ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 26

ಯೋಬನು ದೇವರಿಗೆ ನಂಬಿಗಸ್ತನಾಗಿರುತ್ತಾನೆ

ಯೋಬನು ದೇವರಿಗೆ ನಂಬಿಗಸ್ತನಾಗಿರುತ್ತಾನೆ

ಈ ಕಾಯಿಲೆಬಿದ್ದಿರುವ ಮನುಷ್ಯನನ್ನು ನೋಡಿ ಅಯ್ಯೋ ಪಾಪ ಅನ್ನಿಸುತ್ತಿದೆಯೋ? ಅವನ ಹೆಸರು ಯೋಬ. ಪಕ್ಕದಲ್ಲಿ ನಿಂತಿರುವ ಸ್ತ್ರೀ ಅವನ ಹೆಂಡತಿ. ಅವಳು ಯೋಬನಿಗೆ ಏನು ಹೇಳುತ್ತಿದ್ದಾಳೆಂದು ನಿಮಗೆ ತಿಳಿದಿದೆಯೋ? ‘ದೇವರನ್ನು ದೂಷಿಸಿ ಸಾಯಿ’ ಎಂದು ಹೇಳುತ್ತಿದ್ದಾಳೆ. ಅವಳು ಹಾಗೇಕೆ ಹೇಳಿದಳು ಮತ್ತು ಯೋಬನು ಅಷ್ಟು ಕಷ್ಟಪಟ್ಟಿದ್ದು ಏಕೆಂದು ನಾವು ನೋಡೋಣ.

ಯೋಬನು ಒಬ್ಬ ನಂಬಿಗಸ್ತ ಮನುಷ್ಯನಾಗಿದ್ದನು. ಅವನು ಯಾವಾಗಲೂ ಯೆಹೋವನ ಮಾತನ್ನು ಕೇಳಿ ಅದರಂತೆ ನಡೆಯುತ್ತಾ ವಿಧೇಯನಾಗಿದ್ದನು. ಅವನು ಕಾನಾನ್‌ನಿಂದ ಸ್ವಲ್ಪ ದೂರವಿದ್ದ ಊಚ್‌ ದೇಶದಲ್ಲಿ ವಾಸಿಸುತ್ತಿದ್ದನು. ಯೆಹೋವನು ಯೋಬನನ್ನು ಬಹಳ ಪ್ರೀತಿಸಿದನು. ಆದರೆ ಯಾರೋ ಒಬ್ಬನು ಅವನನ್ನು ದ್ವೇಷಿಸಿದನು. ಅವನು ಯಾರೆಂದು ನಿಮಗೆ ಗೊತ್ತೋ?

ಅವನು ಪಿಶಾಚನಾದ ಸೈತಾನನು. ಈ ಸೈತಾನನು ಯೆಹೋವನನ್ನು ದ್ವೇಷಿಸುವ ಒಬ್ಬ ಕೆಟ್ಟ ದೇವದೂತ ಎಂಬುದನ್ನು ನೆನಪಿಸಿಕೊಳ್ಳಿ. ಆದಾಮಹವ್ವರು ಯೆಹೋವನ ಮಾತನ್ನು ಕೇಳದೆ ಅವಿಧೇಯರಾಗುವಂತೆ ಮಾಡಿದವನು ಅವನೇ. ಅಷ್ಟೇ ಅಲ್ಲ, ಇತರ ಎಲ್ಲ ಮನುಷ್ಯರು ಸಹ ಯೆಹೋವನಿಗೆ ಅವಿಧೇಯರಾಗುವಂತೆ ಮಾಡಲು ತನಗೆ ಸಾಧ್ಯವಿದೆ ಎಂದು ಅವನು ನೆನಸಿದನು. ಆದರೆ ಅವನಿಗೆ ಹಾಗೆ ಮಾಡಲು ಸಾಧ್ಯವಾಯಿತೋ? ಖಂಡಿತ ಇಲ್ಲ. ಅನೇಕ ನಂಬಿಗಸ್ತ ಸ್ತ್ರೀಪುರುಷರ ಕುರಿತು ನಾವು ಕಲಿತಿರುವುದನ್ನು ಸ್ವಲ್ಪ ನೆನಪಿಸಿಕೊಳ್ಳಿ. ಅವರಲ್ಲಿ ಎಷ್ಟು ಮಂದಿಯ ಹೆಸರನ್ನು ನೀವು ಹೇಳಬಲ್ಲಿರಿ?

ಯಾಕೋಬ ಮತ್ತು ಯೋಸೇಫರು ಐಗುಪ್ತದಲ್ಲಿ ಸತ್ತ ಬಳಿಕ, ಇಡೀ ಭೂಮಿಯಲ್ಲೇ ಯೆಹೋವನಿಗೆ ಅತ್ಯಂತ ನಂಬಿಗಸ್ತನಾಗಿದ್ದ ಮನುಷ್ಯನೆಂದರೆ ಯೋಬನೇ. ಎಲ್ಲರನ್ನೂ ಕೆಟ್ಟವರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸೈತಾನನು ತಿಳಿದುಕೊಳ್ಳಬೇಕೆಂದು ಯೆಹೋವನು ಬಯಸಿದನು. ಆದುದರಿಂದ ಅವನು ಹೇಳಿದ್ದು: ‘ಯೋಬನನ್ನು ನೋಡು, ಅವನು ನನಗೆಷ್ಟು ನಂಬಿಗಸ್ತನಾಗಿದ್ದಾನೆ.’

