ಅ. ಕಾರ್ಯಗಳು 23:1-35

23  ಪೌಲನು ಹಿರೀಸಭೆಯನ್ನು ದೃಢಸಂಕಲ್ಪದಿಂದ ನೋಡಿ, “ಜನರೇ, ಸಹೋದರರೇ, ಇಂದಿನ ವರೆಗೂ ನಾನು ದೇವರ ಮುಂದೆ ಪರಿಪೂರ್ಣವಾದ ಶುದ್ಧ ಮನಸ್ಸಾಕ್ಷಿಯಿಂದ ನಡೆದುಕೊಂಡಿದ್ದೇನೆ” ಎಂದು ಹೇಳಿದನು.  ಇದನ್ನು ಕೇಳಿಸಿ​ಕೊಂಡ ಮಹಾ ಯಾಜಕನಾದ ಅನನೀಯನು ಅವನ ಬಾಯಿಯ ಮೇಲೆ ಹೊಡೆ​ಯುವಂತೆ ಪಕ್ಕದಲ್ಲಿ ನಿಂತಿದ್ದವರಿಗೆ ಹೇಳಿದನು.  ಆಗ ಪೌಲನು ಅವನಿಗೆ, “ಎಲೈ ಸುಣ್ಣ ಹಚ್ಚಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯಲಿದ್ದಾನೆ. ನೀನು ಧರ್ಮಶಾಸ್ತ್ರಕ್ಕನುಸಾರ ನನಗೆ ನ್ಯಾಯ​ವಿಚಾರಣೆ ಮಾಡಲು ಕುಳಿತುಕೊಂಡು ಅದೇ ಸಮಯದಲ್ಲಿ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ನನ್ನನ್ನು ಹೊಡೆಯುವಂತೆ ಅಪ್ಪಣೆ ಕೊಡುತ್ತಿಯೊ?” ಎಂದು ಕೇಳಿದನು.  ಹತ್ತಿರ ನಿಂತಿದ್ದವರು, “ದೇವರ ಮಹಾ ಯಾಜಕನನ್ನು ನೀನು ದೂಷಿಸುತ್ತೀಯೊ?” ಎಂದು ಕೇಳಿದರು.  ಅದಕ್ಕೆ ಪೌಲನು, “ಸಹೋದರರೇ, ಅವನು ಮಹಾ ಯಾಜಕನೆಂದು ನನಗೆ ತಿಳಿದಿರಲಿಲ್ಲ. ಏಕೆಂದರೆ ‘ನಿಮ್ಮ ಜನರ ಅಧಿಪತಿಯ ಕುರಿತು ನೀವು ಹಾನಿಕರವಾಗಿ ಮಾತಾಡಬಾರದು’ ಎಂದು ಗ್ರಂಥದಲ್ಲಿ ಬರೆದಿದೆ” ಎಂದನು.  ಸಭೆಯಲ್ಲಿ ಒಂದು ಭಾಗ ಸದ್ದು​ಕಾಯರೂ ಇನ್ನೊಂದು ಭಾಗ ಫರಿಸಾಯರೂ ಇದ್ದುದನ್ನು ಪೌಲನು ಗಮನಿಸಿ, “ಜನರೇ, ಸಹೋದರರೇ, ನಾನೊಬ್ಬ ಫರಿಸಾಯನು, ಫರಿಸಾಯರ ಮಗನು. ಮೃತರ ಪುನರುತ್ಥಾನದ ನಿರೀಕ್ಷೆಯ ವಿಷಯ​ದಲ್ಲಿ ನನಗೆ ನ್ಯಾಯವಿಚಾರಣೆಯಾಗು​ತ್ತಿದೆ” ಎಂದು ಹಿರೀಸಭೆಯಲ್ಲಿ ಕೂಗಿಹೇಳಿದನು.  ಅವನು ಹೀಗೆ ಹೇಳಿದ್ದ​ರಿಂದ ಫರಿಸಾಯರ ಮತ್ತು ಸದ್ದುಕಾಯರ ಮಧ್ಯೆ ಭಿನ್ನಾಭಿಪ್ರಾಯ ಉಂಟಾ​ಯಿತು ಮತ್ತು ಜನಸಮೂಹವು ಇಬ್ಭಾಗವಾಯಿತು.  