ಅ. ಕಾರ್ಯಗಳು 7:1-60

7  ಆಗ ಮಹಾ ಯಾಜಕನು, “ಈ ಮಾತುಗಳು ಸತ್ಯವೊ?” ಎಂದು ಕೇಳಿದನು.  ಅದಕ್ಕೆ ಅವನು ಹೇಳಿದ್ದು: “ಜನರೇ, ಸಹೋದರರೇ, ತಂದೆಗಳೇ, ಕೇಳಿರಿ. ನಮ್ಮ ಪೂರ್ವಜನಾದ ಅಬ್ರಹಾಮನು ಹಾರಾನಿನಲ್ಲಿ ವಾಸಿಸುವುದಕ್ಕೆ ಮುಂಚೆ ಮೆಸಪಟೇಮ್ಯದಲ್ಲಿದ್ದಾಗ ಮಹಿಮಾಯುತನಾದ ದೇವರು ಅವನಿಗೆ ಕಾಣಿಸಿ​ಕೊಂಡು,  ‘ನಿನ್ನ ಸ್ವದೇಶವನ್ನೂ ಬಂಧುಬಳಗವನ್ನೂ ಬಿಟ್ಟು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು’ ಎಂದು ಅವನಿಗೆ ಹೇಳಿದನು.  ಅದರಂತೆ ಅವನು ಕಲ್ದೀಯರ ದೇಶವನ್ನು ಬಿಟ್ಟು ಹಾರಾನಿನಲ್ಲಿ ನೆಲೆಸಿದನು. ಅವನ ತಂದೆಯು ಮೃತಪಟ್ಟ ಬಳಿಕ, ದೇವರು ಅವನ ವಾಸಸ್ಥಾನವನ್ನು ಬದಲಾಯಿಸಿ ನೀವು ಈಗ ನಿವಾಸಿಸುತ್ತಿರುವ ದೇಶಕ್ಕೆ ​ಅವನನ್ನು ಕರೆತಂದನು.  ಹಾಗಿದ್ದರೂ ಅಲ್ಲಿ ಆತನು ಅವನಿಗೆ ಬಾಧ್ಯತೆಯಾಗಿ ಯಾವುದೇ ಸ್ವತ್ತನ್ನಾಗಲಿ ಕಾಲಿಡುವಷ್ಟು ಸ್ಥಳವನ್ನಾಗಲಿ ಕೊಡಲಿಲ್ಲ; ಆದರೆ ಅವನಿಗೆ ಆ ಸಮಯದಲ್ಲಿ ಮಕ್ಕಳಿಲ್ಲದಿದ್ದರೂ ​ಅವನಿಗೂ ಬಳಿಕ ಅವನ ಸಂತತಿಗೂ ಈ ದೇಶವನ್ನು ಬಾಧ್ಯತೆಯಾಗಿ ಕೊಡುವೆನೆಂದು ಆತನು ವಾಗ್ದಾನಿಸಿದನು.  ಇದಲ್ಲದೆ ಅವನ ಸಂತತಿಯವರು ಅನ್ಯದೇಶದಲ್ಲಿ ​ಪರದೇಶೀಯ ನಿವಾಸಿಗಳಾಗಿರುವರು ಮತ್ತು ಜನರು ಅವರನ್ನು ಗುಲಾಮರನ್ನಾಗಿ ಮಾಡಿಕೊಂಡು ನಾನೂರು ವರ್ಷ ಅವರ ಮೇಲೆ ದಬ್ಬಾಳಿಕೆ ನಡಿಸುವರು ಎಂದೂ ದೇವರು ತಿಳಿಸಿದನು.  ‘ಅವರು ಗುಲಾಮರಾಗಿ ಸೇವೆಮಾಡುವ ಆ ಜನಾಂಗಕ್ಕೆ ನಾನು ನ್ಯಾಯತೀರಿಸುವೆನು. ಇದೆಲ್ಲ ಸಂಭವಿಸಿದ ಬಳಿಕ ಅವರು ಅಲ್ಲಿಂದ ಹೊರಬಂದು ಈ ಸ್ಥಳದಲ್ಲಿ ನನಗೆ ಪವಿತ್ರ ಸೇವೆಯನ್ನು ಸಲ್ಲಿಸುವರು’ ಎಂದು ದೇವರು ಹೇಳಿದನು.  “ಇದಲ್ಲದೆ ಆತನು ಅವನಿಗೆ ​ಸುನ್ನತಿಯ ಒಡಂಬಡಿಕೆಯನ್ನೂ ದಯಪಾಲಿಸಿದನು; ಮತ್ತು ಹೀಗೆ, ಅವನು ​ಇಸಾಕನಿಗೆ ತಂದೆಯಾದಾಗ ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿಯನ್ನು ಮಾಡಿಸಿದನು. ಅನಂತರ ಇಸಾಕನು ಯಾಕೋಬನಿಗೂ ಯಾಕೋಬನು ಹನ್ನೆರಡು ಮಂದಿ ಕುಟುಂಬ ತಲೆಗಳಿಗೂ ತಂದೆಯಾದನು.  ಆ ಕುಟುಂಬ ತಲೆಗಳು ಯೋಸೇಫನ ಮೇಲೆ ಮತ್ಸರಪಟ್ಟು ಅವನನ್ನು ಈಜಿಪ್ಟ್‌ ದೇಶಕ್ಕೆ ಮಾರಿಬಿಟ್ಟರು. ಆದರೆ ದೇವರು ಅವನೊಂದಿಗಿದ್ದು, 10  ಅವನ ಎಲ್ಲ ಸಂಕಟಗಳಿಂದ ಅವನನ್ನು ವಿಮೋಚಿಸಿ ಈಜಿಪ್ಟಿನ ಅರಸನಾದ ಫರೋಹನ ಸಮ್ಮುಖದಲ್ಲಿ ಸಜ್ಜನನೂ ವಿವೇಕವುಳ್ಳವನೂ ಆಗಿರುವಂತೆ ಮಾಡಿದನು. ಮತ್ತು ಫರೋಹನು ಅವನನ್ನು ಈಜಿಪ್ಟಿನ ಮೇಲೆಯೂ ತನ್ನ ಇಡೀ ಮನೆವಾರ್ತೆಯ ಮೇಲೆಯೂ ಅಧಿಕಾರಿಯನ್ನಾಗಿ ನೇಮಿಸಿದನು. 11  ಆದರೆ ಈಜಿಪ್ಟಿನ ಮೇಲೆಯೂ ಕಾನಾನ್‌ ದೇಶದ ಮೇಲೆಯೂ ಒಂದು ಬರವು ಬರಲಾಗಿ ಮಹಾ ಸಂಕಟ ಉಂಟಾಯಿತು; ಮತ್ತು ನಮ್ಮ ಪೂರ್ವಜರಿಗೆ ಯಾವುದೇ ದವಸಧಾನ್ಯ ಸಿಗದೇ ಹೋಯಿತು. 12  ಆದರೆ ಈಜಿಪ್ಟಿನಲ್ಲಿ ಆಹಾರಧಾನ್ಯ ದೊರಕುತ್ತದೆಂದು ಯಾಕೋಬನಿಗೆ ತಿಳಿದುಬಂದಾಗ ಅವನು ನಮ್ಮ ಪೂರ್ವಜರನ್ನು ಮೊದಲ ಬಾರಿ ಅಲ್ಲಿಗೆ ಕಳುಹಿಸಿದನು. 13  ಎರಡ​ನೆಯ ಬಾರಿ ಯೋಸೇಫನ ಗುರುತನ್ನು ಅವನ ಅಣ್ಣತಮ್ಮಂದಿರಿಗೆ ತಿಳಿಸಲಾಯಿತು ಮತ್ತು ಯೋಸೇಫನ ವಂಶದ ಬಗ್ಗೆ ಫರೋಹನಿಗೂ ತಿಳಿದುಬಂತು. 14  ಆದುದರಿಂದ ಯೋಸೇಫನು ತನ್ನ ತಂದೆಯಾದ ಯಾಕೋಬನನ್ನೂ ತನ್ನ ಎಲ್ಲ ಸಂಬಂಧಿಕರನ್ನೂ ಅವರಿದ್ದ ಸ್ಥಳದಿಂದ ಕರೆಸಿ​ಕೊಂಡನು; ಅವರು ಒಟ್ಟು ಎಪ್ಪತ್ತೈದು ಮಂದಿ ಇದ್ದರು. 