ಅ. ಕಾರ್ಯಗಳು 9:1-43

9  ಆದರೆ ಸೌಲನು ಇನ್ನೂ ಕರ್ತನ ಶಿಷ್ಯರ ವಿರುದ್ಧ ಬೆದರಿಕೆಯ ಮತ್ತು ಕೊಲೆಯ ಮಾತುಗಳನ್ನಾಡುತ್ತಾ ಮಹಾ ಯಾಜಕನ ಬಳಿಗೆ ಹೋಗಿ  ‘ಆ ಮಾರ್ಗಕ್ಕೆ’ ಸೇರಿದ ಯಾರಾದರೂ ಸಿಕ್ಕಿದರೆ ಅವರು ಗಂಡಸರಾಗಿರಲಿ ಹೆಂಗಸರಾಗಿರಲಿ ತಾನು ಅವರನ್ನು ಬಂಧಿಸಿ ಯೆರೂಸಲೇಮಿಗೆ ತರಲಿಕ್ಕಾಗುವಂತೆ ದಮಸ್ಕದಲ್ಲಿರುವ ಸಭಾಮಂದಿರಗಳಿಗೆ ಪತ್ರಗಳನ್ನು ಕೊಡುವಂತೆ ಕೇಳಿಕೊಂಡನು.  ಅವನು ಪ್ರಯಾಣಿಸುತ್ತಾ ದಮಸ್ಕದ ಹತ್ತಿರ ಬಂದಾಗ ಇದ್ದಕ್ಕಿದ್ದಂತೆ ಆಕಾಶದಿಂದ ಒಂದು ಬೆಳಕು ಅವನ ಸುತ್ತಲೂ ಮಿಂಚಿತು  ಮತ್ತು ಅವನು ನೆಲಕ್ಕೆ ಬಿದ್ದುಬಿಟ್ಟನು, ಆಗ “ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತಿದ್ದೀ?” ಎಂಬ ವಾಣಿಯನ್ನು ಕೇಳಿಸಿಕೊಂಡನು.  ಆಗ ಅವನು, “ಸ್ವಾಮಿ, ನೀನು ಯಾರು?” ಎಂದು ಕೇಳಿದನು. ಅದಕ್ಕೆ ಅವನು, “ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು.  ಹಾಗಿದ್ದರೂ, ನೀನೆದ್ದು ಪಟ್ಟಣವನ್ನು ಪ್ರವೇಶಿಸು, ನೀನು ಮಾಡಬೇಕಾದದ್ದನ್ನು ಅಲ್ಲಿ ನಿನಗೆ ತಿಳಿಸಲಾಗುವುದು” ಎಂದನು.  ಅವನೊಂದಿಗೆ ಪ್ರಯಾಣಿಸುತ್ತಿದ್ದ ಜನರು ಈ ವಾಣಿಯನ್ನು ಕೇಳಿಸಿಕೊಂಡರಾದರೂ ಯಾವನನ್ನೂ ಕಾಣದೆ ಮೂಕರಾಗಿ ನಿಂತಿದ್ದರು.  ಸೌಲನು ನೆಲದಿಂದ ಮೇಲೆದ್ದಾಗ ಅವನ ಕಣ್ಣುಗಳು ತೆರೆದಿದ್ದರೂ ಅವನಿಗೆ ಏನೂ ಕಾಣಿಸಲಿಲ್ಲ. ಆದುದರಿಂದ ಅವರು ಅವನನ್ನು ಕೈಹಿಡಿದು ದಮಸ್ಕಕ್ಕೆ ಕರೆದುಕೊಂಡುಹೋದರು.  ಮೂರು ದಿನಗಳ ತನಕ ಅವನಿಗೆ ಏನೂ ಕಾಣಿಸಲಿಲ್ಲ; ಅವನು ಏನನ್ನೂ ತಿನ್ನಲಿಲ್ಲ ಏನನ್ನೂ ಕುಡಿಯಲಿಲ್ಲ. 10  ದಮಸ್ಕದಲ್ಲಿ ಅನನೀಯನೆಂಬ ಒಬ್ಬ ಶಿಷ್ಯನಿದ್ದನು; ಕರ್ತನು ಅವನಿಗೆ ದರ್ಶನದಲ್ಲಿ, “ಅನನೀಯನೇ” ಎಂದು ಕರೆದನು. ಆಗ ಅವನು, “ಕರ್ತನೇ, ಇಗೋ ಇದ್ದೇನೆ” ಎಂದನು. 