ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 82

ಮೊರ್ದೆಕೈ ಮತ್ತು ಎಸ್ತೇರ್‌

ಮೊರ್ದೆಕೈ ಮತ್ತು ಎಸ್ತೇರ್‌

ಎಜ್ರನು ಯೆರೂಸಲೇಮಿಗೆ ಹೋಗುವುದಕ್ಕೆ ಮುಂಚಿನ ಕೆಲವು ವರ್ಷಗಳ ಕಡೆಗೆ ನಾವೀಗ ಹಿಂತೆರಳೋಣ. ಪಾರಸಿಯ ರಾಜ್ಯದಲ್ಲಿದ್ದ ಇಸ್ರಾಯೇಲ್ಯರಲ್ಲಿ ಮೊರ್ದೆಕೈ ಮತ್ತು ಎಸ್ತೇರ್‌ ತುಂಬಾ ಪ್ರಮುಖರು. ಎಸ್ತೇರಳು ಅಲ್ಲಿನ ರಾಣಿ. ಅವಳ ಸೋದರನಂಟನಾದ ಮೊರ್ದೆಕೈ ರಾಜ್ಯವಾಳುವ ಅರಸನಿಗೆ ದ್ವಿತೀಯ ಸ್ಥಾನದಲ್ಲಿದ್ದಾನೆ. ಇಷ್ಟೊಂದು ದೊಡ್ಡ ಸ್ಥಾನಮಾನ ಇವರಿಗೆ ಹೇಗೆ ದೊರೆಯಿತು ಗೊತ್ತಾ?

ಎಸ್ತೇರಳು ತುಂಬಾ ಚಿಕ್ಕವಳಾಗಿರುವಾಗಲೇ ಅವಳ ತಂದೆತಾಯಿ ತೀರಿಕೊಂಡರು. ಆದುದರಿಂದ ಮೊರ್ದೆಕೈ ಅವಳನ್ನು ಸಾಕಿದ್ದಾನೆ. ಪಾರಸಿಯ ಅರಸನಾದ ಅಹಷ್ವೇರೋಷನಿಗೆ ಶೂಷನ್‌ ಎಂಬ ನಗರದಲ್ಲಿ ಒಂದು ಅರಮನೆಯಿದೆ. ಅವನ ಸೇವಕರಲ್ಲಿ ಮೊರ್ದೆಕೈ ಒಬ್ಬನು. ಒಂದು ದಿನ ಅರಸನ ಪತ್ನಿಯಾದ ವಷ್ಟಿ ಅರಸನ ಮಾತನ್ನು ಮೀರಿ ನಡೆದುದ್ದರಿಂದ ಅರಸನು ಹೊಸ ಪತ್ನಿಯನ್ನು ಆರಿಸಿಕೊಂಡು ಆಕೆಯನ್ನು ತನ್ನ ರಾಣಿಯಾಗಿ ಮಾಡುತ್ತಾನೆ. ಅವನು ಆರಿಸಿಕೊಳ್ಳುವ ಸ್ತ್ರೀ ಯಾರೆಂದು ನಿಮಗೆ ಗೊತ್ತೋ? ಹಾ . . . ಅವಳೇ ಸುಂದರಿ ಯುವತಿಯಾದ ಎಸ್ತೇರ್‌.

ಜನರು ಅಡ್ಡಬಿದ್ದು ನಮಸ್ಕರಿಸುತ್ತಿರುವ ಈ ಜಂಭದ ಮನುಷ್ಯನನ್ನು ನೋಡಿ. ಅವನ ಹೆಸರು ಹಾಮಾನ. ಪಾರಸಿಯ ರಾಜ್ಯದಲ್ಲಿ ಅವನು ಅತಿ ಪ್ರಧಾನ ಪುರುಷ. ಅಲ್ಲಿ ಕೂತಿರುವ ಮೊರ್ದೆಕೈ ಸಹ ತನಗೆ ಅಡ್ಡಬೀಳಬೇಕೆಂಬುದು ಹಾಮಾನನ ಆಶೆ. ಆದರೆ ಮೊರ್ದೆಕೈ ಹಾಗೆ ಮಾಡುವುದಿಲ್ಲ. ಅಂಥ ಒಬ್ಬ ಕೆಟ್ಟ ಮನುಷ್ಯನಿಗೆ ಅಡ್ಡಬೀಳುವುದು ಸರಿಯೆಂದು ಅವನೆಣಿಸುವುದಿಲ್ಲ. ಇದು ಹಾಮಾನನನ್ನು ಬಹು ಕೋಪಗೊಳಿಸುತ್ತದೆ. ಆದುದರಿಂದ ಅವನು ಏನು ಮಾಡುತ್ತಾನೆ ಗೊತ್ತೇ?