15  ಯಾಕೋಬನು ಈಜಿಪ್ಟಿಗೆ ಹೋದನು. ಅಲ್ಲಿಯೇ ಅವನೂ ನಮ್ಮ ಪೂರ್ವಜರೂ ಮೃತಪಟ್ಟರು. 16  ಅವರನ್ನು ಶೇಕೆಮಿಗೆ ತೆಗೆದುಕೊಂಡು ಹೋಗಿ ಅಬ್ರಹಾಮನು ಅಲ್ಲಿ ಹಮೋರನ ಪುತ್ರರಿಂದ ಬೆಳ್ಳಿಯ ಹಣಕ್ಕೆ ಕೊಂಡುಕೊಂಡಿದ್ದ ಸಮಾಧಿಯಲ್ಲಿ ಇಡಲಾಯಿತು. 17  “ದೇವರು ಅಬ್ರಹಾಮನಿಗೆ ಸ್ಪಷ್ಟವಾಗಿ ತಿಳಿಸಿದ್ದ ವಾಗ್ದಾನವು ನೆರವೇರುವ ಸಮಯವು ಸಮೀಪಿಸಿದಂತೆ ಈಜಿಪ್ಟಿನಲ್ಲಿ ಅವರ ಸಂಖ್ಯೆ ಬೆಳೆದು ಹೆಚ್ಚಾಗುತ್ತಾ ಬಂತು. 18  ತರುವಾಯ ಯೋಸೇಫನನ್ನು ಅರಿಯದ ಬೇರೊಬ್ಬ ಅರಸನು ಈಜಿಪ್ಟಿನಲ್ಲಿ ಆಳಿಕೆಗೆ ಬಂದನು. 19  ಇವನು ನಮ್ಮ ಜನಾಂಗದ ವಿರುದ್ಧ ರಾಜತಂತ್ರವನ್ನು ಉಪಯೋಗಿಸಿ, ಶಿಶುಗಳು ಜೀವದಿಂದುಳಿಯದಂತೆ ಅವುಗಳನ್ನು ಹೊರಗೆ ಹಾಕುವಂತೆ ತಂದೆಗಳನ್ನು ಕಠಿಣವಾಗಿ ಹಿಂಸಿಸಿದನು. 20  ಆ ಸಮಯದಲ್ಲೇ ಮೋಶೆಯು ಹುಟ್ಟಿದನು ಮತ್ತು ಅವನು ದಿವ್ಯಸುಂದರ​ನಾಗಿದ್ದನು. ತಂದೆಯ ಮನೆಯಲ್ಲಿ ಅವನನ್ನು ಮೂರು ತಿಂಗಳ ವರೆಗೆ ಸಾಕಲಾಯಿತು. 21  ಆದರೆ ಅವನು ಹೊರಗೆ ಹಾಕಲ್ಪಟ್ಟಾಗ ಫರೋಹನ ಮಗಳು ಅವನನ್ನು ಎತ್ತಿಕೊಂಡು ಹೋಗಿ ತನ್ನ ಸ್ವಂತ ಮಗನಂತೆ ಸಾಕಿದಳು. 22  ಇದರ ಪರಿಣಾಮವಾಗಿ ಮೋಶೆಯು ಈಜಿಪ್ಟಿನವರ ಸರ್ವವಿದ್ಯೆಗಳಲ್ಲಿ ಉಪದೇಶಹೊಂದಿದನು. ವಾಸ್ತವದಲ್ಲಿ ಅವನು ಮಾತಿನಲ್ಲಿಯೂ ಕಾರ್ಯದಲ್ಲಿಯೂ ಸಮರ್ಥನಾಗಿದ್ದನು. 23  “ಅವನಿಗೆ ನಲವತ್ತು ವರ್ಷ ತುಂಬಿದಾಗ, ತನ್ನ ಸಹೋದರರಾದ ಇಸ್ರಾಯೇಲ್ಯರನ್ನು ಹೋಗಿನೋಡಬೇಕೆಂಬ ಆಶೆಯು ಅವನ ಹೃದಯದಲ್ಲಿ ಹುಟ್ಟಿತು. 