ಏಕೆಂದರೆ ಪುನರುತ್ಥಾನವಾಗಲಿ ದೇವದೂತನಾಗಲಿ ಆತ್ಮಜೀವಿಯಾಗಲಿ ಇಲ್ಲ ಎಂದು ಸದ್ದುಕಾಯರು ಹೇಳುವಾಗ ಇವೆಲ್ಲವೂ ಇವೆ ಎಂದು ಫರಿಸಾಯರು ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ.  ಆಗ ಅಲ್ಲಿ ದೊಡ್ಡ ಕೂಗಾಟ ಉಂಟಾಯಿತು ಮತ್ತು ಫರಿಸಾಯರ ಪಕ್ಷದವರಾದ ಶಾಸ್ತ್ರಿಗಳಲ್ಲಿ ಕೆಲವರು ಎದ್ದು, “ಈ ಮನುಷ್ಯನಲ್ಲಿ ನಮಗೆ ಯಾವುದೇ ತಪ್ಪು ಕಾಣುವುದಿಲ್ಲ; ಒಬ್ಬ ಆತ್ಮಜೀವಿಯಾಗಲಿ ದೇವದೂತನಾಗಲಿ ಇವನೊಂದಿಗೆ ಮಾತಾಡಿರುವುದಾದರೆ,​—⁠” ಎಂದು ಹೇಳಿ ತೀವ್ರವಾಗಿ ವಾಗ್ವಾದ ಮಾಡಲಾರಂಭಿಸಿದರು. 10  ಭಿನ್ನಾಭಿಪ್ರಾಯವು ಇನ್ನೂ ಹೆಚ್ಚಾದಾಗ, ಅವರು ಪೌಲನನ್ನು ಎಳೆದಾಡಿ ತುಂಡುತುಂಡು ಮಾಡಬಹುದೆಂದು ಸಹಸ್ರಾಧಿಪತಿಯು ಭಯಪಟ್ಟು ಕೆಳಗಿಳಿದು ಹೋಗಿ ಅವನನ್ನು ಜನರ ಮಧ್ಯದಿಂದ ಹಿಡಿದು ಸೈನಿಕರ ಪಾಳೆಯದೊಳಗೆ ತರುವಂತೆ ಸೈನಿಕರ ದಳಕ್ಕೆ ಆಜ್ಞಾಪಿಸಿದನು. 11  ಆ ರಾತ್ರಿ ಕರ್ತನು ಪೌಲನ ಬಳಿಯಲ್ಲಿ ನಿಂತುಕೊಂಡು, “ಧೈರ್ಯದಿಂದಿರು! ನೀನು ಯೆರೂಸಲೇಮಿನಲ್ಲಿ ನನ್ನ ಕುರಿತು ಕೂಲಂಕಷವಾಗಿ ಸಾಕ್ಷಿಕೊಡುತ್ತಿರುವಂತೆಯೇ ರೋಮಿನಲ್ಲಿಯೂ ಸಾಕ್ಷಿಕೊಡಬೇಕು” ಎಂದು ಹೇಳಿದನು. 12  ಬೆಳಗಾದ ಮೇಲೆ ಯೆಹೂದ್ಯರು ಒಳಸಂಚು ಮಾಡಿ ಪೌಲನನ್ನು ಕೊಲ್ಲುವ ತನಕ ತಾವು ಅನ್ನಪಾನಗಳನ್ನು ತೆಗೆದುಕೊಳ್ಳುವಲ್ಲಿ ಶಾಪಾರ್ಹರು ಎಂದು ತಮ್ಮಲ್ಲೇ ಶಪಥಮಾಡಿಕೊಂಡರು. 13  ಈ ಪ್ರಮಾಣಬದ್ಧ ಒಳಸಂಚನ್ನು ಮಾಡಿದವರು ನಲವತ್ತಕ್ಕಿಂತಲೂ ಹೆಚ್ಚು ಮಂದಿ ಇದ್ದರು; 14  ಅವರು ಮುಖ್ಯ ಯಾಜಕರ ಮತ್ತು ಹಿರೀಪುರುಷರ ಬಳಿಗೆ ಹೋಗಿ, “ನಾವು ಪೌಲನನ್ನು ಕೊಲ್ಲುವ ತನಕ ಒಂದು ತುತ್ತು ಆಹಾರವನ್ನಾದರೂ ತಿನ್ನುವಲ್ಲಿ ಶಾಪಾರ್ಹರು ಎಂದು ವಿಧ್ಯುಕ್ತವಾಗಿ ಶಪಥವನ್ನು ಮಾಡಿದ್ದೇವೆ. 