ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಭಾಗ 2

ಬಾಳುವ ಬಾಂಧವ್ಯದ ಬೆನ್ನೆಲುಬು​​—⁠ನಿಷ್ಠೆ

ಬಾಳುವ ಬಾಂಧವ್ಯದ ಬೆನ್ನೆಲುಬು​​—⁠ನಿಷ್ಠೆ

“ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.”—ಮಾರ್ಕ 10:9

ನಾವು ನಿಷ್ಠಾವಂತರಾಗಿರಬೇಕು ಎಂದು ಯೆಹೋವನು ಅಪೇಕ್ಷಿಸುತ್ತಾನೆ. (ಮೀಕ 6:8, ನೂತನ ಲೋಕ ಭಾಷಾಂತರ) ಇದು ವಿವಾಹದಲ್ಲಂತೂ ತುಂಬ ಪ್ರಾಮುಖ್ಯ, ಏಕೆಂದರೆ ನಿಷ್ಠೆಯಿಲ್ಲದ ದಾಂಪತ್ಯ ಬೇರಿಲ್ಲದ ಮರದಂತೆ. ಅಷ್ಟೇ ಅಲ್ಲದೆ, ನಿಷ್ಠೆಯೇ ನಂಬಿಕೆಗೆ ಭದ್ರ ಬುನಾದಿ. ವಿವಾಹದಲ್ಲಿ ಪ್ರೀತಿಯನ್ನು ಬಲಗೊಳಿಸಲು ಈ ನಂಬಿಕೆ ಅವಶ್ಯಕ.

ಇಷ್ಟು ಪ್ರಾಮುಖ್ಯವಾಗಿರುವ ನಿಷ್ಠೆ, ಇಂದು ವಿವಾಹದಲ್ಲಿ ಕಣ್ಮರೆಯಾಗುತ್ತಿದೆ. ಆದ್ದರಿಂದ, ನಿಮ್ಮ ವಿವಾಹದ ಬಾಂಧವ್ಯವನ್ನು ಬಲಪಡಿಸಲು ಮುಂದೆ ಕೊಡಲಾಗಿರುವ ಎರಡು ವಿಷಯಗಳನ್ನು ಮಾಡುವ ದೃಢಸಂಕಲ್ಪ ಮಾಡಿ.

 1 ನಿಮ್ಮ ದಾಂಪತ್ಯಕ್ಕೆ ಆದ್ಯತೆ ನೀಡಿ

ಬೈಬಲಿನ ಹಿತವಚನ: “ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳುವವರಾಗಿ.” (ಫಿಲಿಪ್ಪಿ 1:10) ನಿಮ್ಮ ಜೀವನದ ಅತಿ ಪ್ರಾಮುಖ್ಯ ವಿಷಯಗಳಲ್ಲಿ ನಿಮ್ಮ ವಿವಾಹವೂ ಒಂದು. ಆದ್ದರಿಂದ ಅದಕ್ಕೆ ಆದ್ಯತೆ ನೀಡಿ.

ನಿಮ್ಮ ಸಂಗಾತಿಗೆ ಹೆಚ್ಚಿನ ಗಮನ ಕೊಡುವಂತೆ ಮತ್ತು ನೀವಿಬ್ಬರೂ ‘ಸುಖದಿಂದ ಬದುಕುವಂತೆ’ ಯೆಹೋವನು ಬಯಸುತ್ತಾನೆ. (ಪ್ರಸಂಗಿ 9:9) ಸಂಗಾತಿಯನ್ನು ಎಂದಿಗೂ ಕಡೆಗಣಿಸದೆ, ನೀವಿಬ್ಬರೂ ಒಬ್ಬರನ್ನೊಬ್ಬರು ಸಂತೋಷಪಡಿಸಲು ಮಾರ್ಗಗಳನ್ನು ಹುಡುಕಬೇಕೆಂದು ಯೆಹೋವನು ಸ್ಪಷ್ಟವಾಗಿ ಹೇಳಿದ್ದಾನೆ. (1 ಕೊರಿಂಥ 10:24) ನಿಮಗೆ ನಿಮ್ಮ ಸಂಗಾತಿಯ ಅಗತ್ಯವಿದೆ, ನೀವು ಅವರನ್ನು ತುಂಬಾ ಗಣ್ಯಮಾಡುತ್ತೀರಿ ಎಂದು ತೋರಿಸಿಕೊಡಿ.

