ಅ. ಕಾರ್ಯಗಳು 27:1-44

27  ನಾವು ಸಮುದ್ರಪ್ರಯಾಣ ಮಾಡಿ ಇಟಲಿಗೆ ಹೋಗಬೇಕೆಂದು ತೀರ್ಮಾನವಾದ ಬಳಿಕ ಅವರು ಪೌಲನನ್ನೂ ಇತರ ಕೆಲವು ಸೆರೆವಾಸಿಗಳನ್ನೂ ಅಗಸ್ಟಸ್‌ ಚಕ್ರವರ್ತಿಯ ದಳಕ್ಕೆ ಸೇರಿದ ಯೂಲ್ಯನೆಂಬ ಶತಾಧಿಪತಿಗೆ ಒಪ್ಪಿಸಿದರು.  ಆಗ ಅದ್ರಮಿತ್ತಿಯದಿಂದ ಬಂದು ಏಷ್ಯಾ ಪ್ರಾಂತದ ಕರಾವಳಿಯ ಉದ್ದಕ್ಕೂ ಇರುವ ಸ್ಥಳಗಳಿಗೆ ಹೋಗುವ ಹಡಗನ್ನು ಹತ್ತಿ ಪ್ರಯಾಣವನ್ನು ಆರಂಭಿಸಿದೆವು; ಥೆಸಲೊನೀಕದಿಂದ ಬಂದ ಮಕೆದೋನ್ಯದವನಾದ ಅರಿಸ್ತಾರ್ಕನು ನಮ್ಮೊಂದಿಗಿದ್ದನು.  ಮರುದಿನ ನಾವು ಸೀದೋನಿಗೆ ತಲಪಿದೆವು; ಪೌಲನೊಂದಿಗೆ ಯೂಲ್ಯನು ಮಾನವ ದಯೆಯಿಂದ ವರ್ತಿಸಿದನು ಮತ್ತು ಅವನು ತನ್ನ ಸ್ನೇಹಿತರ ಬಳಿಗೆ ಹೋಗಿ ಅವರಿಂದ ಪರಾಮರಿಕೆಯನ್ನು ಪಡೆಯುವಂತೆ ಅನುಮತಿಸಿದನು.  ಅಲ್ಲಿಂದ ಹೊರಟು ಎದುರುಗಾಳಿ ಬೀಸುತ್ತಿದ್ದುದರಿಂದ ನಾವು ಸೈಪ್ರಸ್‌ ದ್ವೀಪದ ಮರೆಯಲ್ಲಿ ಪ್ರಯಾಣವನ್ನು ಮುಂದುವರಿಸಿದೆವು;  ಕಿಲಿಕ್ಯ ಮತ್ತು ಪಂಫುಲ್ಯದ ಉದ್ದಕ್ಕೂ ಇರುವ ವಿಶಾಲ ಸಮುದ್ರವನ್ನು ದಾಟಿ ಲುಕೀಯ ಸೀಮೆಯಲ್ಲಿರುವ ಮುರ ಎಂಬ ಸ್ಥಳದ ಬಂದರಿಗೆ ಬಂದೆವು.  ಅಲ್ಲಿ ಅಲೆಕ್ಸಾಂದ್ರಿಯದಿಂದ ಇಟಲಿಗೆ ಹೋಗುತ್ತಿದ್ದ ಒಂದು ಹಡಗನ್ನು ಶತಾಧಿಪತಿಯು ಕಂಡು ನಮ್ಮನ್ನು ಅದಕ್ಕೆ ಹತ್ತಿಸಿದನು.  ಅನೇಕ ದಿವಸಗಳ ವರೆಗೆ ನಿಧಾನ​ವಾಗಿ ಸಾಗುತ್ತಾ ಕಷ್ಟದಿಂದ ಕ್ನೀದಕ್ಕೆ ತಲಪಿದೆವು; ಗಾಳಿಯು ರಭಸವಾಗಿ ಬೀಸು​ತ್ತಿದ್ದ ಕಾರಣ ನಾವು ಸಲ್ಮೋನೆಯನ್ನು ದಾಟಿ ಕ್ರೇತದ್ವೀಪದ ಮರೆಯಲ್ಲಿ ಪ್ರಯಾಣಿಸಿ  ಪ್ರಯಾಸದಿಂದ ಆ ದ್ವೀಪದ ಕರಾವಳಿಯುದ್ದಕ್ಕೂ ಸಾಗಿ ಚಂದರೇವುಗಳು ಎಂಬ ಸ್ಥಳಕ್ಕೆ ಬಂದೆವು; ಅದರ ಸಮೀಪದಲ್ಲೇ ಲಸಾಯವೆಂಬ ​ಪಟ್ಟಣವಿತ್ತು.  