15  ಆದುದರಿಂದ ಅವನಿಗೆ ಸಂಬಂಧಪಟ್ಟ ವಿಷಯವನ್ನು ಹೆಚ್ಚು ನಿಷ್ಕೃಷ್ಟವಾಗಿ ತಿಳಿದುಕೊಳ್ಳಲು ಬಯಸುತ್ತೇವೆ ಎಂಬ ನೆವವನ್ನು ಕೊಟ್ಟು ಅವನನ್ನು ನಿಮ್ಮ ಬಳಿಗೆ ಕರೆತರುವಂತೆ ನೀವೂ ಹಿರೀಸಭೆಯವರೂ ಸಹಸ್ರಾಧಿ​ಪತಿಯನ್ನು ಕೇಳಿಕೊಳ್ಳಿರಿ. ಆದರೆ ಅವನು ಹತ್ತಿರ ಬರುವುದಕ್ಕೆ ಮುಂಚೆಯೇ ನಾವು ಅವನನ್ನು ಕೊಲ್ಲಲು ಸಿದ್ಧವಾಗಿರುವೆವು” ಎಂದು ಹೇಳಿದರು. 16  ಆದರೆ ಅವರು ಹೊಂಚುಹಾಕುತ್ತಿರುವುದನ್ನು ಪೌಲನ ಸಹೋದರಿಯ ಮಗನು ಕೇಳಿಸಿಕೊಂಡು ಸೈನಿಕರ ಪಾಳೆಯದೊಳಗೆ ಬಂದು ಪೌಲನಿಗೆ ಅದನ್ನು ವರದಿಮಾಡಿದನು. 17  ಆಗ ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ತನ್ನ ಬಳಿಗೆ ಕರೆಸಿ, “ಈ ಯೌವನಸ್ಥನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗು; ಇವನು ಅವನಿಗೆ ಏನನ್ನೋ ತಿಳಿಸ​ಬೇಕೆಂದಿದ್ದಾನೆ” ಎಂದು ಹೇಳಿದನು. 18  ಆದುದರಿಂದ ಆ ವ್ಯಕ್ತಿಯು ಅವನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿ, “ಸೆರೆವಾಸಿಯಾದ ಪೌಲನು ನನ್ನನ್ನು ಕರೆದು ಈ ಯೌವನಸ್ಥನನ್ನು ನಿನ್ನ ಬಳಿಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡನು; ಇವನು ನಿನಗೆ ಏನನ್ನೋ ತಿಳಿಸಬೇಕೆಂದಿದ್ದಾನೆ” ಎಂದು ಹೇಳಿದನು. 19  ಸಹಸ್ರಾಧಿಪತಿಯು ಅವನ ಕೈಹಿಡಿದು ಪಕ್ಕಕ್ಕೆ ಕರೆದುಕೊಂಡು ಹೋಗಿ, “ನೀನು ನನಗೆ ಏನನ್ನು ತಿಳಿಸಲು ಬಯಸುತ್ತೀ?” ಎಂದು ಖಾಸಗಿಯಾಗಿ ವಿಚಾರಿಸಲಾ​ರಂಭಿಸಿದನು. 