ಹಾಮಾನನು ಅರಸನ ಬಳಿಗೆ ಹೋಗಿ ಇಸ್ರಾಯೇಲ್ಯರ ಮೇಲೆ ಸುಳ್ಳು ಸುಳ್ಳಾಗಿ ದೂರು ಹೇಳುತ್ತಾನೆ. ‘ಅವರು ನಿನ್ನ ನಿಯಮಗಳಿಗೆ ವಿಧೇಯರಾಗದ ಕೆಟ್ಟ ಜನರು. ಅವರಿಗೆ ಮರಣ ದಂಡನೆ ವಿಧಿಸಬೇಕು’ ಎಂದು ಚಾಡಿ ಹೇಳುತ್ತಾನೆ. ತನ್ನ ಪತ್ನಿಯಾದ ಎಸ್ತೇರಳು ಸಹ ಇಸ್ರಾಯೇಲ್ಯಳೆಂದು ಅಹೆಷ್ವೇರೋಷನಿಗೆ ತಿಳಿದಿರುವುದಿಲ್ಲ. ಆದುದರಿಂದ ಅವನು ಹಾಮಾನನ ಮಾತನ್ನು ಕೇಳಿ, ಗೊತ್ತುಪಡಿಸಿದ ಒಂದು ದಿನದಲ್ಲಿ ಇಸ್ರಾಯೇಲ್ಯರೆಲ್ಲರನ್ನು ಕೊಲ್ಲಬೇಕೆಂದು ನಿಯಮವನ್ನು ಹೊರಡಿಸುತ್ತಾನೆ.

ಮೊರ್ದೆಕೈಗೆ ಆ ನಿಯಮದ ಕುರಿತು ತಿಳಿದುಬಂದಾಗ ತುಂಬಾ ಕಳವಳಗೊಳ್ಳುತ್ತಾನೆ. ಅವನು ಎಸ್ತೇರಳಿಗೆ ಈ ವಿಷಯವನ್ನು ಮುಟ್ಟಿಸುತ್ತಾನೆ. ‘ನೀನು ಹೇಗಾದರೂ ಅರಸನಿಗೆ ಈ ವಿಷಯವನ್ನು ತಿಳಿಸಿ ನಮ್ಮನ್ನು ರಕ್ಷಿಸುವಂತೆ ವಿಜ್ಞಾಪನೆ ಮಾಡಬೇಕು’ ಎಂದು ಅವಳಿಗೆ ತಿಳಿಸುತ್ತಾನೆ. ಅರಸನು ಕರಿಸಿದರೆ ಹೊರತು ಅವನ ಬಳಿಗೆ ಯಾರು ಸಹ ಹೋಗಸಾಧ್ಯವಿಲ್ಲ. ಹಾಗೇ ಹೋಗುವುದು ಪಾರಸಿಯ ರಾಜ್ಯದ ನಿಯಮಕ್ಕೆ ವಿರುದ್ಧವಾಗಿದೆ. ಹಾಗಿದ್ದರೂ ಅರಸನ ಆಮಂತ್ರಣವಿಲ್ಲದೆಯೇ ಎಸ್ತೇರಳು ಒಳಗೆ ಹೋಗುತ್ತಾಳೆ. ಅರಸನು ತನ್ನ ಸುವರ್ಣದಂಡವನ್ನು ಅವಳೆಡೆಗೆ ಚಾಚುತ್ತಾನೆ. ಆದುದರಿಂದ ಅವಳು ಮರಣ ದಂಡನೆಗೆ ಪಾತ್ರಳಾಗುವುದಿಲ್ಲ. ಎಸ್ತೇರಳು ಅರಸನನ್ನು ಮತ್ತು ಹಾಮಾನನನ್ನು ಒಂದು ದೊಡ್ಡ ಔತಣಕ್ಕೆ ಆಮಂತ್ರಿಸುತ್ತಾಳೆ. ಔತಣದಲ್ಲಿ ಅರಸನು ಎಸ್ತೇರಳಿಗೆ ಏನು ಕೇಳಿಕೊಂಡರೂ ತಾನು ಮಾಡುತ್ತೇನೆಂದು ಹೇಳುತ್ತಾನೆ. ಮಾರಣೆ ದಿನ ಇನ್ನೊಂದು ಔತಣಕ್ಕೆ ಅರಸನೂ ಹಾಮಾನನೂ ಬರುವುದಾದರೆ ತಾನದನ್ನು ತಿಳಿಸುವೆನೆಂದು ಎಸ್ತೇರಳು ಹೇಳುತ್ತಾಳೆ.

