ ದೂರಹೋಗುವಂತೆ ಮಾಡುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಬೆಳೆಯದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿರಿ. 13  ನಿಮ್ಮಲ್ಲಿ ಯಾರೂ ಪಾಪದ ಮೋಸಕರವಾದ ಪ್ರಭಾವದಿಂದ ಕಠಿನರಾಗದಂತೆ “ಈ ದಿನ” ಎಂಬುದು ಇರುವ ವರೆಗೆ ಒಬ್ಬರಿಗೊಬ್ಬರು ಪ್ರತಿದಿನ ಬುದ್ಧಿಹೇಳುತ್ತಾ ಇರಿ. 14  ಏಕೆಂದರೆ ನಾವು ಆರಂಭದಲ್ಲಿ ಹೊಂದಿದ್ದ ಭರವಸೆಯನ್ನು ಕೊನೆಯ ತನಕ ದೃಢವಾಗಿ ಹಿಡಿದುಕೊಂಡಿರುವುದಾದರೆ ಮಾತ್ರ ಕ್ರಿಸ್ತನೊಂದಿಗೆ ಪಾಲುಗಾರರಾಗುವೆವು. 15  “ನೀವು ಈ ದಿನ ಆತನ ಸ್ವರಕ್ಕೆ ಕಿವಿಗೊಡುವುದಾದರೆ, ಕಡುಕೋಪವನ್ನು ಎಬ್ಬಿಸಿದ ಸಂದರ್ಭದಲ್ಲಿ ಮಾಡಿದಂತೆ ನಿಮ್ಮ ಹೃದಯಗಳನ್ನು ಕಠಿನಮಾಡಿಕೊಳ್ಳಬೇಡಿರಿ” ಎಂದು ಹೇಳಲಾಗಿದೆ. 16  ಕೇಳಿಸಿಕೊಂಡರೂ ಕಡುಕೋಪಕ್ಕೆ ಪ್ರಚೋದಿತರಾದವರು ಯಾರು? ವಾಸ್ತವದಲ್ಲಿ ಮೋಶೆಯ ಕೆಳಗೆ ಈಜಿಪ್ಟಿನಿಂದ ಹೊರಟುಬಂದವರೆಲ್ಲರೂ ಹಾಗೆ ಮಾಡಲಿಲ್ಲವೆ? 17  ಮಾತ್ರವಲ್ಲದೆ ನಲವತ್ತು ವರ್ಷ ದೇವರು ಯಾರಲ್ಲಿ ಜಿಗುಪ್ಸೆಗೊಂಡನು? ಪಾಪಮಾಡಿದ್ದರಿಂದ ಅರಣ್ಯದಲ್ಲಿ ಯಾರ ಶವಗಳು ಬಿದ್ದವೋ ಅವರೊಂದಿಗೇ ಅಲ್ಲವೆ? 18  ತನ್ನ ವಿಶ್ರಾಂತಿಯಲ್ಲಿ ಸೇರಬಾರದು ಎಂದು ಆತನು ಪ್ರಮಾಣಮಾಡಿ ಹೇಳಿದ್ದು ಅವಿಧೇಯರಾಗಿ ವರ್ತಿಸಿದವರಿಗೇ ಅಲ್ಲವೆ? 19  ನಂಬಿಕೆಯ ಕೊರತೆಯ ಕಾರಣ ಅವರು ಆತನ ವಿಶ್ರಾಂತಿಯಲ್ಲಿ ಸೇರಲಾರದೇ ಹೋದರು ಎಂಬುದನ್ನು ನಾವು ನೋಡುತ್ತೇವೆ.

ಪಾದಟಿಪ್ಪಣಿ