ಅ. ಕಾರ್ಯಗಳು 11:1-30

11  ಅನ್ಯಜನಾಂಗಗಳ ಜನರು ಸಹ ದೇವರ ವಾಕ್ಯವನ್ನು ಸ್ವೀಕರಿಸಿದ್ದಾರೆಂಬುದನ್ನು ಯೂದಾಯದಲ್ಲಿದ್ದ ಅಪೊಸ್ತಲರು ಮತ್ತು ಸಹೋದರರು ಕೇಳಿಸಿಕೊಂಡರು.  ಆದುದರಿಂದ ಪೇತ್ರನು ಯೆರೂಸಲೇಮಿಗೆ ಬಂದಾಗ ಸುನ್ನತಿಯನ್ನು ಬೆಂಬಲಿಸುವವರು ಅವನಿಗೆ,  ‘ನೀನು ಸುನ್ನತಿಯಿಲ್ಲದವರ ಮನೆಗೆ ಹೋಗಿ ಅವರೊಂದಿಗೆ ಊಟಮಾಡಿದೆಯಲ್ಲ’ ಎಂದು ಹೇಳಿ ವಾದಿಸಲಾರಂಭಿಸಿದರು.  ಅದಕ್ಕೆ ಪೇತ್ರನು ನಡೆದ ಸಂಗತಿ​ಯನ್ನು ಅವರಿಗೆ ವಿವರಿಸುತ್ತಾ ಹೇಳಿದ್ದು:  “ನಾನು ಯೊಪ್ಪ ಪಟ್ಟಣದಲ್ಲಿ ಪ್ರಾರ್ಥಿಸು​ತ್ತಿದ್ದಾಗ ಧ್ಯಾನಪರವಶನಾಗಿ, ಆಕಾಶ​ದಿಂದ ನಾಲ್ಕು ಮೂಲೆಗಳಲ್ಲಿ ಹಿಡಿಯಲ್ಪಟ್ಟಿದ್ದ ದೊಡ್ಡ ನಾರುಬಟ್ಟೆಯ ಹಾಸಿನಂತಿರುವ ಯಾವುದೋ ಪಾತ್ರೆ ನೇರವಾಗಿ ನಾನಿದ್ದಲ್ಲಿಗೆ ಇಳಿಸಲ್ಪಡುತ್ತಿರುವ ಒಂದು ದರ್ಶನವನ್ನು ಕಂಡೆನು.  ನಾನು ಅದರೊಳಗೆ ನೋಡಿದಾಗ ನೆಲದ ಮೇಲೆ ತಿರುಗಾಡುವ ಚತುಷ್ಪಾದಿ ಪ್ರಾಣಿಗಳೂ ವನ್ಯಮೃಗಗಳೂ ಹರಿದಾಡುವ ಜೀವಿಗಳೂ ​ಆಕಾಶದ ಪಕ್ಷಿಗಳೂ ಇರುವುದನ್ನು ಗಮನಿಸಿದೆ.  ಹಾಗೂ ‘ಪೇತ್ರನೇ, ಎದ್ದು ಕಡಿದು ತಿನ್ನು’ ಎಂದು ನನಗೆ ಹೇಳುವ ವಾಣಿಯನ್ನು ಸಹ ಕೇಳಿಸಿಕೊಂಡೆನು.  ಆದರೆ ನಾನು, ‘ಖಂಡಿತವಾಗಿಯೂ ಬೇಡ ಸ್ವಾಮಿ. ಹೊಲೆಯಾದ ಮತ್ತು ಅಶುದ್ಧವಾದ ಪದಾರ್ಥವು ಎಂದೂ ನನ್ನ ಬಾಯೊಳಗೆ ಹೋದದ್ದಿಲ್ಲ’ ಅಂದೆನು.  ಆಗ ಆಕಾಶದಿಂದ ಎರಡನೆಯ ಸಲ ಆ ವಾಣಿಯು ನನಗೆ, ‘ದೇವರು ಶುದ್ಧೀಕರಿಸಿರುವುದನ್ನು ನೀನು ಹೊಲೆಯಾದದ್ದೆಂದು ಹೇಳುವುದನ್ನು ನಿಲ್ಲಿಸು’ ಎಂದು ಹೇಳಿತು. 10  ಹೀಗೆ ಮೂರನೆಯ ಸಲ ಸಂಭವಿಸಿ, ಎಲ್ಲವೂ ಪುನಃ ಆಕಾಶಕ್ಕೆ ಎಳೆಯಲ್ಪಟ್ಟಿತು. 11  ಮಾತ್ರವಲ್ಲದೆ ಅದೇ ಕ್ಷಣದಲ್ಲಿ ಕೈಸರೈಯದಿಂದ ನನ್ನ ಬಳಿಗೆ ಕಳುಹಿಸಲ್ಪಟ್ಟಿದ್ದ ಮೂವರು ಮನುಷ್ಯರು ನಾವಿದ್ದ ಮನೆಯ ಮುಂದೆ ನಿಂತಿದ್ದರು. 