ಮಾರಣೆದಿನ ಔತಣ ನಡೆಯುತ್ತಿದ್ದಾಗ ಎಸ್ತೇರಳು ಅರಸನಿಗೆ, ‘ನಾನೂ ನನ್ನ ಜನರೂ ಕೊಲ್ಲಲ್ಪಡಲಿದ್ದೇವೆ’ ಎಂದು ಹೇಳುತ್ತಾಳೆ. ಅದನ್ನು ಕೇಳಿ ಅರಸನಿಗೆ ತುಂಬಾ ಕೋಪ ಬರುತ್ತದೆ. ‘ಇಂಥ ಒಂದು ದುಷ್ಕೃತ್ಯವನ್ನು ಮಾಡುವಷ್ಟು ಸೊಕ್ಕುಳ್ಳವನು ಯಾವನು?’ ಎಂದು ಕೇಳುತ್ತಾನೆ ಅವನು.

‘ಆ ಹಗೆಗಾರನು ಈ ದುಷ್ಟ ಹಾಮಾನನೇ!’ ಎನ್ನುತ್ತಾಳೆ ಎಸ್ತೇರ್‌.

ಅರಸನೀಗ ನಿಜವಾಗಿ ಕೋಪಗೊಳ್ಳುತ್ತಾನೆ. ಹಾಮಾನನನ್ನು ಕೊಲ್ಲುವಂತೆ ಆಜ್ಞಾಪಿಸುತ್ತಾನೆ. ಬಳಿಕ ಮೊರ್ದೆಕೈಗೆ ಅಧಿಕಾರಕೊಟ್ಟು ತನಗೆ ನಂತರದ ಸ್ಥಾನದಲ್ಲಿ ನೇಮಿಸುತ್ತಾನೆ. ಆಗ ಮೊರ್ದೆಕೈ, ಇಸ್ರಾಯೇಲ್ಯರನ್ನು ಕೊಲ್ಲಲು ಗೊತ್ತುಪಡಿಸಿದ ದಿನದಲ್ಲಿ ಅವರು ತಮ್ಮ ಪ್ರಾಣ ರಕ್ಷಣೆಗಾಗಿ ಹೋರಾಡುವಂತೆ ಅನುಮತಿಸುವ ಒಂದು ನಿಯಮವು ಜಾರಿಗೊಳ್ಳುವಂತೆ ನೋಡಿಕೊಳ್ಳುತ್ತಾನೆ. ಮೊರ್ದೆಕೈ ಈಗ ಒಬ್ಬ ಪ್ರಮುಖ ವ್ಯಕ್ತಿಯಾಗಿರುವುದರಿಂದ, ಅನೇಕ ಜನರು ಇಸ್ರಾಯೇಲ್ಯರಿಗೆ ಸಹಾಯಮಾಡುತ್ತಾರೆ. ಹೀಗೆ, ಇಸ್ರಾಯೇಲ್ಯರು ತಮ್ಮ ಶತ್ರುಗಳಿಂದ ಕಾಪಾಡಲ್ಪಡುತ್ತಾರೆ.

ಬೈಬಲಿನ ಎಸ್ತೇರಳು ಪುಸ್ತಕ.