ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 106

ಸೆರೆಮನೆಯಿಂದ ಬಿಡುಗಡೆ

ಸೆರೆಮನೆಯಿಂದ ಬಿಡುಗಡೆ

ಇಲ್ಲಿ ಸೆರೆಮನೆಯ ಬಾಗಿಲನ್ನು ತೆರೆದು ಹಿಡಿದಿರುವ ದೇವದೂತನನ್ನು ನೋಡಿರಿ. ಅವನು ಬಿಡುಗಡೆಮಾಡುತ್ತಿರುವ ಮನುಷ್ಯರು ಯೇಸುವಿನ ಅಪೊಸ್ತಲರು. ಅವರನ್ನು ಸೆರೆಮನೆಗೆ ಯಾಕೆ ಹಾಕಲಾಗಿತ್ತೆಂದು ನಾವು ನೋಡೋಣ.

ಯೇಸುವಿನ ಶಿಷ್ಯರ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟು ಕೇವಲ ಸ್ವಲ್ಪ ಸಮಯವು ದಾಟಿರುತ್ತದೆ. ಆಗ ಒಂದು ಘಟನೆ ಸಂಭವಿಸುತ್ತದೆ: ಒಂದು ಮಧ್ಯಾಹ್ನ ಪೇತ್ರ ಮತ್ತು ಯೋಹಾನ ಯೆರೂಸಲೇಮಿನ ದೇವಾಲಯಕ್ಕೆ ಹೋಗುತ್ತಿದ್ದಾರೆ. ಅಲ್ಲಿ ಬಾಗಿಲ ಬಳಿಯಲ್ಲಿ, ಹುಟ್ಟಿನಿಂದಲೇ ಕುಂಟನಾಗಿರುವ ಒಬ್ಬ ಮನುಷ್ಯನು ಇದ್ದಾನೆ. ದೇವಾಲಯಕ್ಕೆ ಹೋಗುವವರಿಂದ ಭಿಕ್ಷೆ ಬೇಡುವುದಕ್ಕಾಗಿ ಪ್ರತಿ ದಿನ ಜನರು ಅವನನ್ನು ಇಲ್ಲಿಗೆ ಹೊತ್ತು ತರುತ್ತಾರೆ. ಅವನು ಪೇತ್ರಯೋಹಾನರನ್ನು ಕಾಣುವಾಗ ತನಗೆ ಏನಾದರೂ ಕೊಡುವಂತೆ ಬೇಡುತ್ತಾನೆ. ಅಪೊಸ್ತಲರು ಏನು ಮಾಡುವರು?

ಅವರು ನಿಂತು ಆ ಬಡ ಮನುಷ್ಯನನ್ನು ದೃಷ್ಟಿಸಿ ನೋಡುತ್ತಾರೆ. ಪೇತ್ರನು ಅವನಿಗೆ, ‘ಹಣವಂತೂ ನನ್ನಲ್ಲಿಲ್ಲ. ಆದರೆ ನನ್ನಲ್ಲಿರುವುದನ್ನು ನಿನಗೆ ಕೊಡುತ್ತೇನೆ. ಯೇಸುವಿನ ಹೆಸರಿನಲ್ಲಿ ಎದ್ದು ನಡೆದಾಡು!’ ಎಂದು ಹೇಳಿ ಅವನ ಬಲಗೈ ಹಿಡಿದು ಎತ್ತುತ್ತಾನೆ. ಆ ಕೂಡಲೆ ಅವನು ಹಾರಿ ನಿಂತು ನಡೆಯಲಾರಂಭಿಸುತ್ತಾನೆ. ಜನರು ಇದನ್ನು ನೋಡಿ ಬೆರಗಾಗುತ್ತಾರೆ. ಇಂಥ ಒಂದು ಅದ್ಭುತ ನಡೆದದ್ದಕ್ಕಾಗಿ ಅತ್ಯಾನಂದಪಡುತ್ತಾರೆ.