24  ​ಅವರಲ್ಲಿ ಒಬ್ಬನು ದುರುಪಚರಿಸಲ್ಪಡುತ್ತಿರುವುದು ಅವನ ದೃಷ್ಟಿಗೆ ಬಿದ್ದಾಗ, ಅವನ ಸಹಾಯಕ್ಕೆ ಬಂದು ಪೀಡಿಸುತ್ತಿದ್ದ ಈಜಿಪ್ಟಿನವನನ್ನು ಹೊಡೆದುಹಾಕುವ ಮೂಲಕ ಪೀಡಿಸಲ್ಪಡುತ್ತಿದ್ದವನಿಗಾಗಿ ಮುಯ್ಯಿ ತೀರಿಸಿದನು. 25  ತನ್ನ ಕೈಯಿಂದ ದೇವರು ಅವರಿಗೆ ರಕ್ಷಣೆಯನ್ನು ಕೊಡುತ್ತಿದ್ದಾನೆಂದು ತನ್ನ ಸಹೋದರರು ಗ್ರಹಿಸ​ಬಹುದೆಂದು ಅವನು ಭಾವಿಸಿದನು; ಆದರೆ ಅವರು ಅದನ್ನು ಗ್ರಹಿಸಲಿಲ್ಲ. 26  ಮರುದಿನ ಇಸ್ರಾಯೇಲ್ಯರಿಬ್ಬರು ಜಗಳವಾಡುತ್ತಿದ್ದಾಗ ಅವನು ಅಲ್ಲಿಗೆ ಬಂದು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾ, ‘ಜನರೇ, ನೀವು ಸಹೋದರರು. ನೀವೇಕೆ ಒಬ್ಬರಿಗೊಬ್ಬರು ಅನ್ಯಾಯವಾಗಿ ವರ್ತಿಸುತ್ತಿದ್ದೀರಿ?’ ಎಂದನು. 27  ಆದರೆ ತನ್ನ ನೆರೆಯವನೊಂದಿಗೆ ಅನ್ಯಾಯವಾಗಿ ವರ್ತಿಸುತ್ತಿದ್ದವನು ಇವನನ್ನು ತಳ್ಳಿ, ‘ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ನೇಮಿಸಿದವರು ಯಾರು? 28  ನಿನ್ನೆ ಆ ಈಜಿಪ್ಟಿನವನನ್ನು ಕೊಂದು​ಹಾಕಿದಂತೆ ನನ್ನನ್ನೂ ಕೊಂದುಹಾಕಲು ಬಯಸುತ್ತೀಯೊ?’ ಎಂದು ಕೇಳಿದನು. 29  ಇದನ್ನು ಕೇಳಿದಾಗ ಮೋಶೆಯು ಅಲ್ಲಿಂದ ಪಲಾಯನಗೈದು ಮಿದ್ಯಾನ್‌ದೇಶದಲ್ಲಿ ಪರದೇಶೀಯ ನಿವಾಸಿಯಾಗಿ ಅಲ್ಲಿ ಇಬ್ಬರು ಗಂಡುಮಕ್ಕಳಿಗೆ ತಂದೆಯಾದನು. 30  “ನಲವತ್ತು ವರ್ಷಗಳು ಕಳೆದ ಬಳಿಕ ಸೀನಾಯಿಬೆಟ್ಟದ ಸುತ್ತಲಿದ್ದ ಅರಣ್ಯದಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಒಬ್ಬ ದೇವದೂತನು ಅವನಿಗೆ ಕಾಣಿಸಿಕೊಂಡನು. 