ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ ಹದಿಮೂರು

ತನ್ನ ತಪ್ಪುಗಳಿಂದ ಪಾಠ ಕಲಿತವನು

ತನ್ನ ತಪ್ಪುಗಳಿಂದ ಪಾಠ ಕಲಿತವನು

1, 2. (1) ಯೋನನ ತಪ್ಪಿನಿಂದಾಗಿ ಅವನೂ ಹಡಗಿನ ನಾವಿಕರೂ ಯಾವ ಸಂಕಷ್ಟಕ್ಕೆ ಸಿಲುಕಿದರು? (2) ಯೋನನ ಕಥೆ ನಮಗೇನು ಕಲಿಸುತ್ತದೆ?

ಯೋನನ ಕಿವಿಗೆ ಬೀಳುತ್ತಿದ್ದ ಸದ್ದು ಭಯಂಕರವಾಗಿತ್ತು. ಅವನಿಗೆ ತುಂಬ ಹಿಂಸೆಯಾಗುತ್ತಿತ್ತು, ಸಹಿಸಲಿಕ್ಕೇ ಆಗುತ್ತಿರಲಿಲ್ಲ. ಹಡಗಿನ ಹಗ್ಗಗಳನ್ನು ಅತ್ತಿಂದಿತ್ತ ನೂಕಿ ಜಗ್ಗಾಡುತ್ತಿದ್ದ ಬಿರುಸಾದ ಗಾಳಿಯ ಸದ್ದಲ್ಲ ಅದು. ಹಡಗಿನ ಎರಡು ಬದಿಗಳಿಗೂ ಜೋರಾಗಿ ಬಡಿದು, ಅದರ ಹಲಗೆಗಳೆಲ್ಲ ಕಿರ್ರ್‌ಗುಟ್ಟುವಂತೆ ಮಾಡುತ್ತಿದ್ದ ರಕ್ಕಸ ಅಲೆಗಳ ಸದ್ದೂ ಅದಲ್ಲ. ಹೇಗಾದರೂ ಮಾಡಿ ಹಡಗು ಮುಳುಗುವುದನ್ನು ತಡೆಯಲು ಒದ್ದಾಡುತ್ತಿದ್ದ ಕಪ್ತಾನ ಮತ್ತು ಕಲಾಸಿಗಳ ಕಿರುಚಾಟ ಬೊಬ್ಬೆಗಳ ಸದ್ದೇ ಅದು. ಯೋನನಿಗೆ ಆ ಮನುಷ್ಯರೆಲ್ಲರೂ ಇನ್ನೇನು ಸತ್ತು ಹೋಗುತ್ತಾರೆ, ಅದೂ ತನ್ನಿಂದಾಗಿ ಎಂಬದು ಖಚಿತವಾಗಿತ್ತು.

2 ಯೋನ ಇಂಥ ಸಂಕಷ್ಟಕ್ಕೆ ಸಿಲುಕಲು ಕಾರಣವೇನು? ಅವನು ತನ್ನ ದೇವರಾದ ಯೆಹೋವನ ವಿರುದ್ಧ ದೊಡ್ಡ ತಪ್ಪುಮಾಡಿದ್ದರಿಂದಲೇ. ಅವನು ಮಾಡಿದ್ದಾದರೂ ಏನು? ಯೆಹೋವನೊಂದಿಗಿನ ಅವನ ಸಂಬಂಧ ಶಾಶ್ವತವಾಗಿ ಮುರಿದುಹೋಯಿತೇ? ಈ ಪ್ರಶ್ನೆಗಳಿಗಿರುವ ಉತ್ತರಗಳು ನಮಗೆ ಬಹಳಷ್ಟನ್ನು ಕಲಿಸುತ್ತವೆ. ಉದಾಹರಣೆಗೆ, ನಿಜ ನಂಬಿಕೆಯುಳ್ಳವರು ಸಹ ದಾರಿತಪ್ಪುವ ಸಾಧ್ಯತೆಯಿದೆ ಮತ್ತು ಅದೇ ಸಮಯದಲ್ಲಿ ತಮ್ಮ ತಪ್ಪನ್ನು ತಿದ್ದಿಕೊಳ್ಳಸಾಧ್ಯವಿದೆ ಎಂಬದನ್ನು ಯೋನನ ಕಥೆ ಕಲಿಸುತ್ತದೆ.

ಗಲಿಲಾಯದ ಪ್ರವಾದಿ

3-5. (1) ಯೋನನ ಬಗ್ಗೆ ನೆನಸಿದಾಗೆಲ್ಲ ಜನರು ಹೆಚ್ಚಾಗಿ ಯಾವುದಕ್ಕೆ ಗಮನಕೊಡುತ್ತಾರೆ? (2) ಯೋನನ ಹಿನ್ನಲೆ ಬಗ್ಗೆ ನಮಗೆ ಯಾವ ಮಾಹಿತಿ ಇದೆ? (ಪಾದಟಿಪ್ಪಣಿ ಸಹ ನೋಡಿ.) (3) ಪ್ರವಾದಿಯಾಗಿ ಯೋನನು ಮಾಡುತ್ತಿದ್ದ ಸೇವೆ ಸುಲಭವೂ ಹಿತಕರವೂ ಆಗಿರಲಿಲ್ಲವೇಕೆ?

3 ಯೋನನ ಹೆಸರು ಕೇಳಿದೊಡನೆ ಹೆಚ್ಚಿನವರಿಗೆ ಅವನ ನಕಾರಾತ್ಮಕ ಗುಣಗಳೇ  ಮನಸ್ಸಿಗೆ ಬರುತ್ತವೆ. ಅವನು ಅವಿಧೇಯತೆ ತೋರಿಸಿದ, ಹಠಹಿಡಿದ ಸಂದರ್ಭಗಳನ್ನು ನೆನಸಿಕೊಳ್ಳುತ್ತಾರೆ. ಆದರೆ ಅವನ ಬಗ್ಗೆ ತಿಳಿಯಬೇಕಾದ ಇನ್ನೆಷ್ಟೋ ವಿಷಯಗಳಿವೆ. ನೆನಪಿಡಿ, ಅವನನ್ನು ಪ್ರವಾದಿಯಾಗಿ ಆಯ್ಕೆಮಾಡಿದ್ದು ಯೆಹೋವನು. ಒಂದುವೇಳೆ ಯೋನ ಅಪನಂಬಿಗಸ್ತ, ಅನೀತಿವಂತ ವ್ಯಕ್ತಿಯಾಗಿದ್ದರೆ ಯೆಹೋವನು ಅವನನ್ನು ಆ ಭಾರಿ ಜವಾಬ್ದಾರಿಗಾಗಿ ಆಯ್ಕೆಮಾಡುತ್ತಿರಲಿಲ್ಲ ಅಲ್ಲವೇ?

