ಅ. ಕಾರ್ಯಗಳು 21:1-40

21  ನಾವು ಅವರನ್ನು ಕಷ್ಟದಿಂದ ಅಗಲಿ ಸಮುದ್ರಮಾರ್ಗವಾಗಿ ನೇರವಾಗಿ ಕೋಸ್‌ ದ್ವೀಪಕ್ಕೆ ಬಂದೆವು. ಮರುದಿನ ರೋದಕ್ಕೆ ಹೋಗಿ ಅಲ್ಲಿಂದ ಪತರಕ್ಕೆ ಬಂದೆವು.  ಅಲ್ಲಿ ನಾವು ಫೊಯಿನಿಕೆಗೆ ಹೋಗುವ ಹಡಗನ್ನು ಕಂಡಾಗ ಅದನ್ನು ಹತ್ತಿ ಪ್ರಯಾಣವನ್ನು ಮುಂದುವರಿಸಿದೆವು.  ಆದರೆ ಸೈಪ್ರಸ್‌ನ ಹತ್ತಿರ ಬಂದಾಗ ಅದರ ಎಡಗಡೆಯಿಂದ ಹಾದುಹೋಗಿ ಸಿರಿಯದ ಕಡೆಗೆ ಪ್ರಯಾಣಿಸಿ ತೂರ್‌ ಪಟ್ಟಣಕ್ಕೆ ಬಂದು ಇಳಿದೆವು; ಏಕೆಂದರೆ ಅಲ್ಲಿ ಹಡಗಿ​ನಲ್ಲಿರುವ ಸರಕನ್ನು ಇಳಿಸಬೇಕಾಗಿತ್ತು.  ಅಲ್ಲಿ ನಾವು ಶಿಷ್ಯರನ್ನು ಹುಡುಕಿ ಕಂಡುಕೊಂಡು ಏಳು ದಿವಸಗಳ ವರೆಗೆ ಅಲ್ಲೇ ಉಳಿದೆವು. ಆದರೆ ಪವಿತ್ರಾತ್ಮದ ಮೂಲಕ ಅವರು ಪೌಲನಿಗೆ ಯೆರೂಸಲೇಮಿಗೆ ​ಕಾಲಿಡದಂತೆ ಪದೇ ಪದೇ ಹೇಳಿದರು.  ಹೀಗೆ ಆ ದಿವಸಗಳು ಪೂರ್ಣಗೊಂಡು ನಾವು ನಮ್ಮ ಪ್ರಯಾಣವನ್ನು ಮುಂದುವರಿಸಲಿದ್ದಾಗ ಅವರೆಲ್ಲರೂ, ಸ್ತ್ರೀಯರು ಮತ್ತು ಮಕ್ಕಳ ಸಮೇತ, ಊರ ಹೊರಗಿನ ತನಕ ಬಂದು ನಮ್ಮನ್ನು ಸಾಗಕಳುಹಿಸಿದರು. ನಾವು ಸಮುದ್ರತೀರದಲ್ಲಿ ಮೊಣ​ಕಾಲೂರಿ ಪ್ರಾರ್ಥಿಸಿದೆವು  ಮತ್ತು ಒಬ್ಬರು ಇನ್ನೊಬ್ಬರಿಗೆ ವಿದಾಯ ಹೇಳಿದ ಬಳಿಕ ನಾವು ಹಡಗನ್ನು ಹತ್ತಲಾಗಿ ಅವರು ತಮ್ಮತಮ್ಮ ಮನೆಗಳಿಗೆ ಹಿಂದಿರುಗಿದರು.  ಹೀಗೆ ನಾವು ತೂರ್‌ ಪಟ್ಟಣದಿಂದ ಹೊರಟು ತೊಲೆಮಾಯಕ್ಕೆ ಬಂದಾಗ ಅಲ್ಲಿದ್ದ ಸಹೋದರರನ್ನು ವಂದಿಸಿ ಅವರೊಂದಿಗೆ ಒಂದು ದಿನ ಇದ್ದೆವು.  