‘ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರ ಶಕ್ತಿಯಿಂದಲೇ ನಾವು ಈ ಅದ್ಭುತವನ್ನು ನಡಿಸಿದ್ದೇವೆ’ ಅನ್ನುತ್ತಾನೆ ಪೇತ್ರ. ಅವನು ಮತ್ತು ಯೋಹಾನನು ಇನ್ನೂ ಮಾತಾಡುತ್ತಿರುವಾಗ, ಕೆಲವು ಧಾರ್ಮಿಕ ಮುಖಂಡರು ಅಲ್ಲಿಗೆ ಬರುತ್ತಾರೆ. ಪೇತ್ರ ಯೋಹಾನರಿಬ್ಬರು ಯೇಸು ಸತ್ತವರೊಳಗಿಂದ ಎಬ್ಬಿಸಲ್ಪಟ್ಟ ಕುರಿತು ಜನರಿಗೆ ಹೇಳುತ್ತಿರುವ ಕಾರಣ ಅವರು ಸಿಟ್ಟಾಗುತ್ತಾರೆ. ಆದುದರಿಂದ ಅವರನ್ನು ಹಿಡಿದು ಸೆರೆಮನೆಯೊಳಗೆ ಹಾಕುತ್ತಾರೆ.

ಮರುದಿನ ಧಾರ್ಮಿಕ ಮುಖಂಡರೆಲ್ಲರೂ ಸೇರಿ ಒಂದು ದೊಡ್ಡ ಕೂಟವನ್ನು ನಡಿಸುತ್ತಾರೆ. ಪೇತ್ರಯೋಹಾನರನ್ನು ಅಲ್ಲಿಗೆ ಕರೆತರಲಾಗುತ್ತದೆ. ಅವರು ವಾಸಿಮಾಡಿದ ಮನುಷ್ಯನನ್ನೂ ಅಲ್ಲಿಗೆ ಕರೆತರುತ್ತಾರೆ. ‘ಈ ಅದ್ಭುತವನ್ನು ನೀವು ಯಾವ ಶಕ್ತಿಯಿಂದ ಮಾಡಿದಿರಿ?’ ಎಂದು ಕೇಳುತ್ತಾರೆ ಆ ಧಾರ್ಮಿಕ ಮುಖಂಡರು.

ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರ ಶಕ್ತಿಯಿಂದಲೇ ಅದಾಯಿತೆಂದು ಪೇತ್ರನು ಅವರಿಗೆ ಹೇಳುತ್ತಾನೆ. ಯಾಜಕರಿಗೆ ಏನು ಮಾಡುವುದೆಂದು ತಿಳಿಯುವುದಿಲ್ಲ. ಯಾಕೆಂದರೆ ಈ ಆಶ್ಚರ್ಯಕರ ಅದ್ಭುತ ನಿಜವಾಗಿ ಸಂಭವಿಸಿದೆ ಎಂಬದನ್ನು ಅವರು ಅಲ್ಲಗಳೆಯಲಾರರು. ಆದುದರಿಂದ ಇನ್ನು ಮುಂದೆ ಯೇಸುವಿನ ಕುರಿತು ಮಾತಾಡಬಾರದೆಂದು ಅವರು ಅಪೊಸ್ತಲರನ್ನು ಎಚ್ಚರಿಸಿ ಬಿಟ್ಟುಬಿಡುತ್ತಾರೆ.