ಹೀಗೆ ಸಾಕಷ್ಟು ಕಾಲ ಕಳೆದುಹೋಗಿತ್ತು ಮತ್ತು ದೋಷಪರಿಹಾರಕ ದಿನದ ಉಪವಾಸವು ಸಹ ಮುಗಿದಿತ್ತು. ಈ ಸಮಯದಲ್ಲಿ ಸಮುದ್ರಪ್ರಯಾಣವು ಅಪಾಯಕರವಾಗಿತ್ತು. ಆದುದರಿಂದ ಪೌಲನು 10  ಅವರಿಗೆ, “ಜನರೇ, ಈ ಸಮುದ್ರ​ಪ್ರಯಾಣದಿಂದ ಸರಕಿಗೆ ಮತ್ತು ಹಡಗಿಗೆ ಮಾತ್ರವಲ್ಲ ನಮ್ಮ ಪ್ರಾಣಗಳಿಗೂ ಹಾನಿಯೂ ಭಾರಿ ನಷ್ಟವೂ ಸಂಭವಿಸಲಿದೆ ಎಂದು ನನಗನಿಸುತ್ತದೆ” ಎಂದು ಸಲಹೆ ನೀಡಿದನು. 11  ಆದರೆ ಶತಾಧಿಪತಿಯು ಪೌಲನು ಹೇಳಿದ ಮಾತುಗಳಿಗೆ ಕಿವಿಗೊಡದೆ ಹಡಗನ್ನು ನಡೆಸುವವನಿಗೂ ಅದರ ಯಜಮಾನನಿಗೂ ಕಿವಿ​ಗೊಟ್ಟನು. 12  ಆ ಬಂದರು ಚಳಿಗಾಲವನ್ನು ಕಳೆಯುವುದಕ್ಕೆ ಅನುಕೂಲವಲ್ಲದ್ದರಿಂದ ಅಲ್ಲಿಂದ ಪ್ರಯಾಣವನ್ನು ಮುಂದುವರಿಸಿ ಹೇಗಾದರೂ ಕ್ರೇತದ ಬಂದರಾದ ಪೊಯಿನಿಕ್ಸಕ್ಕೆ ಹೋಗಿ ಅಲ್ಲೇ ಚಳಿಗಾಲವನ್ನು ಕಳೆಯಬೇಕೆಂದು ಹೆಚ್ಚಿನವರು ಸಲಹೆ ನೀಡಿದರು. ಇದು ಈಶಾನ್ಯ ಮತ್ತು ಆಗ್ನೇಯ ದಿಕ್ಕಿಗೆ ಅಭಿಮುಖವಾಗಿದೆ. 13  ಇದಲ್ಲದೆ ದಕ್ಷಿಣದ ಗಾಳಿಯು ಮೆಲ್ಲಗೆ ಬೀಸಿದಾಗ ತಾವು ಉದ್ದೇಶಿಸಿದ್ದು ಕೈಗೂಡಿತು ಎಂದು ಭಾವಿಸಿ ಅವರು ​ಲಂಗರನ್ನು ಎತ್ತಿ ಕ್ರೇತದ್ವೀಪದ ಉದ್ದಕ್ಕೂ ತೀರದ ಪಕ್ಕದಲ್ಲೇ ಸಾಗಿದರು. 14  ಆದರೆ ಸ್ವಲ್ಪ ಹೊತ್ತಿನ ನಂತರ ಈಶಾನ್ಯವಾಯು ಎಂಬ ಪ್ರಚಂಡ ಗಾಳಿಯು ಬೀಸಲಾರಂಭಿಸಿತು. 