ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 101

ಯೇಸು ಕೊಲ್ಲಲ್ಪಡುತ್ತಾನೆ

ಯೇಸು ಕೊಲ್ಲಲ್ಪಡುತ್ತಾನೆ

ಇಲ್ಲಿ ನಡಿಯುತ್ತಿರುವ ಭೀಕರ ಸಂಗತಿಯನ್ನು ನೋಡಿರಿ! ಯೇಸುವನ್ನು ಕೊಲ್ಲುತ್ತಿದ್ದಾರೆ. ಅವನನ್ನು ಒಂದು ಕಂಬದ ಮೇಲೆ ತೂಗುಹಾಕಿ ಅವನ ಕೈಗಳಿಗೆ ಮತ್ತು ಕಾಲುಗಳಿಗೆ ಮೊಳೆಗಳನ್ನು ಜಡಿದಿದ್ದಾರೆ. ಇವರು ಯಾಕೆ ಯೇಸುವಿಗೆ ಹೀಗೆ ಮಾಡುತ್ತಿದ್ದಾರೆ?

ಯಾಕೆಂದರೆ ಕೆಲವು ಜನರು ಯೇಸುವನ್ನು ದ್ವೇಷಿಸುತ್ತಾರೆ. ಅವರು ಯಾರೆಂದು ನಿಮಗೆ ತಿಳಿದಿದೆಯೇ? ಅವರಲ್ಲಿ ಒಬ್ಬನು ದುಷ್ಟ ದೇವದೂತನಾದ ಪಿಶಾಚನಾದ ಸೈತಾನನು. ಆದಾಮಹವ್ವರು ಯೆಹೋವ ದೇವರಿಗೆ ಅವಿಧೇಯರಾಗುವಂತೆ ಮಾಡಿದವನು ಅವನೇ. ಯೇಸುವಿನ ಶತ್ರುಗಳು ಈ ಭೀಕರ ಪಾತಕವನ್ನು ಮಾಡುವಂತೆ ಪ್ರೇರೇಪಿಸಿದವನೂ ಸೈತಾನನೇ.

ಯೇಸು ಇಲ್ಲಿ ಕಂಬಕ್ಕೆ ಜಡಿಯಲ್ಪಡುವ ಮುಂಚೆ ಕೂಡ ಅವನ ಶತ್ರುಗಳು ಅವನನ್ನು ಕೀಳಾಗಿ ಉಪಚರಿಸುತ್ತಾರೆ. ಅವರು ಗೆತ್ಸೇಮನೆ ತೋಟಕ್ಕೆ ಬಂದು ಅವನನ್ನು ಹೇಗೆ ಹಿಡಿದೊಯ್ದರೆಂಬದನ್ನು ನೆನಪಿಸಿಕೊಳ್ಳಿ. ಆ ಶತ್ರುಗಳು ಯಾರಾಗಿದ್ದರು? ಹೌದು, ಅವರು ಧಾರ್ಮಿಕ ಮುಖಂಡರಾಗಿದ್ದರು. ಈಗ, ಮುಂದೇನಾಗುತ್ತದೆಂದು ನಾವು ನೋಡೋಣ.

ಆ ಧಾರ್ಮಿಕ ಮುಖಂಡರು ಯೇಸುವನ್ನು ಹಿಡಿದುಕೊಂಡು ಹೋದಾಗ ಅವನ ಅಪೊಸ್ತಲರು ಅಲ್ಲಿಂದ ಓಡಿಹೋಗುತ್ತಾರೆ. ಯೇಸುವನ್ನು ಶತ್ರುಗಳೊಂದಿಗೆ ಒಂಟಿಗನಾಗಿ ಬಿಟ್ಟು ಹೋಗುತ್ತಾರೆ. ಯಾಕೆಂದರೆ ಅವರು ಹೆದರುತ್ತಾರೆ. ಆದರೆ ಅಪೊಸ್ತಲರಾದ ಪೇತ್ರ ಮತ್ತು ಯೋಹಾನರು ಹೆಚ್ಚು ದೂರ ಓಡಿಹೋಗುವುದಿಲ್ಲ. ಅವರು ಯೇಸುವಿಗೆ ಏನು ಸಂಭವಿಸುತ್ತದೆಂದು ನೋಡಲು ದೂರದಿಂದಲೇ ಹಿಂದೆ ಹಿಂದೆ ಹಿಂಬಾಲಿಸುತ್ತಾರೆ.

