ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 93

ಯೇಸು ಅನೇಕ ಜನರಿಗೆ ಉಣಿಸುತ್ತಾನೆ

ಯೇಸು ಅನೇಕ ಜನರಿಗೆ ಉಣಿಸುತ್ತಾನೆ

ಒಂದು ಭೀಕರ ಸಂಗತಿ ಸಂಭವಿಸಿದೆ. ಸ್ನಾನಿಕನಾದ ಯೋಹಾನನು ಸ್ವಲ್ಪ ಮುಂಚೆಯಷ್ಟೇ ಕೊಲ್ಲಲ್ಪಟ್ಟನು. ಅರಸನ ಪತ್ನಿಯಾದ ಹೆರೋದ್ಯಳಿಗೆ ಅವನನ್ನು ಕಂಡರೆ ಆಗುತ್ತಿರಲಿಲ್ಲ. ಆದುದರಿಂದ, ಸಮಯ ನೋಡಿ ಅರಸನ ಮೂಲಕ ಯೋಹಾನನ ತಲೆಯನ್ನು ಕಡಿಸಿ ಕೊಲೆಮಾಡಿಸುತ್ತಾಳೆ.

ಯೇಸುವಿಗೆ ಇದರ ಕುರಿತು ತಿಳಿದುಬಂದಾಗ ಬಹಳ ದುಃಖವಾಗುತ್ತದೆ. ಅವನು ಒಂಟಿಯಾಗಿ ಒಂದು ಏಕಾಂತ ಸ್ಥಳಕ್ಕೆ ಹೋಗುತ್ತಾನೆ. ಆದರೆ ಜನರು ಗುಂಪುಗುಂಪಾಗಿ ಅವನನ್ನು ಹಿಂಬಾಲಿಸುತ್ತಾರೆ. ಅವರನ್ನು ನೋಡಿ ಯೇಸುವಿಗೆ ಕನಿಕರವಾಗುತ್ತದೆ. ಆದುದರಿಂದ ಅವನು ಅವರಿಗೆ ದೇವರ ರಾಜ್ಯದ ಕುರಿತು ತಿಳಿಸುತ್ತಾನೆ ಮತ್ತು ರೋಗಿಗಳನ್ನು ಗುಣಪಡಿಸುತ್ತಾನೆ.

ಆ ಸಂಜೆ ಅವನ ಶಿಷ್ಯರು ಅವನ ಬಳಿಗೆ ಬಂದು, ‘ಈಗ ತುಂಬಾ ಹೊತ್ತಾಗಿದೆ, ಇದು ಜನರಿಲ್ಲದ ಕಾಡುಪ್ರದೇಶ. ಈ ಜನರಿಗೆ ಅಪ್ಪಣೆಕೊಡು, ಅವರು ಅಕ್ಕಪಕ್ಕದ ಹಳ್ಳಿಗಳಿಗೆ ಹೋಗಿ ಆಹಾರಪದಾರ್ಥಗಳನ್ನು ಕೊಂಡುಕೊಳ್ಳಲಿ’ ಎಂದು ಹೇಳುತ್ತಾರೆ.

ಅದಕ್ಕೆ ಯೇಸು ‘ಅವರು ಹೋಗುವುದು ಬೇಡ. ನೀವೇ ಅವರಿಗೆ ಊಟಕ್ಕೆ ಕೊಡಿರಿ’ ಎಂದುತ್ತರಿಸುತ್ತಾನೆ. ಆಮೇಲೆ ಫಿಲಿಪ್ಪನ ಕಡೆಗೆ ತಿರುಗಿ, ‘ಈ ಎಲ್ಲಾ ಜನರಿಗೆ ಊಟಕ್ಕೆ ಸಾಕಷ್ಟು ಆಹಾರವನ್ನು ನಾವೆಲ್ಲಿಂದ ಕೊಂಡುತರೋಣ?’ ಎಂದು ಕೇಳುತ್ತಾನೆ.

‘ಒಬ್ಬೊಬ್ಬನಿಗೆ ಸ್ವಲ್ಪಸ್ವಲ್ಪ ಆಹಾರ ಕೊಳ್ಳಬೇಕಾದರೂ ತುಂಬಾ ಹಣ ಬೇಕಾಗುತ್ತದೆ’ ಎಂದುತ್ತರಿಸುತ್ತಾನೆ ಫಿಲಿಪ್ಪನು. ಆಗ ಅಂದ್ರೆಯನು, ‘ಇಲ್ಲಿರುವ ಈ ಹುಡುಗನ ಬಳಿ ಐದು ರೊಟ್ಟಿಗಳೂ ಎರಡು ಮೀನುಗಳೂ ಇವೆ. ಆದರೆ ಇಷ್ಟು ಜನರಿಗೆ ಇದು ಸಾಕಾಗುವುದಿಲ್ಲ’ ಎಂದು ಹೇಳುತ್ತಾನೆ.

