ಇಬ್ರಿಯ 11:1-40

11  ನಂಬಿಕೆಯು ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆಯೂ ಕಣ್ಣಿಗೆ ಕಾಣದಿರುವ ನಿಜತ್ವಗಳ ಪ್ರತ್ಯಕ್ಷ ನಿದರ್ಶನವೂ ಆಗಿದೆ.  ಏಕೆಂದರೆ ಇದರ ಮೂಲಕವೇ ಪುರಾತನಕಾಲದ ಜನರು ತಮ್ಮ ಕುರಿತು ಸಾಕ್ಷಿಯನ್ನು ಹೊಂದಿದರು.  ವಿಷಯಗಳ ವ್ಯವಸ್ಥೆಗಳು ದೇವರ ಮಾತಿನಿಂದ ನಿರ್ಮಿಸಲ್ಪಟ್ಟವು ಎಂಬುದನ್ನು ನಾವು ನಂಬಿಕೆಯಿಂದಲೇ ಗ್ರಹಿಸುತ್ತೇವೆ; ಆದುದರಿಂದ ಕಾಣುವಂಥದ್ದು ಕಾಣದವುಗಳಿಂದ ಉಂಟಾಗಿದೆ.  ನಂಬಿಕೆಯಿಂದಲೇ ಹೇಬೆಲನು ಕಾಯಿನನು ನೀಡಿದ್ದಕ್ಕಿಂತ ಹೆಚ್ಚಿನ ಮೌಲ್ಯದ ಯಜ್ಞವನ್ನು ದೇವರಿಗೆ ಅರ್ಪಿಸಿದನು. ಆ ನಂಬಿಕೆಯ ಮೂಲಕವೇ ಅವನು ನೀತಿವಂತನೆಂದು ಸಾಕ್ಷಿಹೊಂದಿದನು; ದೇವರು ಅವನ ಕಾಣಿಕೆಗಳ ವಿಷಯದಲ್ಲಿ ಸಾಕ್ಷಿಕೊಟ್ಟನು. ಅವನು ಸತ್ತುಹೋದರೂ ತನ್ನ ನಂಬಿಕೆಯ ಮೂಲಕ ಇನ್ನೂ ಮಾತಾಡುತ್ತಾನೆ.  ನಂಬಿಕೆಯಿಂದಲೇ ಹನೋಕನು ಮರಣವನ್ನು ನೋಡದಂತೆ ಸ್ಥಳಾಂತರಿಸಲ್ಪಟ್ಟನು; ದೇವರು ಅವನನ್ನು ಸ್ಥಳಾಂತರಿಸಿದ್ದರಿಂದ ಅವನು ಎಲ್ಲಿಯೂ ಸಿಗಲಿಲ್ಲ. ಏಕೆಂದರೆ ಅವನು ಸ್ಥಳಾಂತರಿಸಲ್ಪಡುವುದಕ್ಕಿಂತ ಮೊದಲು ದೇವರನ್ನು ಮೆಚ್ಚಿಸಿದ್ದಾನೆಂಬ ಸಾಕ್ಷಿಯನ್ನು ಹೊಂದಿದ್ದನು.  ಇದಲ್ಲದೆ, ನಂಬಿಕೆಯಿಲ್ಲದೆ ಆತನನ್ನು ಮೆಚ್ಚಿಸುವುದು ಅಸಾಧ್ಯ; ಏಕೆಂದರೆ ದೇವರನ್ನು ಸಮೀಪಿಸುವವನು ಆತನು ಇದ್ದಾನೆ ಎಂದೂ ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲವನ್ನು ಕೊಡುವವನಾಗುತ್ತಾನೆ ಎಂದೂ ನಂಬಬೇಕು.  ನಂಬಿಕೆಯಿಂದಲೇ ನೋಹನು ಅದುವರೆಗೆ ಕಾಣದಿದ್ದ ವಿಷಯಗಳ ಕುರಿತು ದೈವಿಕ ಎಚ್ಚರಿಕೆಯನ್ನು ಪಡೆದುಕೊಂಡಾಗ ದೇವಭಯವನ್ನು ತೋರಿಸಿದನು ಮತ್ತು ತನ್ನ ಕುಟುಂಬದ ಸಂರಕ್ಷಣೆಗಾಗಿ ನಾವೆಯನ್ನು ಕಟ್ಟಿದನು; ಈ ನಂಬಿಕೆಯಿಂದಲೇ ಅವನು ಲೋಕವನ್ನು ಖಂಡಿಸಿದನು ಮತ್ತು ನಂಬಿಕೆಗನುಸಾರವಾಗಿರುವ ನೀತಿಗೆ ಬಾಧ್ಯನಾದನು.  