15  ಹಡಗು ಗಾಳಿಗೆ ಸಿಕ್ಕಿಕೊಂಡು ಗಾಳಿಗೆದುರಾಗಿ ನಿಲ್ಲಲಾರದೆ ಹೋದುದರಿಂದ ಅದನ್ನು ಎದುರಿಸದೆ, ನೂಕಿಕೊಂಡು ಹೋಗುವಂತೆ ಬಿಟ್ಟೆವು. 16  ನಾವು ಕೌಡ ಎಂಬ ಒಂದು ಚಿಕ್ಕ ದ್ವೀಪದ ಮರೆಯಲ್ಲಿ ಹೋಗುತ್ತಿದ್ದಾಗ ಹಡಗಿನ ಹಿಂಭಾಗದಲ್ಲಿದ್ದ ಕಿರುದೋಣಿಯನ್ನು ಭದ್ರಪಡಿಸಿ​ಕೊಳ್ಳುವುದು ನಮಗೆ ಕಷ್ಟಕರವಾಯಿತು. 17  ಅದನ್ನು ಮೇಲಕ್ಕೆತ್ತಿದ ಬಳಿಕ ಅವರು ಹಗ್ಗಗಳನ್ನು ಉಪಯೋಗಿಸಿ ಹಡಗಿನ ಕೆಳಭಾಗವನ್ನು ಭದ್ರಪಡಿಸಿದರು; ಹಡಗು ಸುರ್ತಿಸ್‌ ಎಂಬ ಉಸುಬಿನಲ್ಲಿ ಸಿಕ್ಕಿಕೊಳ್ಳಬಹುದೆಂದು ಭಯಪಟ್ಟು ಅವರು ಹಾಯಿಯನ್ನು ಕೆಳಗಿಳಿಸಿ ಗಾಳಿಯು ಬೀಸುತ್ತಿದ್ದ ಕಡೆಗೆ ಅದು ತೇಲುವಂತೆ ಬಿಟ್ಟರು. 18  ಆದರೆ ಬಿರುಗಾಳಿಯು ನಮ್ಮನ್ನು ತುಂಬ ಹೊಯ್ದಾಡಿಸಿದ್ದರಿಂದ ಮರುದಿನ ಅವರು ಸರಕನ್ನು ಎಸೆದು ಹಡಗನ್ನು ಹಗುರ​ಗೊಳಿಸಿದರು. 19  ಮೂರನೆಯ ದಿನ ಅವರು ತಮ್ಮ ಕೈಗಳಿಂದಲೇ ಹಡಗಿನ ಕೂವೆಮರವನ್ನು ಎತ್ತಿ ಹೊರಗೆ ಹಾಕಿದರು. 20  ಅನೇಕ ದಿವಸಗಳ ವರೆಗೆ ಸೂರ್ಯನಾಗಲಿ ನಕ್ಷತ್ರಗಳಾಗಲಿ ಕಾಣದೆ ದೊಡ್ಡ ಬಿರುಗಾಳಿಯು ಬೀಸುತ್ತಲೇ ಇದ್ದಾಗ ನಾವು ಪಾರಾಗಿ ಉಳಿಯುವ ಎಲ್ಲ ನಿರೀಕ್ಷೆಯು ಕುಂದಿಹೋಗತೊಡಗಿತು. 21  ಬಹಳ ದಿವಸಗಳಿಂದ ಅವರು ಆಹಾರವನ್ನು ಸೇವಿಸದೇ ಇದ್ದುದರಿಂದ ಪೌಲನು ಅವರ ಮಧ್ಯೆ ಎದ್ದುನಿಂತು, “ಜನರೇ, ನೀವು ನನ್ನ ಬುದ್ಧಿವಾದಕ್ಕೆ ಕಿವಿಗೊಟ್ಟು ಕ್ರೇತ​ದ್ವೀಪದಿಂದ ಪ್ರಯಾಣವನ್ನು ಮುಂದುವರಿಸದೇ ಇರುತ್ತಿದ್ದರೆ ಈ ಹಾನಿಯನ್ನೂ ನಷ್ಟವನ್ನೂ ತಪ್ಪಿಸಬಹುದಿತ್ತು. 