ಅ. ಕಾರ್ಯಗಳು 22:1-30

22  “ಜನರೇ, ಸಹೋದರರೇ ಮತ್ತು ತಂದೆಗಳೇ, ನೀವು ಈಗ ನಾನು ಮಾಡುವ ಪ್ರತಿವಾದವನ್ನು ಕೇಳಿಸಿಕೊಳ್ಳಿರಿ.”  (ಅವನು ತಮ್ಮೊಂದಿಗೆ ಹೀಬ್ರು ಭಾಷೆಯಲ್ಲಿ ಮಾತಾಡುತ್ತಿರುವುದನ್ನು ಕೇಳಿಸಿಕೊಂಡಾಗ ಅವರು ಇನ್ನಷ್ಟು ಮೌನವಾದರು. ಆಗ ಅವನು ಹೇಳಿದ್ದು:)  “ನಾನೊಬ್ಬ ಯೆಹೂದ್ಯನು, ಕಿಲಿಕ್ಯದ ತಾರ್ಸದಲ್ಲಿ ಹುಟ್ಟಿದವನು, ಆದರೆ ಇದೇ ಪಟ್ಟಣದಲ್ಲಿ ಗಮಲಿಯೇಲನ ಪಾದಸನ್ನಿಧಿಯಲ್ಲಿ ಶಿಕ್ಷಣವನ್ನು ಪಡೆದು ನಮ್ಮ ಪೂರ್ವಜರ ಧರ್ಮಶಾಸ್ತ್ರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬೋಧಿಸಲ್ಪಟ್ಟವನು; ಇಂದು ನೀವೆಲ್ಲರೂ ದೇವರಿಗಾಗಿ ತೋರಿಸುವ ಇದೇ ಹುರುಪನ್ನು ತೋರಿಸಿದವನು.  ಈ ‘ಮಾರ್ಗಕ್ಕೆ’ ಸೇರಿದವರನ್ನು ನಾನು ಸಾಯಿಸುವಷ್ಟು ಹಿಂಸೆಪಡಿಸುತ್ತಿದ್ದೆ, ಪುರುಷರನ್ನೂ ಸ್ತ್ರೀಯರನ್ನೂ ಹಿಡಿದು ಸೆರೆಮನೆಗೆ ಹಾಕಿಸುತ್ತಿದ್ದೆ.  ಮಹಾ ಯಾಜಕನೂ ಹಿರೀಪುರುಷರ ಇಡೀ ಸಭೆಯವರೂ ಇದಕ್ಕೆ ಸಾಕ್ಷಿಗಳಾಗಿದ್ದಾರೆ. ನಾನು ಅವರಿಂದ ದಮಸ್ಕದಲ್ಲಿರುವ ಸಹೋದರರಿಗೆ ಪತ್ರಗಳನ್ನೂ ಪಡೆದುಕೊಂಡು, ಅಲ್ಲಿದ್ದವರನ್ನೂ ಹಿಡಿದು ಯೆರೂಸಲೇಮಿಗೆ ತಂದು ದಂಡಿಸಲಿಕ್ಕಾಗಿ ಅಲ್ಲಿಗೆ ಹೊರಟಿದ್ದೆ.  “ನಾನು ಪ್ರಯಾಣಿಸುತ್ತಾ ಸುಮಾರು ಮಧ್ಯಾಹ್ನದಷ್ಟಕ್ಕೆ ದಮಸ್ಕದ ಹತ್ತಿರ ಬಂದಾಗ ಇದ್ದಕ್ಕಿದ್ದಂತೆ ಆಕಾಶದಿಂದ ಒಂದು ಮಹಾ ಬೆಳಕು ನನ್ನ ಸುತ್ತಲೂ ಮಿಂಚಿತು.  ನಾನು ನೆಲಕ್ಕೆ ಬಿದ್ದಾಗ, ‘ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆ​ಪಡಿಸುತ್ತಿದ್ದೀ?’ ಎಂಬ ಒಂದು ವಾಣಿಯನ್ನು ಕೇಳಿಸಿಕೊಂಡೆ.  ಅದಕ್ಕೆ ​ಪ್ರತ್ಯುತ್ತರವಾಗಿ ನಾನು, ‘ಸ್ವಾಮಿ, ನೀನು ಯಾರು?’ ಎಂದು ಕೇಳಿದೆ. ಆಗ ಅವನು, ‘ನೀನು ಹಿಂಸೆಪಡಿಸುತ್ತಿರುವ ನಜರೇತಿನ ಯೇಸುವೇ ನಾನು’ ಎಂದನು.  ನನ್ನೊಂದಿಗಿದ್ದ ಪುರುಷರು ಬೆಳಕನ್ನು ಕಂಡರಾದರೂ ನನ್ನೊಂದಿಗೆ ಮಾತಾಡುತ್ತಿದ್ದವನ ಸ್ವರವನ್ನು ಕೇಳಿಸಿಕೊಳ್ಳಲಿಲ್ಲ. 10  ಆಗ ನಾನು, ‘ಕರ್ತನೇ ನಾನೇನು ಮಾಡಬೇಕು?’ ಎಂದು ಕೇಳಿದೆ. ಕರ್ತನು ನನಗೆ, ‘ನೀನೆದ್ದು ದಮಸ್ಕಕ್ಕೆ ಹೋಗು; ಮಾಡುವುದಕ್ಕೆ ನಿನಗೆ ನೇಮಿಸಿರುವ ಪ್ರತಿಯೊಂದು ವಿಷಯವು ಅಲ್ಲಿ ನಿನಗೆ ತಿಳಿಸಲ್ಪಡುವುದು’ ಎಂದು ಹೇಳಿದನು. 11  ಆ ಬೆಳಕಿನ ಪ್ರಭಾವದಿಂದಾಗಿ ನನಗೆ ಏನೂ ಕಾಣಿಸುತ್ತಿರಲಿಲ್ಲವಾದ್ದರಿಂದ ನನ್ನೊಂದಿಗಿದ್ದವರು ಕೈಹಿಡಿದು ನನ್ನನ್ನು ದಮಸ್ಕಕ್ಕೆ ಕರೆದುಕೊಂಡು​ಹೋದರು. 12  “ಅಲ್ಲಿ ಧರ್ಮಶಾಸ್ತ್ರಕ್ಕನುಸಾರ ನಡೆಯುವವನೂ ಆ ಸ್ಥಳದಲ್ಲಿ ವಾಸಿಸುತ್ತಿದ್ದು ಎಲ್ಲ ಯೆಹೂದ್ಯರಿಂದ ಒಳ್ಳೇ ಹೆಸರನ್ನು ಪಡೆದಿದ್ದವನೂ ಆಗಿದ್ದ ​ಅನನೀಯನೆಂಬ ಒಬ್ಬ ಮನುಷ್ಯನು 13  ನನ್ನ ಬಳಿಗೆ ಬಂದು ಪಕ್ಕದಲ್ಲಿ ನಿಂತು, ‘ಸಹೋದರನಾದ ಸೌಲನೇ, ನೀನು ಪುನಃ ದೃಷ್ಟಿಯನ್ನು ಪಡೆದುಕೋ!’ ಎಂದು ಹೇಳಿದನು. ಅದೇ ಗಳಿಗೆಯಲ್ಲಿ ನಾನು ದೃಷ್ಟಿಯನ್ನು ಪಡೆದು ಅವನನ್ನು ಕಣ್ಣೆತ್ತಿ ನೋಡಿದೆ. 14  ಆಗ ಅವನು ನನಗೆ, ‘ನಮ್ಮ ಪೂರ್ವಜರ ದೇವರು ತನ್ನ ಚಿತ್ತವನ್ನು ತಿಳಿದುಕೊಳ್ಳುವುದಕ್ಕೂ ನೀತಿವಂತನನ್ನು ನೋಡುವುದಕ್ಕೂ ಅವನ ಸ್ವರವನ್ನು ಕೇಳಿಸಿಕೊಳ್ಳುವುದಕ್ಕೂ ನಿನ್ನನ್ನು ಆರಿಸಿಕೊಂಡಿದ್ದಾನೆ; 15  ಏಕೆಂದರೆ ನೀನು ನೋಡಿರುವ ಮತ್ತು ಕೇಳಿರುವ ವಿಷಯಗಳ ಕುರಿತು ಎಲ್ಲ ಜನರ ಮುಂದೆ ಅವನಿಗಾಗಿ ಸಾಕ್ಷಿಯಾಗಿರಬೇಕು. 16  ಆದುದರಿಂದ, ಈಗ ನೀನೇಕೆ ತಡ​ಮಾಡುತ್ತಿದ್ದೀ? ಏಳು, ದೀಕ್ಷಾಸ್ನಾನ ಮಾಡಿಸಿಕೊ ಮತ್ತು ಅವನ ಹೆಸರನ್ನು ಹೇಳಿಕೊಳ್ಳುವ ಮೂಲಕ ನಿನ್ನ ಪಾಪಗಳನ್ನು ತೊಳೆದುಕೊ’ ಎಂದನು. 