ಯೋನನಲ್ಲಿ ಬರೀ ಕುಂದುಕೊರತೆಗಳು ಇರಲಿಲ್ಲ, ಎಷ್ಟೋ ಸದ್ಗುಣಗಳೂ ಇದ್ದವು

4 ಯೋನನ ಹಿನ್ನೆಲೆಯ ಕುರಿತು ಬೈಬಲ್‌ ಸ್ವಲ್ಪ ಮಾಹಿತಿ ಕೊಡುತ್ತದೆ. (2 ಅರಸುಗಳು 14:25 ಓದಿ.) ಅವನ ಊರು ಗತ್‌ಹೇಫೆರ್‌. ಹೆಚ್ಚುಕಡಿಮೆ 800 ವರ್ಷಗಳ ಬಳಿಕ ಯೇಸು ಬೆಳೆದು ದೊಡ್ಡವನಾದ ನಜರೇತ್‌ ಊರಿನಿಂದ ಗತ್‌ಹೇಫೆರ್‌ಗೆ ಕೇವಲ 4 ಕಿ.ಮೀ. ಅಷ್ಟೆ. * ಯೋನ ಪ್ರವಾದಿಯಾಗಿ ಸೇವೆಸಲ್ಲಿಸಿದ್ದು ಹತ್ತು ಕುಲಗಳಿದ್ದ ಇಸ್ರಾಯೇಲ್‌ ರಾಜ್ಯದ ರಾಜನಾದ IIನೆಯ ಯಾರೋಬ್ಬಾಮನ ಆಳಿಕೆಯ ಸಮಯದಲ್ಲಿ. ಅಷ್ಟರಲ್ಲಿ ಎಲೀಯನ ಕಾಲ ಮುಗಿದು ಎಷ್ಟೋ ಸಮಯವಾಗಿತ್ತು. ಅವನ ಉತ್ತರಾಧಿಕಾರಿ ಎಲೀಷನು ಯಾರೋಬ್ಬಾಮನ ತಂದೆಯ ಆಳಿಕೆಯ ಸಮಯದಲ್ಲಿ ಮೃತನಾಗಿದ್ದನು. ಆ ಇಬ್ಬರು ಪ್ರವಾದಿಗಳ ಮೂಲಕ ಯೆಹೋವನು ಬಾಳನ ಆರಾಧನೆಯನ್ನು ಇಸ್ರಾಯೇಲ್‌ ರಾಜ್ಯದಿಂದ ನಿರ್ಮೂಲಗೊಳಿಸಿದ್ದರೂ ಅಲ್ಲಿನ ಜನರು ಬೇಕುಬೇಕೆಂದು ಪುನಃ ತಪ್ಪುದಾರಿಗಿಳಿದಿದ್ದರು. ಆ ಇಡೀ ರಾಜ್ಯವು ‘ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದ’ ರಾಜನ ಪ್ರಭಾವದ ಅಡಿಯಲ್ಲಿತ್ತು. (2 ಅರ. 14:24) ಹಾಗಾಗಿ ಪ್ರವಾದಿಯಾಗಿ ಯೋನ ಮಾಡುತ್ತಿದ್ದ ಸೇವೆ ಸುಲಭವೂ ಹಿತಕರವೂ ಆಗಿದ್ದಿರಲಿಕ್ಕಿಲ್ಲ. ಆದರೂ ಅವನು ನಂಬಿಗಸ್ತಿಕೆಯಿಂದ ಸೇವೆಮಾಡಿದನು.

5 ಒಂದು ದಿನ ಯೋನನ ಜೀವನದ ದಿಕ್ಕು ಬದಲಾಯಿತು. ಯೆಹೋವನು ಅವನಿಗೆ ಒಂದು ನೇಮಕ ಕೊಟ್ಟನು. ಇದು ತೀರಾ ಕಷ್ಟದ ಕೆಲಸ, ತನ್ನಿಂದಂತೂ ಮಾಡಲಿಕ್ಕಾಗದೆಂದು ಯೋನನಿಗೆ ಅನಿಸಿತು. ಅಂಥದ್ದೇನು ಮಾಡುವಂತೆ ಯೆಹೋವನು ಹೇಳಿದನು?

‘ನೀನೆದ್ದು ನಿನೆವೆಗೆ ಹೋಗು’

6. (1) ಯೆಹೋವನು ಯೋನನಿಗೆ ಯಾವ ನೇಮಕ ಕೊಟ್ಟನು? (2) ಈ ನೇಮಕ ಯೋನನಿಗೆ ಏಕೆ ತುಂಬ ಕಷ್ಟವೆನಿಸಿರಬೇಕು?

6 ಯೆಹೋವನು ಯೋನನಿಗೆ, “ನೀನೆದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಗಟ್ಟಿಯಾಗಿ ಕೂಗುತ್ತಾ ಅದನ್ನು ಖಂಡಿಸು; ಅದರ ನಿವಾಸಿಗಳ ದುಷ್ಟತನವು ನನ್ನ ಸನ್ನಿಧಿಗೆ ಮುಟ್ಟಿದೆ” ಎಂದು ಅಪ್ಪಣೆಕೊಟ್ಟನು. (ಯೋನ 1:2) ಈ ನೇಮಕ ಏಕೆ ಯೋನನಿಗೆ ತುಂಬ ಕಷ್ಟವೆನಿಸಿತು? ನಿನೆವೆ ಪಟ್ಟಣ ಯೋನನ ಊರಿನಿಂದ ಪೂರ್ವಕ್ಕೆ 800 ಕಿ.ಮೀ.  ದೂರದಲ್ಲಿತ್ತು. ಕಾಲ್ನಡಿಗೆಯಲ್ಲಿ ಹೋಗಲು ಒಂದು ತಿಂಗಳಾದರೂ ಬೇಕಿತ್ತು. ದೀರ್ಘವಾದ ಪ್ರಯಾಸಕರ ಪ್ರಯಾಣ ಅದು. ಯೋನನಿಗಾದರೋ ಈ ಪ್ರಯಾಣದ ಕಷ್ಟಗಳಿಗಿಂತ ಇನ್ನೊಂದು ವಿಷಯ ಮನಸ್ಸನ್ನು ಕೊರೆಯುತ್ತಾ ಇತ್ತು. ಈ ನಿನೆವೆಯ ನಿವಾಸಿಗಳಾದ ಅಶ್ಶೂರ್ಯರು ಹಿಂಸಾಚಾರಿಗಳೂ ಅತೀ ಕ್ರೂರಿಗಳೂ ಎಂದು ಕುಪ್ರಸಿದ್ಧರಾಗಿದ್ದರು. ಇಂಥವರಿಗೆ ಯೆಹೋವನ ತೀರ್ಪಿನ ಸಂದೇಶವನ್ನು ಯೋನ ತಿಳಿಸಬೇಕಿತ್ತು. ದೇವರ ಸ್ವಂತ ಜನರೇ ಯೋನನ ಸಾರುವಿಕೆಗೆ ಪ್ರತಿಕ್ರಿಯೆ ತೋರಿಸದಿದ್ದಾಗ ಈ ವಿಧರ್ಮಿ ಜನರಾದರೂ ಏನು ಪ್ರತಿಕ್ರಿಯಿಸುವರು? “ರಕ್ತಮಯಪುರಿ” ಎಂದು ಮುಂದಕ್ಕೆ ಕುಖ್ಯಾತವಾದ ಆ ದೊಡ್ಡ ಪಟ್ಟಣ ನಿನೆವೆಯಲ್ಲಿ ಯೆಹೋವನ ಈ ಒಂಟಿ ಸೇವಕನು ಜೀವದಿಂದ ಉಳಿಯಲು ಸಾಧ್ಯವೇ?—ನಹೂ. 3:1, 7.

7, 8. (1) ಯೆಹೋವನು ಕೊಟ್ಟ ನೇಮಕ ಬಿಟ್ಟು ದೂರ ಓಡಿಹೋಗಲು ಯೋನ ಎಷ್ಟರ ಮಟ್ಟಿಗೆ ಗಟ್ಟಿಮನಸ್ಸು ಮಾಡಿದ್ದನು? (2) ಯೋನ ಒಬ್ಬ ಹೇಡಿಯೆಂದು ನಾವೇಕೆ ತೀರ್ಮಾನಿಸಬಾರದು?