11  ಕರ್ತನು ಅವನಿಗೆ, “ನೀನೆದ್ದು ನೆಟ್ಟನೆ ಬೀದಿ ಎಂಬ ಬೀದಿಗೆ ಹೋಗಿ ಯೂದನ ಮನೆಯಲ್ಲಿ ತಾರ್ಸದಿಂದ ಬಂದಿರುವ ಸೌಲನೆಂಬ ಮನುಷ್ಯನಿಗಾಗಿ ವಿಚಾರಿಸು. ನೋಡು! ಅವನು ಪ್ರಾರ್ಥಿಸು​ತ್ತಿರುತ್ತಾನೆ, 12  ಮತ್ತು ಅವನು ದರ್ಶನದಲ್ಲಿ ಅನನೀಯನೆಂಬ ಒಬ್ಬ ಮನುಷ್ಯನು ಬಂದು ತನಗೆ ಪುನಃ ದೃಷ್ಟಿಬರುವಂತೆ ತನ್ನ ಮೇಲೆ ಕೈಗಳನ್ನಿಡುವುದನ್ನು ನೋಡಿದ್ದಾನೆ” ಎಂದು ಹೇಳಿದನು. 13  ಅದಕ್ಕೆ ಅನನೀಯನು, “ಕರ್ತನೇ, ಈ ಮನುಷ್ಯನು ಯೆರೂಸಲೇಮಿನಲ್ಲಿ ನಿನ್ನ ಪವಿತ್ರ ಜನರಿಗೆ ಮಾಡಿರುವ ಅನೇಕ ​ಹಾನಿಕರ ವಿಷಯಗಳ ಕುರಿತು ನಾನು ಅನೇಕರಿಂದ ಕೇಳಿಸಿಕೊಂಡಿದ್ದೇನೆ. 14  ಮತ್ತು ಇಲ್ಲಿಯೂ ನಿನ್ನ ಹೆಸರನ್ನು ಹೇಳಿಕೊಳ್ಳುವವರೆಲ್ಲರನ್ನು ಬಂಧಿಸಲಿಕ್ಕಾಗಿ ಅವನು ಮುಖ್ಯ ಯಾಜಕರಿಂದ ಅಧಿಕಾರವನ್ನು ಪಡೆದಿದ್ದಾನೆ” ಎಂದನು. 15  ಆದರೆ ಕರ್ತನು ಅವನಿಗೆ, “ನೀನು ಹೋಗು; ಈ ಮನುಷ್ಯನು ಅನ್ಯಜನಾಂಗಗಳಿಗೂ ಅರಸರಿಗೂ ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಯಪಡಿಸಲಿಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ. 16  ನನ್ನ ಹೆಸರಿನ ನಿಮಿತ್ತ ಅವನು ಎಷ್ಟೆಲ್ಲ ಕಷ್ಟವನ್ನು ಅನುಭವಿಸಬೇಕೆಂಬುದನ್ನು ನಾನು ಅವನಿಗೆ ಸ್ಪಷ್ಟವಾಗಿ ತೋರಿಸುವೆನು” ಎಂದು ಹೇಳಿದನು. 17  ಆಗ ಅನನೀಯನು ಹೊರಟುಹೋಗಿ ಆ ಮನೆಯನ್ನು ಪ್ರವೇಶಿಸಿ ಅವನ ಮೇಲೆ ಕೈಗಳನ್ನಿಟ್ಟು, “ಸಹೋದರನಾದ ಸೌಲನೇ, ನೀನು ಬರುತ್ತಿದ್ದ ದಾರಿಯಲ್ಲಿ ನಿನಗೆ ಕಾಣಿಸಿಕೊಂಡ ಕರ್ತನಾದ ಯೇಸು, ನೀನು ಪುನಃ ದೃಷ್ಟಿಯನ್ನು ಪಡೆಯುವಂತೆ ಮತ್ತು ಪವಿತ್ರಾತ್ಮಭರಿತನಾಗುವಂತೆ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ” ಎಂದನು. 