ಮರುದಿನ ನಾವು ಅಲ್ಲಿಂದ ಹೊರಟು ಕೈಸರೈಯಕ್ಕೆ ಬಂದು ಸೌವಾರ್ತಿಕನಾದ ಫಿಲಿಪ್ಪನ ಮನೆಯನ್ನು ಪ್ರವೇಶಿಸಿದೆವು; ಅವನು ಆ ಏಳು ಮಂದಿಯಲ್ಲಿ ಒಬ್ಬನಾಗಿದ್ದನು ಮತ್ತು ನಾವು ಅವನೊಂದಿಗೆ ಉಳಿದೆವು.  ಅವನಿಗೆ ಕನ್ಯೆಯರಾದ ನಾಲ್ಕು ಮಂದಿ ಹೆಣ್ಣುಮಕ್ಕಳಿದ್ದು ಅವರು ಪ್ರವಾದಿಸುವವರಾಗಿದ್ದರು. 10  ನಾವು ಅಲ್ಲಿ ಅನೇಕ ದಿವಸಗಳಿದ್ದಾಗ ಅಗಬನೆಂಬ ಒಬ್ಬ ಪ್ರವಾದಿಯು ಯೂದಾಯದಿಂದ 11  ನಮ್ಮ ಬಳಿಗೆ ಬಂದು ಪೌಲನ ನಡುಕಟ್ಟನ್ನು ತೆಗೆದುಕೊಂಡು ತನ್ನ ಕೈಕಾಲುಗಳನ್ನು ಕಟ್ಟಿಕೊಂಡು, “ ‘ಈ ನಡುಕಟ್ಟು ಯಾರಿಗೆ ಸೇರಿದೆಯೋ ಆ ಮನುಷ್ಯನನ್ನು ಯೆಹೂದ್ಯರು ಇದೇ ರೀತಿಯಲ್ಲಿ ಯೆರೂಸಲೇಮಿನಲ್ಲಿ ಕಟ್ಟಿ ಅನ್ಯ​ಜನರ ಕೈಗೆ ಒಪ್ಪಿಸುವರು’ ಎಂದು ಪವಿತ್ರಾತ್ಮವು ಹೇಳುತ್ತದೆ” ಅಂದನು. 12  ಇದನ್ನು ಕೇಳಿಸಿಕೊಂಡಾಗ ನಾವೂ ಆ ಸ್ಥಳದ ಜನರೂ ಯೆರೂಸಲೇಮಿಗೆ ಹೋಗದಿರುವಂತೆ ಪೌಲನನ್ನು ಬೇಡಿಕೊಳ್ಳಲಾರಂಭಿಸಿದೆವು. 13  ಆಗ ಅವನು, “ನೀವು ಅಳುತ್ತಾ ನನ್ನ ಹೃದಯವನ್ನು ಬಲಹೀನ​ಗೊಳಿಸುವುದೇಕೆ? ನಾನು ಕರ್ತನಾದ ಯೇಸು​ವಿನ ಹೆಸರಿಗಾಗಿ ಯೆರೂಸಲೇಮಿನಲ್ಲಿ ಬೇಡಿಹಾಕಿಸಿಕೊಳ್ಳಲು ಮಾತ್ರವಲ್ಲ ಸಾಯುವುದಕ್ಕೂ ಸಿದ್ಧನಾಗಿದ್ದೇನೆ ಎಂಬ ಖಾತ್ರಿ ನಿಮಗಿರಲಿ” ಎಂದು ಹೇಳಿದನು. 14  ನಮಗೆ ಅವನನ್ನು ತಡೆಯಲು ಅಸಾಧ್ಯವಾದಾಗ, “ಯೆಹೋವನ ಚಿತ್ತದಂತೆಯೇ ಆಗಲಿ” ಎಂದು ಹೇಳಿ ನಾವು ಸಮ್ಮತಿ​ಸಿದೆವು. 15  ಈ ದಿವಸಗಳ ಬಳಿಕ ನಾವು ಪ್ರಯಾಣಕ್ಕಾಗಿ ಸಿದ್ಧತೆಯನ್ನು ಮಾಡಿಕೊಂಡು ಯೆರೂಸಲೇಮಿಗೆ ಹೊರಟೆವು. 16  ಆದರೆ ನಾವು ಉಳುಕೊಳ್ಳಬೇಕಾಗಿದ್ದ ಸೈಪ್ರಸ್‌ ದ್ವೀಪದ ಮ್ನಾಸೋನ ಎಂಬ ಆದಿ ಶಿಷ್ಯನ ಮನೆಗೆ ನಮ್ಮನ್ನು ಬಿಡಲಿಕ್ಕಾಗಿ ಕೈಸರೈಯದ ಶಿಷ್ಯರಲ್ಲಿ ಕೆಲವರು ಸಹ ನಮ್ಮೊಂದಿಗೆ ಹೊರಟರು. 17  ನಾವು ಯೆರೂಸಲೇಮಿಗೆ ಬಂದಾಗ ಸಹೋದರರು ನಮ್ಮನ್ನು ಸಂತೋಷದಿಂದ ಬರಮಾಡಿಕೊಂಡರು. 18  ಮರುದಿನ ಪೌಲನು ನಮ್ಮೊಂದಿಗೆ ಯಾಕೋಬನ ಬಳಿಗೆ ಹೋದನು; ಎಲ್ಲ ಹಿರೀಪುರುಷರು ಅಲ್ಲಿ ಉಪಸ್ಥಿತರಿದ್ದರು. 19  ಅವನು ಅವರನ್ನು ವಂದಿಸಿ, ತನ್ನ ಶುಶ್ರೂಷೆಯ ಮೂಲಕ ಅನ್ಯಜನಾಂಗಗಳ ನಡುವೆ ದೇವರು ನಡಿಸಿದ ಕಾರ್ಯಗಳ ಕುರಿತಾದ ವೃತ್ತಾಂತವನ್ನು ಸವಿವರವಾಗಿ ತಿಳಿಸಲಾರಂಭಿಸಿದನು. 20  ಇದನ್ನು ಕೇಳಿಸಿಕೊಂಡ ಬಳಿಕ ಅವರು ದೇವರನ್ನು ಕೊಂಡಾಡತೊಡಗಿದರು; ಅನಂತರ ಅವರು ಅವನಿಗೆ, “ಸಹೋದರನೇ, ಯೆಹೂದ್ಯರಲ್ಲಿ ಸಾವಿರಾರು ಮಂದಿ ವಿಶ್ವಾಸಿಗಳಿದ್ದಾರೆ ಎಂಬುದು ನಿನಗೆ ತಿಳಿದದೆಯಲ್ಲಾ; ಅವರೆಲ್ಲರೂ ಧರ್ಮಶಾಸ್ತ್ರದ ವಿಷಯದಲ್ಲಿ ಹುರುಪುಳ್ಳವರಾಗಿದ್ದಾರೆ. 21  ಆದರೆ ಅನ್ಯಜನಾಂಗಗಳ ಮಧ್ಯೆಯಿರುವ ಎಲ್ಲ ಯೆಹೂದ್ಯರಿಗೆ, ಅವರು ತಮ್ಮ ಮಕ್ಕಳಿಗೆ ಸುನ್ನತಿ​ಮಾಡಿಸಬೇಕಾಗಿಲ್ಲ ಇಲ್ಲವೆ ಅವರು ಧಾರ್ಮಿಕ ಆಚಾರಗಳನ್ನು ಅನುಸರಿಸಿ ನಡೆಯಬೇಕಾಗಿಲ್ಲ ಎಂದು ಹೇಳುತ್ತಾ ನೀನು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧವಾದ ಭ್ರಷ್ಟತೆಯನ್ನು ಬೋಧಿಸುತ್ತಿದ್ದೀ ಎಂದು ನಿನ್ನ ವಿಷಯದಲ್ಲಿ ವದಂತಿಯನ್ನು ಕೇಳಿಸಿಕೊಂಡಿದ್ದಾರೆ. 22  ಇದರ ಕುರಿತು ಏನು ಮಾಡಬೇಕು? ನೀನು ಬಂದಿರುವ ​ವಿಷಯವು ಹೇಗೂ ಅವರ ಕಿವಿಗೆ ಬೀಳುವುದು. 23  ಆದುದರಿಂದ ನಾವು ಹೇಳುವಂತೆ ಮಾಡು. ಹರಕೆಹೊತ್ತಿರುವ ನಾಲ್ಕು ಮಂದಿ ಪುರುಷರು ನಮ್ಮ ಬಳಿ ಇದ್ದಾರೆ. 