7 ಅಂಥ ವಿಚಾರಗಳು ಯೋನನ ಮನಸ್ಸಿಗೆ ಬಂದಿರಬಹುದು. ಇದು ನಮಗೆ ಖಚಿತವಾಗಿ ಗೊತ್ತಿಲ್ಲ. ಆದರೆ ಒಂದಂತೂ ನಿಶ್ಚಯ. ದೇವರು ಕೊಟ್ಟ ನೇಮಕವನ್ನು ಪೂರೈಸದೆ ಯೋನ ಓಡಿಹೋದ! ಯೆಹೋವನು ಅವನಿಗೆ ಹೋಗಲು ಹೇಳಿದ್ದು ಪೂರ್ವಕ್ಕೆ ಆದರೆ ಅವನು ಹೊರಟದ್ದು ಪಶ್ಚಿಮಕ್ಕೆ, ಅದೂ ಸಾಧ್ಯವಾದಷ್ಟು ದೂರಕ್ಕೆ. ಅದಕ್ಕಾಗಿ ಅವನು ಮೊದಲು ಕರಾವಳಿ ಪ್ರದೇಶದಲ್ಲಿರುವ ಯೊಪ್ಪ ಎಂಬ ರೇವು ಪಟ್ಟಣಕ್ಕೆ ಬಂದ. ಅಲ್ಲಿ ತಾರ್ಷೀಷ್‌ಗೆ ಹೋಗುವ ಹಡಗನ್ನು ಹತ್ತಿದ. ಸ್ಪೆಯ್ನ್‌ ದೇಶದಲ್ಲಿ ತಾರ್ಷೀಷ್‌ ಇತ್ತೆಂದು ಕೆಲವು ವಿದ್ವಾಂಸರ ಹೇಳಿಕೆ. ಹಾಗಿದ್ದರೆ, ಯೋನನು ಹೋಗುತ್ತಿದ್ದದ್ದು ನಿನೆವೆಯಿಂದ 3,500 ಕಿ.ಮೀ.ನಷ್ಟು ದೂರಕ್ಕೆ! ಅಂದರೆ ಮಹಾ ಸಮುದ್ರದ (ಮೆಡಿಟರೇನಿಯನ್‌ ಸಮುದ್ರ) ಇನ್ನೊಂದು ತುದಿಗೆ! ಹಡಗಿನಲ್ಲಿ ಪ್ರಯಾಣಿಸಿದರೆ ಅಲ್ಲಿಗೆ ತಲಪಲು ಒಂದು ವರ್ಷವಾದರೂ ಬೇಕಿತ್ತು. ಯೆಹೋವನು ಕೊಟ್ಟ ನೇಮಕವನ್ನು ಬಿಟ್ಟು ದೂರ ಓಡಿಹೋಗಲು ಯೋನ ಎಷ್ಟು ಗಟ್ಟಿಮನಸ್ಸು ಮಾಡಿದ್ದನೆಂದು ಇದರಿಂದ ಗೊತ್ತಾಗುತ್ತದೆ.ಯೋನ 1:3 ಓದಿ.

8 ಹಾಗಾದರೆ ಯೋನ ಹೇಡಿಯಾಗಿದ್ದನೊ? ಇಲ್ಲ. ಹಾಗೆಣಿಸಿದರೆ ನಾವು ದುಡುಕಿ ತೀರ್ಮಾನಿಸಿದಂತೆ ಆಗಬಹುದು. ಏಕೆಂದರೆ ಅವನು ಕೆಚ್ಚೆದೆಯಿಂದ ಮಾಡಿದ ಎಷ್ಟೋ ವಿಷಯಗಳಿವೆ. ಅದನ್ನು ಮುಂದೆ ನೋಡಲಿದ್ದೇವೆ. ಆದರೂ ಅಪರಿಪೂರ್ಣ ಮನುಷ್ಯನಾಗಿದ್ದ ಯೋನನಿಗೆ ತನ್ನದೇ ಆದ ಅನೇಕ ಕುಂದುಕೊರತೆಗಳಿದ್ದವು. ನಮ್ಮೆಲ್ಲರಲ್ಲೂ ಇರುವ ಹಾಗೆ. (ಕೀರ್ತ. 51:5) ಒಂದಲ್ಲಾ ಒಂದು ಕಾರಣಕ್ಕೆ ಭಯಪಡದೆ ಇದ್ದವರು ನಮ್ಮಲ್ಲಿ ಯಾರಿದ್ದಾರೆ ಹೇಳಿ?

9. (1) ಯೆಹೋವನು ಕೊಡುವ ನೇಮಕದ ಬಗ್ಗೆ ನಮಗೆ ಒಮ್ಮೊಮ್ಮೆ ಹೇಗನಿಸಬಹುದು? (2) ಅಂಥ ಸಮಯಗಳಲ್ಲಿ ನಾವು ಯಾವ ಸತ್ಯವನ್ನು ನೆನಪಿಸಿಕೊಳ್ಳಬೇಕು?

9 ಕೆಲವೊಮ್ಮೆ ದೇವರು ಕೊಡುವ ನೇಮಕ ನಮಗೆ ಕೂಡ ತುಂಬ ಕಷ್ಟಕರವಾಗಿ ಅಥವಾ ಮಾಡಲು ಸಾಧ್ಯವೇ ಇಲ್ಲವೆಂಬಂತೆ ತೋರಬಹುದು. ದೇವರ ರಾಜ್ಯದ  ಸುವಾರ್ತೆ ಸಾರುವುದು ಕ್ರೈಸ್ತರು ಮಾಡಲೇಬೇಕಾದ ಕೆಲಸ. (ಮತ್ತಾ. 24:14) ಇದನ್ನು ಮಾಡಲಿಕ್ಕೂ ನಾವು ತುಂಬ ಹೆದರಬಹುದು. ಏಕೆಂದರೆ “ದೇವರಿಗೆ ಎಲ್ಲವು ಸಾಧ್ಯ” ಎಂದು ಯೇಸು ಹೇಳಿದ ಗಹನ ಸತ್ಯವನ್ನು ನಾವು ಸುಲಭವಾಗಿ ಮರೆಯುವ ಸಾಧ್ಯತೆಯಿದೆ. (ಮಾರ್ಕ 10:27) ಒಮ್ಮೊಮ್ಮೆ ನಮಗೇ ಹೀಗಾಗುವಾಗ ಯೋನನಿಗೂ ಹಾಗೆ ಆಗಿರಬೇಕೆಂದು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಯೋನ ಓಡಿಹೋಗಿದ್ದರ ಪರಿಣಾಮ ಏನಾಯಿತು?

ಅವಿಧೇಯನಾದ ಪ್ರವಾದಿಗೆ ಯೆಹೋವನ ತಿದ್ದುಪಾಟು

10, 11. (1) ಹಡಗು ತೀರ ಬಿಟ್ಟು ದೂರ ಹೋದಂತೆ ಯೋನನಿಗೆ ಹೇಗನಿಸಿರಬೇಕು? (2) ಹಡಗಿಗೂ ನಾವಿಕರಿಗೂ ಯಾವ ಅಪಾಯ ಬಂತು?

10 ತಾರ್ಷೀಷಿಗೆ ಹೋಗುತ್ತಿದ್ದ ಆ ಹಡಗು ಪ್ರಾಯಶಃ ಫಿನಿಶೀಯರ ಸರಕು ಸಾಗಣೆ ಹಡಗಾಗಿತ್ತು. ಅದನ್ನು ಹತ್ತಿದ ಯೋನ ಸ್ಥಳ ಹುಡುಕಿಕೊಂಡು ಒಂದು ಕಡೆ ಒರಗಿ ಕೂತುಕೊಂಡನು. ಅಲ್ಲಿಂದ ಯೋನನಿಗೆ, ಕಪ್ತಾನ ಮತ್ತು ಕಲಾಸಿಗಳು ಗಡಿಬಿಡಿ ಗದ್ದಲದಿಂದ ಹಡಗನ್ನು ಬಂದರಿನಿಂದ ಹೊರಡಿಸುತ್ತಿರುವುದು ಕಾಣುತ್ತಿದ್ದಿರಬಹುದು. ಹಡಗು ಮೆಲ್ಲಮೆಲ್ಲನೆ ದೂರ ಸಾಗಿ ತೀರವು ಕಣ್ಣಿಗೆ ಮರೆಯಾದಂತೆ, ‘ಅಬ್ಬಾ! ದೊಡ್ಡ ಗಂಡಾಂತರದಿಂದ ಪಾರಾದೆ’ ಎಂದು ಯೋನ ನಿಟ್ಟುಸಿರು ಬಿಟ್ಟಿರಬೇಕು. ಆದರೆ ಇದ್ದಕ್ಕಿದ್ದಂತೆ ಹವಾಮಾನದಲ್ಲಿ ಏರುಪೇರಾಯಿತು!

