ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 41

ತಾಮ್ರದ ಸರ್ಪ

ತಾಮ್ರದ ಸರ್ಪ

ಈ ಕಂಬಕ್ಕೆ ಸುತ್ತಿಕೊಂಡಿರುವುದು ನಿಜವಾದ ಹಾವೋ? ಅಲ್ಲ, ಅದು ನಿಜವಾದ ಹಾವಲ್ಲ. ಅದು ತಾಮ್ರದಿಂದ ಮಾಡಲ್ಪಟ್ಟ ಹಾವಾಗಿದೆ. ಜನರು ಆ ತಾಮ್ರದ ಸರ್ಪವನ್ನು ನೋಡಿ ಬದುಕಿಕೊಳ್ಳುವಂತೆ ಅದನ್ನು ಕಂಬದ ಮೇಲೆ ಎತ್ತಿ ನಿಲ್ಲಿಸಬೇಕೆಂದು ಯೆಹೋವನು ಮೋಶೆಗೆ ಹೇಳಿದನು. ಆದರೆ ನೆಲದ ಮೇಲಿರುವ ಹಾವುಗಳು ನಿಜವಾದವುಗಳು. ಅವು ಜನರನ್ನು ಕಚ್ಚಿವೆ ಮತ್ತು ಅವರು ಸಾಯುವ ಸ್ಥಿತಿಯಲ್ಲಿದ್ದಾರೆ. ಏಕೆಂದು ನಿಮಗೆ ತಿಳಿದಿದೆಯೋ?

ಇಸ್ರಾಯೇಲ್ಯರು ದೇವರಿಗೆ ಮತ್ತು ಮೋಶೆಗೆ ವಿರುದ್ಧವಾಗಿ ಮಾತಾಡಿದ್ದಾರೆ. ‘ಈ ಅರಣ್ಯದಲ್ಲಿ ಸಾಯುವುದಕ್ಕಾಗಿ ನೀವು ನಮ್ಮನ್ನು ಐಗುಪ್ತದಿಂದ ಕರೆದುಕೊಂಡು ಬಂದಿದ್ದೀರೋ? ಇಲ್ಲಿ ಆಹಾರವೂ ಇಲ್ಲ ನೀರೂ ಇಲ್ಲ. ಈ ಮನ್ನವನ್ನು ತಿಂದು ತಿಂದು ಬೇಸತ್ತು ಹೋಗಿದೆ. ಇನ್ನು ಮುಂದೆ ನಮ್ಮಿಂದಂತೂ ಇದನ್ನು ತಿನ್ನಲು ಸಾಧ್ಯವಿಲ್ಲ’ ಎಂದು ಅವರು ದೂರುತ್ತಾರೆ.

ಆದರೆ ಮನ್ನ ಒಳ್ಳೆಯ ಆಹಾರವಾಗಿತ್ತು. ಯೆಹೋವನು ಅದನ್ನು ಅದ್ಭುತಕರವಾಗಿ ಇಸ್ರಾಯೇಲ್ಯರಿಗೆ ಕೊಟ್ಟಿದ್ದನು. ಮಾತ್ರವಲ್ಲ, ನೀರನ್ನೂ ಅದ್ಭುತಕರವಾಗಿ ಒದಗಿಸಿದ್ದನು. ದೇವರು ಆ ಜನರನ್ನು ಹೀಗೆ ಪರಾಮರಿಕೆ ಮಾಡಿದ್ದರೂ ಅವರು ಕೃತಜ್ಞತೆ ತೋರಿಸುವುದಿಲ್ಲ. ಆದುದರಿಂದ ಇಸ್ರಾಯೇಲ್ಯರನ್ನು ಶಿಕ್ಷಿಸುವುದಕ್ಕಾಗಿ ಯೆಹೋವನು ಈ ವಿಷಪೂರಿತ ಹಾವುಗಳನ್ನು ಬರಮಾಡುತ್ತಾನೆ. ಈ ಹಾವುಗಳು ಅವರನ್ನು ಕಚ್ಚುವುದರಿಂದ ಅನೇಕ ಜನರು ಸಾಯುತ್ತಾರೆ.

ಕೊನೆಗೆ ಜನರು ಮೋಶೆಯ ಬಳಿಗೆ ಬಂದು, ‘ನಾವು ನಿನಗೂ ಯೆಹೋವನಿಗೂ ವಿರೋಧವಾಗಿ ಮಾತಾಡಿ ಪಾಪಮಾಡಿದ್ದೇವೆ. ಈಗ ಈ ಹಾವುಗಳು ನಮ್ಮನ್ನು ಬಿಟ್ಟು ತೊಲಗಿಹೋಗುವಂತೆ ಯೆಹೋವನಿಗೆ ಪ್ರಾರ್ಥಿಸು’ ಎಂದು ಬೇಡಿಕೊಳ್ಳುತ್ತಾರೆ.

ಆದುದರಿಂದ ಮೋಶೆ ಜನರಿಗಾಗಿ ಪ್ರಾರ್ಥಿಸುತ್ತಾನೆ. ಆಗ ಯೆಹೋವನು ಮೋಶೆಗೆ ಈ ತಾಮ್ರದ ಸರ್ಪವನ್ನು ಮಾಡಿ ಒಂದು ಕಂಬದ ಮೇಲೆ ಅದನ್ನು ಏರಿಸಿ ಇಡುವಂತೆ ಹೇಳುತ್ತಾನೆ. ಮಾತ್ರವಲ್ಲ, ಹಾವು ಕಚ್ಚಿದ ಪ್ರತಿಯೊಬ್ಬನು ಅದನ್ನು ನೋಡಬೇಕೆಂಬದಾಗಿಯೂ ಹೇಳುತ್ತಾನೆ. ದೇವರು ಹೇಳಿದಂತೆಯೇ ಮೋಶೆ ಮಾಡುತ್ತಾನೆ. ಯಾರಿಗೆಲ್ಲ ಹಾವುಗಳು ಕಚ್ಚಿದ್ದವೋ ಅವರೆಲ್ಲರು ಆ ತಾಮ್ರದ ಸರ್ಪವನ್ನು ನೋಡಿ ಸ್ವಸ್ಥರಾಗುತ್ತಾರೆ.

ಇದರಿಂದ ನಮಗೆ ಕಲಿಯಲು ಒಂದು ಪಾಠವಿದೆ. ನಾವೆಲ್ಲರೂ ಒಂದರ್ಥದಲ್ಲಿ ಹಾವು ಕಚ್ಚಿದ್ದ ಆ ಇಸ್ರಾಯೇಲ್ಯರಂತೆ ಇದ್ದೇವೆ. ನಾವೆಲ್ಲರೂ ಸಾಯುವಂಥ ಸ್ಥಿತಿಯಲ್ಲಿ ಇದ್ದೇವೆ. ನಮ್ಮ ಸುತ್ತಮುತ್ತ ವಾಸಿಸುವ ಜನರನ್ನು ನೋಡಿರಿ. ಅವರು ವೃದ್ಧರಾಗುವುದನ್ನು, ಅಸ್ವಸ್ಥರಾಗುವುದನ್ನು, ಸಾಯುವುದನ್ನು ನೀವು ಕಾಣುವಿರಿ. ಏಕೆಂದರೆ ಮೊದಲನೆಯ ಪುರುಷ ಆದಾಮ ಮತ್ತು ಸ್ತ್ರೀ ಹವ್ವಳು ಯೆಹೋವನಿಗೆ ಅವಿಧೇಯರಾದ್ದರಿಂದಲೇ ಸತ್ತರು. ನಾವೆಲ್ಲರೂ ಅವರ ಮಕ್ಕಳಾಗಿರುವುದರಿಂದ ನಾವು ಸಹ ವೃದ್ಧರಾಗಿ ಸಾಯುತ್ತೇವೆ. ಆದರೆ, ನಾವು ಸದಾ ಜೀವಿಸಲು ಸಾಧ್ಯವಾಗುವಂತೆ ಯೆಹೋವನು ಒಂದು ದಾರಿಯನ್ನು ಮಾಡಿದ್ದಾನೆ.

ಯೆಹೋವನು ತನ್ನ ಮಗನಾದ ಯೇಸು ಕ್ರಿಸ್ತನನ್ನು ಭೂಮಿಗೆ ಕಳುಹಿಸಿದನು. ಅನೇಕರು ಯೇಸುವನ್ನು ಕೆಟ್ಟವನೆಂದು ಎಣಿಸಿದ್ದರಿಂದ ಅವನನ್ನು ಒಂದು ಕಂಬಕ್ಕೆ ತೂಗುಹಾಕಲಾಯಿತು. ಆದರೆ ಯೆಹೋವನು ಯೇಸುವನ್ನು ಕಳುಹಿಸಿದ್ದು ನಮ್ಮನ್ನು ರಕ್ಷಿಸುವುದಕ್ಕಾಗಿ. ನಾವು ಆತನ ಕಡೆಗೆ ನೋಡುವುದಾದರೆ ಅಂದರೆ ಆತನನ್ನು ಅನುಸರಿಸುವುದಾದರೆ ನಿತ್ಯಜೀವವನ್ನು ಪಡೆಯುತ್ತೇವೆ. ಈ ಕುರಿತು ಹೆಚ್ಚನ್ನು ನಾವು ಮುಂದೆ ಕಲಿಯಲಿದ್ದೇವೆ.

ಅರಣ್ಯಕಾಂಡ 21:4-9; ಯೋಹಾನ 3:14, 15.