24  ಈ ಪುರುಷರನ್ನು ನಿನ್ನೊಂದಿಗೆ ಕರೆದುಕೊಂಡು ಹೋಗಿ ಅವರೊಂದಿಗೆ ನೀನೂ ವಿಧಿಬದ್ಧವಾಗಿ ಶುದ್ಧೀಕರಿಸಿಕೊಂಡು ಅವರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವ ಖರ್ಚುವೆಚ್ಚಗಳನ್ನು ನೀನೇ ನೋಡಿಕೊ. ಹೀಗೆ ಅವರೆಲ್ಲರೂ ನಿನ್ನ ಕುರಿತು ತಮಗೆ ಹೇಳಲ್ಪಟ್ಟ ವದಂತಿಗಳು ಸತ್ಯವಲ್ಲವೆಂದೂ ನೀನು ನಿಯಮಬದ್ಧವಾಗಿ ನಡೆಯುವವನಾಗಿದ್ದೀ ಮತ್ತು ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುತ್ತೀ ಎಂದೂ ತಿಳಿದುಕೊಳ್ಳುವರು. 25  ಅನ್ಯಜನಾಂಗಗಳಿಂದ ಬಂದ ವಿಶ್ವಾಸಿಗಳ ವಿಷಯ​ದಲ್ಲಾದರೋ, ವಿಗ್ರಹಗಳಿಗೆ ಯಜ್ಞಾರ್ಪಣೆಮಾಡಿದ್ದನ್ನೂ ರಕ್ತವನ್ನೂ ಕತ್ತು ಹಿಸುಕಿ ಕೊಂದದ್ದನ್ನೂ ಹಾದರವನ್ನೂ ಬಿಟ್ಟು ದೂರವಾಗಿರಬೇಕೆಂಬ ನಮ್ಮ ತೀರ್ಮಾನವನ್ನು ಬರೆದು ತಿಳಿಸಿದ್ದೇವೆ” ಎಂದು ಹೇಳಿದರು. 26  ಮರುದಿನ ಪೌಲನು ಆ ಪುರುಷರನ್ನು ಕರೆದುಕೊಂಡು ಹೋಗಿ ಅವರೊಂದಿಗೆ ತನ್ನನ್ನು ವಿಧಿಬದ್ಧವಾಗಿ ಶುದ್ಧೀಕರಿಸಿಕೊಂಡು, ವಿಧಿಬದ್ಧವಾದ ಶುದ್ಧಾಚಾರವು ಮುಗಿಯುವ ದಿವಸಗಳ ಬಗ್ಗೆಯೂ ಅವರಲ್ಲಿ ಪ್ರತಿಯೊಬ್ಬನಿಗಾಗಿ ಮಾಡುವ ಅರ್ಪಣೆಯ ಬಗ್ಗೆಯೂ ಸೂಚನೆ ನೀಡಲು ದೇವಾಲಯದೊಳಕ್ಕೆ ಹೋದನು. 27  ಆ ಏಳು ದಿವಸಗಳು ಮುಗಿಯ​ಲಿದ್ದಾಗ ಏಷ್ಯಾದಿಂದ ಬಂದಿದ್ದ ಯೆಹೂದ್ಯರು ದೇವಾಲಯದಲ್ಲಿ ​ಅವನನ್ನು ಕಂಡು ಜನರ ಗುಂಪನ್ನೆಲ್ಲ ಗಲಿಬಿಲಿಗೊಳಿಸಿದರು. ಮತ್ತು ಅವನನ್ನು ಹಿಡಿದು, 28  “ಇಸ್ರಾಯೇಲ್ಯರೇ ಸಹಾಯಮಾಡಿರಿ! ನಮ್ಮ ಜನರಿಗೂ ಧರ್ಮಶಾಸ್ತ್ರಕ್ಕೂ ಈ ಸ್ಥಳಕ್ಕೂ ವಿರುದ್ಧವಾಗಿ ಎಲ್ಲ ಕಡೆಗಳಲ್ಲಿರುವ ಪ್ರತಿಯೊಬ್ಬರಿಗೂ ಬೋಧಿಸುವವನು ಈ ಮನುಷ್ಯನೇ. ಇದಲ್ಲದೆ ಇವನು ಗ್ರೀಕರನ್ನೂ ದೇವಾಲಯದೊಳಗೆ ಕರೆದುಕೊಂಡು ಬಂದು ಈ ಪವಿತ್ರ ಸ್ಥಳವನ್ನು ಹೊಲೆಮಾಡಿದ್ದಾನೆ” ಎಂದು ಕೂಗಿ ಹೇಳಿದರು. 29  ಏಕೆಂದರೆ ಈ ಮುಂಚೆ ಅವರು ಪಟ್ಟಣದಲ್ಲಿ ಅವನೊಂದಿಗೆ ಎಫೆಸದ ತ್ರೊಫಿಮನನ್ನು ಕಂಡಿದ್ದರು. ಆದುದರಿಂದ ಪೌಲನು ಅವನನ್ನು ದೇವಾಲಯದೊಳಗೆ ಕರೆದುಕೊಂಡು ಬಂದಿದ್ದನೆಂದು ಅವರು ಭಾವಿಸಿದ್ದರು. 30  ಆಗ ಇಡೀ ಪಟ್ಟಣವೇ ಕೋಲಾಹಲಗೊಂಡಿತು ಮತ್ತು ಎಲ್ಲ ಕಡೆಗಳಿಂದ ಜನರು ಓಡಿಬಂದು ಒಟ್ಟುಗೂಡಿ ಪೌಲನನ್ನು ಹಿಡಿದು ದೇವಾಲಯದ ಹೊರಗೆ ಎಳೆದುತಂದರು. ಕೂಡಲೆ ಬಾಗಿಲುಗಳನ್ನು ಮುಚ್ಚಲಾಯಿತು. 31  ಅವರು ಅವನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಗ ಇಡೀ ಯೆರೂಸಲೇಮ್‌ ಪಟ್ಟಣವು ಗಲಿಬಿಲಿಗೊಂಡಿದೆ ಎಂಬ ಸುದ್ದಿಯು ಸಹಸ್ರಾಧಿಪತಿಯ ತನಕ ತಲಪಿತು; 32  ಆ ಕೂಡಲೆ ಅವನು ಸೈನಿಕರನ್ನೂ ಶತಾಧಿಪತಿಗಳನ್ನೂ ಕರೆದುಕೊಂಡು ಅವರಿದ್ದಲ್ಲಿಗೆ ಓಡಿಬಂದನು. ಅವರು ಸಹಸ್ರಾಧಿಪತಿಯನ್ನೂ ಸೈನಿಕರನ್ನೂ ಕಂಡಾಗ ಪೌಲನಿಗೆ ಹೊಡೆಯುವುದನ್ನು ನಿಲ್ಲಿಸಿದರು. 33  ಸಹಸ್ರಾಧಿಪತಿಯು ಹತ್ತಿರ ಬಂದು ಅವನನ್ನು ಹಿಡಿದು ಎರಡು ಸರಪಣಿಗಳಿಂದ ಅವನನ್ನು ಕಟ್ಟುವಂತೆ ಆಜ್ಞಾಪಿಸಿದನು; ಮತ್ತು ‘ಇವನು ಯಾರು? ಏನು ಮಾಡಿದನು?’ ಎಂದು ವಿಚಾರಿಸಲಾರಂಭಿಸಿದನು. 