11 ರೌದ್ರಾವೇಶದಿಂದ ಬಿರುಸಾಗಿ ಬೀಸಿದ ತುಫಾನು ಸಮುದ್ರವನ್ನು ನೊರೆಗರೆಸುತ್ತಾ ಅಲ್ಲಕಲ್ಲೋಲಮಾಡಿತು. ದೈತ್ಯಾಕಾರದ ಅಲೆಗಳನ್ನು ಎಬ್ಬಿಸಿತು. ಆ ಅಲೆಗಳ ಮುಂದೆ ಇಂದಿನ ದೊಡ್ಡ ದೊಡ್ಡ ನೌಕೆಗಳೂ ಚಿಕ್ಕಪುಟ್ಟ ಆಟಿಕೆಗಳಂತೆ ಇರುತ್ತಿದ್ದವೋ ಏನೋ. ಹೀಗಿರಲಾಗಿ ಮರದಿಂದ ಮಾಡಲಾದ ಈ ಹಡಗು ಆ ಮುಗಿಲೆತ್ತರದ ಅಲೆಗಳ ಧುಮುಕನ್ನು ಎದುರಿಸಿ ಹೇಗೆ ಪಾರಾದೀತು? ಅಸಂಭವವೇ ಸರಿ! ‘[ಯೆಹೋವನೇ] ಬಿರುಗಾಳಿಯನ್ನು ಸಮುದ್ರದ ಮೇಲೆ ಬಲವಾಗಿ ಬೀಸಿದನು’ ಎಂದು ಯೋನ ಸಮಯಾನಂತರ ಬರೆದನು. ಆದರೆ ಬಿರುಗಾಳಿ ಬೀಸುತ್ತಿದ್ದ ಸಂದರ್ಭದಲ್ಲಿ ಈ ಸತ್ಯ ಯೋನನಿಗೆ ತಿಳಿದಿತ್ತೇ? ನಮಗದು ಗೊತ್ತಿಲ್ಲ. ನಾವಿಕರು ಹೆದರಿ ತಮ್ಮ ತಮ್ಮ ದೇವರುಗಳಿಗೆ ಮೊರೆಯಿಡುವುದನ್ನು ಅವನು ಕಂಡದ್ದಂತೂ ನಿಜ. ಅವರ ದೇವರುಗಳಿಂದ ಯಾವ ಸಹಾಯವೂ ಬರಲಾರದೆಂದು ಅವನಿಗೆ ತಿಳಿದಿತ್ತು. (ಯಾಜ. 19:4) ಇನ್ನೇನು “ಹಡಗು ಒಡೆದುಹೋಗುವ ಹಾಗಾಯಿತು” ಎನ್ನುತ್ತದೆ ಅವನ ವೃತ್ತಾಂತ. (ಯೋನ 1:4) ಯೋನನು ತನ್ನ ದೇವರು ಕೊಟ್ಟ ನೇಮಕವನ್ನು ಬಿಟ್ಟು ಓಡಿಹೋಗುತ್ತಿದ್ದ ಕಾರಣ ಆತನ ಸಹಾಯ ಬೇಡುವುದಾದರೂ ಹೇಗೆ?

12. (1) ತುಫಾನು ಬಡಿದ ಸಂದರ್ಭದಲ್ಲಿ ಯೋನ ನಿದ್ರೆ ಮಾಡುತ್ತಿದ್ದದ್ದು ಯೋಗ್ಯವಲ್ಲವೆಂದು ನಿರ್ಣಯಿಸಬಾರದೇಕೆ? (ಪಾದಟಿಪ್ಪಣಿ ಸಹ ನೋಡಿ.) (2) ತುಫಾನಿಗೆ ಕಾರಣ ಯಾರೆಂದು ಯೆಹೋವನು ತೋರಿಸಿಕೊಟ್ಟದ್ದು ಹೇಗೆ?

12 ಯೋನ ನಿಸ್ಸಹಾಯಕ ಸ್ಥಿತಿಯಲ್ಲಿದ್ದ. ಹಾಗಾಗಿ ಹಡಗಿನ ಕೆಳಭಾಗಕ್ಕೆ ಇಳಿದು  ಮಲಗಿಕೊಂಡ. ಅವನಿಗೆ ಗಾಢನಿದ್ರೆ ಹತ್ತಿತು. * ಹಡಗಿನ ಕಪ್ತಾನನು ಅವನ ಬಳಿಗೆ ಬಂದು ಅವನನ್ನು ಎಬ್ಬಿಸಿ ಬೇರೆಲ್ಲರಂತೆ ಯೋನನೂ ತನ್ನ ದೇವರನ್ನು ಬೇಡಿಕೊಳ್ಳುವಂತೆ ಹೇಳಿದನು. ಯಾರೋ ಮಾಡಿದ ತಪ್ಪಿನ ಕಾರಣ ಈ ತುಫಾನು ದೈವಮೂಲದಿಂದ ಉಂಟಾಗಿದೆಯೆಂದು ನಾವಿಕರಿಗೆ ಖಚಿತವಾಯಿತು. ಆದರೆ ಆ ವ್ಯಕ್ತಿ ಯಾರೆಂದು ತಿಳಿಯಲು ಚೀಟುಹಾಕಿದರು. ಒಬ್ಬರ ನಂತರ ಒಬ್ಬರ ಹೆಸರನ್ನು ತೆಗೆಯುತ್ತಿದ್ದಾಗ ತನ್ನ ಹೆಸರು ಬರದಿರುವುದನ್ನು ನೋಡಿ ಯೋನನಿಗೆ ಒಳಗೊಳಗೆ ನಡುಕ ಶುರುವಾಗಿರಬೇಕು! ಕೊನೆಗೂ ಸತ್ಯ ಬೆಳಕಿಗೆ ಬಂತು. ಚೀಟು ಯೋನನ ಹೆಸರಿಗೆ ಬೀಳುವಂತೆ ಮಾಡುವ ಮೂಲಕ ತುಫಾನಿಗೆ ಕಾರಣ ಯೋನನೇ ಎಂದು ಯೆಹೋವನು ತೋರಿಸಿಕೊಟ್ಟನು.ಯೋನ 1:5-7 ಓದಿ.

13. (1) ನಾವಿಕರಿಗೆ ಯೋನ ಏನೆಂದು ವಿವರಿಸಿದನು? (2) ತನ್ನನ್ನು ಏನು ಮಾಡುವಂತೆ ಯೋನ ಹೇಳಿದನು ಮತ್ತು ಏಕೆ?