18  ತಕ್ಷಣವೇ ಅವನ ಕಣ್ಣುಗಳಿಂದ ಪರೆಗಳಂತೆ ಕಾಣುತ್ತಿದ್ದ ಏನೋ ಬಿದ್ದು ಅವನಿಗೆ ಪುನಃ ದೃಷ್ಟಿಬಂತು; ಅವನು ಎದ್ದು ದೀಕ್ಷಾಸ್ನಾನ ಪಡೆದು​ಕೊಂಡನು 19  ಮತ್ತು ಊಟಮಾಡಿ ಬಲವನ್ನು ಹೊಂದಿದನು. ಅವನು ದಮಸ್ಕದಲ್ಲಿ ಶಿಷ್ಯರೊಂದಿಗೆ ಕೆಲವು ದಿವಸ ಇದ್ದು, 20  ​ತಡಮಾಡದೆ ಸಭಾಮಂದಿರಗಳಿಗೆ ಹೋಗಿ ಯೇಸುವೇ ದೇವಕುಮಾರನೆಂದು ಸಾರ​ತೊಡಗಿದನು. 21  ಅವನ ಮಾತುಗಳನ್ನು ಕೇಳಿಸಿ​ಕೊಂಡವರೆಲ್ಲರೂ ಅತ್ಯಾಶ್ಚರ್ಯಪಟ್ಟು, “ಯೆರೂಸಲೇಮಿನಲ್ಲಿ ಈ ಹೆಸರನ್ನು ಹೇಳಿಕೊಳ್ಳುವವರನ್ನು ಕ್ರೂರವಾಗಿ ಹಿಂಸಿಸಿದ ಮನುಷ್ಯನು ಇವನೇ ಅಲ್ಲವೆ? ಇಂಥವರನ್ನು ಬಂಧಿಸಿ ಮುಖ್ಯ ಯಾಜಕರ ಬಳಿಗೆ ತೆಗೆದುಕೊಂಡು​ಹೋಗುವ ಉದ್ದೇಶದಿಂದಲೇ ಇಲ್ಲಿಗೆ ಬಂದವನಲ್ಲವೆ?” ಎಂದು ಮಾತಾಡಿಕೊಂಡರು. 22  ಆದರೆ ಸೌಲನು ಇನ್ನಷ್ಟು ಹೆಚ್ಚು ಬಲವನ್ನು ಹೊಂದುತ್ತಾ ಹೋದನು ಮತ್ತು ಇವನೇ ಕ್ರಿಸ್ತನೆಂದು ತರ್ಕಬದ್ಧವಾಗಿ ರುಜುಪಡಿಸುತ್ತಾ ದಮಸ್ಕದಲ್ಲಿ ವಾಸಿಸುತ್ತಿದ್ದ ಯೆಹೂದ್ಯರನ್ನು ದಿಗ್ಭ್ರಮೆಗೊಳಿಸಿದನು. 23  ಅನೇಕ ದಿವಸಗಳು ಕಳೆದ ಬಳಿಕ ಯೆಹೂದ್ಯರು ಅವನನ್ನು ಕೊಲ್ಲ​ಬೇಕೆಂದು ಕೂಡಿ ಸಮಾಲೋಚನೆ ನಡೆಸಿದರು. 24  ಆದರೆ ತನ್ನ ವಿರುದ್ಧವಾದ ಅವರ ಒಳಸಂಚು ಸೌಲನಿಗೆ ತಿಳಿದುಬಂತು. ಹಾಗಿದ್ದರೂ ಅವನನ್ನು ಕೊಲ್ಲುವುದಕ್ಕಾಗಿ ಅವರು ಹಗಲಿರುಳೂ ಪಟ್ಟಣದ ದ್ವಾರ​ಗಳನ್ನು ಸಹ ಕಾಯುತ್ತಾ ಇದ್ದರು. 25  ಆದುದರಿಂದ ಅವನ ಶಿಷ್ಯರು ರಾತ್ರಿಯಲ್ಲಿ ಅವನನ್ನು ಕರೆದುಕೊಂಡುಹೋಗಿ ಬುಟ್ಟಿಯಲ್ಲಿ ಕೂರಿಸಿ ಗೋಡೆಯ ಕಿಂಡಿಯಿಂದ ಇಳಿಬಿಟ್ಟರು. 26  ಅವನು ಯೆರೂಸಲೇಮಿಗೆ ಬಂದಾಗ ಅಲ್ಲಿದ್ದ ಶಿಷ್ಯರೊಂದಿಗೆ ಸೇರಿಕೊಳ್ಳಲು ಪ್ರಯತ್ನಿಸಿದನು; ಆದರೆ ಅವನು ಶಿಷ್ಯನಾಗಿದ್ದಾನೆಂದು ಅವರು ನಂಬದಿದ್ದ ಕಾರಣ ಅವರೆಲ್ಲರೂ ಅವನಿಗೆ ಹೆದರಿದರು. 