22  ಆದರೆ, ಈಗಲೂ ನೀವು ಧೈರ್ಯದಿಂದಿರುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ; ಏಕೆಂದರೆ ಹಡಗು ಮಾತ್ರ ನಷ್ಟವಾಗುವುದೇ ಹೊರತು ನಿಮ್ಮಲ್ಲಿ ಯಾರ ಜೀವವೂ ನಷ್ಟವಾಗುವುದಿಲ್ಲ. 23  ನಾನು ಯಾರಿಗೆ ಸೇರಿದ್ದೇನೋ ಮತ್ತು ಯಾರಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದೇನೋ ಆ ದೇವರ ದೂತನೊಬ್ಬನು ಕಳೆದ ರಾತ್ರಿ ನನ್ನ ಹತ್ತಿರ ಬಂದು ನಿಂತು, 24  ‘ಪೌಲನೇ ಭಯಪಡಬೇಡ. ನೀನು ಕೈಸರನ ಮುಂದೆ ನಿಲ್ಲಬೇಕು; ನಿನ್ನೊಂದಿಗೆ ಪ್ರಯಾಣಿಸುತ್ತಿರುವವರೆಲ್ಲರ ಪ್ರಾಣವನ್ನು ದೇವರು ನಿನ್ನಿಂದಾಗಿಯೇ ಉಳಿಸಿದ್ದಾನೆ’ ಎಂದು ಹೇಳಿದನು. 25  ಆದುದರಿಂದ ಜನರೇ ಧೈರ್ಯದಿಂದಿರಿ; ನನಗೆ ಹೇಳಲ್ಪಟ್ಟ ಪ್ರಕಾರವೇ ಆಗುವುದೆಂದು ನಾನು ದೇವರನ್ನು ನಂಬುತ್ತೇನೆ. 26  ಆದರೆ ನಾವು ಯಾವುದೋ ಒಂದು ದ್ವೀಪದ ದಡವನ್ನು ತಾಕಬೇಕಾಗಿದೆ” ಎಂದನು. 27  ಹದಿನಾಲ್ಕನೆಯ ರಾತ್ರಿ ಬಂದಾಗ ನಾವು ಆದ್ರಿಯ ಸಮುದ್ರದಲ್ಲಿ ಅತ್ತಿತ್ತ ಹೊಯ್ದಾಡುತ್ತಿದ್ದಾಗ ಮಧ್ಯರಾತ್ರಿಯಲ್ಲಿ ನಾವಿಕರು ತಾವು ಯಾವುದೋ ಭೂಪ್ರದೇಶ​ವನ್ನು ಸಮೀಪಿಸುತ್ತಿದ್ದೇವೆ ಎಂದು ನೆನಸಿದರು. 28  ಅವರು ನೀರಿನ ಆಳವನ್ನು ಪರೀಕ್ಷಿಸಿದಾಗ ಅದು ನೂರಿಪ್ಪತ್ತು ಅಡಿಯಾಗಿದೆಯೆಂದು ಕಂಡುಕೊಂಡರು; ಇನ್ನೂ ಸ್ವಲ್ಪ ಮುಂದೆ ಸಾಗಿ ಅವರು ಪುನಃ ಆಳವನ್ನು ಪರೀಕ್ಷಿಸಿದಾಗ ಅದು ತೊಂಬತ್ತು ಅಡಿಯಷ್ಟಿದೆಯೆಂದು ಕಂಡುಕೊಂಡರು. 29  ಮತ್ತು ತಾವು ಎಲ್ಲಿಯಾದರೂ ಬಂಡೆಗಳ ಮೇಲೆ ಎಸೆಯಲ್ಪಡ​ಬಹುದೆಂಬ ಭಯದಿಂದ ಅವರು ಹಡಗಿನ ಹಿಂಭಾಗದಿಂದ ನಾಲ್ಕು ಲಂಗರುಗಳನ್ನು ಕೆಳಕ್ಕೆ ಬಿಟ್ಟು ಬೆಳಗಾಗಲೆಂದು ಹಾರೈಸತೊಡಗಿದರು. 