34  ಆದರೆ ಜನರ ಗುಂಪಿನಲ್ಲಿದ್ದ ಕೆಲವರು ಒಂದು ವಿಷಯವನ್ನು ಇತರರು ಇನ್ನೊಂದು ವಿಷಯವನ್ನು ಕೂಗಿ ಹೇಳಲಾರಂಭಿಸಿದರು. ಗದ್ದಲದ ನಿಮಿತ್ತ ಖಚಿತವಾಗಿ ಏನನ್ನೂ ತಿಳಿದುಕೊಳ್ಳಲು ಸಾಧ್ಯವಾಗದ ಕಾರಣ ಸಹಸ್ರಾಧಿಪತಿಯು ಪೌಲನನ್ನು ಸೈನಿಕರ ಪಾಳೆಯದೊಳಗೆ ತರುವಂತೆ ಅಪ್ಪಣೆಕೊಟ್ಟನು. 35  ಪೌಲನು ಮೆಟ್ಟಲುಗಳ ಮೇಲೆ ಬಂದಾಗ ಜನರ ಗುಂಪಿನ ಹಿಂಸಾಚಾರದ ನಿಮಿತ್ತ ಸೈನಿಕರು ಅವನನ್ನು ಎತ್ತಿಕೊಂಡು ಹೋಗಬೇಕಾದ ಪರಿಸ್ಥಿತಿ ಬಂತು; 36  ಏಕೆಂದರೆ ಜನರ ದೊಡ್ಡ ಗುಂಪು ಹಿಂಬಾಲಿಸುತ್ತಾ ಬಂದು, “ಅವನನ್ನು ಮುಗಿಸಿಬಿಡಿ!” ಎಂದು ಕೂಗುತ್ತಾ ಇತ್ತು. 37  ಅವನನ್ನು ಸೈನಿಕರ ಪಾಳೆಯದೊಳಗೆ ಇನ್ನೇನು ತರಲಿಕ್ಕಿದ್ದಾಗ ಪೌಲನು ಸಹಸ್ರಾಧಿಪತಿಗೆ, “ನಾನು ನಿನಗೆ ಒಂದು ವಿಷಯವನ್ನು ಹೇಳುವಂತೆ ಅನುಮತಿಸುವಿಯೊ?” ಎಂದು ಕೇಳಿದನು. ಅದಕ್ಕೆ ಅವನು, “ನಿನಗೆ ಗ್ರೀಕ್‌ ಭಾಷೆ ಬರುತ್ತದೊ? 38  ಕೆಲವು ದಿವಸಗಳ ಹಿಂದೆ ದಂಗೆ ಎಬ್ಬಿಸಿ ನಾಲ್ಕು ಸಾವಿರ ಮಂದಿ ಕೊಲೆಗಡುಕರನ್ನು ಅಡವಿಗೆ ಕರೆದುಕೊಂಡುಹೋದ ಈಜಿಪ್ಟಿನವನು ನೀನಲ್ಲವೊ?” ಎಂದು ಕೇಳಿದನು. 39  ಆಗ ಪೌಲನು, “ನಾನು ಒಬ್ಬ ಯೆಹೂದ್ಯನು. ಕಿಲಿಕ್ಯದಲ್ಲಿರುವ ತಾರ್ಸದವನು. ಪ್ರಸಿದ್ಧವಾದ ಪಟ್ಟಣದ ನಾಗರಿಕನು. ಆದುದರಿಂದ ಈ ಜನರೊಂದಿಗೆ ಮಾತಾಡಲು ನನಗೆ ಅನುಮತಿಕೊಡುವಂತೆ ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದನು. 40  ಸಹಸ್ರಾಧಿಪತಿಯು ಅನುಮತಿಕೊಟ್ಟ ಬಳಿಕ ಪೌಲನು ಮೆಟ್ಟಲುಗಳ ಮೇಲೆ ನಿಂತು ಜನರಿಗೆ ಕೈಸನ್ನೆ ಮಾಡಿದನು. ಜನರ ಸದ್ದುಗದ್ದಲವು ಪೂರ್ಣವಾಗಿ ನಿಂತಾಗ ಅವನು ಹೀಬ್ರು ಭಾಷೆಯಲ್ಲಿ ಅವರಿಗೆ ಹೀಗೆ ​ಹೇಳಿದನು:

ಪಾದಟಿಪ್ಪಣಿ