31  ಮೋಶೆಯು ಈ ದೃಶ್ಯವನ್ನು ಕಂಡಾಗ ಅತ್ಯಾಶ್ಚರ್ಯಪಟ್ಟನು. ಆದರೆ ಏನು ಸಂಭವಿಸುತ್ತಿದೆ ಎಂಬುದನ್ನು ಪರೀಕ್ಷಿಸಲು ಅವನು ಇನ್ನಷ್ಟು ಹತ್ತಿರ ಹೋದಾಗ ಯೆಹೋವನ ಸ್ವರವು ಅವನಿಗೆ, 32  ‘ನಾನು ನಿಮ್ಮ ಪೂರ್ವಜರ ದೇವರು, ಅಬ್ರಹಾಮ ಇಸಾಕ ಯಾಕೋಬರ ದೇವರು’ ಎಂದು ಹೇಳುವುದು ಕೇಳಿಬಂತು. ಆಗ ಮೋಶೆಯು ಭಯಭೀತನಾಗಿ ನಡುಗುತ್ತಾ ಇನ್ನು ಹೆಚ್ಚೇನನ್ನೂ ಪರೀಕ್ಷಿಸುವ ಧೈರ್ಯಮಾಡಲಿಲ್ಲ. 33  ಯೆಹೋವನು ಅವನಿಗೆ, ‘ನಿನ್ನ ಪಾದಗಳಿಂದ ಕೆರಗಳನ್ನು ತೆಗೆದಿಡು; ಏಕೆಂದರೆ ನೀನು ನಿಂತಿರುವ ಸ್ಥಳವು ಪವಿತ್ರ ನೆಲವಾಗಿದೆ. 34  ಈಜಿಪ್ಟಿನಲ್ಲಿರುವ ನನ್ನ ಜನರು ಅನುಭವಿಸುತ್ತಿರುವ ದುರವಸ್ಥೆಯನ್ನು ನಾನು ಕಣ್ಣಾರೆ ನೋಡಿದ್ದೇನೆ; ಮತ್ತು ನಾನು ಅವರ ನರಳಾಟವನ್ನು ಕೇಳಿ ಅವರನ್ನು ವಿಮೋಚಿಸಲಿಕ್ಕಾಗಿ ಇಳಿದುಬಂದಿದ್ದೇನೆ. ಈಗ ಬಾ, ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುವೆನು’ ಎಂದು ಹೇಳಿದನು. 35  ಯಾರನ್ನು ಅವರು, ‘ನಿನ್ನನ್ನು ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ನೇಮಿಸಿದವರು ಯಾರು?’ ಎಂದು ಹೇಳಿ ತಿರಸ್ಕರಿಸಿದ್ದರೋ ಆ ಮೋಶೆಯನ್ನೇ ದೇವರು ಮುಳ್ಳಿನ ಪೊದೆಯಲ್ಲಿ ಕಾಣಿಸಿಕೊಂಡ ದೇವದೂತನ ಕೈಯಿಂದ ಅಧಿಕಾರಿಯನ್ನಾಗಿಯೂ ವಿಮೋಚಕನನ್ನಾಗಿಯೂ ಕಳುಹಿಸಿದನು. 36  ಇವನೇ ಈಜಿಪ್ಟಿನಲ್ಲಿಯೂ ಕೆಂಪು ಸಮುದ್ರದಲ್ಲಿಯೂ ಅರಣ್ಯದಲ್ಲಿಯೂ ನಲವತ್ತು ವರ್ಷಗಳ ವರೆಗೆ ಆಶ್ಚರ್ಯಕಾರ್ಯಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ಅವರನ್ನು ನಡಿಸಿಕೊಂಡು ಬಂದವನು. 37  “ಈ ಮೋಶೆಯೇ ಇಸ್ರಾಯೇಲ್ಯರಿಗೆ, ‘ದೇವರು ನಿಮ್ಮ ಸಹೋದರರ ಮಧ್ಯದಿಂದ ನಿಮಗಾಗಿ ನನ್ನಂಥ ಒಬ್ಬ ಪ್ರವಾದಿಯನ್ನು ಎಬ್ಬಿಸುವನು’ ಎಂದು ಹೇಳಿದವನು. 