ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 87

ಬಾಲಕನಾದ ಯೇಸು ದೇವಾಲಯದಲ್ಲಿ

ಬಾಲಕನಾದ ಯೇಸು ದೇವಾಲಯದಲ್ಲಿ

ಈ ಹಿರಿಯ ಪುರುಷರೊಂದಿಗೆ ಮಾತಾಡುವ ಎಳೆಯ ಬಾಲಕನನ್ನು ನೋಡಿ. ಆ ಪುರುಷರು ಯೆರೂಸಲೇಮಿನಲ್ಲಿರುವ ದೇವಾಲಯದಲ್ಲಿ ಬೋಧಕರಾಗಿದ್ದಾರೆ. ಆ ಬಾಲಕನು ಯೇಸುವಾಗಿದ್ದಾನೆ. ಅವನು ಬೆಳೆದಿದ್ದಾನೆ. ಅವನಿಗೀಗ 12 ವರ್ಷ.

ದೇವರ ಕುರಿತು ಮತ್ತು ಬೈಬಲ್‌ನಲ್ಲಿ ಬರೆದಿರುವ ವಿಷಯಗಳ ಕುರಿತು ಯೇಸುವಿಗೆ ಎಷ್ಟು ತಿಳಿದಿದೆಯೆಂದರೆ ಅದು ಆ ಬೋಧಕರನ್ನೇ ಅತ್ಯಾಶ್ಚರ್ಯಗೊಳಿಸುತ್ತದೆ. ಆದರೆ ಯೋಸೇಫ ಮತ್ತು ಮರಿಯ ಯಾಕೆ ಕಾಣುತ್ತಿಲ್ಲ? ಅವರು ಎಲ್ಲಿದ್ದಾರೆ? ನಾವು ನೋಡೋಣ.

ಪ್ರತಿ ವರ್ಷ ಯೋಸೇಫನು ತನ್ನ ಕುಟುಂಬವನ್ನು ಪಸ್ಕವೆಂಬ ವಿಶೇಷ ಹಬ್ಬಕ್ಕಾಗಿ ಯೆರೂಸಲೇಮಿಗೆ ಕರೆತರುತ್ತಾನೆ. ನಜರೇತಿನಿಂದ ಯೆರೂಸಲೇಮ್‌ ತುಂಬಾ ದೂರದಲ್ಲಿದೆ. ಆ ಕಾಲದಲ್ಲಿ ಕಾರ್‌ಗಳಾಗಲಿ ರೈಲುಗಳಾಗಲಿ ಇರಲಿಲ್ಲ. ಹೆಚ್ಚಿನ ಜನರು ನಡೆದುಕೊಂಡೇ ಹೋಗುತ್ತಾರೆ. ಯೆರೂಸಲೇಮಿಗೆ ಬಂದು ತಲುಪಲು ಅವರಿಗೆ ಸುಮಾರು ಮೂರು ದಿನ ಬೇಕು.

ಯೋಸೇಫನಿಗೆ ಈಗ ದೊಡ್ಡ ಕುಟುಂಬವಿದೆ. ಯೇಸುವಿಗೆ ತಮ್ಮಂದಿರೂ ತಂಗಿಯರೂ ಇದ್ದಾರೆ. ಯೋಸೇಫನು ಅವರನ್ನೂ ನೋಡಿಕೊಳ್ಳಬೇಕು. ಈ ವರ್ಷ ಸಹ ಹಬ್ಬವನ್ನು ಮುಗಿಸಿ ಯೋಸೇಫ ಮತ್ತು ಮರಿಯ ತಮ್ಮ ಮಕ್ಕಳೊಂದಿಗೆ ತಮ್ಮ ಊರಾದ ನಜರೇತಿಗೆ ಹಿಂದಿರುಗುತ್ತಿದ್ದಾರೆ. ತಮ್ಮೊಂದಿಗೆ ಪ್ರಯಾಣಿಸುತ್ತಿದ್ದ ಇತರರೊಂದಿಗೆ ಎಲ್ಲೊ ಯೇಸು ಇರಬಹುದೆಂದು ಅವರು ನೆನಸುತ್ತಾರೆ. ಆದರೆ ಸಾಯಂಕಾಲ ಒಂದೆಡೆ ತಂಗುವಾಗಲೇ ಯೇಸು ತಮ್ಮೊಂದಿಗೆ ಇಲ್ಲವೆಂಬುದನ್ನು ಅವರು ಗಮನಿಸುತ್ತಾರೆ. ಅವನಿಗಾಗಿ ಅವರು ತಮ್ಮ ಬಂಧುಮಿತ್ರರ ಬಳಿಯಲ್ಲೆಲ್ಲಾ ಹುಡುಕಾಡುತ್ತಾರೆ. ಆದರೆ ಅವನು ಅವರೊಂದಿಗೂ ಇಲ್ಲ! ಆದುದರಿಂದ, ತಿರುಗಿ ಅವನನ್ನು ಹುಡುಕಿಕೊಂಡು ಯೆರೂಸಲೇಮಿಗೆ ಹೋಗುತ್ತಾರೆ.