20  ಅದಕ್ಕೆ ಅವನು, “ಪೌಲನಿಗೆ ಸಂಬಂಧಪಟ್ಟ ವಿಷಯವನ್ನು ಹೆಚ್ಚು ನಿಷ್ಕೃಷ್ಟವಾಗಿ ತಿಳಿದುಕೊಳ್ಳಲು ಬಯಸುತ್ತೇವೆ ಎಂಬ ನೆವವನ್ನು ಕೊಟ್ಟು ನೀನು ನಾಳೆ ಅವನನ್ನು ಹಿರೀಸಭೆಯ ಮುಂದೆ ಕರೆತರುವಂತೆ ನಿನ್ನನ್ನು ಕೇಳಿಕೊಳ್ಳಲು ಯೆಹೂದ್ಯರು ಒಪ್ಪಿಕೊಂಡಿದ್ದಾರೆ. 21  ಆದರೆ ಎಲ್ಲಕ್ಕಿಂತಲೂ ಮಿಗಿಲಾಗಿ, ಅವರು ನಿನ್ನನ್ನು ಒಡಂಬಡಿಸುವಂತೆ ಬಿಡಬೇಡ; ಏಕೆಂದರೆ ಅವನನ್ನು ಕೊಲ್ಲುವ ತನಕ ತಾವು ಅನ್ನಪಾನಗಳನ್ನು ತೆಗೆದುಕೊಂಡರೆ ಶಾಪಾರ್ಹರೆಂದು ನಲವತ್ತಕ್ಕಿಂತ ಹೆಚ್ಚು ಮಂದಿ ಶಪಥವನ್ನು ಮಾಡಿಕೊಂಡು ಅವನಿಗಾಗಿ ಹೊಂಚುಹಾಕುತ್ತಿದ್ದಾರೆ; ಅವರು ಈಗ ನಿನ್ನ ಅಪ್ಪಣೆಗಾಗಿ ಕಾಯುತ್ತಾ ಸಿದ್ಧರಾಗಿದ್ದಾರೆ” ಎಂದನು. 22  ಆಗ ಸಹಸ್ರಾಧಿ​ಪತಿಯು ಆ ಯೌವನಸ್ಥನಿಗೆ, “ಈ ವಿಷಯಗಳನ್ನು ನನಗೆ ತಿಳಿಸಿದ್ದೀ ಎಂಬುದನ್ನು ಬಾಯಿತಪ್ಪಿ ಯಾರಿಗೂ ಹೇಳಬೇಡ” ಎಂದು ಅಪ್ಪಣೆಕೊಟ್ಟು ಕಳುಹಿಸಿಬಿಟ್ಟನು. 23  ಆ ಮೇಲೆ ಅವನು ಶತಾಧಿಪತಿಗಳಲ್ಲಿ ಇಬ್ಬರನ್ನು ಕರೆಸಿ, “ರಾತ್ರಿ ಒಂಬತ್ತು ಗಂಟೆಗೆ ಕೈಸರೈಯಕ್ಕೆ ಹೋಗಲಿಕ್ಕಾಗಿ ಇನ್ನೂರು ಮಂದಿ ಸೈನಿಕರನ್ನೂ ಎಪ್ಪತ್ತು ಮಂದಿ ಕುದುರೆ ಸವಾರರನ್ನೂ ಇನ್ನೂರು ಮಂದಿ ಭಲ್ಲೆಯರನ್ನೂ ಸಿದ್ಧಪಡಿಸಿರಿ. 24  ಮತ್ತು ಕುದುರೆಗಳನ್ನು ಸಿದ್ಧ​ಪಡಿಸಿ ಪೌಲನನ್ನು ಹತ್ತಿಸಿ ರಾಜ್ಯಪಾಲನಾದ ಫೇಲಿಕ್ಸನ ಬಳಿಗೆ ಸುರಕ್ಷಿತವಾಗಿ ಕಳುಹಿಸಿರಿ” ಎಂದು ಹೇಳಿದನು. 25  ಇದಲ್ಲದೆ ಈ ರೀತಿಯ ಒಂದು ಪತ್ರವನ್ನು ಬರೆದುಕೊಟ್ಟನು: 26  “ಮಹಾಪ್ರಭುವಾದ ರಾಜ್ಯಪಾಲ ಫೇಲಿಕ್ಸನಿಗೆ ಕ್ಲೌದ್ಯ ಲೂಸ್ಯನು ಮಾಡುವ ವಂದನೆಗಳು! 27  ಯೆಹೂದ್ಯರು ಈ ಮನುಷ್ಯನನ್ನು ಹಿಡಿದು ಕೊಲ್ಲಬೇಕೆಂದಿದ್ದರು; ಆದರೆ ಇವನು ರೋಮ್‌ ರಾಜ್ಯದ ಪ್ರಜೆಯಾಗಿದ್ದಾನೆಂದು ನನಗೆ ತಿಳಿದುಬಂದ ಕಾರಣ ನಾನು ಸೈನಿಕರ ದಳದೊಂದಿಗೆ ಕೂಡಲೆ ಅಲ್ಲಿಗೆ ಹೋಗಿ ಇವನನ್ನು ಕಾಪಾಡಿದೆ. 