13 ಯೋನ ನಾವಿಕರ ಮುಂದೆ ವಿಷಯವನ್ನೆಲ್ಲಾ ಬಿಚ್ಚಿಟ್ಟನು. ತಾನು ಸರ್ವಶಕ್ತ ದೇವರಾದ ಯೆಹೋವನ ಸೇವಕ, ಆ ದೇವರ ಆಜ್ಞೆಯನ್ನು ಪಾಲಿಸದೆ ಆತನ ಸನ್ನಿಧಿಯಿಂದ ದೂರ ಓಡಿಬಂದ ಕಾರಣ ಎಲ್ಲರನ್ನು ಭೀಕರ ಗಂಡಾಂತರಕ್ಕೆ ಒಳಪಡಿಸಿದ್ದೇನೆಂದು ವಿವರಿಸಿದ. ಅವನ ಮಾತುಗಳನ್ನು ಕೇಳುತ್ತಿದ್ದ ಆ ನಾವಿಕರಿಗೆ ದಂಗುಬಡಿದಂತಾಯಿತು. ಅವರ ಕಣ್ಣುಗಳಲ್ಲಿ ವಿಪರೀತ ಭಯ ತುಂಬಿದ್ದನ್ನು ಯೋನ ಕಂಡನು. ಹಡಗನ್ನೂ ತಮ್ಮ ಜೀವವನ್ನೂ ರಕ್ಷಿಸಿಕೊಳ್ಳಲಿಕ್ಕಾಗಿ ನಿನ್ನನ್ನು ಏನು ಮಾಡಬೇಕೆಂದು ಅವನಿಗೇ ಕೇಳಿದರು. ಯೋನ ಹೇಳಿದ್ದೇನು? ತನ್ನನ್ನು ಹಡಗಿನಿಂದ ಹೊರಹಾಕಿದರೆ ಅವರು ಉಳಿಯುವರೆಂದು ಅವನಿಗೆ ತಿಳಿದಿತ್ತು. ಆದರೆ ನೊರೆಕಾರುತ್ತಿರುವ, ತಣ್ಣನೆ ಕೊರೆಯುವ ಸಮುದ್ರದಲ್ಲಿ ಮುಳುಗಿಹೋಗುವ ಯೋಚನೆಯೇ ಅವನಲ್ಲಿ ನಡುಕ ಹುಟ್ಟಿಸಿರಬಹುದು. ಹಾಗಿದ್ದರೂ ತನ್ನಿಂದಾಗಿ ಅವರೆಲ್ಲರು ಜಲಸಮಾಧಿಯಾಗುವಂತೆ ಬಿಡಲು ಅವನಿಗೆ ಮನಸ್ಸು ಒಪ್ಪಲಿಲ್ಲ. ಹಾಗಾಗಿ “ನನ್ನನ್ನೆತ್ತಿ ಸಮುದ್ರದಲ್ಲಿ ಹಾಕಿರಿ; ನಿಮ್ಮ ಮೇಲೆ ಎದ್ದಿರುವ ಸಮುದ್ರವು ಶಾಂತವಾಗುವದು; ಈ ದೊಡ್ಡ ತುಫಾನು ನಿಮಗೆ ಸಂಭವಿಸಿದ್ದು ನನ್ನ ನಿಮಿತ್ತವೇ ಎಂಬದು ನನಗೆ ಗೊತ್ತು” ಎಂದು ಅವರಿಗೆ ಹೇಳಿದನು.—ಯೋನ 1:12.

14, 15. (1) ಯೋನನ ನಂಬಿಕೆಯನ್ನು ನಾವು ಹೇಗೆ ಅನುಕರಿಸಬಹುದು? (2) ಯೋನನ ಮಾತಿಗೆ ನಾವಿಕರು ಹೇಗೆ ಪ್ರತಿಕ್ರಿಯಿಸಿದರು?

14 ಯೋನ ಹೇಡಿಯಾಗಿರುತ್ತಿದ್ದರೆ ಖಂಡಿತ ಆ ಮಾತು ಹೇಳುತ್ತಿರಲಿಲ್ಲ. ಆ ಸಂದಿಗ್ಧ ಸಮಯದಲ್ಲಿ ಯೋನ ತೋರಿಸಿದ ಧೀರ, ಸ್ವತ್ಯಾಗದ ಮನೋಭಾವವು ಯೆಹೋವನ ಹೃದಯಕ್ಕೆ ತುಂಬ ಆನಂದ ತಂದಿರಬೇಕೆಂಬುದು ನಿಸ್ಸಂಶಯ. ಯೋನನಿಗಿದ್ದ ಬಲವಾದ ನಂಬಿಕೆಯನ್ನು ನಾವಿಲ್ಲಿ ನೋಡುತ್ತೇವೆ. ನಾವದನ್ನು ಹೇಗೆ ಅನುಕರಿಸಬಹುದು? ನಮ್ಮ  ಹಿತಕ್ಷೇಮಕ್ಕಿಂತ ಇತರರ ಹಿತಕ್ಷೇಮಕ್ಕೆ ಪ್ರಾಶಸ್ತ್ಯ ಕೊಡುವ ಮೂಲಕ. (ಯೋಹಾ. 13:34, 35) ಜೀವನಾವಶ್ಯಕತೆಗಳ ಕೊರತೆಯಿರುವವರನ್ನು, ದುಃಖದಲ್ಲಿರುವವರನ್ನು, ಸತ್ಯಕ್ಕಾಗಿ ಹಾತೊರೆಯುವವರನ್ನು ಕಂಡಾಗ ಅವರಿಗೆ ಸಹಾಯಮಾಡಲು ನಮ್ಮಿಂದಾದುದೆಲ್ಲವನ್ನು ಮಾಡುತ್ತೇವೊ? ಹಾಗೆ ಮಾಡುವಾಗ ಯೆಹೋವನಿಗೆ ಬಹಳ ಹರ್ಷ ತರುತ್ತೇವೆ.

15 ಯೋನನ ಮಾತು ಕೇಳಿ ನಾವಿಕರ ಮನಕರಗಿರಬೇಕು. ಆದ್ದರಿಂದಲೇ ಅವನು ಹೇಳಿದಂತೆ ಮಾಡಲು ಅವರು ಮೊದಲು ಒಪ್ಪಲಿಲ್ಲ. ಬದಲಾಗಿ ಆ ತುಫಾನಿನಿಂದ ಬಚಾವಾಗಲು ತಮ್ಮ ಕೈಯಿಂದಾದದ್ದೆಲ್ಲ ಮಾಡಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಚಂಡಮಾರುತದ ಅಟ್ಟಹಾಸ ಇನ್ನೂ ಜಾಸ್ತಿಯಾಯಿತು. ಕೊನೆಗೆ ಅವರಿಗೆ ಬೇರೆ ದಾರಿಯೇ ಕಾಣಲಿಲ್ಲ. ಹಾಗಾಗಿ ಅವರು ಯೋನನ ದೇವರಾದ ಯೆಹೋವನಿಗೆ ಮೊರೆಯಿಟ್ಟು ತಮಗೆ ಕರುಣೆ ತೋರಿಸುವಂತೆ ಬೇಡಿ ಬಳಿಕ ಯೋನನನ್ನು ಎತ್ತಿ ಸಮುದ್ರದಲ್ಲಿ ಹಾಕಿದರು.—ಯೋನ 1:13-15.

ಯೋನನ ಒತ್ತಾಯದ ಮೇರೆಗೆ ನಾವಿಕರು ಅವನನ್ನು ಎತ್ತಿ ಸಮುದ್ರಕ್ಕೆ ಹಾಕಿದರು

ಯೋನನಿಗೆ ದೊರೆತ ಕರುಣೆ ಮತ್ತು ಬಿಡುಗಡೆ

16, 17. ಯೋನನನ್ನು ಸಮುದ್ರಕ್ಕೆ ಎಸೆದಾಗ ಏನಾಯಿತೆಂದು ವರ್ಣಿಸಿ. (ಚಿತ್ರಗಳನ್ನೂ ನೋಡಿ.)

16 ಯೋನನು ಭೋರ್ಗರೆಯುತ್ತಿದ್ದ ಸಮುದ್ರದೊಳಗೆ ದಢಂ ಎಂದು ಬಿದ್ದನು. ಅವನು ಒದ್ದಾಡುತ್ತಾ ಕೈಕಾಲನ್ನು ಬಡಿದು ತೇಲುತ್ತಿರಲು ಪ್ರಯತ್ನಿಸಿರಬೇಕು. ನೊರೆಕಾರುವ ಅಲೆಗಳ ಮಧ್ಯೆ ಹಡಗು ಮುಂದಕ್ಕೆ ವೇಗವಾಗಿ ಚಲಿಸುತ್ತಿರುವುದು ಅವನಿಗೆ ಕಾಣಿಸಿರಬಹುದು. ಆಗ ಪ್ರಚಂಡ ಅಲೆಗಳು ರಭಸದಿಂದ ಅಪ್ಪಳಿಸಿ ಅವನನ್ನು ಬಲವಂತವಾಗಿ ಕೆಳಕ್ಕೆ ನೂಕಿದವು. ಹೀಗೆ ಮುಳುಗುತ್ತಾ ಮುಳುಗುತ್ತಾ ಹೋದಾಗ ತನ್ನ ಕಥೆ ಇಲ್ಲಿಗೆ ಮುಗಿಯಿತೆಂದು ಅವನೆಣಿಸಿದ.