38  ಇವನೇ ಅರಣ್ಯದಲ್ಲಿದ್ದ ಸಭೆಯ ಮಧ್ಯೆ, ಸೀನಾಯಿಬೆಟ್ಟದಲ್ಲಿ ತನ್ನೊಂದಿಗೆ ಮಾತಾಡಿದ ದೇವದೂತನೊಂದಿಗೆ ಮತ್ತು ನಮ್ಮ ಪೂರ್ವಜರೊಂದಿಗೆ ಇದ್ದವನು. ಹಾಗೂ ನಿಮಗೆ ಕೊಡಲು ಸಜೀವ​ವಾದ ಪವಿತ್ರ ದೈವೋಕ್ತಿಗಳನ್ನು ಪಡೆದವನು. 39  ನಮ್ಮ ಪೂರ್ವಜರು ಅವನಿಗೆ ವಿಧೇಯರಾಗಲು ನಿರಾಕರಿಸಿ, ಅವನನ್ನು ತಿರಸ್ಕರಿಸಿ ತಮ್ಮ ಹೃದಯಗಳಲ್ಲಿ ಈಜಿಪ್ಟಿಗೆ ಹಿಂದಿರುಗಲು ಬಯಸಿದರು. 40  ಅವರು ಆರೋನನಿಗೆ, ‘ನಮ್ಮ ಮುಂದೆ ಹೋಗುವುದಕ್ಕೆ ದೇವತೆಗಳನ್ನು ಮಾಡಿಕೊಡು. ನಮ್ಮನ್ನು ಈಜಿಪ್ಟಿನಿಂದ ಕರೆದು​ಕೊಂಡು ಬಂದ ಮೋಶೆಗೆ ಏನಾಯಿತೋ ನಮಗೆ ಗೊತ್ತಿಲ್ಲ’ ಎಂದು ಹೇಳಿದರು. 41  ಆ ದಿನಗಳಲ್ಲಿ ಅವರು ಒಂದು ಎಳೆಯ ಗೂಳಿಯ ವಿಗ್ರಹವನ್ನು ಮಾಡಿ, ಆ ವಿಗ್ರಹಕ್ಕೆ ಯಜ್ಞವನ್ನರ್ಪಿಸಿ ತಾವು ಮಾಡಿದ ಕೆಲಸಗಳಲ್ಲಿ ಆನಂದಿಸಲಾರಂಭಿಸಿದರು. 42  ಆದುದರಿಂದ ದೇವರು ​ಅವರಿಗೆ ವಿಮುಖನಾಗಿ ಅವರು ಆಕಾಶದ ನಕ್ಷತ್ರಗಳಿಗೆ ಪವಿತ್ರ ಸೇವೆಯನ್ನು ಸಲ್ಲಿಸುವಂತೆ ಒಪ್ಪಿಸಿಬಿಟ್ಟನು; ಇದರ ಕುರಿತಾಗಿಯೇ ಪ್ರವಾದಿಗಳ ಗ್ರಂಥದಲ್ಲಿ, ‘ಇಸ್ರಾಯೇಲ್‌ ಮನೆತನದವರೇ, ಅರಣ್ಯದಲ್ಲಿ ನಲವತ್ತು ವರ್ಷಗಳ ವರೆಗೆ ನೀವು ಬಲಿಗಳನ್ನೂ ಯಜ್ಞಗಳನ್ನೂ ಸಮರ್ಪಿಸಿದ್ದು ನನಗಲ್ಲ, ಅಲ್ಲವೆ? 43  ನೀವಾದರೊ ಆರಾಧಿಸ​ಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು ಅಂದರೆ ಮೊಲೋಖನ ಗುಡಾರವನ್ನೂ ರೇಫಾ ದೇವತೆಯ ನಕ್ಷತ್ರವನ್ನೂ ಹೊತ್ತುಕೊಂಡು ಹೋದಿರಿ. ಆದುದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆಗೆ ಗಡೀ​ಪಾರುಮಾಡುವೆನು’ ಎಂದು ಬರೆದಿದೆ. 