ನಂಬಿಕೆಯಿಂದಲೇ ಅಬ್ರಹಾಮನು ಕರೆಯಲ್ಪಟ್ಟಾಗ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೋಗುವುದರಲ್ಲಿ ವಿಧೇಯತೆಯನ್ನು ತೋರಿಸಿದನು; ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದು ಅವನಿಗೆ ತಿಳಿದಿರಲಿಲ್ಲವಾದರೂ ಅವನು ಹೊರಟುಹೋದನು.  ನಂಬಿಕೆಯಿಂದಲೇ ಅವನು ವಾಗ್ದತ್ತ ದೇಶದಲ್ಲಿ ಅನ್ಯದೇಶದಲ್ಲಿ ಇದ್ದವನಂತೆ ಪರದೇಶಿಯಾಗಿ ಬದುಕಿದನು; ಮತ್ತು ತನ್ನೊಂದಿಗೆ ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರೊಂದಿಗೆ ಡೇರೆಗಳಲ್ಲಿ ವಾಸಿಸಿದನು. 10  ಅವನು ನಿಜವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಕಟ್ಟಿದ ಮತ್ತು ಸೃಷ್ಟಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು. 11  ನಂಬಿಕೆಯಿಂದಲೇ ಸಾರಳು ಸಹ ವಾಗ್ದಾನಮಾಡಿದಾತನನ್ನು ನಂಬಿಗಸ್ತನೆಂದೆಣಿಸಿದ್ದರಿಂದ ಪ್ರಾಯಮೀರಿದವಳಾಗಿದ್ದರೂ ಗರ್ಭಧರಿಸುವ ಶಕ್ತಿಯನ್ನು ಹೊಂದಿದಳು. 12  ಆದುದರಿಂದ ಮೃತಪ್ರಾಯನಾಗಿದ್ದ ಒಬ್ಬನಿಂದಲೇ ಆಕಾಶದ ನಕ್ಷತ್ರಗಳಂತೆ ಅಗಣಿತವಾದ ಮತ್ತು ಸಮುದ್ರದ ತೀರದಲ್ಲಿರುವ ಮರಳಿನಂತೆ ಅಸಂಖ್ಯಾತವಾದ ಮಕ್ಕಳು ಹುಟ್ಟಿದರು. 13  ಇವರೆಲ್ಲರೂ ವಾಗ್ದಾನದ ನೆರವೇರಿಕೆಯನ್ನು ಹೊಂದಲಿಲ್ಲವಾದರೂ ಅವುಗಳನ್ನು ದೂರದಿಂದಲೇ ನೋಡಿ ಸ್ವಾಗತಿಸಿದರು ಮತ್ತು ತಾವು ದೇಶದಲ್ಲಿ ಅಪರಿಚಿತರೂ ತಾತ್ಕಾಲಿಕ ನಿವಾಸಿಗಳೂ ಆಗಿದ್ದೇವೆಂದು ಬಹಿರಂಗವಾಗಿ ಪ್ರಕಟಪಡಿಸುತ್ತಾ ನಂಬಿಕೆಯುಳ್ಳವರಾಗಿ ಮೃತರಾದರು. 14  ಏಕೆಂದರೆ ಹೀಗೆ ಹೇಳುವವರು ತಮ್ಮ ಸ್ವಂತ ಸ್ಥಳವನ್ನು ಶ್ರದ್ಧಾ​ಪೂರ್ವಕವಾಗಿ ಹುಡುಕುವವರಾಗಿದ್ದೇವೆಂಬ ಪುರಾವೆಯನ್ನು ನೀಡುತ್ತಾರೆ. 15  ತಾವು ಹೊರಟುಬಂದಿದ್ದ ಸ್ಥಳವನ್ನು ಅವರು ನೆನಪಿಸಿಕೊಳ್ಳುತ್ತಾ ಇರುತ್ತಿದ್ದಲ್ಲಿ, ಅಲ್ಲಿಗೆ ಹಿಂದಿರುಗಲು ಅವಕಾಶವಿರುತ್ತಿತ್ತು. 