17 ಈ ಸಮಯದಲ್ಲಿ ತನಗಾದ ಅನುಭವವನ್ನು ಯೋನ ತದನಂತರ ವರ್ಣಿಸಿದನು. ಕೆಲವೇ ಕ್ಷಣದಲ್ಲಿ ಎಷ್ಟೋ ವಿಷಯಗಳು ಅವನ ಮನಸ್ಸಿನಲ್ಲಿ ಒಮ್ಮೆಲೆ ಹಾದುಹೋದವು. ತನ್ನ ಅವಿಧೇಯತೆಯಿಂದಾಗಿ ದೇವರ ಅನುಗ್ರಹ ಕಳಕೊಳ್ಳುವೆನೆಂಬ ಭಯ ಅವನಿಗಾಯಿತು. ಸಮುದ್ರದಾಳಕ್ಕೆ ಇಳಿಯುತ್ತಿದ್ದಾಗ ಪರ್ವತಗಳ ಬುಡದಲ್ಲಿ ಪಾಚಿ ಅವನ ತಲೆಯನ್ನು ಸುತ್ತಿಕೊಂಡಿತು. ಅದೇ ತನ್ನ ಅಧೋಲೋಕ ಅಂದರೆ ಸಮಾಧಿ ಎಂಬಂತೆ ಅವನಿಗೆ ತೋಚಿತು.ಯೋನ 2:2-6 ಓದಿ.

18, 19. (1) ಸಮುದ್ರದ ತಳದಲ್ಲಿ ಯೋನನಿಗೆ ಏನಾಯಿತು? (2) ಅವನನ್ನು ನುಂಗಿದ ಜಲಜೀವಿ ಯಾವುದಾಗಿರಬಹುದು? (ಪಾದಟಿಪ್ಪಣಿ ಸಹ ನೋಡಿ.) (3) ಇದೆಲ್ಲವನ್ನು ನಡೆಸಿದವನು ಯಾರು?

18 ಆದರೆ ಸ್ವಲ್ಪ ನಿಲ್ಲಿ! ಯೋನನ ಹತ್ತಿರಕ್ಕೆ ಏನೋ ಬರುತ್ತಾ ಇತ್ತು. ಕರ್ರಗಿನ ಬೃಹದಾಕಾರದ ಜೀವಿ ಅದು. ಇನ್ನೂ ಹತ್ತಿರ ಬಂದು ಥಟ್ಟನೆ ತನ್ನ ದೊಡ್ಡ ಬಾಯಿ ತೆರೆದು ಯೋನನನ್ನು ಗುಳುಂ ಎಂದು ನುಂಗಿಬಿಟ್ಟಿತು!

‘ಯೋನನನ್ನು ನುಂಗಲು ಯೆಹೋವನು ಒಂದು ದೊಡ್ಡ ಮೀನಿಗೆ ಅಪ್ಪಣೆ ಮಾಡಿದನು’

19 ಕೊನೆಯುಸಿರೆಳೆಯುವ ಸಮಯ ಬಂತ್ತೆಂದು ಯೋನನಿಗೆ ಅನಿಸಿದ್ದಿರಬೇಕು.  ಆದರೆ ಹಾಗಾಗಲಿಲ್ಲ. ಆಶ್ಚರ್ಯದ ಸಂಗತಿಯೊಂದು ನಡೆಯಿತು. ಮೀನು ಅವನನ್ನು ನಜ್ಜುಗುಜ್ಜು ಮಾಡಿರಲಿಲ್ಲ. ಅದರ ಹೊಟ್ಟೆಯಲ್ಲಿ ಅವನು ಜೀರ್ಣಿಸಲ್ಪಡಲಿಲ್ಲ. ಅವನಿಗಲ್ಲಿ ಉಸಿರುಕಟ್ಟಿದಂತೆಯೂ ಆಗಲಿಲ್ಲ. ಅವನಿನ್ನೂ ಬದುಕಿದ್ದ! ನಿಜವಾಗಿ ಅವನ ಸಮಾಧಿಯಾಗಬೇಕಾಗಿದ್ದ ಆ ಮೀನಿನ ಹೊಟ್ಟೆಯಲ್ಲಿ ಅವನಿನ್ನೂ ಉಸಿರಾಡುತ್ತಿದ್ದನು. ಮೆಲ್ಲಮೆಲ್ಲನೆ ಭಯವಿಸ್ಮಯ ಭಾವವು ಅವನನ್ನು ಆವರಿಸಿತು. ಹೌದು, ‘ಯೋನನನ್ನು ನುಂಗಲು ಒಂದು ದೊಡ್ಡ ಮೀನಿಗೆ ಅಪ್ಪಣೆಮಾಡಿದ್ದು’ ಅವನ ದೇವರಾದ ಯೆಹೋವನೇ. *ಯೋನ 1:17.

20. ಮೀನಿನ ಹೊಟ್ಟೆಯಲ್ಲಿದ್ದಾಗ ಯೋನ ಮಾಡಿದ ಪ್ರಾರ್ಥನೆಯಿಂದ ನಾವೇನು ಕಲಿಯಬಲ್ಲೆವು?

20 ಕ್ಷಣಗಳು ಉರುಳಿ ತಾಸುಗಳು ಕಳೆದವು. ಹಿಂದೆಂದೂ ಕಂಡಿರದ ಆ ಗಾಢ ಕತ್ತಲೆಯಲ್ಲಿ ಯೋನನು ಯೋಚಿಸಿ ಮಾತುಗಳನ್ನು ಪೋಣಿಸಿ ಯೆಹೋವ ದೇವರಿಗೆ ಪ್ರಾರ್ಥಿಸಿದನು.  ಯೋನ ಪುಸ್ತಕದ ಎರಡನೇ ಅಧ್ಯಾಯದಲ್ಲಿ ದಾಖಲಾಗಿರುವ ಆ ಪ್ರಾರ್ಥನೆಯಿಂದ ತುಂಬ ವಿಷಯಗಳನ್ನು ಕಲಿಯುತ್ತೇವೆ. ಅವನು ಆ ಪ್ರಾರ್ಥನೆಯಲ್ಲಿ ಅನೇಕಾವರ್ತಿ ಕೀರ್ತನೆಗಳಿಂದ ಉಲ್ಲೇಖಿಸಿದ್ದಾನೆ. ಅವನಿಗೆ ಶಾಸ್ತ್ರಗ್ರಂಥದ ಬಗ್ಗೆ ವಿಸ್ತೃತ ಜ್ಞಾನವಿತ್ತೆಂದು ಇದರಿಂದ ಗೊತ್ತಾಗುತ್ತದೆ. ಅಲ್ಲದೆ, ಅವನಿಗೆ ಕೃತಜ್ಞತಾಭಾವ ಇತ್ತೆಂದೂ ಅದು ತೋರಿಸುತ್ತದೆ. ಕೊನೆಗೆ ಯೋನ ಅಂದದ್ದು: “ನಾನಾದರೋ ಸ್ತೋತ್ರಧ್ವನಿಯಿಂದ ನಿನಗೆ ಯಜ್ಞವನ್ನರ್ಪಿಸುವೆನು, ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು. ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು.”—ಯೋನ 2:9.

21. (1) ಯೆಹೋವನ ರಕ್ಷಣಾಶಕ್ತಿಯ ಕುರಿತು ಯೋನ ಏನು ಕಲಿತನು? (2) ಯಾವ ಮಹತ್ವಪೂರ್ಣ ವಿಷಯವನ್ನು ನಾವು ನೆನಪಿಡಬೇಕು?