ಹೀಗೆ ಮಾಡಿ:

  • ನಿಮ್ಮ ಸಂಗಾತಿಯೊಂದಿಗೆ ಮಾತಾಡಲು ಪ್ರತಿದಿನ ತಪ್ಪದೇ ಸಮಯ ಮಾಡಿಕೊಳ್ಳಿ

  • “ನಾನು, ನನ್ನದು” ಅಂತಲ್ಲ “ನಾವು, ನಮ್ಮದು” ಅಂತ ಯೋಚಿಸಿ

 2 ಹೃದಯವನ್ನು ಕಾಪಾಡಿಕೊಳ್ಳಿ

ಬೈಬಲಿನ ಹಿತವಚನ: “ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.” (ಮತ್ತಾಯ 5:28) ಒಂದುವೇಳೆ, ಒಬ್ಬ ವ್ಯಕ್ತಿ ಅನೈತಿಕ ವಿಷಯಗಳ ಬಗ್ಗೆ ಆಲೋಚಿಸುತ್ತಾ ಇದ್ದರೆ ಅವನು ತನ್ನ ಸಂಗಾತಿಗೆ ದ್ರೋಹ ಬಗೆದಂತೆ.

“ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ” ಎಂದು ಯೆಹೋವನು ಹೇಳುತ್ತಾನೆ. (ಜ್ಞಾನೋಕ್ತಿ 4:23; ಯೆರೆಮೀಯ 17:9) ಇದನ್ನು ಮಾಡಲು ನಿಮ್ಮ ಕಣ್ಣುಗಳನ್ನು ಹತೋಟಿಯಲ್ಲಿಡಿ. (ಮತ್ತಾಯ 5:29, 30) ಸ್ತ್ರೀಯನ್ನು ಎಂದಿಗೂ ಮೋಹದಿಂದ ನೋಡುವುದಿಲ್ಲ ಎಂದು ತನ್ನ ಕಣ್ಣುಗಳೊಂದಿಗೆ ನಿಬಂಧನೆ ಮಾಡಿಕೊಂಡ ಪೂರ್ವಜನಾದ ಯೋಬನನ್ನು ಅನುಸರಿಸಿ. (ಯೋಬ 31:1) ಕಾಮ ಪ್ರಚೋದಕ ಚಿತ್ರಗಳನ್ನು ಎಂದಿಗೂ ನೋಡದಿರಲು ಮತ್ತು ಸಂಗಾತಿಯಲ್ಲದೆ ಇತರರೊಂದಿಗೆ ಪ್ರಣಯಾತ್ಮಕ ಒಲವನ್ನು ಬೆಳೆಸಿಕೊಳ್ಳದಿರಲು ದೃಢಸಂಕಲ್ಪ ಮಾಡಿ.

ಹೀಗೆ ಮಾಡಿ:

  • ನಿಮ್ಮ ಸಂಗಾತಿಗೆ ನೀವು ಸಂಪೂರ್ಣ ಬದ್ಧರಾಗಿದ್ದೀರೆಂಬುದನ್ನು ಇತರರು ಗುರುತಿಸಲಿ

  • ನೀವು ಯಾರೊಂದಿಗಾದರೂ ಸಲಿಗೆಯಿಂದಿರುವುದು ನಿಮ್ಮ ಸಂಗಾತಿಗೆ ಇಷ್ಟವಾಗದಿದ್ದರೆ ನಿಮ್ಮ ಸಂಗಾತಿಯ ಭಾವನೆಗಳನ್ನು ಪರಿಗಣಿಸುತ್ತಾ ತಕ್ಷಣ ಅಂಥವರೊಂದಿಗಿನ ಸಹವಾಸ ಬಿಟ್ಟುಬಿಡಿ