30  ಆದರೆ ನಾವಿಕರು ಹಡಗಿನ ಮುಂಭಾಗದಿಂದ ಲಂಗರುಗಳನ್ನು ಕೆಳಗೆ ಇಳಿಸುವ ನೆವದಿಂದ ಕಿರುದೋಣಿ​ಯನ್ನು ಸಮುದ್ರಕ್ಕೆ ಇಳಿಸಿ ಹಡಗಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ 31  ಪೌಲನು ಶತಾಧಿಪತಿಗೂ ಸೈನಿಕರಿಗೂ, “ಈ ಜನರು ಹಡಗಿನಲ್ಲಿ ಉಳಿಯದಿದ್ದರೆ ನೀವು ಪಾರಾಗಲಾರಿರಿ” ಎಂದು ಹೇಳಿದನು. 32  ಆಗ ಸೈನಿಕರು ಕಿರುದೋಣಿಯ ಹಗ್ಗಗಳನ್ನು ಕತ್ತರಿಸಿ ಅದು ಬಿದ್ದುಹೋಗುವಂತೆ ಮಾಡಿದರು. 33  ಇನ್ನೇನು ಬೆಳಗಾಗಲಿಕ್ಕಿದ್ದಾಗ ಪೌಲನು ಸ್ವಲ್ಪ ಆಹಾರವನ್ನು ಸೇವಿಸುವಂತೆ ಎಲ್ಲರನ್ನೂ ಉತ್ತೇಜಿಸುತ್ತಾ, “ಇವತ್ತಿಗೆ ಹದಿನಾಲ್ಕು ದಿವಸಗಳಿಂದ ನೀವು ನಿದ್ದೆಗೆಟ್ಟು ಆಹಾರವನ್ನೇ ಸೇವಿಸದೆ ಇದ್ದೀರಿ. 34  ಆದುದರಿಂದ ನಿಮ್ಮ ಪ್ರಾಣರಕ್ಷಣೆಗಾಗಿ ಸ್ವಲ್ಪ ಆಹಾರವನ್ನು ಸೇವಿಸುವಂತೆ ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ; ಏಕೆಂದರೆ ನಿಮ್ಮಲ್ಲಿ ಒಬ್ಬರ ತಲೆಯಿಂದಲೂ ಒಂದು ಕೂದಲೂ ನಾಶವಾಗುವುದಿಲ್ಲ” ಎಂದು ಹೇಳಿದನು. 35  ಅವನು ಇದನ್ನು ಹೇಳಿದ ಬಳಿಕ ಒಂದು ರೊಟ್ಟಿಯನ್ನು ತೆಗೆದುಕೊಂಡು ಎಲ್ಲರ ಮುಂದೆ ದೇವರಿಗೆ ಸ್ತೋತ್ರಮಾಡಿ ಅದನ್ನು ಮುರಿದು ತಿನ್ನಲಾರಂಭಿಸಿದನು. 36  ಆಗ ​ಅವರೆಲ್ಲರೂ ಧೈರ್ಯಗೊಂಡು ತಾವೂ ಊಟಮಾಡಲಾರಂಭಿಸಿದರು. 37  ನಾವು ಆ ಹಡಗಿನಲ್ಲಿ ಒಟ್ಟು ಇನ್ನೂರ ಎಪ್ಪತ್ತಾರು ಮಂದಿ ಇದ್ದೆವು. 