ಇಬ್ರಿಯ 10:1-39

10  ಧರ್ಮಶಾಸ್ತ್ರವು ಬರಲಿರುವ ಒಳ್ಳೆಯ ವಿಷಯಗಳ ಛಾಯೆಯಾಗಿದೆಯೇ ಹೊರತು ಅವುಗಳ ನಿಜರೂಪವಲ್ಲವಾದ್ದರಿಂದ ನಿರಂತರವಾಗಿ ಪ್ರತಿ ವರ್ಷ ಅರ್ಪಿಸುವ ಒಂದೇ ವಿಧವಾದ ಯಜ್ಞಗಳ ಮೂಲಕ ದೇವರ ಸಮೀಪಕ್ಕೆ ಬರುವವರನ್ನು ಮನುಷ್ಯರು ಎಂದಿಗೂ ಪರಿಪೂರ್ಣಗೊಳಿಸಲಾರರು.  ಪರಿಪೂರ್ಣಗೊಳಿಸುತ್ತಿದ್ದ ಪಕ್ಷದಲ್ಲಿ ಯಜ್ಞಾರ್ಪಣೆಗಳು ನಿಂತುಹೋಗುತ್ತಿದ್ದವಲ್ಲವೆ? ಏಕೆಂದರೆ ಪವಿತ್ರ ಸೇವೆಯನ್ನು ಸಲ್ಲಿಸುವವರು ಎಲ್ಲ ಕಾಲಕ್ಕಾಗಿ ಒಂದೇ ಸಾರಿ ಶುದ್ಧೀಕರಿಸಲ್ಪಟ್ಟ ಮೇಲೆ ಅವರಿಗೆ ಮುಂದೆಂದೂ ಪಾಪಗಳ ಪ್ರಜ್ಞೆಯಿರುತ್ತಿರಲಿಲ್ಲ, ಅಲ್ಲವೆ?  ಇದಕ್ಕೆ ವ್ಯತಿರಿಕ್ತವಾಗಿ ಈ ಯಜ್ಞಗಳ ಮೂಲಕ ಪ್ರತಿ ವರ್ಷ ಪಾಪಗಳ ಜ್ಞಾಪಕ ಉಂಟಾಗುತ್ತದೆ;  ಏಕೆಂದರೆ ಹೋರಿಗಳ ಮತ್ತು ಆಡುಗಳ ರಕ್ತದಿಂದ ಪಾಪಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ.  ಆದುದರಿಂದ ಅವನು ಲೋಕಕ್ಕೆ ಬರುವಾಗ ಹೀಗೆ ಹೇಳುತ್ತಾನೆ: “ ‘ಯಜ್ಞಗಳನ್ನೂ ಕಾಣಿಕೆಗಳನ್ನೂ ನೀನು ಬಯಸಲಿಲ್ಲ, ಆದರೆ ನೀನು ನನಗಾಗಿ ದೇಹವನ್ನು ಸಿದ್ಧಮಾಡಿದಿ.  ನೀನು ಸರ್ವಾಂಗಹೋಮಗಳನ್ನೂ ಪಾಪಪರಿಹಾರಕ ಯಜ್ಞಗಳನ್ನೂ ಅಂಗೀಕರಿಸಲಿಲ್ಲ.’  ಆಗ ನಾನು, ‘ಇಗೋ ದೇವರೇ, ನಾನು (ಗ್ರಂಥದ ಸುರುಳಿಯಲ್ಲಿ ನನ್ನ ಕುರಿತು ಬರೆಯಲಾಗಿದೆ) ನಿನ್ನ ಚಿತ್ತವನ್ನು ಮಾಡಲು ಬಂದಿದ್ದೇನೆ’ ಎಂದು ಹೇಳಿದೆನು.”  ಧರ್ಮಶಾಸ್ತ್ರಕ್ಕನುಸಾರ ಅರ್ಪಿಸಲ್ಪಡುವ “ಯಜ್ಞಗಳನ್ನೂ ಕಾಣಿಕೆಗಳನ್ನೂ ಸರ್ವಾಂಗಹೋಮಗಳನ್ನೂ ಪಾಪಪರಿಹಾರಕ ಯಜ್ಞಗಳನ್ನೂ ನೀನು ಬಯಸಲಿಲ್ಲ ಅಥವಾ ಅವುಗಳನ್ನು ಅಂಗೀಕರಿಸಲಿಲ್ಲ” ಎಂದು ಹೇಳಿದ ಬಳಿಕ  ಅವನು, “ಇಗೋ, ನಾನು ನಿನ್ನ ಚಿತ್ತವನ್ನು ಮಾಡಲು ಬಂದಿದ್ದೇನೆ” ಎಂದು ಹೇಳುತ್ತಾನೆ. ಅವನು ಎರಡನೆಯದನ್ನು ಸ್ಥಾಪಿಸುವುದಕ್ಕಾಗಿ ಮೊದಲನೆಯದನ್ನು ತೆಗೆದುಹಾಕುತ್ತಾನೆ. 