ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 110

ತಿಮೊಥೆಯ—ಪೌಲನ ಹೊಸ ಸಹಾಯಕ

ತಿಮೊಥೆಯ—ಪೌಲನ ಹೊಸ ಸಹಾಯಕ

ಅಪೊಸ್ತಲ ಪೌಲನೊಂದಿಗೆ ನೀವು ಇಲ್ಲಿ ಕಾಣುವ ಯುವಕನ ಹೆಸರು ತಿಮೊಥೆಯ. ಅವನು ತನ್ನ ಮನೆಯವರೊಂದಿಗೆ ಲುಸ್ತ್ರದಲ್ಲಿ ವಾಸಿಸುತ್ತಾನೆ. ಅವನ ತಾಯಿಯ ಹೆಸರು ಯೂನೀಕೆ. ಅವನ ಅಜ್ಜಿ ಹೆಸರು ಲೋವಿ.

ಪೌಲನು ಲುಸ್ತ್ರಕ್ಕೆ ಬಂದಿರುವುದು ಇದು ಮೂರನೆಯ ಬಾರಿ. ಸುಮಾರು ಒಂದು ವರ್ಷದ ಮುಂಚೆ, ಪೌಲ ಮತ್ತು ಬಾರ್ನಬರು ಇಲ್ಲಿಗೆ ಪ್ರಥಮವಾಗಿ ಒಂದು ಸಾರುವ ಸಂಚಾರದ ಮೇಲೆ ಬಂದಿದ್ದರು. ಮತ್ತೆ ಈಗ ಪೌಲನು ತನ್ನ ಮಿತ್ರನಾದ ಸೀಲನೊಂದಿಗೆ ಬಂದಿರುತ್ತಾನೆ.

ಪೌಲನು ತಿಮೊಥೆಯನಿಗೆ ಏನು ಹೇಳುತ್ತಿದ್ದಾನೆಂದು ನಿಮಗೆ ತಿಳಿದಿದೆಯೇ? ‘ನನ್ನೊಂದಿಗೆ ಮತ್ತು ಸೀಲನೊಂದಿಗೆ ಬರುವುದಕ್ಕೆ ನಿನಗೆ ಇಷ್ಟವಿದೆಯಾ? ದೂರ ದೂರದ ಸ್ಥಳಗಳಲ್ಲಿರುವ ಜನರಿಗೆ ಸಾರುವುದಕ್ಕಾಗಿ ನೀನು ನಮಗೆ ಸಹಾಯಮಾಡಬಹುದು’ ಎಂದು ಪೌಲನು ಹೇಳುತ್ತಿದ್ದಾನೆ.

‘ಹೌದು, ನನಗೆ ಬರಲು ಇಷ್ಟವಿದೆ’ ಎಂದುತ್ತರಿಸುತ್ತಾನೆ ತಿಮೊಥೆಯ. ಅನಂತರ ಬೇಗನೆ ಅವನು ತನ್ನ ಮನೆಯವರನ್ನು ಬಿಟ್ಟು ಪೌಲ ಮತ್ತು ಸೀಲರೊಂದಿಗೆ ಹೋಗುತ್ತಾನೆ. ಆದರೆ ಅವರ ಪ್ರಯಾಣದ ಕುರಿತು ತಿಳಿಯುವ ಮುಂಚೆ, ಪೌಲನಿಗೆ ಏನು ಸಂಭವಿಸಿತ್ತೆಂದು ನಾವು ಕಂಡುಹಿಡಿಯೋಣ. ದಮಸ್ಕಕ್ಕೆ ಹೋಗುವ ದಾರಿಯಲ್ಲಿ ಯೇಸು ಅವನಿಗೆ ಕಾಣಿಸಿಕೊಂಡು ಈಗ ಸುಮಾರು 17 ವರ್ಷಗಳು ದಾಟಿರುತ್ತವೆ.

ಪೌಲನು ದಮಸ್ಕಕ್ಕೆ ಬಂದದ್ದು ಯೇಸುವಿನ ಶಿಷ್ಯರನ್ನು ಹಿಂಸೆಪಡಿಸಲಿಕ್ಕಾಗಿ ಎಂಬುದು ನಿಮಗೆ ನೆನಪಿರಬಹುದು. ಆದರೆ ಈಗ ಅವನು ತಾನೇ ಒಬ್ಬ ಶಿಷ್ಯನಾಗಿದ್ದಾನೆ! ತರುವಾಯ ಪೌಲನು ಯೇಸುವಿನ ಕುರಿತು ಕಲಿಸುವುದನ್ನು ಇಷ್ಟಪಡದ ಕೆಲವು ವೈರಿಗಳು ಅವನನ್ನು ಕೊಲ್ಲಲು ಯೋಜಿಸುತ್ತಾರೆ. ಆದರೆ ಅವರಿಂದ ತಪ್ಪಿಸಿಕೊಳ್ಳುವಂತೆ ಶಿಷ್ಯರು ಪೌಲನಿಗೆ ಸಹಾಯಮಾಡುತ್ತಾರೆ. ಅವರು ಅವನನ್ನು ಒಂದು ಪುಟ್ಟಿಯಲ್ಲಿ ಹಾಕಿ ಊರ ಗೋಡೆಯ ಕೆಳಗೆ ಇಳಿಸಿಬಿಟ್ಟು ಪಾರಾಗುವಂತೆ ನೆರವಾಗುತ್ತಾರೆ.

