ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 8

ಸಭೆಗೆ ಹೋಗುವಾಗ ಸಭ್ಯ ಉಡುಗೆ ಧರಿಸಬೇಕು ಏಕೆ?

ಸಭೆಗೆ ಹೋಗುವಾಗ ಸಭ್ಯ ಉಡುಗೆ ಧರಿಸಬೇಕು ಏಕೆ?

ಐಸ್‌ಲೆಂಡ್‌

ಮೆಕ್ಸಿಕೊ

ಗಿನಿ-ಬಿಸೌ

ಫಿಲಿಪೀನ್ಸ್‌

ಯೆಹೋವನ ಸಾಕ್ಷಿಗಳು ಸಭೆಗೆ ಹೋಗುವಾಗ ನೀಟಾಗಿ ಉಡುಗೆ ತೊಟ್ಟುಕೊಳ್ಳುತ್ತಾರೆ ಎನ್ನುವುದನ್ನು ಈ ಕಿರುಹೊತ್ತಗೆಯಲ್ಲಿರುವ ಚಿತ್ರಗಳಲ್ಲಿ ನೀವು ಗಮನಿಸಿರಬಹುದು. ವಸ್ತ್ರಾಲಂಕಾರಕ್ಕೆ ನಾವೇಕೆ ಅಷ್ಟು ಮಹತ್ವ ಕೊಡುತ್ತೇವೆ?

ದೇವರನ್ನು ಮಹಿಮೆಪಡಿಸಲು. ದೇವರು ನಮ್ಮ ಹೊರಗಿನ ಶೃಂಗಾರವನ್ನಲ್ಲ ಒಳಗಿನ ವ್ಯಕ್ತಿತ್ವವನ್ನು ನೋಡುತ್ತಾನೆ. (1 ಸಮುವೇಲ 16:7) ಹಾಗಿದ್ದರೂ ಆರಾಧನೆಗೆಂದು ಸಭೆ ಸೇರುವಾಗ ನಾವು ವಸ್ತ್ರಾಲಂಕಾರಕ್ಕೆ ಹೆಚ್ಚು ಗಮನ ಕೊಡುತ್ತೇವೆ. ದೇವರಿಗೆ ಘನಮಾನ ಮತ್ತು ಸಹಆರಾಧಕರಿಗೆ ಗೌರವ ಕೊಡಬೇಕೆನ್ನುವುದೇ ನಮ್ಮ ಇಚ್ಛೆ. ಉದಾಹರಣೆಗೆ, ನ್ಯಾಯಾಧೀಶರನ್ನು ಭೇಟಿಯಾಗಬೇಕಿದೆ ಎಂದಿಟ್ಟುಕೊಳ್ಳಿ. ಅವರ ಮುಂದೆ ಹೋಗುವ ಮುನ್ನ ನಮ್ಮ ಬಟ್ಟೆ ಮತ್ತು ಹೊರತೋರಿಕೆ ಸಭ್ಯವಾಗಿದೆ ಎಂದು ಖಚಿತ ಮಾಡಿಕೊಳ್ಳುತ್ತೇವಲ್ಲವೇ? ಅದೇ ರೀತಿ ನಾವು ಸಭೆಗೆ ಹೋಗುವಾಗ “ಸರ್ವಲೋಕಕ್ಕೆ ನ್ಯಾಯತೀರಿಸುವ” ಯೆಹೋವ ದೇವರ ಮುಂದೆ ನಿಲ್ಲುತ್ತೇವೆ. ಹಾಗಾದರೆ ನಮ್ಮ ಉಡುಪು ಹೊರತೋರಿಕೆ ಸರ್ವಶಕ್ತ ದೇವರಿಗೆ ಘನಮಾನ ತರುವಂಥ ರೀತಿಯಲ್ಲಿ ಇರಬೇಕಲ್ಲವೇ?—ಆದಿಕಾಂಡ 18:25.