ಯಾಜಕರು ಯೇಸುವನ್ನು ಈ ಮುಂಚೆ ಮಹಾಯಾಜಕನಾಗಿದ್ದ ವೃದ್ಧ ಅನ್ನನ ಬಳಿಗೆ ಕರೆತರುತ್ತಾರೆ. ಜನರ ಗುಂಪು ಇಲ್ಲಿ ಸ್ವಲ್ಪ ಹೊತ್ತು ಇದ್ದು, ಅನಂತರ ಈಗ ಮಹಾಯಾಜಕನಾಗಿರುವ ಕಾಯಫನ ಬಳಿಗೆ ಒಯ್ಯುತ್ತಾರೆ. ಅವನ ಮನೆಯಲ್ಲಿ ಅನೇಕ ಧಾರ್ಮಿಕ ಮುಖಂಡರು ಒಟ್ಟುಸೇರಿರುತ್ತಾರೆ.

ಕಾಯಫನ ಮನೆಯಲ್ಲಿ ಅವರು ಒಂದು ವಿಚಾರಣೆ ನಡಿಸುತ್ತಾರೆ. ಆಗ ಯೇಸುವಿನ ಮೇಲೆ ಸುಳ್ಳುಸಾಕ್ಷಿಗಳನ್ನು ಹೇಳಲು ಜನರನ್ನು ಕರೆತರುತ್ತಾರೆ. ‘ಯೇಸುವಿಗೆ ಮರಣ ದಂಡನೆ ವಿಧಿಸಬೇಕು’ ಎನ್ನುತ್ತಾರೆ ಆ ಧಾರ್ಮಿಕ ಮುಖಂಡರೆಲ್ಲರು. ಅನಂತರ ಅವರು ಯೇಸುವಿನ ಮುಖದ ಮೇಲೆ ಉಗುಳಿ, ಅವನನ್ನು ತಮ್ಮ ಮುಷ್ಟಿಗಳಿಂದ ಗುದ್ದುತ್ತಾರೆ.

ಇದೆಲ್ಲವೂ ನಡಿಯುತ್ತಿರುವಾಗ ಪೇತ್ರನು ಹೊರಗೆ ಅಂಗಳದಲ್ಲಿ ಕೂತಿರುತ್ತಾನೆ. ಆ ರಾತ್ರಿ ತುಂಬ ಚಳಿಯಾದ್ದರಿಂದ ಜನರು ಬೆಂಕಿಹೊತ್ತಿಸಿ, ಸುತ್ತಲೂ ಚಳಿಕಾಯಿಸಿಕೊಂಡು ಕೂತಿರುತ್ತಾರೆ. ಆಗ ದಾಸಿಯೊಬ್ಬಳು ಪೇತ್ರನನ್ನು ನೋಡಿ, ‘ಇವನು ಸಹ ಯೇಸುವಿನ ಸಂಗಡ ಇದ್ದವನು’ ಅನ್ನುತ್ತಾಳೆ.

ಅದಕ್ಕೆ ಪೇತ್ರನು, ‘ಇಲ್ಲ, ನಾನು ಅವನ ಸಂಗಡ ಇರಲಿಲ್ಲ!’ ಎಂದು ಉತ್ತರಿಸುತ್ತಾನೆ.