28  ಅವರು ಇವನ ಮೇಲೆ ತಪ್ಪುಹೊರಿಸಲು ಕಾರಣವೇನೆಂಬುದನ್ನು ಖಚಿತಪಡಿಸಿಕೊಳ್ಳಲು ಬಯಸಿ ಇವನನ್ನು ಅವರ ಹಿರೀಸಭೆಗೆ ಕರೆದುಕೊಂಡು ಹೋದೆ. 29  ಅವರ ಧರ್ಮಶಾಸ್ತ್ರದ ಪ್ರಶ್ನೆಗಳ ವಿಷಯ​ದಲ್ಲಿ ಅವನ ಮೇಲೆ ತಪ್ಪುಹೊರಿಸಲಾಗಿತ್ತೇ ಹೊರತು ಮರಣದಂಡನೆಗಾಗಲಿ ಬೇಡಿಗಾಗಲಿ ಅರ್ಹವಾದ ಯಾವುದೇ ಅಪರಾಧವು ಅವನ ಮೇಲೆ ಹೊರಿಸಲ್ಪಟ್ಟಿರಲಿಲ್ಲ ಎಂಬುದು ನನಗೆ ತಿಳಿದುಬಂತು. 30  ಈ ಮನುಷ್ಯನಿಗೆ ವಿರುದ್ಧವಾಗಿ ಒಳಸಂಚು ನಡೆಯುತ್ತಿದೆ ಎಂಬುದು ನನಗೆ ಬಯಲುಮಾಡಲ್ಪಟ್ಟ ಕಾರಣ ತಕ್ಷಣವೇ ನಾನು ಇವನನ್ನು ನಿನ್ನ ಬಳಿಗೆ ಕಳುಹಿಸುತ್ತಿದ್ದೇನೆ; ಮತ್ತು ತಪ್ಪುಹೊರಿಸುವವರಿಗೆ ನಿನ್ನ ಮುಂದೆಯೇ ಅವನ ವಿರುದ್ಧವಾಗಿ ಮಾತಾಡುವಂತೆ ಅಪ್ಪಣೆ​ಕೊಡುತ್ತಿದ್ದೇನೆ.” 31  ಹೀಗೆ ಈ ಸೈನಿಕರು ಆಜ್ಞೆಯ ಪ್ರಕಾರವೇ ರಾತ್ರಿಯಲ್ಲಿ ಪೌಲನನ್ನು ಕರೆದು​ಕೊಂಡು ಅಂತಿಪತ್ರಿಗೆ ಹೋದರು. 32  ಮರುದಿನ ಅವರು ಕುದುರೆ ಸವಾರರನ್ನು ಅವನ ಜೊತೆಯಲ್ಲಿ ಹೋಗಲು ಬಿಟ್ಟು ತಾವು ಸೈನಿಕರ ಪಾಳೆಯಕ್ಕೆ ಹಿಂದಿರುಗಿದರು. 33  ಕುದುರೆ ಸವಾರರು ಕೈಸರೈಯಕ್ಕೆ ಹೋಗಿ ರಾಜ್ಯಪಾಲನಿಗೆ ಪತ್ರವನ್ನು ತಲಪಿಸಿ ಪೌಲನನ್ನೂ ಅವನ ಮುಂದೆ ನಿಲ್ಲಿಸಿದರು. 34  ಅವನು ಅದನ್ನು ಓದಿ ಪೌಲನು ಯಾವ ಪ್ರಾಂತದವನೆಂದು ವಿಚಾರಿಸಿ ಅವನು ಕಿಲಿಕ್ಯದವನೆಂದು ತಿಳಿದುಕೊಂಡನು. 35  “ನಿನ್ನ ಮೇಲೆ ತಪ್ಪುಹೊರಿಸಿದವರು ಬಂದ ಬಳಿಕ ನಾನು ನಿನ್ನ ಕುರಿತು ಕೂಲಂಕಷವಾಗಿ ವಿಚಾರಣೆಮಾಡುತ್ತೇನೆ” ಎಂದು ಹೇಳಿದನು. ಮತ್ತು ಅವನನ್ನು ಹೆರೋದನ ಅಂಗರಕ್ಷಕ ದಳದ ಅರಮನೆಯಲ್ಲಿಟ್ಟು ಕಾಯುವಂತೆ ಆಜ್ಞಾಪಿಸಿದನು.

ಪಾದಟಿಪ್ಪಣಿ