10  ಮುಂತಿಳಿಸಲ್ಪಟ್ಟಿರುವ ಆ ‘ಚಿತ್ತದಿಂದಾಗಿ’ ಯೇಸು ಕ್ರಿಸ್ತನ ದೇಹವನ್ನು ಅರ್ಪಿಸುವ ಮೂಲಕ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ನಾವು ಪವಿತ್ರೀಕರಿಸಲ್ಪಟ್ಟಿದ್ದೇವೆ. 11  ಮಾತ್ರವಲ್ಲದೆ ಪ್ರತಿಯೊಬ್ಬ ಯಾಜಕನು ದಿನಾಲು ಸಾರ್ವಜನಿಕ ಸೇವೆಯನ್ನು ಸಲ್ಲಿಸಲು ಮತ್ತು ಪಾಪಗಳನ್ನು ಎಂದಿಗೂ ಸಂಪೂರ್ಣವಾಗಿ ತೆಗೆದು​ಹಾಕಲು ಸಾಧ್ಯವಿಲ್ಲದಂಥ ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಅರ್ಪಿಸಲು ನಿಂತುಕೊಳ್ಳುತ್ತಾನೆ. 12  ಆದರೆ ಈ ಮನುಷ್ಯನು ಪಾಪಗಳಿಗಾಗಿ ನಿರಂತರವಾಗಿ ಒಂದೇ ಯಜ್ಞವನ್ನು ಅರ್ಪಿಸಿ ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 13  ಅಂದಿನಿಂದ ತನ್ನ ವೈರಿಗಳನ್ನು ತನ್ನ ಪಾದಪೀಠವಾಗಿ ಮಾಡುವ ತನಕ ಕಾಯುತ್ತಿರುವನು. 14  ಅವನು ಪವಿತ್ರೀಕರಿಸಲ್ಪಡುತ್ತಿರುವವರನ್ನು ಒಂದೇ ಯಜ್ಞಾ​ರ್ಪಣೆಯ ಮೂಲಕ ನಿರಂತರವಾಗಿ ಪರಿಪೂರ್ಣಗೊಳಿಸಿದ್ದಾನೆ. 15  ಇದಲ್ಲದೆ ಪವಿತ್ರಾತ್ಮವು ಸಹ ನಮಗೆ ಸಾಕ್ಷಿನೀಡುತ್ತಾ, 16  “ ‘ಆ ದಿನಗಳ ಬಳಿಕ ನಾನು ಅವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಇದೇ; ನಾನು ನನ್ನ ನಿಯಮಗಳನ್ನು ಅವರ ಹೃದಯಗಳಲ್ಲಿ ಹಾಕುವೆನು ಮತ್ತು ಅವರ ಮನಸ್ಸುಗಳಲ್ಲಿ ಅವುಗಳನ್ನು ಬರೆಯುವೆನು’ ಎಂದು ಯೆಹೋವನು ಹೇಳುತ್ತಾನೆ” ಎಂದು ತಿಳಿಸಿತು. 17  ಅದು ಮುಂದುವರಿಸುತ್ತಾ, “ನಾನು ಅವರ ಪಾಪಗಳನ್ನೂ ಅವರ ಅಧರ್ಮದ ಕೃತ್ಯಗಳನ್ನೂ ಇನ್ನೆಂದಿಗೂ ಮನಸ್ಸಿಗೆ ತರುವುದಿಲ್ಲ” ಎಂದು ತಿಳಿಸಿತು. 18  ಈಗ ಇವುಗಳಿಗೆ ಕ್ಷಮಾಪಣೆಯಿರುವುದರಿಂದ ಇನ್ನು ಮುಂದೆ ಪಾಪಕ್ಕಾಗಿ ಯಜ್ಞವನ್ನು ಅರ್ಪಿಸುವ ಅಗತ್ಯವಿಲ್ಲ. 19  ಆದುದರಿಂದ ಸಹೋದರರೇ, ಯೇಸುವಿನ ರಕ್ತದ ಮೂಲಕ ಪವಿತ್ರ ಸ್ಥಳಕ್ಕೆ ಹೋಗುವ ಮಾರ್ಗವನ್ನು ಪ್ರವೇಶಿಸುವ ಧೈರ್ಯವು ನಮಗಿದೆ; 20  ಯೇಸು ತನ್ನ ಶರೀರವೆಂಬ ತೆರೆಯ ಮೂಲಕ ಈ ಹೊಸದಾದ ಮತ್ತು ಜೀವವುಳ್ಳ ಮಾರ್ಗವನ್ನು ನಮಗೋಸ್ಕರ ಪ್ರತಿಷ್ಠಾಪಿಸಿದನು. 