ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 81

ದೇವರ ಸಹಾಯದಲ್ಲಿ ಭರವಸೆ

ದೇವರ ಸಹಾಯದಲ್ಲಿ ಭರವಸೆ

ಸಾವಿರಾರು ಜನರು ಬಾಬೆಲಿನಿಂದ ಯೆರೂಸಲೇಮಿಗೆ ದೀರ್ಘ ಪ್ರಯಾಣವನ್ನು ಮಾಡುತ್ತಾರೆ. ಆದರೆ ಅವರು ಯೆರೂಸಲೇಮಿಗೆ ಮುಟ್ಟುವಾಗ ಅದು ಒಂದು ಹಾಳುಕೊಂಪೆಯಾಗಿರುತ್ತದೆ. ಅಲ್ಲಿ ಯಾರೂ ವಾಸಮಾಡುತ್ತಿಲ್ಲ. ಇಸ್ರಾಯೇಲ್ಯರು ಎಲ್ಲವನ್ನು ಮತ್ತೆ ಕಟ್ಟಬೇಕಾಗಿದೆ.

ಅವರು ಮೊದಲಾಗಿ ಕಟ್ಟಿದವುಗಳಲ್ಲಿ ಯಜ್ಞವೇದಿಯೂ ಒಂದು. ಅದು ಅವರು ಯೆಹೋವನಿಗೆ ಪಶು ಯಜ್ಞಗಳನ್ನು ಅಥವಾ ಕಾಣಿಕೆಗಳನ್ನು ಅರ್ಪಿಸಬಹುದಾದ ಸ್ಥಳವಾಗಿದೆ. ಕೆಲವು ತಿಂಗಳ ಬಳಿಕ ಇಸ್ರಾಯೇಲ್ಯರು ಆಲಯವನ್ನು ಕಟ್ಟಲು ಆರಂಭಿಸುತ್ತಾರೆ. ಆದರೆ ಸಮೀಪದ ಪ್ರದೇಶಗಳಲ್ಲಿ ವಾಸಿಸುವ ವೈರಿಗಳಿಗೆ ಅದು ಇಷ್ಟವಾಗುವುದಿಲ್ಲ. ಆದುದರಿಂದ ಕಟ್ಟುವುದನ್ನು ನಿಲ್ಲಿಸಿಬಿಡುವಂತೆ ಮಾಡಲಿಕ್ಕಾಗಿ ಅವರನ್ನು ಹೆದರಿಸಲು ಪ್ರಯತ್ನಿಸುತ್ತಾರೆ. ಕೊನೆಗೆ, ಪಾರಸಿಯ ದೇಶದ ಹೊಸ ಅರಸನನ್ನು ಒಲಿಸಿಕೊಂಡು ಕಟ್ಟಡ ಕೆಲಸವನ್ನು ನಿಲ್ಲಿಸಲು ಒಂದು ಆಜ್ಞೆಯನ್ನು ಹೊರಡಿಸುವಂತೆ ಮಾಡುತ್ತಾರೆ.

ಬಳಿಕ ವರ್ಷಗಳು ದಾಟುತ್ತವೆ. ಇಸ್ರಾಯೇಲ್ಯರು ಬಾಬೆಲಿನಿಂದ ಹಿಂದೆ ಬಂದು ಈಗ 17 ವರ್ಷಗಳಾಗಿವೆ. ಕಟ್ಟುವುದನ್ನು ಪುನಃ ಆರಂಭಿಸುವಂತೆ ಜನರಿಗೆ ತಿಳಿಸಲು ಯೆಹೋವನು ತನ್ನ ಪ್ರವಾದಿಗಳಾದ ಹಗ್ಗಾಯ ಮತ್ತು ಜೆಕರ್ಯರನ್ನು ನೇಮಿಸುತ್ತಾನೆ. ಜನರು ದೇವರ ಸಹಾಯದಲ್ಲಿ ಭರವಸೆಯಿಡುತ್ತಾರೆ. ಅವರು ಪ್ರವಾದಿಗಳಿಗೆ ವಿಧೇಯರಾಗುತ್ತಾರೆ. ಕಟ್ಟಬಾರದೆಂಬ ನಿಯವಿರುವುದಾದರೂ ಅವರು ಪುನಃ ಕಟ್ಟಲಾರಂಭಿಸುತ್ತಾರೆ.