ಅವನು ಯೇಸುವಿನ ಸಂಗಡ ಇದ್ದವನೆಂದು ಜನರು ಮೂರು ಸಲ ಪೇತ್ರನಿಗೆ ಹೇಳುತ್ತಾರೆ. ಆದರೆ ಪೇತ್ರನು ಪ್ರತಿ ಸಲವೂ ಇಲ್ಲ, ಅದು ಸತ್ಯವಲ್ಲವೆಂದು ಹೇಳುತ್ತಾನೆ. ಪೇತ್ರನು ಇದನ್ನು ಮೂರನೆಯ ಸಲ ಹೇಳುವಾಗ ಯೇಸು ಹಿಂದಿರುಗಿ ಅವನನ್ನು ದೃಷ್ಟಿಸಿ ನೋಡುತ್ತಾನೆ. ಆಗ ಪೇತ್ರನಿಗೆ ಹೀಗೆ ಸುಳ್ಳು ಹೇಳಿದ್ದಕ್ಕಾಗಿ ದುಃಖ ಉಮ್ಮಿಳಿಸಿ ಬರುತ್ತದೆ. ಅವನು ಹೊರಗೆ ಹೋಗಿ ಬಹು ವ್ಯಥೆಪಟ್ಟು ಅಳುತ್ತಾನೆ.

ಶುಕ್ರವಾರ ಬೆಳಗ್ಗೆ ಬೆಳಕಾಗುತ್ತಿದ್ದಂತೆ ಯಾಜಕರು ಯೇಸುವನ್ನು ನ್ಯಾಯವಿಚಾರಣೆ ಮಾಡುವ ಸನ್ಹೇದ್ರಿನ್‌ ಎಂಬ ದೊಡ್ಡ ಸಭಾಂಗಣಕ್ಕೆ ಕರೆದುಕೊಂಡು ಹೋಗುತ್ತಾರೆ. ಅವನನ್ನು ಏನು ಮಾಡಬೇಕೆಂಬುದರ ಕುರಿತು ಅವರು ಇಲ್ಲಿ ಮಾತುಕತೆ ನಡಿಸುತ್ತಾರೆ. ಬಳಿಕ ಅವನನ್ನು ಯೂದಾಯ ಪ್ರದೇಶದ ಅಧಿಪತಿಯಾದ ಪೊಂತ್ಯ ಪಿಲಾತನ ಬಳಿಗೆ ಒಯ್ಯುತ್ತಾರೆ.

‘ಇವನು ಕೆಟ್ಟ ಮನುಷ್ಯನು, ಇವನನ್ನು ಕೊಲ್ಲಬೇಕು’ ಎಂದು ಯಾಜಕರು ಪಿಲಾತನಿಗೆ ಹೇಳುತ್ತಾರೆ. ಯೇಸುವಿಗೆ ಪ್ರಶ್ನೆಗಳನ್ನು ಕೇಳಿದ ಬಳಿಕ ಪಿಲಾತನು ಅನ್ನುವುದು: ‘ಇವನು ಕೆಟ್ಟದ್ದೇನನ್ನೂ ಮಾಡಿದವನಂತೆ ನನಗೆ ಕಾಣಿಸುವುದಿಲ್ಲ.’ ಅನಂತರ ಪಿಲಾತನು ಯೇಸುವನ್ನು ಹೆರೋದ ಅಂತಿಪ್ಪನ ಬಳಿಗೆ ಕಳುಹಿಸುತ್ತಾನೆ. ಹೆರೋದನು ಗಲಿಲಾಯದ ಅಧಿಪತಿ. ಆದರೆ ಅವನಿರುವುದು ಯೆರೂಸಲೇಮಿನಲ್ಲಿ. ಅಲ್ಲಿಗೆ ಹೋದಾಗ ಹೆರೋದನು ಸಹ ಯೇಸುವಿನಲ್ಲಿ ಯಾವ ತಪ್ಪನ್ನೂ ಕಾಣುವುದಿಲ್ಲ. ಆದುದರಿಂದ ಅವನು ಯೇಸುವನ್ನು ಪುನಃ ಪಿಲಾತನ ಬಳಿಗೆ ಕಳುಹಿಸುತ್ತಾನೆ.