27  ಆಗ ಬಾರ್ನಬನು ಅವನ ಸಹಾಯಕ್ಕೆ ಬಂದು ಅವನನ್ನು ಅಪೊಸ್ತಲರ ಬಳಿಗೆ ಕರೆದು​ಕೊಂಡುಹೋಗಿ, ಅವನು ದಾರಿಯಲ್ಲಿ ಕರ್ತನನ್ನು ಕಂಡದ್ದನ್ನೂ ಕರ್ತನು ​ಅವನೊಂದಿಗೆ ಮಾತಾಡಿದ್ದನ್ನೂ ದಮಸ್ಕದಲ್ಲಿ ಅವನು ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಮಾತಾಡಿದ್ದನ್ನೂ ಅವರಿಗೆ ವಿವರವಾಗಿ ತಿಳಿಸಿದನು. 28  ಆ ಮೇಲೆ ಅವನು ಅವರೊಂದಿಗಿದ್ದು ಯೆರೂಸಲೇಮಿನಲ್ಲಿ ಆತಂಕವಿಲ್ಲದೆ ತಿರುಗಾಡುತ್ತಾ ಕರ್ತನ ಹೆಸರಿನಲ್ಲಿ ಧೈರ್ಯದಿಂದ ಮಾತಾಡುತ್ತಾ ಇದ್ದನು; 29  ಮತ್ತು ಅವನು ಗ್ರೀಕ್‌ ಭಾಷೆಯನ್ನಾಡುತ್ತಿದ್ದ ಯೆಹೂದ್ಯರೊಂದಿಗೆ ಮಾತಾಡುತ್ತಾ ತರ್ಕಿಸುತ್ತಾ ಇದ್ದನು. ಆದರೆ ಇವರು ಅವನನ್ನು ಕೊಲ್ಲಲು ಪ್ರಯತ್ನಗಳನ್ನು ಮಾಡಿದರು. 30  ಇದು ಸಹೋದರರಿಗೆ ತಿಳಿದುಬಂದಾಗ, ಅವರು ಅವನನ್ನು ಕೈಸರೈಯಕ್ಕೆ ಕರೆದುಕೊಂಡುಹೋಗಿ ತಾರ್ಸಕ್ಕೆ ಕಳುಹಿಸಿಬಿಟ್ಟರು. 31  ಹೀಗಿರಲಾಗಿ ಯೂದಾಯ ಗಲಿಲಾಯ ಸಮಾರ್ಯದಾದ್ಯಂತ ಇದ್ದ ಸಭೆಯು ಬಲಹೊಂದಿ ಅಲ್ಲಿ ಶಾಂತಿ ನೆಲೆಸಿತು; ಅದು ಯೆಹೋವನ ಭಯದಲ್ಲಿ ನಡೆಯುತ್ತಾ ಪವಿತ್ರಾತ್ಮದಿಂದ ಸಾಂತ್ವನವನ್ನು ಹೊಂದುತ್ತಾ ಇದ್ದುದರಿಂದ ಅಭಿವೃದ್ಧಿಗೊಳ್ಳುತ್ತಾ ಹೋಯಿತು. 32  ಪೇತ್ರನು ಎಲ್ಲ ಕಡೆಗಳಲ್ಲಿಯೂ ಸಂಚರಿಸುತ್ತಿರುವಾಗ ಲುದ್ದದಲ್ಲಿ ವಾಸಿಸು​ತ್ತಿದ್ದ ಪವಿತ್ರ ಜನರ ಬಳಿಗೂ ಬಂದನು. 33  ಅಲ್ಲಿ ಅವನು ಐನೇಯನೆಂಬ ಒಬ್ಬ ಮನುಷ್ಯನನ್ನು ಕಂಡನು; ಪಾರ್ಶ್ವವಾಯು ರೋಗಿಯಾಗಿದ್ದ ಅವನು ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿದ್ದನು. 34  ಪೇತ್ರನು ಅವನಿಗೆ, “ಐನೇಯನೇ, ಯೇಸು ಕ್ರಿಸ್ತನು ನಿನ್ನನ್ನು ಗುಣಪಡಿಸುತ್ತಾನೆ. ಎದ್ದು ನಿನ್ನ ಹಾಸಿಗೆಯನ್ನು ಸರಿಪಡಿಸು” ಎಂದು ಹೇಳಿದನು. ಕೂಡಲೆ ಅವನು ಎದ್ದುನಿಂತನು. 35  ಲುದ್ದ ಮತ್ತು ಸಾರೋನ ಪ್ರಾಂತದಲ್ಲಿ ವಾಸಿಸುತ್ತಿದ್ದವರೆಲ್ಲರೂ ಅವನನ್ನು ನೋಡಿ ಕರ್ತನ ಕಡೆಗೆ ತಿರುಗಿ​ಕೊಂಡರು. 