ದಿನಗಳು ದಾಟಿದಂತೆ ಅಪೊಸ್ತಲರು ಯೇಸುವಿನ ಕುರಿತು ಸಾರುತ್ತಾ, ರೋಗಿಗಳನ್ನು ವಾಸಿಮಾಡುತ್ತಾ ಇರುತ್ತಾರೆ. ಈ ಅದ್ಭುತಗಳ ಕುರಿತ ಸುದ್ದಿಯು ಹರಡುತ್ತದೆ. ಹೀಗೆ ಯೆರೂಸಲೇಮಿನ ಸುತ್ತಮುತ್ತಲಿನ ಊರುಗಳಿಂದಲೂ ಜನರು ರೋಗಿಗಳನ್ನು ಗುಣಪಡಿಸುವಂತೆ ಅಪೊಸ್ತಲರ ಬಳಿಗೆ ಕರೆತರುತ್ತಾರೆ. ಇದನ್ನು ನೋಡಿದ ಧಾರ್ಮಿಕ ಮುಖಂಡರಿಗೆ ತುಂಬಾ ಹೊಟ್ಟೆಕಿಚ್ಚಾಗುತ್ತದೆ. ಆದುದರಿಂದ ಅವರು ಮತ್ತೆ ಅಪೊಸ್ತಲರನ್ನು ಹಿಡಿದು ಸೆರೆಮನೆಗೆ ಹಾಕುತ್ತಾರೆ. ಆದರೆ ಅವರು ಅಲ್ಲಿ ಬಹು ಸಮಯ ಉಳಿಯುವುದಿಲ್ಲ.

ನೀವು ಈ ಚಿತ್ರದಲ್ಲಿ ನೋಡುವಂತೆ, ರಾತ್ರಿಯಲ್ಲಿ ದೇವದೂತನು ಸೆರೆಮನೆಯ ಬಾಗಿಲನ್ನು ತೆರೆಯುತ್ತಾನೆ. ಮಾತ್ರವಲ್ಲ ಆ ದೂತನು ಅವರಿಗೆ ‘ನೀವು ಹೋಗಿ ದೇವಾಲಯದಲ್ಲಿ ನಿಂತುಕೊಂಡು ಜನರಿಗೆ ಸುವಾರ್ತೆಯನ್ನು ತಿಳಿಸುತ್ತಾ ಇರಿ’ ಎಂದು ಹೇಳುತ್ತಾನೆ. ಮರುದಿನ ಬೆಳಗ್ಗೆ, ಅಪೊಸ್ತಲರನ್ನು ಸೆರೆಮನೆಯಿಂದ ಕರೆತರುವಂತೆ ಧಾರ್ಮಿಕ ಮುಖಂಡರು ಜನರನ್ನು ಕಳುಹಿಸಿದಾಗ ಅವರು ಅಲ್ಲಿಲ್ಲ. ಅವರು ದೇವಾಲಯದಲ್ಲಿ ಕಲಿಸುತ್ತಿರುವುದನ್ನು ಆಮೇಲೆ ಜನರು ಕಾಣುತ್ತಾರೆ ಮತ್ತು ಸನ್ಹೇದ್ರಿನ್‌ ಸಭಾಗೃಹಕ್ಕೆ ಅವರನ್ನು ಕರೆದುಕೊಂಡು ಬರುತ್ತಾರೆ.

‘ಯೇಸುವಿನ ವಿಷಯವಾಗಿ ಇನ್ನು ಮುಂದೆ ಮಾತಾಡಬಾರದೆಂದು ನಾವು ನಿಮಗೆ ಖಂಡಿತವಾಗಿ ಅಪ್ಪಣೆಕೊಟ್ಟೆವಲ್ಲಾ, ಆದರೆ ನೀವು ಯೆರೂಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿದ್ದೀರಿ’ ಎಂದು ಧಾರ್ಮಿಕ ಮುಖಂಡರು ದೂರುತ್ತಾರೆ. ಆಗ ಅಪೊಸ್ತಲರು ಉತ್ತರಿಸುವುದು: ‘ನಾವು ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರಾಗಿರಬೇಕು.’ ಹೀಗೆ ಅವರು “ಸುವಾರ್ತೆ” ಸಾರುವುದನ್ನು ಬಿಡದೆ ಮುಂದುವರಿಸುತ್ತಾರೆ. ಅದು ನಮಗೆ ಅನುಸರಿಸಲಿಕ್ಕಾಗಿ ಒಂದು ಉತ್ತಮ ಮಾದರಿಯಾಗಿಲ್ಲವೇ?