ಪಿಲಾತನು ಯೇಸುವನ್ನು ಬಿಟ್ಟುಬಿಡಲು ಬಯಸುತ್ತಾನೆ. ಆದರೆ ಅವನ ಬದಲಿಗೆ ಇನ್ನೊಬ್ಬ ಸೆರೆಯಾಳನ್ನು ಬಿಡಿಸಲು ಯೇಸುವಿನ ಶತ್ರುಗಳು ಬಯಸುತ್ತಾರೆ. ಆ ಮನುಷ್ಯನು ಕಳ್ಳನಾದ ಬರಬ್ಬನು. ಸುಮಾರು ಮಧ್ಯಾಹ್ನದ ಹೊತ್ತಿಗೆ ಪಿಲಾತನು ಯೇಸುವನ್ನು ಹೊರಗೆ ತರುತ್ತಾನೆ. ಅವನು ಜನರಿಗೆ, ‘ಇಗೋ! ನಿಮ್ಮ ಅರಸನು!’ ಅನ್ನುತ್ತಾನೆ. ಆದರೆ ಮಹಾಯಾಜಕರು, ‘ಅವನನ್ನು ತೆಗೆದುಕೊಂಡು ಹೋಗು! ಅವನನ್ನು ಕೊಲ್ಲಿಸು! ಕೊಲ್ಲಿಸು!’ ಎಂದು ಕೂಗಾಡುತ್ತಾರೆ. ಆದುದರಿಂದ ಪಿಲಾತನು ಬರಬ್ಬನನ್ನು ಬಿಡುಗಡೆಮಾಡುತ್ತಾನೆ. ಯೇಸುವನ್ನು ಕೊಲ್ಲಲು ತೆಗೆದುಕೊಂಡು ಹೋಗುತ್ತಾರೆ.

ಶುಕ್ರವಾರ ಮಧ್ಯಾಹ್ನ ಯೇಸುವನ್ನು ಕಂಬಕ್ಕೆ ಜಡಿಯುತ್ತಾರೆ. ಅಲ್ಲದೆ, ಯೇಸುವಿನ ಬಲಗಡೆಯಲ್ಲಿ ಒಬ್ಬ ಕಳ್ಳನನ್ನು ಮತ್ತು ಎಡಗಡೆಯಲ್ಲಿ ಮತ್ತೊಬ್ಬ ಕಳ್ಳನನ್ನು ಕಂಭದಲ್ಲಿ ತೂಗುಹಾಕುತ್ತಾರೆ. ಆದರೆ, ನೀವು ಅವರನ್ನು ಚಿತ್ರದಲ್ಲಿ ಕಾಣುವುದಿಲ್ಲ. ಯೇಸು ಸಾಯುವುದಕ್ಕೆ ತುಸು ಮುಂಚಿತವಾಗಿ ಆ ಕಳ್ಳರಲ್ಲಿ ಒಬ್ಬನು ಯೇಸುವಿಗೆ, ‘ನೀನು ರಾಜ್ಯಾಧಿಕಾರವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಪಿಸಿಕೋ’ ಎಂದು ಹೇಳುತ್ತಾನೆ. ಆಗ ಯೇಸು ‘ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ’ ಎಂದುತ್ತರಿಸುತ್ತಾನೆ.

ಅದೊಂದು ಆಶ್ಚರ್ಯಕರ ವಾಗ್ದಾನ ಅಲ್ಲವೇ? ಯೇಸು ಯಾವ ಪರದೈಸಿನ ಕುರಿತು ಮಾತಾಡುತ್ತಿದ್ದಾನೆಂದು ನಿಮಗೆ ಗೊತ್ತೋ? ಆದಿಯಲ್ಲಿ ದೇವರು ಮಾಡಿದ್ದ ಪರದೈಸ್‌ ಎಲ್ಲಿತ್ತು? ಭೂಮಿಯಲ್ಲೇ ಅಲ್ಲವೇ? ಯೇಸು ಪರಲೋಕದಿಂದ ಈ ಭೂಮಿಯ ಮೇಲೆ ರಾಜನಾಗಿ ಆಳುವಾಗ ಹೊಸ ಪರದೈಸಿನಲ್ಲಿ ಆನಂದಿಸುವುದಕ್ಕಾಗಿ ಈ ಮನುಷ್ಯನನ್ನು ಪುನಃ ಬದುಕಿಸುವನು. ಇದು ನಮಗೆಷ್ಟು ಸಂತೋಷದ ವಿಷಯವಾಗಿದೆ, ಅಲ್ಲವೇ?