ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 35

ಯೆಹೋವನು ನಿಯಮಗಳನ್ನು ಕೊಡುತ್ತಾನೆ

ಯೆಹೋವನು ನಿಯಮಗಳನ್ನು ಕೊಡುತ್ತಾನೆ

ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟು ಸುಮಾರು ಎರಡು ತಿಂಗಳುಗಳ ಅನಂತರ ಸೀನಾಯಿ ಬೆಟ್ಟಕ್ಕೆ ಬರುತ್ತಾರೆ. ಆ ಬೆಟ್ಟಕ್ಕೆ ಹೋರೇಬ್‌ ಎಂಬ ಹೆಸರೂ ಇದೆ. ಉರಿಯುವ ಪೊದೆಯೊಳಗಿಂದ ಯೆಹೋವನು ಮೋಶೆಯ ಸಂಗಡ ಮಾತಾಡಿದ್ದು ಇದೇ ಸ್ಥಳದಲ್ಲಿ. ಜನರು ಇಲ್ಲಿ ಪಾಳೆಯ ಮಾಡಿಕೊಂಡು ಸ್ವಲ್ಪ ಸಮಯ ಇಳುಕೊಳ್ಳುತ್ತಾರೆ.

ಮೋಶೆಯು ಬೆಟ್ಟವನ್ನು ಹತ್ತಿ ಹೋಗುತ್ತಾನೆ. ಮತ್ತು ಜನರು ಅವನಿಗಾಗಿ ಕಾಯುತ್ತಾರೆ. ಅಲ್ಲಿ ಬೆಟ್ಟದ ತುದಿಯಲ್ಲಿ ಯೆಹೋವನು ಮೋಶೆಯೊಂದಿಗೆ ಮಾತಾಡುತ್ತಾನೆ. ಇಸ್ರಾಯೇಲ್ಯರು ತನಗೆ ವಿಧೇಯರಾಗಿ ತನ್ನ ವಿಶೇಷ ಜನರಾಗುವಂತೆ ತಾನು ಬಯಸುವುದಾಗಿ ತಿಳಿಸುತ್ತಾನೆ. ಮೋಶೆ ಬೆಟ್ಟದಿಂದ ಕೆಳಗೆ ಬಂದು ಯೆಹೋವನು ಹೇಳಿದ್ದನ್ನೆಲ್ಲಾ ಇಸ್ರಾಯೇಲ್ಯರಿಗೆ ತಿಳಿಸಿದಾಗ ಜನರು ತಾವು ಯೆಹೋವನಿಗೆ ವಿಧೇಯರಾಗುವೆವು ಎಂದು ಹೇಳುತ್ತಾರೆ. ಏಕೆಂದರೆ ಅವರು ಆತನ ಜನರಾಗಿರಲು ಬಯಸುತ್ತಾರೆ.

ಯೆಹೋವನು ಈಗ ಒಂದು ಅಪೂರ್ವ ಸಂಗತಿಯನ್ನು ಮಾಡುತ್ತಾನೆ. ಬೆಟ್ಟದ ತುದಿಯಲ್ಲಿ ಹೊಗೆಯೇಳುವಂತೆ ಮತ್ತು ಗಟ್ಟಿಯಾಗಿ ಗುಡುಗು ಉಂಟಾಗುವಂತೆ ಮಾಡುತ್ತಾನೆ. ಜನರೊಂದಿಗೆ ಆತನು ಮಾತಾಡುತ್ತಾ, ‘ಐಗುಪ್ತ ದೇಶದೊಳಗಿಂದ ನಿಮ್ಮನ್ನು ಕರೆತಂದ ನಿಮ್ಮ ದೇವರಾದ ಯೆಹೋವನು ನಾನೇ’ ಎಂದು ಹೇಳುತ್ತಾನೆ. ಅನಂತರ, ‘ನನ್ನನ್ನು ಬಿಟ್ಟು ನೀವು ಬೇರೆ ಯಾವ ದೇವರುಗಳನ್ನು ಆರಾಧಿಸಬಾರದು’ ಎಂದು ಆಜ್ಞಾಪಿಸುತ್ತಾನೆ.

ದೇವರು ಇಸ್ರಾಯೇಲ್ಯರಿಗೆ ಇನ್ನೂ ಒಂಬತ್ತು ಆಜ್ಞೆಗಳನ್ನು ಅಥವಾ ನಿಯಮಗಳನ್ನು ಕೊಡುತ್ತಾನೆ. ಜನರು ತುಂಬ ಭಯಪಡುತ್ತಾರೆ. ಅವರು ಮೋಶೆಗೆ, ‘ನೀನೇ ನಮ್ಮ ಸಂಗಡ ಮಾತಾಡು, ಯಾಕೆಂದರೆ ದೇವರು ನಮ್ಮ ಸಂಗಡ ಮಾತಾಡಿದರೆ ನಾವು ಭಯದಿಂದ ಸತ್ತುಹೋಗಬಹುದು’ ಎಂದು ಹೇಳುತ್ತಾರೆ.

