ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 6

ದಾವೀದ ಹೆದರಲಿಲ್ಲ

ದಾವೀದ ಹೆದರಲಿಲ್ಲ

ನಿನಗೆ ಹೆದರಿಕೆಯಾದಾಗ ಏನು ಮಾಡುತ್ತೀ?— ನೀನು ಅಪ್ಪಅಮ್ಮನ ಸಹಾಯ ಕೇಳಲು ಅವರ ಹತ್ತಿರ ಓಡಿ ಹೋಗುತ್ತೀ ತಾನೇ. ಆದರೆ ನಿನಗೆ ಸಹಾಯ ಮಾಡಲು ಇನ್ನೊಬ್ಬರೂ ಇದ್ದಾರೆ. ಆ ವ್ಯಕ್ತಿ ಬೇರೆಲ್ಲರಿಗಿಂತ ತುಂಬ ಶಕ್ತಿಶಾಲಿ. ಆತನು ಯಾರು ಗೊತ್ತಾ?— ಸರಿಯಾಗಿ ಹೇಳಿದೆ, ಯೆಹೋವ ದೇವರು. ಈಗ ನಾವು ದಾವೀದ ಎಂಬ ಯುವಕನ ಬಗ್ಗೆ ತಿಳಿಯೋಣ. ಅವನು ಯಾವತ್ತೂ ಹೆದರಲಿಲ್ಲ. ಯಾಕೆಂದರೆ ಯೆಹೋವನು ಯಾವಾಗಲೂ ಸಹಾಯಮಾಡುತ್ತಾನೆ ಅಂತ ಅವನಿಗೆ ಗೊತ್ತಿತ್ತು.

ದಾವೀದ ಚಿಕ್ಕ ಮಗು ಆಗಿದ್ದ ಸಮಯದಿಂದಲೇ ಅವನ ಅಪ್ಪಅಮ್ಮ ಅವನಿಗೆ ಯೆಹೋವನನ್ನು ಪ್ರೀತಿಸಲು ಕಲಿಸಿದರು. ಹಾಗಾಗಿ ಭಯ ಹುಟ್ಟಿಸುವ ಸಂಗತಿಗಳು ನಡೆದರೂ ಅವನು ಯಾವತ್ತೂ ಹೆದರಲಿಲ್ಲ. ‘ಯೆಹೋವನು ನನ್ನ ಗೆಳೆಯ, ನನಗೆ ಸಹಾಯಮಾಡುವನು’ ಅಂತ ಅವನಿಗೆ ಗೊತ್ತಿತ್ತು. ಒಂದು ದಿನ ದಾವೀದನು ಕುರಿಗಳನ್ನು ನೋಡಿಕೊಳ್ಳುತ್ತಿದ್ದಾಗ ಒಂದು ದೊಡ್ಡ ಸಿಂಹ ಬಂದು ಒಂದು ಕುರಿಯನ್ನು ಗಬಕ್ಕನೇ ಬಾಯಲ್ಲಿ ಹಿಡಿಯಿತು! ದಾವೀದ ಆಗ ಏನು ಮಾಡಿದ ಗೊತ್ತಾ? ಆ ಸಿಂಹದ ಹಿಂದೆ ಓಡಿ, ಅದರ ಗದ್ದ ಹಿಡಿದು ಕೊಂದುಹಾಕಿದ. ಇನ್ನೊಮ್ಮೆ ಒಂದು ಕರಡಿ ಬಂದು ಕುರಿಯನ್ನು ಹಿಡಿಯಿತು. ಆಗ ದಾವೀದ ಆ ಕರಡಿಯನ್ನೂ ಕೊಂದುಹಾಕಿದ! ನೀನೇನು ನೆನಸುತ್ತೀ ದಾವೀದನಿಗೆ ಸಹಾಯಮಾಡಿದ್ದು ಯಾರು?— ಹೌದು, ಯೆಹೋವನೇ.