ಕಟ್ಟಕಡೆಗೆ ಅವರು ಇಲ್ಲಿ ಯೇಸು ಬೋಧಕರೊಂದಿಗೆ ಕುಳಿತಿರುವುದನ್ನು ಕಾಣುತ್ತಾರೆ. ಅವನು ಅವರು ಹೇಳುವುದಕ್ಕೆ ಕಿವಿಗೊಡುತ್ತಾ ಪ್ರಶ್ನೆಮಾಡುತ್ತಾ ಇದ್ದಾನೆ. ಯೇಸುವಿಗೆ ಇಷ್ಟೊಂದು ಬುದ್ಧಿಯಿರುವುದನ್ನು ನೋಡಿ ಜನರೆಲ್ಲಾ ಬೆರಗಾಗುತ್ತಾರೆ. ಆದರೆ ಮರಿಯಳು ಯೇಸುವಿಗೆ, ‘ಮಗನೇ, ನೀನು ನಮಗೆ ಯಾಕೆ ಹೀಗೆ ಮಾಡಿದಿ? ನಿನ್ನ ತಂದೆಯೂ ನಾನೂ ಎಷ್ಟು ತಳಮಳಗೊಂಡು ನಿನಗಾಗಿ ಹುಡುಕಾಡಿದೆವಲ್ಲಾ’ ಎಂದು ಹೇಳುತ್ತಾಳೆ.

ಅದಕ್ಕೆ ಯೇಸು, ‘ನೀವು ನನಗಾಗಿ ಹುಡುಕಿದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕೆಂದು ನಿಮಗೆ ತಿಳಿಯಲಿಲ್ಲವೇ?’ ಎಂದು ಉತ್ತರಿಸುತ್ತಾನೆ.

ಹೌದು, ದೇವರ ಕುರಿತು ಕಲಿಯಸಾಧ್ಯವಿರುವ ಸ್ಥಳದಲ್ಲಿರಲು ಯೇಸು ಇಷ್ಟಪಡುತ್ತಾನೆ. ನಮಗೂ ಅದೇ ರೀತಿಯ ಮನಸ್ಸು ಇರಬೇಕಲ್ಲವೇ? ತನ್ನ ಸ್ವಂತ ಊರಾದ ನಜರೇತಿನಲ್ಲಿ ಯೇಸು ಪ್ರತಿ ವಾರ ಆರಾಧನಾ ಕೂಟಗಳಿಗೆ ಹೋಗುತ್ತಿದ್ದನು. ಅವನು ಯಾವಾಗಲೂ ಗಮನಕೊಟ್ಟು ಕೇಳುತ್ತಿದ್ದರಿಂದ, ಬೈಬಲ್‌ನಿಂದ ಅನೇಕ ವಿಷಯಗಳನ್ನು ಕಲಿತುಕೊಂಡನು. ನಾವು ಸಹ ಯೇಸುವಿನಂತಿರೋಣ ಮತ್ತು ಆತನ ಮಾದರಿಯನ್ನು ಅನುಸರಿಸೋಣ.