36  ಯೊಪ್ಪದಲ್ಲಿ ತಬಿಥಾ ಎಂಬ ಒಬ್ಬ ಶಿಷ್ಯಳಿದ್ದಳು. ಗ್ರೀಕ್‌ ಭಾಷೆಯಲ್ಲಿ ಆ ​ಹೆಸರಿಗೆ ದೊರ್ಕ ಎಂದರ್ಥ. ಅವಳು ಸತ್ಕ್ರಿಯೆಗಳಲ್ಲಿಯೂ ದಾನಧರ್ಮಗಳಲ್ಲಿಯೂ ಸದಾ ನಿರತಳಾಗಿದ್ದಳು. 37  ಆ ದಿವಸಗಳಲ್ಲಿ ಅವಳು ಅಸ್ವಸ್ಥಳಾಗಿ ತೀರಿಕೊಂಡಳು. ಅವರು ಅವಳ ಶವಕ್ಕೆ ಸ್ನಾನಮಾಡಿಸಿ ಮೇಲಂತಸ್ತಿನ ಕೋಣೆಯಲ್ಲಿ ಇಟ್ಟರು. 38  ಲುದ್ದವು ಯೊಪ್ಪದ ಹತ್ತಿರವಿದ್ದ ಕಾರಣ ಪೇತ್ರನು ಆ ಪಟ್ಟಣದಲ್ಲಿರುವುದು ಶಿಷ್ಯರಿಗೆ ತಿಳಿದುಬಂದಾಗ, “ದಯವಿಟ್ಟು ನಮ್ಮಲ್ಲಿಗೆ ಬರಲು ಹಿಂಜರಿಯಬೇಡ” ಎಂದು ಬೇಡಿಕೊಳ್ಳಲಿಕ್ಕಾಗಿ ಅವನ ಬಳಿಗೆ ಇಬ್ಬರು ಪುರುಷರನ್ನು ಕಳುಹಿಸಿದರು. 39  ಆಗ ಪೇತ್ರನು ಎದ್ದು ಅವರೊಂದಿಗೆ ಹೋದನು. ಅವನು ಅಲ್ಲಿಗೆ ತಲಪಿದಾಗ ಅವರು ​ಅವನನ್ನು ಮೇಲಂತಸ್ತಿಗೆ ಕರೆದುಕೊಂಡು​ಹೋದರು; ಅಲ್ಲಿ ವಿಧವೆಯರೆಲ್ಲರೂ ಅಳುತ್ತಾ ದೊರ್ಕಳು ಅವರೊಂದಿಗಿದ್ದಾಗ ಮಾಡಿಕೊಟ್ಟಿದ್ದ ಅನೇಕ ಒಳಂಗಿಗಳನ್ನೂ ಮೇಲಂಗಿಗಳನ್ನೂ ಅವನಿಗೆ ತೋರಿಸಿದರು. 40  ಪೇತ್ರನು ಅವರೆಲ್ಲರನ್ನು ಹೊರಗೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥನೆಮಾಡಿ ಶವದ ಕಡೆಗೆ ತಿರುಗಿ, “ತಬಿಥಾ ಏಳು” ಅಂದನು. ಅವಳು ಕಣ್ಣುತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತುಕೊಂಡಳು. 41  ಅವನು ಅವಳಿಗೆ ಕೈಕೊಟ್ಟು ಎಬ್ಬಿಸಿ, ಪವಿತ್ರ ಜನರನ್ನೂ ವಿಧವೆಯರನ್ನೂ ಕರೆದು ಜೀವಿತಳಾದ ಅವಳನ್ನು ಅವರಿಗೆ ಒಪ್ಪಿಸಿದನು. 42  ಈ ಘಟನೆಯು ಯೊಪ್ಪದಾದ್ಯಂತ ತಿಳಿದುಬಂತು ಮತ್ತು ಅನೇಕರು ಕರ್ತನನ್ನು ನಂಬುವವರಾದರು. 43  ಅನಂತರ ಪೇತ್ರನು ಚರ್ಮಕಾರನಾದ ಸೀಮೋನನೆಂಬವನೊಂದಿಗೆ ಯೊಪ್ಪದಲ್ಲಿ ಬಹಳ ದಿವಸಗಳ ವರೆಗೆ ಉಳಿದನು.

ಪಾದಟಿಪ್ಪಣಿ