21  ಮಾತ್ರವಲ್ಲದೆ ದೇವರ ಮನೆಯ ಮೇಲೆ ನೇಮಿಸಲ್ಪಟ್ಟಿರುವ ಶ್ರೇಷ್ಠನಾದ ಯಾಜಕನು ನಮಗಿದ್ದಾನೆ. 22  ಆದುದರಿಂದ ನಾವು ದುಷ್ಟ ಮನಸ್ಸಾಕ್ಷಿಯಿಂದ ಶುದ್ಧೀಕರಿಸಲ್ಪಡುವಂತೆ ನಮ್ಮ ಹೃದಯಗಳನ್ನು ಪ್ರೋಕ್ಷಿಸಿಕೊಂಡು ಮತ್ತು ಶುದ್ಧವಾದ ನೀರಿನಿಂದ ದೇಹಗಳನ್ನು ತೊಳೆದುಕೊಂಡು ನಂಬಿಕೆಯ ಪೂರ್ಣ ಆಶ್ವಾಸನೆಯಲ್ಲಿ ಯಥಾರ್ಥ ಹೃದಯಗಳೊಂದಿಗೆ ದೇವರನ್ನು ಸಮೀಪಿಸೋಣ. 23  ನಾವು ವಿಚಲಿತರಾಗದೆ ನಮ್ಮ ನಿರೀಕ್ಷೆಯ ಬಹಿರಂಗ ಅರಿಕೆಯನ್ನು ದೃಢವಾಗಿ ಹಿಡಿದುಕೊಳ್ಳೋಣ; ಏಕೆಂದರೆ ವಾಗ್ದಾನಮಾಡಿದಾತನು ನಂಬಿಗಸ್ತನು. 24  ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ; 25  ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ. ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೀವು ನೋಡುವಾಗ ಇದನ್ನು ಇನ್ನಷ್ಟು ಹೆಚ್ಚು ಮಾಡಿರಿ. 26  ಏಕೆಂದರೆ ನಾವು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡ ಬಳಿಕ ಬೇಕುಬೇಕೆಂದೇ ಪಾಪವನ್ನು ಪರಿಪಾಠವಾಗಿ ಮಾಡುವುದಾದರೆ ಇನ್ನೆಂದಿಗೂ ಪಾಪಗಳಿಗಾಗಿ ಬೇರೆ ಯಾವುದೇ ಯಜ್ಞವು ಉಳಿದಿರುವುದಿಲ್ಲ. 27  ಆದರೆ ಭಯದಿಂದ ಎದುರುನೋಡತಕ್ಕ ನಿರ್ದಿಷ್ಟ ನ್ಯಾಯತೀರ್ಪು ಮತ್ತು ದಹಿಸಲಿರುವ ಅಗ್ನಿಮಯ ಕ್ರೋಧವು ವಿರೋಧಿಸುವವರ ಮೇಲಿರುವುದು. 28  ಮೋಶೆಯ ನಿಯಮವನ್ನು ಕಡೆಗಣಿಸಿದವನಿಗೆ ಇಬ್ಬರು ಅಥವಾ ಮೂವರು ಸಾಕ್ಷಿಗಳ ಮಾತಿನ ಆಧಾರದ ಮೇಲೆ ಕನಿಕರವಿಲ್ಲದೆ ಮರಣವು ವಿಧಿಸಲ್ಪಡುತ್ತದೆ. 29  ಹಾಗಿರುವಾಗ ದೇವರ ಮಗನನ್ನು ತುಳಿದು ತನ್ನನ್ನು ಪವಿತ್ರೀಕರಿಸಿದ ಒಡಂಬಡಿಕೆಯ ರಕ್ತವನ್ನು ಸಾಮಾನ್ಯವಾದ ಮೌಲ್ಯದ್ದೆಂದೆಣಿಸಿ ದೇವರ ಅಪಾತ್ರ ದಯೆಯ ಆತ್ಮವನ್ನು* ತಿರಸ್ಕರಿಸಿ ಕೋಪವನ್ನೆಬ್ಬಿಸಿದ ಮನುಷ್ಯನು ಇನ್ನೆಷ್ಟು ಕಠಿನವಾದ ಶಿಕ್ಷೆಗೆ ಪಾತ್ರನಾಗಬೇಕೆಂದು ನೀವು ನೆನಸುತ್ತೀರಿ? 