ಅಧ್ಯಾಯ ಹದಿನೇಳು
“ಇಗೋ, ನಾನು ಯೆಹೋವನ ದಾಸಿ!”
1, 2. (1) ಅಪರಿಚಿತನು ಯಾವ ರೀತಿಯ ವಂದನೆ ಹೇಳಿದ? (2) ಮರಿಯ ಯಾವ ನಿರ್ಣಯ ಮಾಡಬೇಕಾದ ಘಟ್ಟದಲ್ಲಿದ್ದಳು?
ಮರಿಯಳು ಬಾಗಿಲ ಕಡೆ ತಿರುಗಿ ನೋಡಿದಾಗ ಆಶ್ಚರ್ಯಚಕಿತಳಾದಳು. ಅಪರಿಚಿತನೊಬ್ಬ ಬಾಗಿಲಲ್ಲಿ ನಿಂತಿದ್ದ. ಆತ ಅವಳ ಅಪ್ಪಅಮ್ಮನನ್ನು ಕೇಳಿಕೊಂಡು ಬಂದಿರಲಿಲ್ಲ. ಆಕೆಯನ್ನೇ ಕಾಣಲು ಬಂದಿದ್ದ! ಯಾರವನು? ಆ ಊರಿನವನಂತೂ ಅಲ್ಲ. ಏಕೆಂದರೆ ಅಂಥ ಚಿಕ್ಕ ಊರಲ್ಲಿ ಹೊಸಬರು ಯಾರೇ ಬಂದರೂ ಎಲ್ಲರಿಗೂ ಗೊತ್ತಾಗಿಬಿಡುತ್ತಿತ್ತು. ಆತ ನೋಡಲಿಕ್ಕೂ ಬೇರೆ ತರ ಇದ್ದ. ಮರಿಯಳು ಯಾವತ್ತೂ ಕೇಳಿಸಿಕೊಂಡಿರದಂಥ ರೀತಿಯಲ್ಲಿ ಸಂಬೋಧಿಸುತ್ತಾ “ಅತ್ಯಂತ ಅನುಗ್ರಹಪಾತ್ರಳೇ, ನಿನಗೆ ನಮಸ್ಕಾರ; ಯೆಹೋವನು ನಿನ್ನೊಂದಿಗಿದ್ದಾನೆ” ಎಂದ.—ಲೂಕ 1:26-28 ಓದಿ.
2 ಹೀಗೆ ಬೈಬಲ್ ನಮಗೆ ಮರಿಯಳನ್ನು ಪರಿಚಯಿಸುತ್ತದೆ. ಈಕೆ ಹೇಲಿ ಎಂಬಾತನ ಮಗಳು. ಇದ್ದದ್ದು ಗಲಿಲಾಯದ ನಜರೇತ್‌ನಲ್ಲಿ. ಬೈಬಲಿನಲ್ಲಿ ಆಕೆಯ ಕುರಿತ ವೃತ್ತಾಂತ ಶುರುವಾಗುವುದು ಆಕೆ ತನ್ನ ಜೀವನದಲ್ಲಿ ಮಹತ್ವದ ನಿರ್ಣಯವೊಂದನ್ನು ಮಾಡಬೇಕಾದ ಘಟ್ಟದಲ್ಲಿದ್ದ ಸಮಯದಿಂದ. ಈಗಾಗಲೇ ಆಕೆಗೆ ಬಡಗಿ ಯೋಸೇಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಅವನು ