ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 107

ಸ್ತೆಫನನ್ನು ಕಲ್ಲೆಸೆದು ಕೊಲ್ಲಲಾಗುತ್ತದೆ

ಸ್ತೆಫನನ್ನು ಕಲ್ಲೆಸೆದು ಕೊಲ್ಲಲಾಗುತ್ತದೆ

ಇಲ್ಲಿ ಮೊಣಕಾಲೂರಿರುವ ಮನುಷ್ಯನು ಸ್ತೆಫನನು. ಅವನು ಯೇಸುವಿನ ಒಬ್ಬ ನಂಬಿಗಸ್ತ ಶಿಷ್ಯ. ಆದರೆ ಅವನಿಗೆ ಈಗ ಏನು ಸಂಭವಿಸುತ್ತಾ ಇದೆಯೆಂದು ನೋಡಿರಿ! ಈ ಜನರು ಅವನ ಮೇಲೆ ದೊಡ್ಡ ದೊಡ್ಡ ಕಲ್ಲುಗಳನ್ನು ಎಸೆಯುತ್ತಿದ್ದಾರೆ. ಈ ಭೀಕರ ಸಂಗತಿಯನ್ನು ಮಾಡುವಷ್ಟರ ಮಟ್ಟಿಗೆ ಅವರು ಸ್ತೆಫನನನ್ನು ದ್ವೇಷಿಸುವುದೇಕೆ? ನಾವೀಗ ಅದನ್ನು ನೋಡೋಣ.

ಹಲವಾರು ಅದ್ಭುತಗಳನ್ನು ಮಾಡುವಂತೆ ದೇವರು ಸ್ತೆಫನನಿಗೆ ಸಹಾಯಮಾಡುತ್ತಿದ್ದಾನೆ. ಈ ಪುರುಷರಿಗೆ ಇದು ಇಷ್ಟವಿಲ್ಲ. ಅವನು ಜನರಿಗೆ ದೇವರ ಕುರಿತು ಸತ್ಯವನ್ನು ಕಲಿಸಬಾರದೆಂದು ಅವರು ಅವನೊಂದಿಗೆ ವಾಗ್ವಾದಕ್ಕಿಳಿಯುತ್ತಾರೆ. ಆದರೆ ದೇವರು ಸ್ತೆಫನನಿಗೆ ತುಂಬಾ ವಿವೇಕವನ್ನು ಕೊಡುತ್ತಾನೆ. ಈ ಪುರುಷರು ಸುಳ್ಳಾದ ವಿಷಯಗಳನ್ನು ಕಲಿಸುತ್ತಿದ್ದಾರೆಂದು ಸ್ತೆಫನನು ತೋರಿಸಿಕೊಡುತ್ತಾನೆ. ಇದು ಅವರಿಗೆ ಇನ್ನಷ್ಟು ಸಿಟ್ಟೆಬ್ಬಿಸುತ್ತದೆ. ಆದುದರಿಂದ ಅವರು ಅವನನ್ನು ಹಿಡಿದು ಎಳೆದುಕೊಂಡು ಬಂದು, ಅವನ ವಿಷಯವಾಗಿ ಸುಳ್ಳುಸಾಕ್ಷಿಗಳನ್ನು ಹೇಳುವಂತೆ ಜನರನ್ನು ಕರೆತರುತ್ತಾರೆ.

ಮಹಾ ಯಾಜಕನು ಸ್ತೆಫನನನ್ನು ನೋಡಿ ‘ಇದೆಲ್ಲಾ ಸತ್ಯವೋ?’ ಎಂದು ಕೇಳುತ್ತಾನೆ. ಸ್ತೆಫನನು ಬೈಬಲ್‌ ಆಧಾರಿತವಾದ ಒಂದು ಉತ್ತಮ ಭಾಷಣ ಕೊಡುವ ಮೂಲಕ ಅದಕ್ಕೆ ಉತ್ತರಕೊಡುತ್ತಾನೆ. ಆ ಭಾಷಣದ ಕೊನೆಯಲ್ಲಿ, ಪುರಾತನ ಕಾಲದಲ್ಲಿ ದುರ್ಜನರು ಹೇಗೆ ಯೆಹೋವನ ಪ್ರವಾದಿಗಳನ್ನು ದ್ವೇಷಿಸಿದರೆಂದು ಅವನು ಹೇಳುತ್ತಾನೆ. ಆಮೇಲೆ ಅವನನ್ನುವುದು: ‘ನೀವು ಆ ಜನರಂತೆಯೇ ಇದ್ದೀರಿ. ದೇವರ ಸೇವಕನಾದ ಯೇಸುವನ್ನು ನೀವು ಕೊಂದುಹಾಕಿದಿರಿ. ದೇವರ ನಿಯಮಗಳನ್ನು ನೀವು ಪಾಲಿಸುವುದಿಲ್ಲ.’