16  ಆದರೆ ಈಗ ಅವರು ಹೆಚ್ಚು ಉತ್ತಮವಾದ ಸ್ಥಳವನ್ನು ಅಂದರೆ ಸ್ವರ್ಗಕ್ಕೆ ಸೇರಿರುವ ಸ್ಥಳವನ್ನು ಹೊಂದಲು ಪ್ರಯತ್ನಿಸುತ್ತಿದ್ದಾರೆ. ಆದುದರಿಂದ ದೇವರು ಅವರ ದೇವರೆಂದು ಕರೆಸಿಕೊಳ್ಳಲು ನಾಚಿಕೆಪಡದೆ ಅವರಿಗಾಗಿ ಒಂದು ಪಟ್ಟಣವನ್ನು ಸಿದ್ಧ​ಮಾಡಿದ್ದಾನೆ. 17  ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ಅರ್ಪಿಸುವಷ್ಟರ ಮಟ್ಟಿಗೆ ತನ್ನ ನಂಬಿಕೆಯನ್ನು ತೋರ್ಪಡಿಸಿದನು. 18  “ಇಸಾಕನ ಮೂಲಕ ಹುಟ್ಟುವವರೇ ‘ನಿನ್ನ ಸಂತತಿ’ ಎಂದು ಕರೆಯಲ್ಪಡುವರು” ಎಂದು ಅವನಿಗೆ ಹೇಳಲಾಗಿದ್ದರೂ ವಾಗ್ದಾನಗಳನ್ನು ಸಂತೋಷದಿಂದ ಪಡೆದುಕೊಂಡಿದ್ದ ಆ ಮನುಷ್ಯನು ತನ್ನ ಏಕೈಕ​ಜಾತ ಪುತ್ರನನ್ನು ಅರ್ಪಿಸಲು ಮುಂದಾದನು. 19  ಆದರೆ ದೇವರು ಅವನನ್ನು ಸತ್ತವರೊಳಗಿಂದಲೂ ಎಬ್ಬಿಸಲು ಶಕ್ತನಾಗಿದ್ದಾನೆ ಎಂದು ನಂಬಿದ್ದನು; ಮತ್ತು ಅವನನ್ನು ಅಲ್ಲಿಂದ ದೃಷ್ಟಾಂತರೂಪದಲ್ಲಿ ನಿಶ್ಚಯವಾಗಿ ಪಡೆದನು. 20  ನಂಬಿಕೆಯಿಂದಲೇ ಇಸಾಕನು ಬರಲಿದ್ದ ವಿಷಯಗಳ ಸಂಬಂಧದಲ್ಲಿ ಯಾಕೋಬನನ್ನೂ ಏಸಾವನನ್ನೂ ಆಶೀ​ರ್ವದಿಸಿದನು. 21  ನಂಬಿಕೆಯಿಂದಲೇ ಯಾಕೋಬನು ಸಾಯಲಿಕ್ಕಿದ್ದಾಗ ಯೋಸೇಫನ ಪುತ್ರರಲ್ಲಿ ಪ್ರತಿಯೊಬ್ಬನನ್ನು ಆಶೀರ್ವದಿಸಿದನು ಮತ್ತು ತನ್ನ ಕೋಲಿನ ಮೇಲೆ ಊರಿಕೊಂಡು ದೇವರನ್ನು ಆರಾಧಿಸಿದನು. 22  ನಂಬಿಕೆಯಿಂದಲೇ ಯೋಸೇಫನು ತನ್ನ ಅಂತ್ಯವನ್ನು ಸಮೀಪಿಸುತ್ತಿರುವಾಗ ಇಸ್ರಾಯೇಲ್ಯರ ನಿರ್ಗಮನದ ಕುರಿತು ಮಾತಾಡಿದನು; ಮತ್ತು ತನ್ನ ಎಲುಬುಗಳ ವಿಷಯದಲ್ಲಿ ಆಜ್ಞೆಯನ್ನು ಕೊಟ್ಟನು. 23  ಮೋಶೆಯು ಹುಟ್ಟಿದಾಗ ಅವನ ಹೆತ್ತವರು ಅವನನ್ನು ಮೂರು ತಿಂಗಳು ಬಚ್ಚಿಟ್ಟದ್ದು ನಂಬಿಕೆಯಿಂದಲೇ; ಆ ಮಗು ಸುಂದರವಾಗಿರುವುದನ್ನು ಅವರು ಕಂಡರು ಮತ್ತು ಅರಸನ ಅಪ್ಪಣೆಗೆ ಅವರು ಭಯಪಡಲಿಲ್ಲ. 24  ಮೋಶೆಯು ದೊಡ್ಡವನಾದಾಗ ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ನಿರಾಕರಿಸಿದ್ದು ನಂಬಿಕೆಯಿಂದಲೇ. 