17  “ಆದರೆ ನಾನು ​ಯೆರೂಸಲೇಮಿಗೆ ಹಿಂದಿರುಗಿ ದೇವಾಲಯದಲ್ಲಿ ಪ್ರಾರ್ಥಿಸುತ್ತಿದ್ದಾಗ ಧ್ಯಾನಪರವಶನಾದೆನು. 18  ಆಗ ಕರ್ತನು ನನಗೆ, ‘ತ್ವರೆಪಡು, ತಕ್ಷಣವೇ ಯೆರೂಸಲೇಮಿನಿಂದ ಹೊರಟುಹೋಗು; ಏಕೆಂದರೆ ನನ್ನ ಕುರಿತಾದ ನಿನ್ನ ಸಾಕ್ಷಿಯನ್ನು ಅವರು ಅಂಗೀಕರಿಸುವುದಿಲ್ಲ’ ಎಂದು ಹೇಳುವುದನ್ನು ಕಂಡೆ. 19  ಅದಕ್ಕೆ ನಾನು, ‘ಕರ್ತನೇ, ನಾನು ಎಲ್ಲ ಸಭಾಮಂದಿರಗಳಲ್ಲಿ ನಿನ್ನ ಮೇಲೆ ನಂಬಿಕೆಯಿಟ್ಟವರನ್ನು ಸೆರೆಮನೆಯಲ್ಲಿ ಹಾಕಿಸಿ ಚಡಿಗಳಿಂದ ಹೊಡೆಸುತ್ತಾ ಇದ್ದೆನೆಂಬುದು ಅವರಿಗೆ ಚೆನ್ನಾಗಿ ತಿಳಿದಿದೆ; 20  ಮತ್ತು ನಿನ್ನ ಸಾಕ್ಷಿಯಾದ ಸ್ತೆಫನನ ರಕ್ತವು ಸುರಿಸಲ್ಪಡುತ್ತಿದ್ದಾಗ ನಾನು ಸಹ ಹತ್ತಿರ ನಿಂತುಕೊಂಡು ಅದನ್ನು ಸಮ್ಮತಿಸುತ್ತಾ ಅವನನ್ನು ಕೊಲ್ಲುತ್ತಿದ್ದವರ ಮೇಲಂಗಿಗಳನ್ನು ಕಾಯುತ್ತಿದ್ದೆ’ ಎಂದು ಹೇಳಿದೆ. 21  ಆದರೂ ಅವನು ನನಗೆ, ‘ನೀನು ಇಲ್ಲಿಂದ ಹೋಗು, ನಾನು ನಿನ್ನನ್ನು ದೂರದಲ್ಲಿರುವ ಅನ್ಯಜನಾಂಗಗಳ ಬಳಿಗೆ ಕಳುಹಿಸುತ್ತೇನೆ’ ಎಂದು ಹೇಳಿದನು.” 22  ಈ ಮಾತನ್ನು ಹೇಳುವ ತನಕ ಅವರು ಅವನಿಗೆ ಕಿವಿಗೊಡುತ್ತಾ ಇದ್ದರು; ಆ ಮೇಲೆ ಅವರು ತಮ್ಮ ಸ್ವರವೆತ್ತಿ, “ಇಂಥ ಮನುಷ್ಯನನ್ನು ಭೂಮಿಯಿಂದ ತೊಲಗಿಸಿರಿ, ಇವನು ಬದುಕಲು ಯೋಗ್ಯನಲ್ಲ!” ಎಂದು ಹೇಳಿದರು. 23  ಅವರು ಗಟ್ಟಿಯಾಗಿ ಕೂಗುತ್ತಾ ತಮ್ಮ ಮೇಲಂಗಿಗಳನ್ನು ಕಿತ್ತೆಸೆಯುತ್ತಾ ಗಾಳಿಯಲ್ಲಿ ಧೂಳೆಬ್ಬಿಸುತ್ತಾ ಇದ್ದುದರಿಂದ, 24  ಸಹಸ್ರಾಧಿಪತಿಯು ಅವನನ್ನು ಸೈನಿಕರ ಪಾಳೆಯದೊಳಗೆ ತರುವಂತೆ ಆಜ್ಞಾಪಿಸಿ, ಯಾವ ಕಾರಣಕ್ಕಾಗಿ ಜನರು ಈ ರೀತಿ ಅವನ ವಿರುದ್ಧ ಕೂಗಾಡುತ್ತಿದ್ದಾರೆ ಎಂಬುದನ್ನು ಪೂರ್ಣವಾಗಿ ತಿಳಿದುಕೊಳ್ಳಲಿಕ್ಕಾಗಿ ಅವನನ್ನು ಕೊರಡೆಗಳಿಂದ ಹೊಡೆದು ವಿಚಾರಿಸುವಂತೆ ಹೇಳಿದನು. 