ಇದು ಆ ಧಾರ್ಮಿಕ ಮುಖಂಡರನ್ನು ಬಹಳ ಕೋಪಗೊಳಿಸುತ್ತದೆ! ಅವರು ರೌದ್ರದಿಂದ ಹಲ್ಲು ಕಡಿಯುತ್ತಾರೆ. ಆದರೆ ಆಗ ಸ್ತೆಫನನು ತನ್ನ ತಲೆಯನ್ನು ಮೇಲಕ್ಕೆತ್ತಿ, ‘ಅಗೋ! ಪರಲೋಕದಲ್ಲಿ ಯೇಸುವು ದೇವರ ಬಲಗಡೆಯಲ್ಲಿ ನಿಂತಿರುವುದನ್ನು ನಾನು ಕಾಣುತ್ತೇನೆ’ ಎಂದು ಹೇಳುತ್ತಾನೆ. ಇದನ್ನು ಕೇಳಿದ ಆ ಪುರುಷರು ತಮ್ಮ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡು, ಸ್ತೆಫನನ ಮೇಲೆ ಬೀದ್ದು ಅವನನ್ನು ಹಿಡಿದು ಊರಹೊರಗೆ ನೂಕಿಕೊಂಡು ಹೋಗುತ್ತಾರೆ.

ಅಲ್ಲಿ ಅವರು ತಮ್ಮ ಮೇಲಂಗಿಗಳನ್ನು ತೆಗೆದು ಸೌಲನೆಂಬ ಯುವಕನ ಹತ್ತಿರ ಕೊಟ್ಟು ಅದನ್ನು ನೋಡಿಕೊಳ್ಳುವಂತೆ ಹೇಳುತ್ತಾರೆ. ಚಿತ್ರದಲ್ಲಿ ಸೌಲನು ನಿಂತಿರುವುದು ನಿಮಗೆ ಕಾಣಿಸುತ್ತದೋ? ಅನಂತರ ಈ ಪುರುಷರಲ್ಲಿ ಕೆಲವರು ಸ್ತೆಫನನ ಮೇಲೆ ಕಲ್ಲೆಸೆಯಲಾರಂಭಿಸುತ್ತಾರೆ. ಅವರಲ್ಲಿ ಕೆಲವರು ಧಾರ್ಮಿಕ ಮುಖಂಡರಿಂದ ಮೋಸಗೊಳಿಸಲ್ಪಟ್ಟ ಕಾರಣ ಹೀಗೆ ಮಾಡುತ್ತಿದ್ದಾರೆಂದು ಸ್ತೆಫನನಿಗೆ ಗೊತ್ತು. ಆದುದರಿಂದ, ನೀವು ಈ ಚಿತ್ರದಲ್ಲಿ ನೋಡುವಂತೆ, ಅವನು ಮೊಣಕಾಲೂರಿ ‘ಯೆಹೋವನೇ, ಈ ಕೆಟ್ಟತನಕ್ಕಾಗಿ ಅವರನ್ನು ಶಿಕ್ಷಿಸದಿರು’ ಎಂದು ದೇವರಿಗೆ ಪ್ರಾರ್ಥಿಸುತ್ತಾನೆ. ಆಮೇಲೆ ಸತ್ತುಹೋಗುತ್ತಾನೆ.

ಯಾರಾದರೂ ನಿಮಗೆ ಕೆಟ್ಟದ್ದನ್ನು ಮಾಡುವಾಗ, ಅದಕ್ಕೆ ಪ್ರತಿಯಾಗಿ ನೀವು ಅವರಿಗೆ ಹಾನಿಮಾಡಲು ಪ್ರಯತ್ನಿಸುತ್ತೀರೋ? ಅಥವಾ ಅವನಿಗೆ ಕೇಡುಮಾಡುವಂತೆ ದೇವರನ್ನು ಬೇಡುತ್ತೀರೋ? ಸ್ತೆಫನನಾಗಲಿ ಯೇಸುವಾಗಲಿ ಹಾಗೇ ಮಾಡಲಿಲ್ಲ. ತಮ್ಮನ್ನು ನಿರ್ದಯೆಯಿಂದ ದ್ವೇಷಿಸಿದವರಿಗೆ ಸಹ ಅವರು ದಯೆತೋರಿಸಿದರು. ನಾವು ಅವರ ಮಾದರಿಯನ್ನು ಅನುಕರಿಸಲು ಪ್ರಯತ್ನಿಸೋಣ.