38  ಅವರು ಊಟಮಾಡಿ ತೃಪ್ತರಾದಾಗ ಹಡಗಿನಲ್ಲಿದ್ದ ಗೋದಿಯನ್ನು ಸಮುದ್ರಕ್ಕೆ ಎಸೆದು ಅದನ್ನು ಹಗುರ​ಗೊಳಿಸಿದರು. 39  ಬೆಳಗಾದಾಗ ಆ ಪ್ರದೇಶವನ್ನು ಅವರು ಗುರುತಿಸಲು ಸಾಧ್ಯವಾಗದಿದ್ದರೂ ಮರಳ ತೀರವಿದ್ದ ಒಂದು ಕೊಲ್ಲಿಯನ್ನು ಕಂಡು ಸಾಧ್ಯವಾದರೆ ಆ ತೀರದ ಮೇಲೆ ಹಡಗನ್ನು ಹತ್ತಿಸಬೇಕೆಂದು ನಿರ್ಧರಿಸಿದರು. 40  ಆದುದರಿಂದ ಲಂಗರುಗಳನ್ನು ಕಡಿದು ಅವುಗಳನ್ನು ಸಮುದ್ರದಲ್ಲಿ ಬೀಳುವಂತೆ ಮಾಡಿ ಚುಕ್ಕಾಣಿಗಳಿಗೆ ಕಟ್ಟಿದ ಹಗ್ಗಗಳನ್ನು ಸಡಿಲಿಸಿ ಮುಂಭಾಗದ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿದ ಬಳಿಕ ಹಡಗನ್ನು ಆ ತೀರದ ಕಡೆಗೆ ನಡೆಸಿದರು. 41  ಆದರೆ ಹಡಗು ಮಧ್ಯದಲ್ಲಿ ಮರಳದಿಬ್ಬಕ್ಕೆ ಅಪ್ಪಳಿಸಿತು ಮತ್ತು ಹಡಗಿನ ಮುಂಭಾಗವು ಸಿಕ್ಕಿಕೊಂಡು ಅಲ್ಲಾಡದೆ ನಿಂತಿತು; ಆದರೆ ಅದರ ಹಿಂಭಾಗವು ಒಡೆದು ತುಂಡುತುಂಡಾಯಿತು. 42  ಆಗ ಸೈನಿಕರು ಸೆರೆಯಾಳುಗಳಲ್ಲಿ ಯಾರೊಬ್ಬರೂ ಈಜಿ ತಪ್ಪಿಸಿಕೊಳ್ಳದಿರಲಿಕ್ಕಾಗಿ ಅವರನ್ನು ಕೊಲ್ಲಲು ನಿರ್ಧರಿಸಿದರು. 43  ಆದರೆ ಶತಾಧಿಪತಿಯು ಪೌಲನನ್ನು ಸುರಕ್ಷಿತವಾಗಿ ಕರೆದೊಯ್ಯಲು ಬಯಸಿದ್ದರಿಂದ ಅವರು ಹಾಗೆ ಮಾಡದಂತೆ ತಡೆದನು. ಮತ್ತು ಈಜಬಲ್ಲವರು ಮೊದಲು ಸಮುದ್ರಕ್ಕೆ ಹಾರಿ ತೀರವನ್ನು ತಲಪುವಂತೆಯೂ 44  ಉಳಿದವರಲ್ಲಿ ಕೆಲವರು ಮರದ ಹಲಗೆಗಳ ಮೇಲೆ ಇನ್ನು ಕೆಲವರು ಹಡಗಿನಲ್ಲಿನ ಕೆಲವು ವಸ್ತುಗಳ ಮೇಲೆ ಹೋಗುವಂತೆಯೂ ಆಜ್ಞಾಪಿಸಿದನು. ಹೀಗೆ ಎಲ್ಲರೂ ಸುರಕ್ಷಿತವಾಗಿ ತೀರವನ್ನು ಮುಟ್ಟಿದರು.

ಪಾದಟಿಪ್ಪಣಿ