ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 86

ಒಂದು ನಕ್ಷತ್ರದಿಂದ ಮಾರ್ಗದರ್ಶಿಸಲ್ಪಟ್ಟ ಪುರುಷರು

ಒಂದು ನಕ್ಷತ್ರದಿಂದ ಮಾರ್ಗದರ್ಶಿಸಲ್ಪಟ್ಟ ಪುರುಷರು

ಈ ಮನುಷ್ಯರಲ್ಲಿ ಒಬ್ಬನು ಬೆರಳು ತೋರಿಸುತ್ತಿರುವ ಆ ಪ್ರಕಾಶಮಾನವಾದ ನಕ್ಷತ್ರ ನಿಮಗೆ ಕಾಣಿಸುತ್ತದೋ? ಅವರು ಯೆರೂಸಲೇಮಿನಿಂದ ಹೊರಟಾಗ ಈ ನಕ್ಷತ್ರವು ಗೋಚರಿಸಿತು. ಈ ಮನುಷ್ಯರು ಪೂರ್ವ ದೇಶದವರು. ಅವರು ನಕ್ಷತ್ರಗಳ ಕುರಿತು ಸಂಶೋಧನೆ ಮಾಡುತ್ತಾರೆ. ಈ ಹೊಸ ನಕ್ಷತ್ರವು ತಮ್ಮನ್ನು ಯಾರೋ ಒಬ್ಬ ಪ್ರಮುಖ ವ್ಯಕ್ತಿಯೆಡೆಗೆ ಮಾರ್ಗದರ್ಶಿಸುತ್ತಿದೆಯೆಂದು ಅವರು ನಂಬುತ್ತಾರೆ.

ಈ ಪುರುಷರು ಯೆರೂಸಲೇಮಿಗೆ ಬಂದು, ‘ಯೆಹೂದ್ಯರ ಅರಸನಾಗಲಿರುವ ಮಗು ಎಲ್ಲಿದ್ದಾನೆ?’ ಎಂದು ಕೇಳುತ್ತಾರೆ. ‘ಯೆಹೂದ್ಯರು’ ಎಂಬುದು ಇಸ್ರಾಯೇಲ್ಯರಿಗಿರುವ ಇನ್ನೊಂದು ಹೆಸರು. ‘ಮಗುವನ್ನು ಸೂಚಿಸುವ ನಕ್ಷತ್ರವನ್ನು ನಾವು ಮೊದಲಾಗಿ ಪೂರ್ವ ದೇಶದಲ್ಲಿರುವಾಗ ಕಂಡೆವು. ಆತನಿಗೆ ಅಡ್ಡಬೀಳುವುದಕ್ಕಾಗಿ ನಾವು ಬಂದಿದ್ದೇವೆ’ ಎನ್ನುತ್ತಾರೆ ಆ ಪುರುಷರು.

ಯೆರೂಸಲೇಮಿನಲ್ಲಿ ಅರಸನಾಗಿರುವ ಹೆರೋದನು ಈ ಕುರಿತು ಕೇಳಿದಾಗ ಕಳವಳಗೊಂಡನು. ತನ್ನ ಸ್ಥಾನವನ್ನು ಇನ್ನೊಬ್ಬ ಅರಸನು ತೆಗೆದುಕೊಳ್ಳುವುದು ಅವನಿಗೆ ಇಷ್ಟವಿಲ್ಲ. ಆದುದರಿಂದ ಅವನು ಮುಖ್ಯ ಯಾಜಕರನ್ನು ಕರೆದು, ‘ದೇವರು ವಾಗ್ದಾನ ಮಾಡಿರುವ ಅರಸನು ಹುಟ್ಟಬೇಕಾದದ್ದು ಎಲ್ಲಿ?’ ಎಂದು ಕೇಳುತ್ತಾನೆ. ಅದಕ್ಕವರು, ‘ಬೇತ್ಲೆಹೇಮಿನಲ್ಲಿ ಎಂದು ಬೈಬಲ್‌ ಹೇಳುತ್ತದೆ’ ಎಂದು ಉತ್ತರಿಸುತ್ತಾರೆ.

ಆದುದರಿಂದ ಹೆರೋದನು ಪೂರ್ವ ದೇಶದ ಆ ಮನುಷ್ಯರನ್ನು ಕರೆಸಿ, ‘ನೀವು ಹೋಗಿ ಆ ಎಳೆಯ ಕೂಸನ್ನು ಹುಡುಕಿರಿ. ಅದು ಸಿಕ್ಕಿದಾಗ ನನಗೆ ತಿಳಿಸಿರಿ. ನಾನೂ ಹೋಗಿ ಅದಕ್ಕೆ ಅಡ್ಡಬೀಳಬೇಕು’ ಎಂದು ಹೇಳುತ್ತಾನೆ. ಆದರೆ ಹೆರೋದನು ಕೂಸನ್ನು ಹುಡುಕಿ ಕಂಡುಹಿಡಿಯಲು ಬಯಸಿದ್ದು ಅದನ್ನು ಕೊಲ್ಲಲಿಕ್ಕಾಗಿಯೇ!

