ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಇಷ್ಟ ಏನು ಗೊತ್ತೆ?

ದೇವರ ಇಷ್ಟ ಏನು ಗೊತ್ತೆ?

ಮನುಷ್ಯರು ಭೂಮಿಯಲ್ಲಿ ಸುಖನೆಮ್ಮದಿಯಿಂದ ಸಾವಿಲ್ಲದೆ ಬದುಕಬೇಕು ಎನ್ನುವುದು ದೇವರ ಇಷ್ಟ.

‘ಇದು ನಿಜ್ವಾಗ್ಲೂ ಸಾಧ್ಯನಾ’ ಎಂದು ನೀವು ಹುಬ್ಬೇರಿಸಬಹುದು. ಸಾಧ್ಯ ಎನ್ನುತ್ತದೆ ಬೈಬಲ್‌. ದೇವರ ಸರ್ಕಾರ ಬಂದಾಗ ಅಂಥ ಬದುಕು ನಮಗೆ ಸಿಗುತ್ತದೆ. ತನ್ನ ಆ ಸರ್ಕಾರದ ಬಗ್ಗೆ ಹಾಗೂ ಅದು ಏನು ಮಾಡುತ್ತದೆ ಎನ್ನುವುದರ ಬಗ್ಗೆ ಮಾನವರೆಲ್ಲರೂ ತಿಳಿದುಕೊಳ್ಳಬೇಕು ಎನ್ನುವುದು ದೇವರ ಇಚ್ಛೆ.—ಕೀರ್ತನೆ 37:11, 29; ಯೆಶಾಯ 9:7.

ನಾವು ಸಂತೋಷದಿಂದ ಬದುಕಬೇಕು ಎನ್ನುವುದು ದೇವರ ಇಷ್ಟ.

ಮಕ್ಕಳು ಸಂತೋಷವಾಗಿ ಇರಬೇಕೆಂದು ಬಯಸುವ ತಂದೆಯಂತೆಯೇ ನಮ್ಮ ಸೃಷ್ಟಿಕರ್ತ ದೇವರು ಸಹ ನಾವು ಸದಾಕಾಲ ಸಂತೋಷವಾಗಿ ಇರಬೇಕೆಂದು ಇಷ್ಟಪಡುತ್ತಾನೆ. (ಯೆಶಾಯ 48:17, 18) ಹಾಗಾಗಿಯೇ ‘ನನ್ನ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು’ ಎಂದು ಆತನು ಮಾತುಕೊಟ್ಟಿದ್ದಾನೆ.—1 ಯೋಹಾನ 2:17.

ತಾನು ತೋರಿಸುವ ಮಾರ್ಗದಲ್ಲಿ ಮನುಷ್ಯರು ನಡೆಯಬೇಕು ಎನ್ನುವುದು ದೇವರ ಇಷ್ಟ.

ನಾವು ನಡೆಯಬೇಕಾದ ಮಾರ್ಗವನ್ನು ದೇವರು “ಬೋಧನೆ ಮಾಡುವನು” ಎಂದು ಬೈಬಲ್‌ ತಿಳಿಸುತ್ತದೆ. (ಯೆಶಾಯ 2:2, 3) ತನ್ನ ಇಷ್ಟವನ್ನು ಭೂಮಿಯ ಎಲ್ಲಾ ಜನರಿಗೆ ತಿಳಿಸುವ ಉದ್ದೇಶದಿಂದ ದೇವರು “ತನ್ನ ಹೆಸರಿಗಾಗಿ” ಜನರ ಗುಂಪೊಂದನ್ನು ಆರಿಸಿಕೊಂಡಿದ್ದಾನೆ.—ಅಪೊಸ್ತಲರ ಕಾರ್ಯಗಳು 15:14.

ಮನುಷ್ಯರೆಲ್ಲರೂ ತನ್ನನ್ನು ಆರಾಧಿಸುತ್ತಾ ಒಗ್ಗಟ್ಟಾಗಿರಬೇಕು ಎನ್ನುವುದು ದೇವರ ಇಷ್ಟ.

ಯೆಹೋವ ದೇವರನ್ನು ಆರಾಧಿಸುವಾಗ ಜನರಲ್ಲಿ ಪ್ರೀತಿ ಐಕ್ಯತೆ ಹೆಚ್ಚುತ್ತದೆ. ಅವರು ಭೇದಭಾವ ಮರೆತು ಒಂದಾಗುತ್ತಾರೆ. (ಯೋಹಾನ 13:35) ದೇವರನ್ನು ಐಕ್ಯಭಾವದಿಂದ ಆರಾಧಿಸುವುದು ಹೇಗೆಂದು ಯಾರು ತಿಳಿಸಿಕೊಡುತ್ತಾರೆ? ಉತ್ತರ ಈ ಕಿರುಹೊತ್ತಗೆಯಲ್ಲಿದೆ.