ಆಗ ತತ್ತೆನೈ ಎಂಬ ಹೆಸರಿನ ಒಬ್ಬ ಪಾರಸಿ ಅಧಿಕಾರಿಯು ಬಂದು, ಆಲಯವನ್ನು ಕಟ್ಟಲು ಅವರಿಗೆ ಯಾವ ಹಕ್ಕಿದೆಯೆಂದು ಇಸ್ರಾಯೇಲ್ಯರನ್ನು ಕೇಳುತ್ತಾನೆ. ತಾವು ಬಾಬೆಲಿನಲ್ಲಿದ್ದಾಗ ರಾಜ ಕೋರೆಷನು, ‘ಯೆರೂಸಲೇಮಿಗೆ ಹೋಗಿ ನಿಮ್ಮ ದೇವರಾದ ಯೆಹೋವನ ಆಲಯವನ್ನು ಕಟ್ಟಿರಿ’ ಎಂದು ಅವರಿಗೆ ಹೇಳಿದ್ದನೆಂದು ಇಸ್ರಾಯೇಲ್ಯರು ತಿಳಿಸುತ್ತಾರೆ.

ತತ್ತೆನೈ ಬಾಬೆಲಿಗೆ ಒಂದು ಪತ್ರ ಬರೆದು, ತೀರಿಹೋದ ಕೋರೆಷನು ನಿಜವಾಗಿ ಹಾಗೆ ಹೇಳಿದ್ದನೋ ಎಂದು ವಿಚಾರಿಸುತ್ತಾನೆ. ಸ್ವಲ್ಪದರಲ್ಲೇ ಪಾರಸಿಯದ ಹೊಸ ರಾಜನಿಂದ ಒಂದು ಪತ್ರ ಬರುತ್ತದೆ. ಕೋರೆಷನು ನಿಜವಾಗಿ ಹಾಗೆ ಹೇಳಿದ್ದನೆಂದು ಅದು ತಿಳಿಸುತ್ತದೆ. ಮಾತ್ರವಲ್ಲ, ‘ಇಸ್ರಾಯೇಲ್ಯರು ತಮ್ಮ ದೇವರ ಆಲಯವನ್ನು ಕಟ್ಟಲಿ. ನೀವವರಿಗೆ ಸಹಾಯಮಾಡಬೇಕೆಂದು ನಾನು ಆಜ್ಞಾಪಿಸುತ್ತೇನೆ’ ಎಂದು ಸಹ ಆ ರಾಜನು ಅದರಲ್ಲಿ ಬರೆದಿರುತ್ತಾನೆ. ಸುಮಾರು ನಾಲ್ಕು ವರ್ಷಗಳಲ್ಲಿ ಆಲಯವನ್ನು ಕಟ್ಟಿಮುಗಿಸಲಾಗುತ್ತದೆ. ಇಸ್ರಾಯೇಲ್ಯರು ತುಂಬಾ ಸಂತೋಷಪಡುತ್ತಾರೆ.

ಹೀಗೆ ಅನೇಕ ವರ್ಷಗಳು ಉರುಳುತ್ತವೆ. ಆಲಯವನ್ನು ಕಟ್ಟಿ ಮುಗಿಸಿ ಈಗ ಬಹುಮಟ್ಟಿಗೆ 48 ವರ್ಷಗಳಾಗುತ್ತವೆ. ಯೆರೂಸಲೇಮಿನ ಜನರು ಬಡವರು. ಪಟ್ಟಣ ಮಾತ್ರವಲ್ಲ ದೇವರ ಆಲಯ ಕೂಡ ಅಷ್ಟೇನು ಅಂದವಾಗಿ ಕಾಣಿಸುತ್ತಿಲ್ಲ. ಬಾಬೆಲಿನಲ್ಲಿರುವ ಇಸ್ರಾಯೇಲ್ಯನಾದ ಎಜ್ರನಿಗೆ, ದೇವರ ಆಲಯವನ್ನು ದುರುಸ್ತುಗೊಳಿಸುವ ಅಗತ್ಯವಿದೆಯೆಂಬ ವಿಷಯ ತಿಳಿಯುತ್ತದೆ. ಅದು ತಿಳಿದ ಕೂಡಲೇ ಅವನೇನು ಮಾಡುತ್ತಾನೆಂದು ಗೊತ್ತೋ?