21 ಯೆಹೋವನು ತನ್ನ ಸೇವಕರನ್ನು ಯಾವುದೇ ಸನ್ನಿವೇಶದಲ್ಲಿ, ಯಾವುದೇ ಸ್ಥಳದಲ್ಲಿ, ಯಾವುದೇ ಸಮಯದಲ್ಲಿ ರಕ್ಷಿಸಶಕ್ತನೆಂದು ಯೋನ ಕಲಿತನು. ಹೌದು, ಕಳವಳಗೊಂಡಿದ್ದ ತನ್ನ ಸೇವಕನು ‘ಮೀನಿನ ಹೊಟ್ಟೆಯೊಳಗೆ’ ಇದ್ದಾಗಲೂ ಯೆಹೋವನು ಅವನನ್ನು ಕಾಪಾಡಿದನು. (ಯೋನ 1:17) ಭಾರಿ ಗಾತ್ರದ ಮೀನಿನ ಹೊಟ್ಟೆಯೊಳಗೆ ಒಬ್ಬ ಮನುಷ್ಯನನ್ನು ಮೂರು ದಿನ ಹಗಲಿರುಳು ಸುರಕ್ಷಿತವಾಗಿ, ಜೀವಂತವಾಗಿ ಇಡಲು ಯೆಹೋವನಿಂದ ಮಾತ್ರ ಸಾಧ್ಯ. ನಮ್ಮ ‘ಪ್ರಾಣವು ಯಾರ ಕೈಯಲ್ಲಿದೆಯೋ ಆ ದೇವರು’ ಯೆಹೋವನೆಂದು ನೆನಪಿಸಿಕೊಳ್ಳುವುದು ಉತ್ತಮ. (ದಾನಿ. 5:23) ನಾವು ಉಸಿರಾಡುತ್ತಿರುವುದು, ಅಸ್ತಿತ್ವದಲ್ಲಿರುವುದು ಆತನಿಂದಾಗಿಯೇ. ಅದಕ್ಕಾಗಿ ನಾವು ಕೃತಜ್ಞರಾಗಿದ್ದೇವೊ? ಹಾಗಿದ್ದರೆ ಯೆಹೋವನಿಗೆ ವಿಧೇಯತೆ ತೋರಿಸುವೆವು.

22, 23. (1) ಯೋನನ ಕೃತಜ್ಞತಾಭಾವ ಹೇಗೆ ಕೂಡಲೆ ಪರೀಕ್ಷೆಗೊಳಗಾಯಿತು? (2) ತಪ್ಪು ಮಾಡಿದಾಗ ನಮ್ಮಲ್ಲಿ ಯಾವ ಮನೋಭಾವ ಇರಬೇಕೆಂದು ಯೋನನಿಂದ ಕಲಿಯುತ್ತೇವೆ?

22 ಯೋನನು ತನ್ನ ಕೃತಜ್ಞತೆಯನ್ನು ಯೆಹೋವನಿಗೆ ವಿಧೇಯನಾಗುವ ಮೂಲಕ ತೋರಿಸಲು ಕಲಿತನೇ? ಹೌದು. ಮೂರು ಹಗಲು ಮೂರು ರಾತ್ರಿಯ ಬಳಿಕ ಆ ಮೀನು ದಡಕ್ಕೆ ಬಂದು “ಯೋನನನ್ನು ಒಣನೆಲದಲ್ಲಿ ಕಾರಿಬಿಟ್ಟಿತು.” (ಯೋನ 2:10) ನೋಡಿ, ಯೋನ ಇಷ್ಟೆಲ್ಲಾ ಅವಾಂತರ ಮಾಡಿದ ಬಳಿಕವೂ ಅವನೇ ದಡಕ್ಕೆ ಈಜಿಕೊಂಡು ಬರುವ ಅಗತ್ಯವಿರಲಿಲ್ಲ! ಆ ತೀರ ಯಾವುದಾಗಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಯೋನ ಮುಂದಕ್ಕೆ ತನ್ನ ದಾರಿಯನ್ನು ತಾನೇ ಹುಡುಕಿಕೊಳ್ಳಬೇಕಿತ್ತು. ಅವನಲ್ಲಿದ್ದ ಕೃತಜ್ಞತಾಭಾವ ಸ್ವಲ್ಪದರಲ್ಲೇ  ಪರೀಕ್ಷೆಗೊಳಗಾಯಿತು. “ಯೆಹೋವನು ಯೋನನಿಗೆ—ನೀನೆದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಪ್ರಕಟಿಸುವದನ್ನು ಅಲ್ಲಿ ಸಾರು ಎಂದು ಎರಡನೆಯ ಸಲ ಅಪ್ಪಣೆಮಾಡಿದನು” ಎನ್ನುತ್ತದೆ ಯೋನ 3:1, 2. ಯೋನ ಈಗೇನು ಮಾಡಲಿದ್ದನು?

23 ಯೋನ ಹಿಮ್ಮೆಟ್ಟಲಿಲ್ಲ. “ಆಗ ಯೋನನು ಎದ್ದು ಯೆಹೋವನ ಅಪ್ಪಣೆಯಂತೆ ನಿನೆವೆಗೆ ಹೋದನು” ಎನ್ನುತ್ತದೆ ಬೈಬಲ್‌. (ಯೋನ 3:3) ಹೌದು, ಅವನು ವಿಧೇಯನಾದನು. ತನ್ನ ತಪ್ಪುಗಳಿಂದ ಪಾಠ ಕಲಿತನು ಎಂಬುದು ಸ್ಪಷ್ಟ. ಈ ವಿಷಯದಲ್ಲೂ ಯೋನನ ನಂಬಿಕೆಯನ್ನು ನಾವು ಅನುಕರಿಸಬೇಕು. ನಾವೆಲ್ಲರೂ ಪಾಪಿಗಳು. ತಪ್ಪುಗಳನ್ನು ಮಾಡುತ್ತೇವೆ. (ರೋಮ. 3:23) ಹಾಗೆ ತಪ್ಪು ಮಾಡಿದಾಗ ದೇವರ ಸೇವೆಯನ್ನು ನಿಲ್ಲಿಸಿಬಿಡುತ್ತೇವೊ? ಅಥವಾ ನಮ್ಮ ತಪ್ಪುಗಳಿಂದ ಪಾಠ ಕಲಿತು ಪುನಃ ವಿಧೇಯತೆಯಿಂದ ದೇವರ ಸೇವೆಮಾಡುವೆವೊ?

24, 25. (1) ಯೋನನಿಗೆ ತನ್ನ ಜೀವಮಾನ ಕಾಲದಲ್ಲಿ ಯಾವ ಪ್ರತಿಫಲ ಸಿಕ್ಕಿತು? (2) ಭವಿಷ್ಯದಲ್ಲಿ ಯಾವ ಪ್ರತಿಫಲಗಳು ಸಿಗಲಿವೆ?

24 ಯೋನನ ವಿಧೇಯತೆಗೆ ಯೆಹೋವ ದೇವರು ಪ್ರತಿಫಲ ಕೊಟ್ಟನೇ? ಖಂಡಿತ ಕೊಟ್ಟನು. ಒಂದು ಪ್ರತಿಫಲವೇನೆಂದರೆ, ಅವನಿಂದಾಗಿ ಹಡಗಿನ ನಾವಿಕರು ಪಾರಾಗಿ ಉಳಿದರು. ಯೋನ ಸ್ವತ್ಯಾಗ ತೋರಿಸಿ ಸಮುದ್ರಕ್ಕೆ ಎಸೆಯಲ್ಪಟ್ಟ ನಂತರ ಕೂಡಲೇ ತುಫಾನು ನಿಂತುಬಿಟ್ಟಿತು. ಬಳಿಕ ಆ ನಾವಿಕರು ‘ಯೆಹೋವನಿಗೆ ಬಹಳ ಭಯಪಟ್ಟರು.’ ಅವರು ತಮ್ಮ ಸುಳ್ಳು ದೇವರುಗಳಿಗೆ ಅಲ್ಲ ಯೆಹೋವನಿಗೆ ಯಜ್ಞ ಅರ್ಪಿಸಿದರು. ಇದೆಲ್ಲ ಯೋನನಿಗೆ ಆಮೇಲೆ ತಿಳಿದುಬಂತು.—ಯೋನ 1:15, 16.