12  ಆಗ, ಸ್ವಲ್ಪವೂ ಸಂಶಯಪಡದೆ ಅವರೊಂದಿಗೆ ಹೋಗುವಂತೆ ದೇವರಾತ್ಮವು ನನಗೆ ಹೇಳಿತು. ಈ ಆರು ಮಂದಿ ಸಹೋದರರು ಸಹ ನನ್ನೊಂದಿಗೆ ಹೊರಟರು ಮತ್ತು ನಾವು ಆ ಮನುಷ್ಯನ ಮನೆಯನ್ನು ಪ್ರವೇಶಿಸಿದೆವು. 13  “ಅವನು ನಮಗೆ, ‘ಒಬ್ಬ ದೇವ​ದೂತನು ನನ್ನ ಮನೆಯಲ್ಲಿ ನಿಂತಿರುವುದನ್ನು ಕಂಡೆನು ಮತ್ತು ಅವನು “ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಸಿಕೊ; 14  ನೀನೂ ನಿನ್ನ ಮನೆಯವರೆಲ್ಲರೂ ರಕ್ಷಣೆ​ಯನ್ನು ಹೊಂದಬಹುದಾದಂಥ ವಿಷಯಗಳನ್ನು ಅವನು ನಿನಗೆ ತಿಳಿಸುವನು” ಎಂದು ಹೇಳಿದನು’ ಎಂದನು. 15  ಆದರೆ ನಾನು ಮಾತಾಡತೊಡಗಿದಾಗ, ಆರಂಭದಲ್ಲಿ ಪವಿತ್ರಾತ್ಮವು ನಮ್ಮ ಮೇಲೆ ಬಂದಂತೆಯೇ ಅವರ ಮೇಲೆಯೂ ಬಂತು. 16  ಆಗ ‘ಯೋಹಾನನು ನೀರಿನಿಂದ ದೀಕ್ಷಾಸ್ನಾನ ಮಾಡಿಸಿದನು, ಆದರೆ ನೀವು ಪವಿತ್ರಾತ್ಮದಿಂದ ದೀಕ್ಷಾಸ್ನಾನ ಹೊಂದುವಿರಿ’ ಎಂದು ಹೇಳುತ್ತಿದ್ದ ಕರ್ತನ ಮಾತುಗಳನ್ನು ನಾನು ಮನಸ್ಸಿಗೆ ತಂದುಕೊಂಡೆನು. 17  ಆದುದರಿಂದ ಕರ್ತನಾದ ಯೇಸು ಕ್ರಿಸ್ತನನ್ನು ನಂಬಿದವರಾದ ನಮಗೆ ಕೊಟ್ಟಂಥ ಉಚಿತ ವರವನ್ನೇ ದೇವರು ಅವರಿಗೂ ಕೊಟ್ಟಿರುವಾಗ, ದೇವರನ್ನು ಅಡ್ಡಿಪಡಿಸಲು ನಾನು ಎಷ್ಟರವನು?” 18  ಅವರು ಈ ವಿಷಯಗಳನ್ನು ಕೇಳಿಸಿ​ಕೊಂಡಾಗ ಸಮ್ಮತಿಸಿ, “ಅನ್ಯಜನಾಂಗಗಳ ಜನರಿಗೂ ಜೀವಕೊಡುವ ಉದ್ದೇಶಕ್ಕಾಗಿ ದೇವರು ಪಶ್ಚಾತ್ತಾಪವನ್ನು ಒದಗಿಸಿದ್ದಾನೆ” ಎಂದು ಹೇಳುತ್ತಾ ದೇವರನ್ನು ಕೊಂಡಾ​ಡಿದರು. 19  ಸ್ತೆಫನನ ವಿಷಯದಲ್ಲಿ ಉಂಟಾದ ಹಿಂಸೆಯಿಂದ ಚೆದರಿಹೋದವರು ಫೊಯಿನಿಕೆ ಸೈಪ್ರಸ್‌ ಅಂತಿಯೋಕ್ಯ ಪ್ರಾಂತಗಳ ವರೆಗೆ ಪ್ರಯಾಣಿಸಿ ಯೆಹೂದ್ಯರಿಗೇ ಹೊರತು ಬೇರೆ ಯಾರಿಗೂ ದೇವರ ವಾಕ್ಯವನ್ನು ಹೇಳಲಿಲ್ಲ. 20  ಆದರೆ ಅವರಲ್ಲಿ ಸೈಪ್ರಸ್‌ ಮತ್ತು ಕುರೇನ್ಯದಿಂದ ಅಂತಿಯೋಕ್ಯಕ್ಕೆ ಬಂದಿದ್ದ ಕೆಲವರು ಗ್ರೀಕ್‌ ಭಾಷೆಯನ್ನು ಮಾತಾಡುತ್ತಿದ್ದ ಜನರೊಂದಿಗೆ ಮಾತಾಡಲಾರಂಭಿಸಿ ಅವರಿಗೆ ಕರ್ತನಾದ ಯೇಸುವಿನ ಕುರಿತಾದ ಸುವಾರ್ತೆಯನ್ನು ಸಾರಿದರು. 