ಇನ್ನೊಂದು ಸಂದರ್ಭದಲ್ಲಿ ದಾವೀದನು ತುಂಬ ಧೈರ್ಯ ತೋರಿಸಿದ. ಇಸ್ರಾಯೇಲ್ಯರು ಆ ಸಮಯದಲ್ಲಿ ಫಿಲಿಷ್ಟಿಯರು ಎಂಬ ಹೆಸರಿನ ಜನರೊಟ್ಟಿಗೆ ಯುದ್ಧಮಾಡುತ್ತಿದ್ದರು. ಆ ಫಿಲಿಷ್ಟಿಯ ಸೈನಿಕರಲ್ಲಿ ಒಬ್ಬ ಸೈನಿಕ ತುಂಬ, ತುಂಬ ಎತ್ತರವಿದ್ದ. ದೊಡ್ಡ ದೈತ್ಯ. ನೋಡಿದರೆ ಭಯ ಆಗುತ್ತಿತ್ತು! ಅವನ ಹೆಸರು ಗೊಲ್ಯಾತ. ಅವನು ಇಸ್ರಾಯೇಲ್ಯರ ಮತ್ತು ಯೆಹೋವನ ಬಗ್ಗೆ ಕೆಟ್ಟದ್ದಾಗಿ ಮಾತಾಡುತ್ತಿದ್ದ. ಇಸ್ರಾಯೇಲ್ಯ ಸೈನಿಕರಲ್ಲಿ ಯಾರಾದರೊಬ್ಬರು ತನ್ನನ್ನು ಸೋಲಿಸುವಂತೆ ಕರೆಯುತ್ತಿದ್ದ. ಆದರೆ ಎಲ್ಲ ಇಸ್ರಾಯೇಲ್ಯರು ಅವನಿಗೆ ಹೆದರುತ್ತಿದ್ದರು. ಯಾರೂ ಅವನೊಟ್ಟಿಗೆ ಹೋರಾಡಲು ಹೋಗಲಿಲ್ಲ. ದಾವೀದನಿಗೆ ಇದರ ಬಗ್ಗೆ ಗೊತ್ತಾಯಿತು. ಅವನು ಗೊಲ್ಯಾತನ ಬಳಿ ಹೋಗಿ ಹೀಗಂದ: ‘ನಿನ್ನ ವಿರುದ್ಧ ನಾನು ಹೋರಾಡುತ್ತೇನೆ! ಯೆಹೋವನು ನನಗೆ ಸಹಾಯಮಾಡುತ್ತಾನೆ. ನಿನ್ನನ್ನು ಖಂಡಿತ ಸೋಲಿಸಿಬಿಡುತ್ತೇನೆ!’ ಗೊಲ್ಯಾತನ ಜೊತೆಗೆ ಹೋರಾಡಲು ದಾವೀದನಿಗೆ ನಿಜವಾಗಲೂ ಧೈರ್ಯ ಇತ್ತಾ?— ಹೌದು, ತುಂಬ ಧೈರ್ಯ ಇತ್ತು. ಮುಂದೇನಾಯಿತು ನೋಡೋಣ.

ದಾವೀದ ತನ್ನ ಕವಣೆ ಮತ್ತು ಐದು ಕಲ್ಲುಗಳನ್ನು ತಕ್ಕೊಂಡು ಆ ದೈತ್ಯನನ್ನು ಸೋಲಿಸಲು ಹೋದ. ಇಷ್ಟು ಚಿಕ್ಕ ಪ್ರಾಯದ ದಾವೀದನನ್ನು ನೋಡಿ ಗೊಲ್ಯಾತ ತಮಾಷೆ ಮಾಡಿದ. ಆದರೆ ದಾವೀದ ಅವನಿಗೆ, ‘ನೀನು ಕತ್ತಿ ಹಿಡಿದು ಬಂದಿದ್ದೀ, ಆದರೆ ನಾನು ಯೆಹೋವನ ಹೆಸರಿನಲ್ಲಿ ನಿನ್ನ ಮುಂದೆ ಬಂದಿದ್ದೇನೆ’ ಎಂದು ಹೇಳಿದ. ನಂತರ ತನ್ನ ಕವಣೆಯಲ್ಲಿ ಒಂದು ಕಲ್ಲು ಇಟ್ಟು, ಗೊಲ್ಯಾತನತ್ತ ಓಡುತ್ತಾ ಅವನ ಕಡೆಗೆ ಎಸೆದ. ಆ ಕಲ್ಲು ನೇರವಾಗಿ ಗೊಲ್ಯಾತನ ಹಣೆಗೆ ತಾಗಿ ಅವನು ಅಲ್ಲೇ ಬಿದ್ದು ಸತ್ತುಹೋದ! ಇದನ್ನು ನೋಡಿ ಫಿಲಿಷ್ಟಿಯರು ಎಷ್ಟು ಹೆದರಿದರೆಂದರೆ ಎಲ್ಲರೂ ಓಡಿಹೋದರು. ಚಿಕ್ಕ ಹುಡುಗನಾಗಿದ್ದ ದಾವೀದ ಇಷ್ಟೊಂದು ದೊಡ್ಡ ದೈತ್ಯನನ್ನು ಹೇಗೆ ಸೋಲಿಸಿದ?— ಯೆಹೋವನು ಸಹಾಯ ಮಾಡಿದನು. ಆತನು ಆ ದೈತ್ಯನಿಗಿಂತ ಎಷ್ಟೋ ಹೆಚ್ಚು ಬಲಿಷ್ಠನಾಗಿದ್ದ!

ಯೆಹೋವನು ಸಹಾಯಮಾಡುತ್ತಾನೆ ಅಂತ ದಾವೀದನಿಗೆ ಗೊತ್ತಿದ್ದರಿಂದ ಅವನು ಹೆದರಲಿಲ್ಲ

ದಾವೀದನ ಕಥೆಯಿಂದ ನೀನೇನು ಕಲಿತೆ?— ಯೆಹೋವನು ಎಲ್ಲರಿಗಿಂತಲೂ ಹೆಚ್ಚು ಬಲಶಾಲಿ. ಆತನು ನಿನ್ನ ಗೆಳೆಯ ಸಹ. ಆದ್ದರಿಂದ ಮುಂದಿನ ಬಾರಿ ನಿನಗೆ ಹೆದರಿಕೆಯಾದಾಗ ನೆನಪಿಟ್ಟುಕೊ, ಧೈರ್ಯವಾಗಿರಲು ಯೆಹೋವನು ನಿನಗೆ ಸಹಾಯ ಮಾಡುತ್ತಾನೆ!

ಬೈಬಲಲ್ಲೇ ಓದೋಣ