25 ಅದಕ್ಕಿಂತಲೂ ಹೆಚ್ಚಿನ ಪ್ರತಿಫಲ ತುಂಬ ಸಮಯದ ನಂತರ ಬಂತು. ಯೇಸು ಅವನನ್ನು ಪ್ರವಾದನಾ ಚಿತ್ರರೂಪವಾಗಿ ವರ್ಣಿಸಿದನು. ತಾನು ಸಮಾಧಿ ಅಥವಾ ಷೀಓಲ್‌ನಲ್ಲಿ ಇರಲಿಕ್ಕಿದ್ದ ಸಮಯವನ್ನು ದೊಡ್ಡ ಮೀನಿನ ಹೊಟ್ಟೆಯಲ್ಲಿ ಯೋನನಿದ್ದ ಸಮಯಕ್ಕೆ ಹೋಲಿಸಿದನು. (ಮತ್ತಾಯ 12:38-40 ಓದಿ.) ಭೂಮಿ ಮೇಲೆ ಜೀವಿಸಲು ಯೋನನ ಪುನರುತ್ಥಾನವಾಗುವಾಗ ಆ ಆಶೀರ್ವಾದದ ಕುರಿತು ತಿಳಿದು ಖಂಡಿತ ತುಂಬ ಪುಳಕಿತನಾಗುವನು. (ಯೋಹಾ. 5:28, 29) ಯೆಹೋವನು ನಿಮ್ಮನ್ನು ಸಹ ಆಶೀರ್ವದಿಸಲು ಬಯಸುತ್ತಾನೆ. ಯೋನನಂತೆ ನೀವು ನಿಮ್ಮ ತಪ್ಪುಗಳಿಂದ ಪಾಠ ಕಲಿತುಕೊಳ್ಳುವಿರಾ? ದೇವರಿಗೆ ವಿಧೇಯರಾಗುವಿರಾ? ಸ್ವತ್ಯಾಗದ ಮನೋಭಾವ ತೋರಿಸುವಿರಾ?

^ ಪ್ಯಾರ. 4 ಗತ್‌ಹೇಫೆರ್‌ ಊರು ಗಲಿಲಾಯ ಪ್ರಾಂತಕ್ಕೆ ಸೇರಿದ್ದು. ಯೋನನು ಆ ಊರಿನವನಾಗಿದದ್ದು ಗಮನಾರ್ಹ. ಏಕೆಂದರೆ ಯೇಸುವಿಗೆ ಸೂಚಿಸುತ್ತಾ ದರ್ಪದಿಂದ ಫರಿಸಾಯರು, “ಗಲಿಲಾಯದಿಂದ ಯಾವ ಪ್ರವಾದಿಯೂ ಬರುವುದಿಲ್ಲ, ಹುಡುಕಿ ನೋಡು” ಎಂದರು. (ಯೋಹಾ. 7:52) ಅಂದರೆ ಚಿಕ್ಕ ಪ್ರಾಂತವಾದ ಗಲಿಲಾಯದಿಂದ ಯಾವ ಪ್ರವಾದಿಯೂ ಬಂದಿಲ್ಲ ಅಥವಾ ಮುಂದಕ್ಕೂ ಬರಲಾರನು ಎಂದು ಫರಿಸಾಯರು ಸಾರಾಸಗಟಾಗಿ ಹೇಳುತ್ತಿದ್ದರೆನ್ನುವುದು ಅನೇಕ ಬೈಬಲ್‌ ಅನುವಾದಕರ ಮತ್ತು ಸಂಶೋಧಕರ ಅಭಿಪ್ರಾಯ. ಅವರ ಈ ಅಭಿಪ್ರಾಯ ನಿಜವಾಗಿದ್ದಲ್ಲಿ ಫರಿಸಾಯರು ಇತಿಹಾಸವನ್ನೂ ಪ್ರವಾದನೆಯನ್ನೂ ಅಲಕ್ಷಿಸುತ್ತಿದ್ದರೆಂಬುದು ಸ್ಪಷ್ಟ.—ಯೆಶಾ. 9:1, 2.

^ ಪ್ಯಾರ. 12 ಯೋನ ಗೊರಕೆಹೊಡೆಯುತ್ತಿದ್ದನು ಎಂದು ಕೂಡಿಸುವ ಮೂಲಕ ಅವನೆಷ್ಟು ಗಾಢ ನಿದ್ರೆಯಲ್ಲಿದ್ದನೆಂದು ಸೆಪ್ಟ್ಯುಅಜಿಂಟ್‌ ಭಾಷಾಂತರ ಒತ್ತಿಹೇಳುತ್ತದೆ. ‘ಯಾರಿಗೆ ಏನೇ ಆಗಲಿ ನನಗೆ ಚಿಂತೆಯಿಲ್ಲ’ ಎಂಬ ನಿರ್ಲಕ್ಷ್ಯದಿಂದ ಯೋನ ನಿದ್ದೆ ಮಾಡುತ್ತಿದ್ದನೆಂದು ನಾವೆಣಿಸಬಾರದು. ಏಕೆಂದರೆ ಕೆಲವೊಮ್ಮೆ ತೀರಾ ಮನಗುಂದಿದವರನ್ನು ನಿದ್ರೆ ಆವರಿಸುತ್ತದೆ. ಉದಾಹರಣೆಗೆ, ಗೆತ್ಸೇಮನೆ ತೋಟದಲ್ಲಿ ಯೇಸು ಅತೀ ವೇದನೆಯಲ್ಲಿದ್ದ ಸಮಯದಲ್ಲಿ ಪೇತ್ರ, ಯಾಕೋಬ, ಯೋಹಾನರು ‘ದುಃಖಭಾರದಿಂದ ನಿದ್ರೆ’ ಹೋದರು.—ಲೂಕ 22:45.

^ ಪ್ಯಾರ. 19 ‘ಮೀನು’ ಎಂಬುದಕ್ಕಿರುವ ಹೀಬ್ರು ಪದವನ್ನು ಸೆಪ್ಟ್ಯುಅಜಿಂಟ್‌ನಲ್ಲಿ “ಮಹಾ ಜಲಚರ” ಅಥವಾ “ದೈತ್ಯಾಕಾರದ ಮೀನು” ಎಂದು ಅನುವಾದಿಸಲಾಗಿದೆ. ಯೋನನನ್ನು ನುಂಗಿದ್ದು ಯಾವ ಸಮುದ್ರಜೀವಿ ಎಂದು ನಿಖರವಾಗಿ ಹೇಳಸಾಧ್ಯವಿಲ್ಲವಾದರೂ, ಒಬ್ಬ ಮನುಷ್ಯನನ್ನು ಇಡೀಯಾಗಿ ನುಂಗಿಬಿಡುವಷ್ಟು ಭಾರಿ ಗಾತ್ರದ ಷಾರ್ಕ್‌ ಮೀನುಗಳು ಮೆಡಿಟರೇನಿಯನ್‌ ಸಮುದ್ರದಲ್ಲಿವೆಯೆಂದು ಕಂಡುಕೊಳ್ಳಲಾಗಿದೆ. ಬೇರೆ ಸಮುದ್ರಗಳಲ್ಲಿ ಅದಕ್ಕಿಂತಲೂ ದೊಡ್ಡದಾದ ಷಾರ್ಕ್‌ ಮೀನುಗಳಿವೆ. 45 ಅಡಿ ಅಥವಾ ಅದಕ್ಕಿಂತಲೂ ಹೆಚ್ಚು ಉದ್ದದಷ್ಟು ಬೆಳೆಯುವ ವೇಲ್‌ ಷಾರ್ಕ್‌ ಮೀನುಗಳೂ ಇವೆ!