ದೇವರ ಉನ್ನತ ಮಟ್ಟಗಳನ್ನು ಬದುಕಿನಲ್ಲಿ ಪಾಲಿಸುತ್ತೇವೆಂದು ತೋರಿಸಲು. ಕ್ರೈಸ್ತರು “ಸಭ್ಯತೆ ಮತ್ತು ಸ್ವಸ್ಥಬುದ್ಧಿಯುಳ್ಳವರಾಗಿದ್ದು ಮರ್ಯಾದೆಗೆ ತಕ್ಕ” ಉಡುಪನ್ನು ಧರಿಸಬೇಕೆಂದು ಬೈಬಲ್‌ ಪ್ರೋತ್ಸಾಹಿಸುತ್ತದೆ. (1 ತಿಮೊಥೆಯ 2:9, 10) “ಸಭ್ಯ” ಉಡುಪು ಆಡಂಬರವಾಗಿರುವುದಿಲ್ಲ, ನೋಡುಗರಲ್ಲಿ ಲೈಂಗಿಕ ಭಾವವನ್ನು ಕೆರಳಿಸುವ ಪಾರದರ್ಶಕ ಅಥವಾ ಮೈತೋರಿಸುವ ರೀತಿಯಲ್ಲಿ ಇರುವುದಿಲ್ಲ. “ಸ್ವಸ್ಥಬುದ್ಧಿ” ಉಳ್ಳವರು ಟೈಟಾಗಿರುವ ಅಥವಾ ವಿಪರೀತ ಲೂಸಾಗಿರುವ ಉಡುಪನ್ನು ಆರಿಸಿಕೊಳ್ಳುವುದಿಲ್ಲ. ಯಾವ ರೀತಿಯ ಬಟ್ಟೆ ಧರಿಸಬೇಕು ಎನ್ನುವುದು ವ್ಯಕ್ತಿಪರ ಆಯ್ಕೆಯಾದರೂ ‘ಸಭ್ಯತೆ’ ಹಾಗೂ ‘ಸ್ವಸ್ಥಬುದ್ಧಿ ಉಳ್ಳವರಾಗಿ’ ಎನ್ನುವ ಎರಡು ತತ್ವಗಳನ್ನು ಯೆಹೋವನ ಸಾಕ್ಷಿಗಳು ಮರೆಯುವುದಿಲ್ಲ. ನಾವು ಧರಿಸುವ ಅಚ್ಚುಕಟ್ಟಾದ ಉಡುಪು “ನಮ್ಮ ರಕ್ಷಕನಾದ ದೇವರ ಬೋಧನೆ”ಗೆ ಅಲಂಕಾರದಂತಿದ್ದು ಆತನಿಗೆ ಮಹಿಮೆ ತರುತ್ತದೆ. (ತೀತ 2:10; 1 ಪೇತ್ರ 2:12) ಹೀಗೆ ನಮ್ಮ ಒಪ್ಪಓರಣದ ಉಡುಪು ಯೆಹೋವ ದೇವರ ಆರಾಧನೆಯ ಉನ್ನತ ಮಟ್ಟವನ್ನು ಇತರರಿಗೆ ಸಾರಿ ಹೇಳುತ್ತದೆ.

‘ನನ್ನತ್ರ ಒಳ್ಳೇ ಬಟ್ಟೆ ಇಲ್ಲ ನಾನು ಹೇಗೆ ಯೆಹೋವನ ಸಾಕ್ಷಿಗಳ ಸಭೆಗೆ ಹೋಗೋದು’ ಎಂದು ನೆನಸಬೇಡಿ. ಸಭೆಗೆ ಹೋಗುವಾಗ ದುಬಾರಿ ಹಾಗೂ ಫ್ಯಾಷನ್‌ಯುಕ್ತ ವಸ್ತ್ರ ಧರಿಸಬೇಕೆಂದಿಲ್ಲ; ಶುಭ್ರವಾಗಿ ನೀಟಾಗಿದ್ದರೆ ಸಾಕು.

  • ಸಭೆಗೆ ಹೋಗುವಾಗ ನಾವೇಕೆ ಸಭ್ಯ ಉಡುಗೆ ಧರಿಸಬೇಕು?

  • ಉಡುಗೆ ತೊಡುಗೆ ವಿಷಯದಲ್ಲಿ ಯಾವೆರಡು ತತ್ವವನ್ನು ನಾವು ಮನಸ್ಸಿನಲ್ಲಿಡಬೇಕು?