ಅನಂತರ ಪೌಲನು ಅಂತಿಯೋಕ್ಯಕ್ಕೆ ಸಾರಲು ಹೋಗುತ್ತಾನೆ. ಯೇಸುವಿನ ಶಿಷ್ಯರು ಕ್ರೈಸ್ತರೆಂದು ಮೊದಮೊದಲು ಕರೆಯಲ್ಪಟ್ಟದ್ದು ಇಲ್ಲಿಯೇ. ಅನಂತರ ಪೌಲಬಾರ್ನಬರು ಅಂತಿಯೋಕ್ಯದಿಂದ ದೂರದ ದೇಶಗಳಿಗೆ ಒಂದು ಸಾರುವ ಸಂಚಾರದ ಮೇಲೆ ಕಳುಹಿಸಲ್ಪಡುತ್ತಾರೆ. ಅವರು ಸಂದರ್ಶಿಸುವ ನಗರಗಳಲ್ಲೊಂದು ತಿಮೊಥೆಯನ ಊರಾದ ಲುಸ್ತ್ರವಾಗಿದೆ.

ಈಗ ಸುಮಾರು ಒಂದು ವರ್ಷದ ಬಳಿಕ, ಪೌಲನು ತನ್ನ ಎರಡನೆಯ ಸಂಚಾರದಲ್ಲಿ ಲುಸ್ತ್ರಕ್ಕೆ ಹಿಂದಿರುಗಿದ್ದಾನೆ. ಆ ಸಮಯದಲ್ಲಿಯೇ ತಿಮೊಥೆಯನು ಪೌಲ ಮತ್ತು ಸೀಲರೊಂದಿಗೆ ಹೊರಟು ಹೋಗುತ್ತಾನೆ. ಅವರು ಮೂವರು ಎಲ್ಲಿಗೆ ಹೋಗುತ್ತಾರೆಂದು ನಿಮಗೆ ಗೊತ್ತೋ? ನಕ್ಷೆಯನ್ನು ನೋಡಿರಿ. ಯಾವ ಯಾವ ಸ್ಥಳಗಳಿಗೆ ಅವರು ಹೋಗುತ್ತಾರೆಂದು ನಾವು ತಿಳಿಯೋಣ.

ಮೊದಲಾಗಿ, ಅವರು ಸಮೀಪದ ಇಕೋನ್ಯಕ್ಕೆ ಹೋಗುತ್ತಾರೆ. ಅನಂತರ ಅಂತಿಯೋಕ್ಯ ಎಂಬ ಎರಡನೆಯ ಪಟ್ಟಣಕ್ಕೆ. ಆಮೇಲೆ ಅವರು ತ್ರೋವದ ವರೆಗೆ ಪ್ರಯಾಣ ಮಾಡುತ್ತಾರೆ. ಅನಂತರ ಫಿಲಿಪ್ಪಿಗೆ, ಥೆಸಲೊನೀಕಕ್ಕೆ ಮತ್ತು ಬೆರೋಯಕ್ಕೆ ಮುಂದುವರಿಯುತ್ತಾರೆ. ನಕ್ಷೆಯಲ್ಲಿ ಅಥೇನೆಯನ್ನು ನೀವು ನೋಡುತ್ತೀರೋ? ಪೌಲನು ಅಲ್ಲಿ ಕೂಡ ಸಾರುತ್ತಾನೆ. ಆಮೇಲೆ ಅವರು ಕೊರಿಂಥದಲ್ಲಿ ಒಂದೂವರೆ ವರ್ಷ ಸಾರುತ್ತಾ ಕಳೆಯುತ್ತಾರೆ. ಕೊನೆಗೆ ಅವರು ಎಫೆಸದಲ್ಲಿ ಕೊಂಚ ಸಮಯ ತಂಗುತ್ತಾರೆ. ಅನಂತರ ಹಡಗಿನ ಮೂಲಕ ಕೈಸರೈಯಕ್ಕೆ ಹಿಂದೆ ಬರುತ್ತಾರೆ. ಅಲ್ಲಿಂದ ಅಂತಿಯೋಕ್ಯಕ್ಕೆ ಪ್ರಯಾಣಿಸುತ್ತಾರೆ. ಅಲ್ಲಿ ಪೌಲನು ತಂಗುತ್ತಾನೆ.

ಹೀಗೆ ತಿಮೊಥೆಯನು “ಸುವಾರ್ತೆ” ಸಾರಲು ಮತ್ತು ಅನೇಕ ಕ್ರೈಸ್ತ ಸಭೆಗಳನ್ನು ಆರಂಭಿಸಲು ಪೌಲನಿಗೆ ಸಹಾಯಮಾಡುತ್ತಾ ನೂರಾರು ಕಿಲೋಮೀಟರ್‌ ಪ್ರಯಾಣಮಾಡುತ್ತಾನೆ. ನೀವು ಬೆಳೆದು ದೊಡ್ಡವರಾಗುವಾಗ, ತಿಮೊಥೆಯನಂತೆ ದೇವರ ಒಬ್ಬ ನಂಬಿಗಸ್ತ ಸೇವಕರಾಗಿರುವಿರೋ?