ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 7

ನಮ್ಮ ಸಭಾ ಕೂಟಗಳಲ್ಲಿ ಯಾವ್ಯಾವ ಕಾರ್ಯಕ್ರಮ ನಡೆಯುತ್ತೆ?

ನಮ್ಮ ಸಭಾ ಕೂಟಗಳಲ್ಲಿ ಯಾವ್ಯಾವ ಕಾರ್ಯಕ್ರಮ ನಡೆಯುತ್ತೆ?

ನ್ಯೂಜಿಲೆಂಡ್‌

ಜಪಾನ್‌

ಉಗಾಂಡ

ಲಿಥುವೇನಿಯ

ಪ್ರಾಚೀನ ಕಾಲದ ಸಭಾ ಕೂಟಗಳಲ್ಲಿ ಸ್ತುತಿಗೀತೆ ಹಾಡುವುದು, ಪ್ರಾರ್ಥನೆ ಮಾಡುವುದು, ಬೈಬಲ್‌ ಓದಿ ಚರ್ಚಿಸುವುದು ಪ್ರಮುಖವಾಗಿತ್ತು. (1 ಕೊರಿಂಥ 14:26) ನಮ್ಮ ಸಭಾ ಕೂಟಗಳಲ್ಲಿ ಸಹ ಅದೇ ವಿಧಾನ ಅನುಸರಿಸಲಾಗುತ್ತದೆ.

ನಮ್ಮ ಬದುಕಿಗೆ ನೆರವಾಗುವ ಬೈಬಲ್‌ ಆಧರಿತ ಉಪದೇಶ ಕಾರ್ಯಕ್ರಮ. ವಾರಾಂತ್ಯದಲ್ಲಿ 30 ನಿಮಿಷಗಳ ಬೈಬಲ್‌ ಉಪನ್ಯಾಸ ಇರುತ್ತದೆ. ನಮ್ಮ ಬದುಕಿನಲ್ಲಿ ಬೈಬಲ್‌ ಸಲಹೆಗಳನ್ನು ಅಳವಡಿಸುವುದು ಹೇಗೆಂದು ಆ ಉಪನ್ಯಾಸದಲ್ಲಿ ವಿವರಿಸಲಾಗುತ್ತದೆ. ಎಲ್ಲರೂ ತಮ್ಮ ತಮ್ಮ ಬೈಬಲ್‌ಗಳನ್ನು ತರುತ್ತಾರೆ ಮತ್ತು ಅಮೂಲ್ಯ ಸಲಹೆಗಳನ್ನು ಗುರುತಿಸಿಕೊಳ್ಳುತ್ತಾರೆ. ಉಪನ್ಯಾಸದ ನಂತರ “ಕಾವಲಿನಬುರುಜು” ಅಧ್ಯಯನ ಎಂಬ ಇನ್ನೊಂದು ಕಾರ್ಯಕ್ರಮ ಇರುತ್ತದೆ. ಒಂದು ತಾಸಿನ ಈ ಕಾರ್ಯಕ್ರಮದಲ್ಲಿ ಕಾವಲಿನಬುರುಜು ಎಂಬ ಮಾಸಿಕದಿಂದ (ಅಧ್ಯಯನ ಆವೃತ್ತಿ) ಲೇಖನವೊಂದನ್ನು ಚರ್ಚಿಸಲಾಗುತ್ತದೆ. ಹಾಜರಿರುವ ಎಲ್ಲರೂ ಈ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಬೈಬಲ್‌ ಮಾರ್ಗದರ್ಶನೆಗಳನ್ನು ಜೀವನದಲ್ಲಿ ಪಾಲಿಸುವುದು ಹೇಗೆಂದು ಈ ಚರ್ಚೆಯಿಂದ ಕಲಿಯಬಹುದು. ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ, ಭೂವ್ಯಾಪಕವಾಗಿರುವ 1,10,000ಕ್ಕೂ ಅಧಿಕ ಸಭೆಗಳಲ್ಲಿ ಚರ್ಚಿಸಲಾಗುವ ಲೇಖನ ಒಂದೇ ಆಗಿರುತ್ತದೆ.

ನಮ್ಮ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮ. ವಾರಮಧ್ಯದ ಒಂದು ಸಂಜೆ ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಎಂಬ ಮೂರು ಭಾಗಗಳಿರುವ ಕಾರ್ಯಕ್ರಮವಿರುತ್ತದೆ. ಇದು ಪ್ರತಿ ತಿಂಗಳ ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ಮೇಲೆ ಆಧರಿತವಾಗಿರುತ್ತದೆ. ಈ ಕೂಟದ ಮೊದಲನೇ ಭಾಗ ಬೈಬಲಿನಲ್ಲಿರುವ ರತ್ನಗಳು. ಇದು ಮೊದಲೇ ಓದಿಕೊಂಡು ಬಂದಿರುವ ಬೈಬಲಿನ ಕೆಲವು ಅಧ್ಯಾಯಗಳನ್ನು ಚೆನ್ನಾಗಿ ಪರಿಚಯ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಂತರ ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ ಎಂಬ ಭಾಗದಲ್ಲಿ ಬೈಬಲಿನ ಬಗ್ಗೆ ಇತರರೊಂದಿಗೆ ಚರ್ಚಿಸುವುದು ಹೇಗೆಂದು ತೋರಿಸುವ ಅಭಿನಯಗಳಿರುತ್ತವೆ. ಓದುವ ಮತ್ತು ಮಾತಾಡುವ ಸಾಮರ್ಥ್ಯವನ್ನು ಹೇಗೆ ಉತ್ತಮಗೊಳಿಸುವುದು ಎಂದು ಸಲಹೆ ನೀಡಲಾಗುತ್ತದೆ. (1 ತಿಮೊಥೆಯ 4:13) ಕೊನೆಯಲ್ಲಿ ನಮ್ಮ ಕ್ರೈಸ್ತ ಜೀವನ ಎಂಬ ಭಾಗದಲ್ಲಿ ಬೈಬಲ್‌ ತತ್ವಗಳನ್ನು ದಿನನಿತ್ಯದ ಜೀವನದಲ್ಲಿ ಹೇಗೆ ಅನ್ವಯಿಸುವುದು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಬೈಬಲನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲಿಕ್ಕಾಗಿ ಪ್ರಶ್ನೋತ್ತರ ಚರ್ಚೆ ಇರುತ್ತದೆ.

ನಮ್ಮ ಸಭಾ ಕೂಟಗಳಿಗೆ ನೀವು ಹಾಜರಾಗುವುದಾದರೆ ಅಲ್ಲಿ ನೀಡಲಾಗುವ ಬೈಬಲ್‌ ಶಿಕ್ಷಣ ಅದ್ಭುತವಾದದ್ದು ಎಂದು ಪ್ರತ್ಯಕ್ಷ ಕಾಣುವಿರಿ.—ಯೆಶಾಯ 54:13.

  • ಯೆಹೋವನ ಸಾಕ್ಷಿಗಳ ಸಭಾ ಕೂಟಗಳಲ್ಲಿ ಯಾವ ಕಾರ್ಯಕ್ರಮಗಳಿವೆ?

  • ಯಾವ ಕಾರ್ಯಕ್ರಮಕ್ಕೆ ಹಾಜರಾಗಲು ಯೋಜಿಸಿದ್ದೀರಿ?