25  ಅವನು ಪಾಪದ ತಾತ್ಕಾಲಿಕ ಸುಖಾನುಭವಕ್ಕಿಂತ ದೇವರ ಜನರೊಂದಿಗೆ ದುರುಪಚಾರವನ್ನು ಅನುಭವಿಸುವ ಆಯ್ಕೆಯನ್ನು ಮಾಡಿದನು. 26  ಈಜಿಪ್ಟ್‌ ದೇಶದ ನಿಕ್ಷೇಪಗಳಿಗಿಂತ ಕ್ರಿಸ್ತನ ನಿಮಿತ್ತ ಅನುಭವಿಸುವ ನಿಂದೆಯನ್ನು ಎಷ್ಟೋ ಶ್ರೇಷ್ಠವಾದ ಐಶ್ವರ್ಯವೆಂದೆಣಿಸಿದನು; ಏಕೆಂದರೆ ಅವನು ತೀವ್ರಾಸಕ್ತಿಯಿಂದ ಬಹುಮಾನದ ನೀಡುವಿಕೆಯ ಕಡೆಗೆ ದೃಷ್ಟಿನೆಟ್ಟವನಾಗಿದ್ದನು. 27  ಅವನು ಅರಸನ ಕೋಪಕ್ಕೆ ಭಯಪಡದೆ ಈಜಿಪ್ಟನ್ನು ಬಿಟ್ಟುಹೋದದ್ದು ನಂಬಿಕೆಯಿಂದಲೇ; ಏಕೆಂದರೆ ಅದೃಶ್ಯನಾಗಿರುವಾತನನ್ನು ನೋಡುವವನೋ ಎಂಬಂತೆ ಅವನು ಸ್ಥಿರಚಿತ್ತನಾಗಿ ಮುಂದುವರಿದನು. 28  ಸಂಹಾರಕನು ತಮ್ಮ ಚೊಚ್ಚಲಮಕ್ಕಳನ್ನು ಮುಟ್ಟದಂತೆ ಅವನು ಪಸ್ಕವನ್ನೂ ರಕ್ತದ ಪ್ರೋಕ್ಷಣೆಯನ್ನೂ ಆಚರಿಸಿದ್ದು ನಂಬಿಕೆಯಿಂದಲೇ. 29  ನಂಬಿಕೆಯಿಂದಲೇ ಅವರು ಒಣ​ನೆಲದಲ್ಲಿಯೋ ಎಂಬಂತೆ ಕೆಂಪು ಸಮುದ್ರವನ್ನು ದಾಟಿದರು, ಆದರೆ ಈಜಿಪ್ಟ್‌ ದೇಶದವರು ಅದನ್ನು ದಾಟುವುದಕ್ಕೆ ಪ್ರಯತ್ನಿಸಿದಾಗ ಮುಳುಗಿಹೋದರು. 30  ನಂಬಿಕೆಯಿಂದಲೇ ಯೆರಿಕೋ ಪಟ್ಟಣದ ಗೋಡೆಗಳನ್ನು ಅವರು ಏಳು ದಿವಸಗಳ ವರೆಗೆ ಸುತ್ತಿದ ಮೇಲೆ ಅವು ಬಿದ್ದುಹೋದವು. 31  ರಾಹಾಬಳೆಂಬ ವೇಶ್ಯೆಯು ಗೂಢಚಾರರನ್ನು ಸಮಾಧಾನದಿಂದ ಸೇರಿಸಿಕೊಂಡು ಅವಿಧೇಯರಾಗಿ ವರ್ತಿಸಿದವರೊಂದಿಗೆ ನಾಶವಾಗದೇ ಹೋದದ್ದು ನಂಬಿಕೆಯಿಂದಲೇ. 32  ನಾನು ಇನ್ನೂ ಏನು ಹೇಳಲಿ? ಗಿದ್ಯೋನ್‌, ಬಾರಾಕ್‌, ಸಂಸೋನ್‌, ಯೆಫ್ತಾಹ, ದಾವೀದ್‌ ಮತ್ತು ಸಮುವೇಲ್‌ ಹಾಗೂ ಇತರ ಪ್ರವಾದಿಗಳ ಕುರಿತು ನಾನು ವಿವರವಾಗಿ ಹೇಳಬೇಕಾದರೆ ನನಗೆ ಸಮಯ ಸಾಲದು. 