ಎಜ್ರನು ಪಾರಸಿಯ ರಾಜನಾದ ಅರ್ತಷಸ್ತನನ್ನು ನೋಡಲು ಹೋಗುತ್ತಾನೆ. ಈ ರಾಜ ತುಂಬಾ ಒಳ್ಳೆಯವನು. ಅವನು ಎಜ್ರನಿಗೆ ಅನೇಕ ಕಾಣಿಕೆಗಳನ್ನು ಕೊಟ್ಟು ಯೆರೂಸಲೇಮಿಗೆ ಕಳುಹಿಸುತ್ತಾನೆ. ಈ ಕಾಣಿಕೆಗಳನ್ನು ಯೆರೂಸಲೇಮಿಗೆ ಒಯ್ಯಲು ತನಗೆ ಸಹಾಯಮಾಡುವಂತೆ ಎಜ್ರನು ಬಾಬೆಲಿನಲ್ಲಿರುವ ಇಸ್ರಾಯೇಲ್ಯರನ್ನು ಕೇಳುತ್ತಾನೆ. ಸುಮಾರು 6,000 ಜನರು ತಾವು ಬರುವೆವೆಂದು ಹೇಳುತ್ತಾರೆ. ಅವರೀಗ ಹೇರಳವಾದ ಬೆಳ್ಳಿಬಂಗಾರ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕಾಗಿದೆ.

ಎಜ್ರನಿಗೆ ಚಿಂತೆ. ಯಾಕೆಂದರೆ ದಾರಿಯಲ್ಲಿ ಕೆಟ್ಟ ಜನರಿದ್ದಾರೆ. ಅವರು ಇವರ ಬಳಿಯಲ್ಲಿರುವ ಬೆಳ್ಳಿಬಂಗಾರಗಳನ್ನು ದೋಚಬಹುದು. ಅವರನ್ನು ಕೊಂದುಹಾಕಲೂಬಹುದು. ಆದುದರಿಂದ ನೀವು ಚಿತ್ರದಲ್ಲಿ ನೋಡುವ ಪ್ರಕಾರ ಎಜ್ರನು ಜನರನ್ನು ಕೂಡಿಸುತ್ತಾನೆ. ಆಗ ಅವರು, ಯೆರೂಸಲೇಮಿಗೆ ಹಿಂತಿರುಗಿ ಹೋಗುವ ತಮ್ಮ ದೀರ್ಘ ಪ್ರಯಾಣವನ್ನು ಆಶೀರ್ವದಿಸಿ ತಮ್ಮನ್ನು ಕಾಪಾಡುವಂತೆ ಯೆಹೋವನಿಗೆ ಪ್ರಾರ್ಥನೆಮಾಡುತ್ತಾರೆ.

ಯೆಹೋವನು ನಿಜವಾಗಿ ಅವರನ್ನು ಕಾಪಾಡುತ್ತಾನೆ. ಸುಮಾರು ನಾಲ್ಕು ತಿಂಗಳ ಪ್ರಯಾಣದ ನಂತರ ಅವರು ಯೆರೂಸಲೇಮಿಗೆ ಸುರಕ್ಷಿತವಾಗಿ ಬಂದು ಮುಟ್ಟುತ್ತಾರೆ. ಸಹಾಯಕ್ಕಾಗಿ ತನ್ನಲ್ಲಿ ಭರವಸೆ ಇಡುವವರನ್ನು ಯೆಹೋವನು ರಕ್ಷಿಸಬಲ್ಲನೆಂಬದನ್ನು ಇದು ತೋರಿಸುವುದಿಲ್ಲವೇ?

ಎಜ್ರ 2 ರಿಂದ 8 ಅಧ್ಯಾಯಗಳು.