44  “ಅರಣ್ಯದಲ್ಲಿ ನಮ್ಮ ಪೂರ್ವಜರಿಗೆ ಸಾಕ್ಷಿಗುಡಾರವಿತ್ತು; ದೇವರು ಮೋಶೆ​ಯೊಂದಿಗೆ ಮಾತಾಡುವಾಗ ಆಜ್ಞಾಪಿಸಿದಂತೆ, ಅವನು ನೋಡಿದ್ದ ಮಾದರಿಯಲ್ಲೇ ಅದನ್ನು ರೂಪಿಸಲಾಗಿತ್ತು. 45  ಆ ಗುಡಾರವನ್ನು ಹೊಂದಿದ ನಮ್ಮ ಪೂರ್ವಜರು ಯೆಹೋಶುವನ ಮುಂದಾಳುತ್ವದಲ್ಲಿ ದೇವರು ಅವರೆದುರಿನಲ್ಲಿ ಹೊರದೊಬ್ಬಿದ ಅನ್ಯಜನಾಂಗಗಳ ದೇಶವನ್ನು ವಶಪಡಿಸಿಕೊಂಡಾಗ ತಮ್ಮೊಂದಿಗೆ ಅದನ್ನೂ ತಂದರು. ದಾವೀದನ ದಿನಗಳ ವರೆಗೂ ಅದು ಅಲ್ಲಿಯೇ ಉಳಿಯಿತು. 46  ಅವನಿಗೆ ದೇವರ ಅನುಗ್ರಹವಿತ್ತು ಮತ್ತು ಅವನು ಯಾಕೋಬನ ದೇವರಿಗೆ ನಿವಾಸ​ಸ್ಥಾನವನ್ನು ಒದಗಿಸುವ ಸುಯೋಗವನ್ನು ದಯಪಾಲಿಸುವಂತೆ ಕೇಳಿಕೊಂಡನು. 47  ಆದರೆ, ಸೊಲೊಮೋನನು ಆತನಿಗಾಗಿ ಮನೆಯನ್ನು ಕಟ್ಟಿದನು. 48  ಆದರೂ ಮಹೋನ್ನತನು ಕೈಯಿಂದ ಕಟ್ಟಿದ ಮನೆಗಳಲ್ಲಿ ವಾಸಮಾಡುವುದಿಲ್ಲ; ಪ್ರವಾದಿಯ ಮಾತಿನಂತೆ, 49  ‘ಸ್ವರ್ಗವು ನನ್ನ ಸಿಂಹಾಸನ ಭೂಮಿಯು ನನ್ನ ಪಾದಪೀಠ. ನೀವು ನನಗೆ ಎಂಥ ಮನೆಯನ್ನು ಕಟ್ಟಿಕೊಡುವಿರಿ? ಅಥವಾ ನನ್ನ ​ವಿಶ್ರಾಂತಿಗೆ ತಕ್ಕ ಸ್ಥಳವು ಯಾವುದು? 50  ನನ್ನ ಕೈಯೇ ಇದನ್ನೆಲ್ಲ ಮಾಡಿತಲ್ಲವೆ? ಎಂದು ಯೆಹೋವನು ಹೇಳುತ್ತಾನೆ.’ 51  “ಮೊಂಡರೇ, ಹೃದಯಗಳ ಮತ್ತು ಕಿವಿಗಳ ಸುನ್ನತಿಯಿಲ್ಲದವರೇ, ನೀವು ಯಾವಾಗಲೂ ನಿಮ್ಮ ಪೂರ್ವಜರು ಮಾಡಿದಂತೆಯೇ ಪವಿತ್ರಾತ್ಮವನ್ನು ಪ್ರತಿರೋಧಿಸುವವರಾಗಿದ್ದೀರಿ. 52  ನಿಮ್ಮ ಪೂರ್ವಜರು ಪ್ರವಾದಿಗಳಲ್ಲಿ ಯಾರನ್ನು ಹಿಂಸೆಪಡಿಸದೆ ಬಿಟ್ಟರು? ಒಬ್ಬ ನೀತಿವಂತನ ​ಆಗಮನದ ಕುರಿತು ಮುಂದಾಗಿಯೇ ಪ್ರಕಟಿಸಿದವರನ್ನು ಅವರು ಕೊಂದುಹಾಕಿದರು; ಈಗ ನೀವು ಅವನನ್ನು ಮೋಸದಿಂದ ಹಿಡಿದುಕೊಟ್ಟವರೂ ಕೊಂದವರೂ ಆಗಿದ್ದೀರಿ. 