33  ನಂಬಿಕೆಯ ಮೂಲಕ ಅವರು ಹೋರಾಟದಲ್ಲಿ ರಾಜ್ಯಗಳನ್ನು ಸೋಲಿಸಿದರು, ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, ಸಿಂಹಗಳ ಬಾಯಿಯನ್ನು ಮುಚ್ಚಿದರು, 34  ಬೆಂಕಿಯ ಬಲವನ್ನು ಆರಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ನಿರ್ಬಲ ಸ್ಥಿತಿಯಿಂದ ಬಲಿಷ್ಠರಾಗಿ ಮಾಡಲ್ಪಟ್ಟರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು, ಅನ್ಯದೇಶದವರ ಸೈನ್ಯಗಳನ್ನು ಸದೆಬಡಿದರು. 35  ಮೃತರಾಗಿದ್ದ ತಮ್ಮವರನ್ನು ಸ್ತ್ರೀಯರು ಪುನರುತ್ಥಾನದ ಮೂಲಕ ಪುನಃ ಪಡೆದುಕೊಂಡರು; ಇತರ ಪುರುಷರು ಉತ್ತಮವಾದ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ ಯಾವುದೇ ರೀತಿಯ ವಿಮೋಚನಾ ಮೌಲ್ಯದಿಂದ ಬಿಡುಗಡೆಯನ್ನು ಸ್ವೀಕರಿಸದೇ ಹೋದದ್ದಕ್ಕಾಗಿ ಯಾತನೆಯನ್ನು ಅನುಭವಿಸಿದರು. 36  ಇತರರು ಅಪಹಾಸ್ಯ ಮತ್ತು ಕೊರಡೆಯ ಏಟುಗಳಿಂದಲೂ, ಅದಕ್ಕಿಂತಲೂ ಹೆಚ್ಚಾಗಿ ಬೇಡಿ ಹಾಗೂ ಸೆರೆಮನೆಗಳ ಮೂಲಕವೂ ಪರೀಕ್ಷೆಯನ್ನು ಅನುಭವಿಸಿದರು. 37  ಕೆಲವರು ಕಲ್ಲೆಸೆದು ಕೊಲ್ಲಲ್ಪಟ್ಟರು, ಕೆಲವರು ಪರೀಕ್ಷಿಸಲ್ಪಟ್ಟರು, ಕೆಲವರು ಗರಗಸದಿಂದ ಇಬ್ಭಾಗವಾಗಿ ಕೊಯ್ಯಲ್ಪಟ್ಟರು, ಕೆಲವರು ಕತ್ತಿಯಿಂದ ಕ್ರೂರವಾಗಿ ಹತಿಸಲ್ಪಟ್ಟರು, ಕೆಲವರು ಕೊರತೆ, ಸಂಕಟ ಮತ್ತು ದುರುಪಚಾರವನ್ನು ಅನುಭವಿಸುತ್ತಿದ್ದಾಗ ಕುರಿಗಳ ಮತ್ತು ಆಡುಗಳ ಚರ್ಮಗಳನ್ನು ಧರಿಸಿಕೊಂಡವರಾಗಿ ತಿರುಗಾಡಿದರು. 38  ಇಂಥವರನ್ನು ಹೊಂದಿರಲು ಈ ಲೋಕವು ಯೋಗ್ಯವಾಗಿರಲಿಲ್ಲ. ಅವರು ಈ ಭೂಮಿಯ ಅರಣ್ಯ​ಗಳಲ್ಲಿ, ಬೆಟ್ಟಗಳಲ್ಲಿ, ಗವಿಗಳಲ್ಲಿ ಮತ್ತು ಕುಣಿ​ಗಳಲ್ಲಿ ಅಲೆದಾಡಿದರು. 39  ಇವರೆಲ್ಲರೂ ತಮ್ಮ ನಂಬಿಕೆಯ ಮೂಲಕ ಸಾಕ್ಷಿಯನ್ನು ಹೊಂದಿದ್ದರಾದರೂ ವಾಗ್ದಾನದ ನೆರವೇರಿಕೆಯನ್ನು ಹೊಂದಲಿಲ್ಲ. 40  ಏಕೆಂದರೆ ನಾವಿಲ್ಲದೆ ಅವರು ಪರಿಪೂರ್ಣರಾಗಿ ಮಾಡಲ್ಪಡದಂತೆ ದೇವರು ನಮಗೋಸ್ಕರ ಹೆಚ್ಚು ಉತ್ತಮವಾದುದನ್ನು ಮುನ್ನೋಡಿದನು.

ಪಾದಟಿಪ್ಪಣಿ