ತದನಂತರ ಯೆಹೋವನು ಮೋಶೆಗೆ ಹೇಳುವುದು: ‘ನೀನು ಬೆಟ್ಟದ ಮೇಲೆ ನನ್ನ ಬಳಿಗೆ ಬಾ. ಜನರು ಪಾಲಿಸಬೇಕಾದ ನಿಯಮಗಳನ್ನು ನಾನು ಯಾವುದರ ಮೇಲೆ ಬರೆದಿದ್ದೇನೋ ಆ ಎರಡು ಕಲ್ಲಿನ ಹಲಗೆಗಳನ್ನು ನಿನಗೆ ಕೊಡುವೆನು.’ ಆದುದರಿಂದ ಮೋಶೆಯು ಪುನಃ ಬೆಟ್ಟದ ಮೇಲೆ ಹೋಗುತ್ತಾನೆ. ಅವನು 40 ದಿನ ಹಗಲು-ರಾತ್ರಿ ಅಲ್ಲೇ ಉಳಿಯುತ್ತಾನೆ.

ತನ್ನ ಜನರು ಪಾಲಿಸಬೇಕಾದ ಅನೇಕಾನೇಕ ನಿಯಮಗಳನ್ನು ದೇವರು ಕೊಡುತ್ತಾನೆ. ಮೋಶೆಯು ಈ ನಿಯಮಗಳನ್ನು ಬರೆದುಕೊಳ್ಳುತ್ತಾನೆ. ಎರಡು ಕಲ್ಲಿನ ಹಲಗೆಗಳನ್ನು ಸಹ ದೇವರು ಮೋಶೆಗೆ ಕೊಡುತ್ತಾನೆ. ಇವುಗಳ ಮೇಲೆ ದೇವರು ಜನರೆಲ್ಲರಿಗೆ ತಿಳಿಸಿದ 10 ಆಜ್ಞೆಗಳನ್ನು ತಾನೇ ಬರೆದಿದ್ದಾನೆ. ಅವುಗಳನ್ನು ದಶಾಜ್ಞೆಗಳು ಎಂದು ಕರೆಯಲಾಗುತ್ತದೆ.

ದಶಾಜ್ಞೆಗಳು ಅತಿ ಪ್ರಮುಖ ನಿಯಮಗಳಾಗಿವೆ. ಆದರೆ ದೇವರು ಇಸ್ರಾಯೇಲ್ಯರಿಗೆ ಕೊಡುವ ಬೇರೆ ಅನೇಕ ನಿಯಮಗಳೂ ಪ್ರಮುಖವಾಗಿವೆ. ಇವುಗಳಲ್ಲಿ ಒಂದು ನಿಯಮವು ಹೀಗಿದೆ: ‘ನೀವು ನಿಮ್ಮ ದೇವರಾದ ಯೆಹೋವನನ್ನು ನಿಮ್ಮ ಪೂರ್ಣ ಹೃದಯದಿಂದಲೂ ನಿಮ್ಮ ಪೂರ್ಣ ಮನಸ್ಸಿನಿಂದಲೂ ಪೂರ್ಣ ಪ್ರಾಣದಿಂದಲೂ ಮತ್ತು ನಿಮ್ಮ ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು.’ ಇನ್ನೊಂದು ಆಜ್ಞೆಯು, ‘ನಿಮ್ಮ ನೆರೆಯವನನ್ನು ನಿಮ್ಮಂತೆಯೇ ಪ್ರೀತಿಸಬೇಕು.’ ಇವು ಯೆಹೋವನು ತನ್ನ ಜನರಾದ ಇಸ್ರಾಯೇಲ್ಯರಿಗೆ ಕೊಟ್ಟ ಎರಡು ಅತಿ ಪ್ರಾಮುಖ್ಯ ನಿಯಮಗಳೆಂದು ದೇವರ ಮಗನಾದ ಯೇಸು ಕ್ರಿಸ್ತನು ಹೇಳಿದನು. ನಾವು ದೇವರ ಮಗನ ಮತ್ತು ಅವನ ಬೋಧನೆಗಳ ಕುರಿತು ಅನೇಕ ವಿಷಯಗಳನ್ನು ಮುಂದಕ್ಕೆ ಕಲಿಯುವೆವು.

ವಿಮೋಚನಕಾಂಡ 19:1-25; 20:1-21; 24:12-18; 31:18; ಧರ್ಮೋಪದೇಶಕಾಂಡ 6:4-6; ಯಾಜಕಕಾಂಡ 19:18; ಮತ್ತಾಯ 22:36-40.