ಅನಂತರ ನಕ್ಷತ್ರವು ಪುರುಷರ ಮುಂದೆ ಮುಂದೆ ಚಲಿಸುತ್ತಾ ಬೇತ್ಲೆಹೇಮಿಗೆ ಬಂದು ಕೂಸು ಇರುವ ಸ್ಥಳದ ಮೇಲೆ ನಿಂತುಬಿಡುತ್ತದೆ. ಆ ಪುರುಷರು ಮನೆಯೊಳಗೆ ಹೋಗಿ ಮರಿಯಳನ್ನೂ ಪುಟ್ಟ ಯೇಸುವನ್ನೂ ಕಾಣುತ್ತಾರೆ. ಬಳಿಕ ಉಡುಗೊರೆಗಳನ್ನು ಹೊರತೆಗೆದು ಯೇಸುವಿಗೆ ಕೊಡುತ್ತಾರೆ. ಆದರೆ ತದನಂತರ ಹೆರೋದನ ಬಳಿಗೆ ತಿರಿಗಿ ಹೋಗಬಾರದೆಂದು ಯೆಹೋವನು ಕನಸಿನಲ್ಲಿ ಅವರನ್ನು ಎಚ್ಚರಿಸುತ್ತಾನೆ. ಆದುದರಿಂದ ಅವರು ಇನ್ನೊಂದು ದಾರಿಯಿಂದ ತಮ್ಮ ದೇಶಕ್ಕೆ ಹಿಂತೆರಳುತ್ತಾರೆ.

ಪೂರ್ವ ದೇಶದ ಆ ಮನುಷ್ಯರು ತಮ್ಮ ದೇಶಕ್ಕೆ ಹಿಂದಿರುಗಿದರೆಂದು ಹೆರೋದನಿಗೆ ಗೊತ್ತಾದಾಗ ಅವನು ಬಹಳ ಸಿಟ್ಟಾಗುತ್ತಾನೆ. ಆದುದರಿಂದ ಬೇತ್ಲೆಹೇಮಿನಲ್ಲಿರುವ ಎರಡು ವರ್ಷದೊಳಗಿನ ಎಲ್ಲಾ ಗಂಡುಮಗುವನ್ನು ಕೊಲ್ಲಬೇಕೆಂಬ ಆಜ್ಞೆಯನ್ನು ಕೊಡುತ್ತಾನೆ. ಆದರೆ ಅದಕ್ಕೆ ಮುಂಚೆಯೇ ಯೆಹೋವನು ಕನಸಿನಲ್ಲಿ ಯೋಸೇಫನಿಗೆ ಇದರ ಕುರಿತು ಎಚ್ಚರಿಕೆ ನೀಡುತ್ತಾನೆ. ಆಗ ಯೋಸೇಫನು ತನ್ನ ಕುಟುಂಬದೊಂದಿಗೆ ಐಗುಪ್ತಕ್ಕೆ ಹೊರಟುಹೋಗುತ್ತಾನೆ. ತದನಂತರ, ಹೆರೋದನು ಸತ್ತುಹೋದನೆಂದು ಯೋಸೇಫನಿಗೆ ತಿಳಿದಾಗ, ಅವನು ಮರಿಯಳನ್ನೂ ಯೇಸುವನ್ನೂ ನಜರೇತಿನ ಮನೆಗೆ ಕರೆತರುತ್ತಾನೆ. ಯೇಸು ಬೆಳೆಯುವುದು ಇಲ್ಲಿಯೇ.

ಆ ಹೊಸ ನಕ್ಷತ್ರವು ಗೋಚರಿಸುವಂತೆ ಮಾಡಿದವನು ಯಾರೆಂದು ನೀವು ನೆನಸುತ್ತೀರಿ? ಸ್ವಲ್ಪ ಜ್ಞಾಪಿಸಿಕೊಳ್ಳಿ, ಆ ಪುರುಷರು ನಕ್ಷತ್ರವನ್ನು ಕಂಡ ಬಳಿಕ ಮೊದಲು ಹೋದದ್ದು ಯೆರೂಸಲೇಮಿಗೆ ಎಂದು ನಾವು ಓದಿದೆವು. ಪಿಶಾಚನಾದ ಸೈತಾನನು ದೇವಕುಮಾರನನ್ನು ಕೊಲ್ಲಲು ಬಯಸಿದ್ದನು, ಮತ್ತು ಯೆರೂಸಲೇಮಿನ ಅರಸ ಹೆರೋದನು ಅವನನ್ನು ಕೊಲ್ಲಲು ಪ್ರಯತ್ನಿಸುವನೆಂದು ಸಹ ಅವನಿಗೆ ತಿಳಿದಿತ್ತು. ಹಾಗಾಗಿ ಆ ನಕ್ಷತ್ರವು ಗೋಚರಿಸುವಂತೆ ಮಾಡಿದವನು ಸೈತಾನನೇ.