‘ಜನರಿಗೆ ಹುಲ್ಲಿನ ಮೇಲೆ ಕೂತುಕೊಳ್ಳುವುದಕ್ಕೆ ಹೇಳಿರಿ’ ಎಂದು ಹೇಳುತ್ತಾನೆ ಯೇಸು. ಅನಂತರ ಆಹಾರಕ್ಕಾಗಿ ದೇವರಿಗೆ ಕೃತಜ್ಞತೆ ಹೇಳಿ, ಅವುಗಳನ್ನು ತುಂಡುತುಂಡಾಗಿ ಮುರಿಯಲಾರಂಭಿಸುತ್ತಾನೆ. ಆಮೇಲೆ, ಶಿಷ್ಯರು ರೊಟ್ಟಿ ಮತ್ತು ಮೀನುಗಳನ್ನು ಎಲ್ಲಾ ಜನರಿಗೆ ಕೊಡುತ್ತಾರೆ. ಅಲ್ಲಿ 5,000 ಗಂಡಸರು ಮತ್ತು ಸಾವಿರಾರು ಹೆಂಗಸರು, ಮಕ್ಕಳು ಇದ್ದಾರೆ. ಅವರೆಲ್ಲರೂ ಊಟಮಾಡಿ ತೃಪ್ತರಾಗುತ್ತಾರೆ. ಮಿಕ್ಕಿದ್ದನ್ನು ಶಿಷ್ಯರು ಕೂಡಿಸಿದಾಗ 12 ಪುಟ್ಟಿಗಳು ತುಂಬುತ್ತವೆ!

ಇದಾದ ಮೇಲೆ ಯೇಸು ತನ್ನ ಶಿಷ್ಯರಿಗೆ ದೋಣಿ ಹತ್ತಿ ಗಲಿಲಾಯ ಸಮುದ್ರದ ಆಚೇ ದಡಕ್ಕೆ ಹೋಗಲು ಹೇಳುತ್ತಾನೆ. ಸಮುದ್ರದಲ್ಲಿ ಹೋಗುತ್ತಿರುವಾಗ ರಾತ್ರಿಯಲ್ಲಿ ಒಂದು ದೊಡ್ಡ ಬಿರುಗಾಳಿ ಬೀಸುತ್ತದೆ. ದೋಣಿ ತೆರೆಗಳ ಬಡಿತಕ್ಕೆ ಸಿಕ್ಕಿ ಆಚೆ ಈಚೆ ಹೊಯ್ದಾಡುತ್ತಿರುತ್ತದೆ. ಶಿಷ್ಯರಿಗೆ ಬಹಳ ಹೆದರಿಕೆಯಾಗುತ್ತದೆ. ಆಗ ಮಧ್ಯರಾತ್ರಿಯಲ್ಲಿ ಯಾರೋ ಒಬ್ಬರು ನೀರಿನ ಮೇಲೆ ತಮ್ಮ ಕಡೆಗೆ ನಡೆದು ಬರುತ್ತಿರುವುದು ಶಿಷ್ಯರಿಗೆ ಕಾಣುತ್ತದೆ. ಅವರು ಭಯದಿಂದ ತತ್ತರಿಸಿ ಕೂಗುತ್ತಾರೆ. ಯಾಕೆಂದರೆ ತಾವು ನೋಡುತ್ತಿರುವುದು ಏನೆಂದು ಅವರಿಗೆ ತಿಳಿಯುವುದಿಲ್ಲ.

‘ಹೆದರಬೇಡಿರಿ, ನಾನು!’ ಅನ್ನುತ್ತಾನೆ ಯೇಸು. ಅವರಿಗೆ ಇನ್ನೂ ನಂಬಲಿಕ್ಕೆ ಆಗುವುದಿಲ್ಲ. ಆದುದರಿಂದ ಪೇತ್ರನು, ‘ಸ್ವಾಮೀ, ನೀನೇಯಾದರೆ ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವುದಕ್ಕೆ ನನಗೆ ಅಪ್ಪಣೆಕೊಡು’ ಎಂದು ಹೇಳುತ್ತಾನೆ. ‘ಬಾ!’ ಎಂದು ಉತ್ತರಿಸುತ್ತಾನೆ ಯೇಸು. ಆಗ ಪೇತ್ರನು ದೋಣಿಯಿಂದ ಇಳಿದು ನೀರಿನ ಮೇಲೆ ನಡೆಯುತ್ತಾನೆ! ಆಗ ಅವನಿಗೆ ಭಯವಾಗುತ್ತದೆ, ಅವನು ಮುಳುಗಲಾರಂಭಿಸುತ್ತಾನೆ. ಆದರೆ ಯೇಸು ಕೈಚಾಚಿ ಅವನನ್ನು ಹಿಡಿದು ಕಾಪಾಡುತ್ತಾನೆ.

ತದನಂತರ, ಯೇಸು ಪುನಃ ಸಾವಿರಾರು ಜನರಿಗೆ ಉಣಿಸುತ್ತಾನೆ. ಈ ಸಾರಿ ಏಳು ರೊಟ್ಟಿಗಳು ಮತ್ತು ಕೆಲವು ಚಿಕ್ಕ ಮೀನುಗಳಿಂದ. ಅಲ್ಲಿ ಕೂಡ ಎಲ್ಲರಿಗೆ ಬೇಕಾಗುವಷ್ಟು ಊಟ ಇರುತ್ತದೆ. ಯೇಸು ಜನರನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಅಲ್ಲವೇ? ಅವನು ದೇವರ ರಾಜ್ಯದಲ್ಲಿ ಅರಸನಾಗಿ ಆಳುವಾಗ, ನಾವು ಯಾವುದರ ಕುರಿತು ಎಂದೂ ಚಿಂತಿಸಬೇಕಾಗಿರುವುದಿಲ್ಲ!