25  ಆದರೆ ಅವರು ಕೊರಡೆಗಳಿಂದ ಹೊಡೆಯಲಿಕ್ಕಾಗಿ ಅವನನ್ನು ಕಟ್ಟುತ್ತಿದ್ದಾಗ ಪೌಲನು ಅಲ್ಲಿ ನಿಂತಿದ್ದ ಶತಾಧಿಪತಿಗೆ, “ರೋಮ್‌ ರಾಜ್ಯದ ಪ್ರಜೆಯಾಗಿರುವ ಒಬ್ಬ ಮನುಷ್ಯನನ್ನು ನ್ಯಾಯವಿಚಾರಣೆಗೆ ಗುರಿಪಡಿಸದೆ ಕೊರಡೆಗಳಿಂದ ಹೊಡೆಸುವುದು ಕಾನೂನುಸಮ್ಮತವೊ?” ಎಂದು ಕೇಳಿದನು. 26  ಶತಾಧಿಪತಿಯು ಇದನ್ನು ಕೇಳಿಸಿ​ಕೊಂಡಾಗ ಸಹಸ್ರಾಧಿಪತಿಯ ಬಳಿಗೆ ಹೋಗಿ, “ನೀನು ಏನು ಮಾಡಬೇಕೆಂದಿದ್ದೀ? ಈ ಮನುಷ್ಯನು ರೋಮ್‌ ರಾಜ್ಯದ ಪ್ರಜೆಯಾಗಿದ್ದಾನೆ” ಎಂದು ವರದಿಮಾಡಿದನು. 27  ಆಗ ಸಹಸ್ರಾಧಿಪತಿಯು ಅವನ ಬಳಿಗೆ ಬಂದು ಅವನಿಗೆ, “ನೀನು ರೋಮ್‌ ರಾಜ್ಯದ ಪ್ರಜೆಯೊ? ನನಗೆ ಹೇಳು” ಎಂದಾಗ ಪೌಲನು “ಹೌದು” ಎಂದು ಉತ್ತರಿಸಿದನು. 28  ಆಗ ಸಹಸ್ರಾಧಿಪತಿಯು, “ನಾನು ಬಹಳಷ್ಟು ಹಣವನ್ನು ಕೊಟ್ಟು ಪ್ರಜೆತನದ ಹಕ್ಕುಗಳನ್ನು ಕೊಂಡುಕೊಂಡಿದ್ದೇನೆ” ಎಂದನು. ಅದಕ್ಕೆ ಪೌಲನು, “ನಾನಾದರೋ ಹುಟ್ಟಿನಿಂದಲೇ ಈ ಹಕ್ಕುಗಳನ್ನು ಹೊಂದಿದ್ದೇನೆ” ಎಂದು ಹೇಳಿದನು. 29  ಆದುದರಿಂದ, ಅವನನ್ನು ಹಿಂಸಿಸಿ ವಿಚಾರಿಸಲಿಕ್ಕಿದ್ದ ಪುರುಷರು ತಕ್ಷಣವೇ ಅವನನ್ನು ಬಿಟ್ಟರು; ಅವನು ರೋಮ್‌ ರಾಜ್ಯದ ಪ್ರಜೆಯಾಗಿದ್ದಾನೆ ಮತ್ತು ತಾನು ಅವನನ್ನು ಬಂಧಿಸಿದ್ದೇನೆ ಎಂಬುದನ್ನು ಖಾತ್ರಿಪಡಿಸಿಕೊಂಡ ಸಹಸ್ರಾಧಿಪತಿಯು ಭಯ​ಗೊಂಡನು. 30  ಹೀಗೆ ಮರುದಿನ, ಯೆಹೂದ್ಯರು ಅವನ ಮೇಲೆ ಏಕೆ ತಪ್ಪುಹೊರಿಸುತ್ತಿದ್ದಾರೆ ಎಂಬುದನ್ನು ಸಹಸ್ರಾಧಿಪತಿಯು ಖಚಿತವಾಗಿ ತಿಳಿಯಲು ಬಯಸಿದ್ದರಿಂದ, ಅವನ ಬೇಡಿಗಳನ್ನು ಕಳಚಿದನು ಮತ್ತು ಮುಖ್ಯ ಯಾಜಕರೂ ಹಿರೀಸಭೆಯವರೆಲ್ಲರೂ ಕೂಡಿಬರುವಂತೆ ಆಜ್ಞಾಪಿಸಿದನು. ಅವನು ಪೌಲನನ್ನು ಕರೆದು ತಂದು ಅವರ ನಡುವೆ ನಿಲ್ಲಿಸಿದನು.

ಪಾದಟಿಪ್ಪಣಿ