30  “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ತಕ್ಕ ಪ್ರತಿಫಲವನ್ನು ಕೊಡುವೆನು” ಎಂದು ಹೇಳಿದಾತನನ್ನು ನಾವು ಬಲ್ಲೆವು; ಇದಲ್ಲದೆ “ಯೆಹೋವನು ತನ್ನ ಜನರಿಗೆ ನ್ಯಾಯತೀರಿಸುವನು” ಎಂದೂ ಹೇಳಲಾಗಿದೆ. 31  ಜೀವವುಳ್ಳ ದೇವರ ಕೈಯಲ್ಲಿ ಸಿಕ್ಕಿಬೀಳುವುದು ಭಯಾನಕ ಸಂಗತಿಯಾಗಿದೆ. 32  ನೀವು ಜ್ಞಾನೋದಯ ಹೊಂದಿದ ಬಳಿಕ ಕಷ್ಟಾನುಭವಗಳ ಕೆಳಗೆ ದೊಡ್ಡ ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾ ಇರಿ. 33  ಕೆಲವು ಸಾರಿ ನೀವು ರಂಗಸ್ಥಳದಲ್ಲಿಯೋ ಎಂಬಂತೆ ನಿಂದೆಗಳಿಗೆ ಮತ್ತು ಸಂಕಟಗಳಿಗೆ ಗುರಿಯಾದಿರಿ; ಕೆಲವು ಸಾರಿ ಅಂಥವುಗಳನ್ನು ಅನುಭವಿಸಿದವರೊಂದಿಗೆ ನೀವು ಸಹಭಾಗಿಗಳಾದಿರಿ. 34  ಸೆರೆಯಲ್ಲಿದ್ದವರಿಗೆ ನೀವು ಸಹಾನುಭೂತಿಯನ್ನು ತೋರಿಸಿದಿರಿ ಮತ್ತು ನಿಮಗೆ ಉತ್ತಮವಾಗಿಯೂ ಸ್ಥಿರವಾಗಿಯೂ ಇರುವ ಆಸ್ತಿ ಇದೆ ಎಂಬುದನ್ನು ತಿಳಿದವರಾಗಿ ನಿಮ್ಮ ಸ್ವತ್ತನ್ನು ಸುಲುಕೊಳ್ಳುವವರಿಗೆ ಸಂತೋಷದಿಂದ ಬಿಟ್ಟುಕೊಟ್ಟಿರಿ. 35  ಆದುದರಿಂದ ನಿಮ್ಮ ವಾಕ್ಸರಳತೆಯನ್ನು ಬಿಟ್ಟುಬಿಡಬೇಡಿರಿ; ಅದಕ್ಕೆ ಮಹಾ ಪ್ರತಿಫಲವು ಸಿಗಲಿದೆ. 36  ನೀವು ದೇವರ ಚಿತ್ತವನ್ನು ಮಾಡಿದ ಬಳಿಕ ವಾಗ್ದಾನದ ನೆರವೇರಿಕೆಯನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಯ ಅಗತ್ಯವಿದೆ. 37  ಏಕೆಂದರೆ ಇನ್ನು “ಸ್ವಲ್ಪ ಸಮಯದಲ್ಲಿಯೇ” “ಬರಲಿರುವಾತನು ಬರುವನು, ತಡಮಾಡುವುದಿಲ್ಲ.” 38  “ಆದರೆ ನನ್ನ ನೀತಿವಂತನು ನಂಬಿಕೆಯಿಂದಲೇ ಬದುಕುವನು” ಮತ್ತು “ಅವನು ಹಿಂದೆಗೆದರೆ ನನ್ನ ಪ್ರಾಣವು ಅವನ ವಿಷಯದಲ್ಲಿ ಸಂತೋಷಪಡುವುದಿಲ್ಲ.” 39  ನಾವಾದರೋ ಹಿಂಜರಿದು ನಾಶವಾಗುವಂಥವರಲ್ಲ, ಪ್ರಾಣವನ್ನು ಸಂರಕ್ಷಿಸುವ ನಂಬಿಕೆಯಿರುವಂಥವರಾಗಿದ್ದೇವೆ.

ಪಾದಟಿಪ್ಪಣಿ

ಇಬ್ರಿ 10:29 ಪರಿಶಿಷ್ಟ 7ನ್ನು ನೋಡಿ.