53  ದೇವದೂತರಿಂದ ರವಾನಿಸಲ್ಪಟ್ಟ ಧರ್ಮ​ಶಾಸ್ತ್ರವನ್ನು ನೀವು ಸ್ವೀಕರಿಸಿದಿರಾದರೂ ಅದಕ್ಕನುಸಾರ ನಡೆಯುತ್ತಿಲ್ಲ.” 54  ಈ ವಿಷಯಗಳನ್ನು ಕೇಳಿ ಅವರು ಬಹಳ ಕೋಪಗೊಂಡು ಅವನನ್ನು ನೋಡಿ ಹಲ್ಲುಕಡಿಯತೊಡಗಿದರು. 55  ಆದರೆ ಅವನು ಪವಿತ್ರಾತ್ಮಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿ ನೋಡಿದಾಗ ದೇವರ ಮಹಿಮೆಯನ್ನೂ ದೇವರ ಬಲಗಡೆಯಲ್ಲಿ ಯೇಸು ನಿಂತಿರುವುದನ್ನೂ ಕಂಡನು. 56  ಆಗ ಅವನು, “ಅಗೋ, ಆಕಾಶವು ತೆರೆಯಲ್ಪಟ್ಟಿರುವುದನ್ನೂ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ” ಎಂದನು. 57  ಈ ಮಾತಿಗೆ ಅವರು ಗಟ್ಟಿಯಾಗಿ ಆರ್ಭಟಿಸುತ್ತಾ ತಮ್ಮ ಕೈಗಳಿಂದ ಕಿವಿಗಳನ್ನು ಮುಚ್ಚಿಕೊಳ್ಳುತ್ತಾ ಒಟ್ಟಾಗಿ ಅವನ ಮೇಲೆ ಎರಗಿದರು. 58  ಅವನನ್ನು ಊರ ಹೊರಗೆ ದೊಬ್ಬಿ ಅವನ ಮೇಲೆ ಕಲ್ಲೆಸೆಯತೊಡಗಿದರು ಮತ್ತು ಪ್ರತ್ಯಕ್ಷ ಸಾಕ್ಷಿಗಳು ತಮ್ಮ ಮೇಲಂಗಿಗಳನ್ನು ಸೌಲನೆಂಬ ​ಹೆಸರಿನ ಒಬ್ಬ ಯೌವನಸ್ಥನ ಕಾಲುಗಳ ಬಳಿಯಲ್ಲಿ ಇಟ್ಟರು. 59  ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇದ್ದಾಗ ಅವನು, “ಕರ್ತನಾದ ಯೇಸುವೇ, ನನ್ನ ಜೀವಶಕ್ತಿಯನ್ನು ಸ್ವೀಕರಿಸು” ಎಂದು ಪ್ರಾರ್ಥಿಸಿದನು. 60  ಬಳಿಕ ಮೊಣಕಾಲೂರಿ, “ಯೆಹೋವನೇ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡ” ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು. ಇದನ್ನು ಹೇಳಿದ ಬಳಿಕ ಮರಣದಲ್ಲಿ ನಿದ್ರೆಹೋದನು.

ಪಾದಟಿಪ್ಪಣಿ