21  ಇದಲ್ಲದೆ ಯೆಹೋವನ ಹಸ್ತವು ಅವರ ಮೇಲಿದ್ದುದರಿಂದ ಬಹಳಷ್ಟು ಜನರು ಕರ್ತನಲ್ಲಿ ನಂಬಿಕೆಯಿಟ್ಟು ಅವನ ಕಡೆಗೆ ತಿರುಗಿಕೊಂಡರು. 22  ಅವರ ಕುರಿತಾದ ವಿಷಯವು ಯೆರೂಸಲೇಮಿನಲ್ಲಿದ್ದ ಸಭೆಯವರ ಕಿವಿಗೆ ಬಿದ್ದಾಗ, ಅವರು ಬಾರ್ನಬನನ್ನು ಅಂತಿ​ಯೋಕ್ಯದ ವರೆಗೆ ಕಳುಹಿಸಿದರು. 23  ಅವನು ಅಲ್ಲಿಗೆ ತಲಪಿ ದೇವರ ಅಪಾತ್ರ ದಯೆಯನ್ನು ನೋಡಿದಾಗ ಉಲ್ಲಾಸಭರಿತನಾದನು ಮತ್ತು ದೃಢಮನಸ್ಸಿನಿಂದ ಕರ್ತನಲ್ಲಿ ಮುಂದುವರಿಯುವಂತೆ ಅವರೆಲ್ಲರನ್ನು ಉತ್ತೇಜಿಸಿದನು; 24  ಏಕೆಂದರೆ ಅವನು ಒಳ್ಳೆಯವನೂ ಪವಿತ್ರಾತ್ಮಭರಿತನೂ ನಂಬಿಕೆಯಿಂದ ತುಂಬಿದವನೂ ಆಗಿದ್ದನು. ಮತ್ತು ಗಮನಾರ್ಹ ಸಂಖ್ಯೆಯಲ್ಲಿ ಜನರು ಕರ್ತನ ಮಂಡಲಿಗೆ ಸೇರಿಕೊಂಡರು. 25  ಆದುದರಿಂದ ಅವನು ಸೌಲನನ್ನು ಕೂಲಂಕಷವಾಗಿ ಹುಡುಕಲಿಕ್ಕಾಗಿ ತಾರ್ಸಕ್ಕೆ ಹೋಗಿ, 26  ಅವನನ್ನು ಕಂಡುಕೊಂಡ ಬಳಿಕ ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಇಡೀ ಒಂದು ವರ್ಷ ಅವರು ಸಭೆ​ಯವರೊಂದಿಗೆ ಕೂಡಿಕೊಂಡು ಜನರ ದೊಡ್ಡ ಗುಂಪಿಗೆ ಬೋಧಿಸಿದರು; ಶಿಷ್ಯರು ದೈವಾನುಗ್ರಹದಿಂದ ಪ್ರಥಮ ಬಾರಿಗೆ ‘ಕ್ರೈಸ್ತರು’ ಎಂದು ಕರೆಯಲ್ಪಟ್ಟದ್ದು ಅಂತಿ​ಯೋಕ್ಯದಲ್ಲಿಯೇ. 27  ಈ ದಿನಗಳಲ್ಲಿ ಪ್ರವಾದಿಗಳು ಯೆರೂಸಲೇಮಿನಿಂದ ಅಂತಿಯೋಕ್ಯಕ್ಕೆ ಬಂದರು. 28  ಅವರಲ್ಲಿ ಅಗಬನೆಂಬವನು ಎದ್ದು, ಇಡೀ ನಿವಾಸಿತ ಭೂಮಿಯಲ್ಲಿ ದೊಡ್ಡ ಕ್ಷಾಮವು ಬರುವುದೆಂದು ಪವಿತ್ರಾತ್ಮ ಪ್ರೇರಣೆಯಿಂದ ತಿಳಿಸಿದನು; ಅದು ಕ್ಲೌದ್ಯ ಚಕ್ರವರ್ತಿಯ ಕಾಲದಲ್ಲಿ ಸಂಭವಿಸಿಯೇ ಬಿಟ್ಟಿತು. 29  ಆಗ ಶಿಷ್ಯರಲ್ಲಿ ಪ್ರತಿಯೊಬ್ಬರು ಯೂದಾಯದಲ್ಲಿ ವಾಸಿಸುತ್ತಿದ್ದ ಸಹೋದರರಿಗೆ ತಮ್ಮ ಸಾಮರ್ಥ್ಯಕ್ಕನುಸಾರ ಪರಿಹಾರ ನಿಧಿಯನ್ನು ಕಳುಹಿಸಲು ನಿರ್ಧರಿಸಿದರು; 30  ಅವರು ಹಾಗೆಯೇ ಮಾಡಿ ಬಾರ್ನಬ ಮತ್ತು ಸೌಲರ ಕೈಯಿಂದ ಅದನ್ನು ಹಿರೀ​ಪುರುಷರಿಗೆ ಕಳುಹಿಸಿದರು.

ಪಾದಟಿಪ್ಪಣಿ