‘ಅವನು ನಂಬಿಗಸ್ತನು. ಯಾಕೆಂದರೆ ನೀನು ಅವನನ್ನು ಆಶೀರ್ವದಿಸುತ್ತೀ ಮತ್ತು ಅವನಲ್ಲಿ ಅನೇಕ ಒಳ್ಳೇ ವಸ್ತುಗಳಿವೆ. ಆದರೆ ನೀನು ಅವುಗಳನ್ನು ತೆಗೆದುಬಿಟ್ಟಲ್ಲಿ, ಅವನು ನಿನ್ನನ್ನು ದೂಷಿಸುವನು’ ಎಂದು ಸೈತಾನನು ವಾದಿಸಿದನು.

ಆದುದರಿಂದ ಯೆಹೋವನು ಹೇಳಿದ್ದು: ‘ಹೋಗು, ಅವುಗಳನ್ನು ನಾಶಮಾಡು. ನೀನು ಯೋಬನಿಗೆ ಏನೇನು ಕೆಟ್ಟದ್ದನ್ನು ಮಾಡಬೇಕೆಂದು ಇಷ್ಟಪಡುತ್ತೀಯೋ ಅದನ್ನೆಲ್ಲ ಮಾಡು. ಆಗ ಅವನು ನನ್ನನ್ನು ದೂಷಿಸುತ್ತಾನೋ ಎಂದು ನಾವು ನೋಡೋಣ. ಆದರೆ ಅವನ ಜೀವವನ್ನು ಮಾತ್ರ ತೆಗೆಯಬಾರದು.’

ಮೊದಲಾಗಿ, ಯೋಬನ ದನಕರುಗಳನ್ನು ಮತ್ತು ಒಂಟೆಗಳನ್ನು ಜನರು ಕದಿಯುವಂತೆ ಸೈತಾನನು ಮಾಡಿದನು. ಅವನ ಕುರಿಗಳೂ ಕೊಲ್ಲಲ್ಪಟ್ಟವು. ಅನಂತರ ಯೋಬನ 10 ಮಂದಿ ಗಂಡು-ಹೆಣ್ಣು ಮಕ್ಕಳನ್ನು ಒಂದು ಬಿರುಗಾಳಿಯಿಂದ ಅವನು ಸಾಯಿಸಿದನು. ಆಮೇಲೆ ಸೈತಾನನು ಯೋಬನನ್ನು ಈ ಭೀಕರ ರೋಗದಿಂದ ಬಾಧಿಸಿದನು. ಆಗ ಯೋಬನು ತುಂಬಾ ನರಳಿದನು. ಆದುದರಿಂದಲೇ ಯೋಬನ ಹೆಂಡತಿಯು ಅವನಿಗೆ ‘ದೇವರನ್ನು ದೂಷಿಸಿ ಸಾಯಿ’ ಎಂದು ಹೇಳಿದಳು. ಆದರೆ ಯೋಬನು ಹಾಗೆ ಮಾಡಲಿಲ್ಲ. ಅದಲ್ಲದೆ, ಮೂವರು ಸುಳ್ಳು ಮಿತ್ರರು ಬಂದು ಯೋಬನು ಕೆಟ್ಟ ರೀತಿಯ ಜೀವನವನ್ನು ನಡಿಸಿದ್ದನೆಂದು ಅವನಿಗೆ ಹೇಳಿದರು. ಆದರೂ ಯೋಬನು ನಂಬಿಗಸ್ತನಾಗಿಯೇ ಉಳಿದನು.

ಇದು ಯೆಹೋವನನ್ನು ಅತಿ ಸಂತೋಷಗೊಳಿಸಿತು. ಮತ್ತು ನೀವು ಚಿತ್ರದಲ್ಲಿ ಕಾಣುವ ಪ್ರಕಾರ, ಅವನು ಯೋಬನನ್ನು ತದನಂತರ ಆಶೀರ್ವದಿಸಿದನು. ಅವನ ರೋಗವನ್ನು ವಾಸಿಮಾಡಿದನು. ಯೋಬನಿಗೆ ಇನ್ನೂ 10 ಮಂದಿ ಮಕ್ಕಳಾದರು. ಅವರು ಸುಂದರರಾಗಿದ್ದರು. ಮಾತ್ರವಲ್ಲ ದನಕರುಗಳು, ಕುರಿಗಳು ಮತ್ತು ಒಂಟೆಗಳು ಮೊದಲಿಗಿಂತ ಈಗ ಎರಡು ಪಟ್ಟು ಹೆಚ್ಚಾಗಿದ್ದವು.

ಯೋಬನಂತೆ ನೀವು ಯಾವಾಗಲೂ ಯೆಹೋವನಿಗೆ ನಂಬಿಗಸ್ತರಾಗಿ ಇರುವಿರೋ? ಇರುವುದಾದರೆ, ದೇವರು ನಿಮ್ಮನ್ನೂ ಆಶೀರ್ವದಿಸುವನು. ಇಡೀ ಲೋಕವು ಏದೆನ್‌ ತೋಟದಷ್ಟೇ ಸುಂದರವಾಗಿ ಮಾಡಲ್ಪಡುವಾಗ ನೀವು ಸದಾಕಾಲ ಜೀವಿಸುವಿರಿ.

ಯೋಬ 1:1-22; 2:1-13; 42:10-17.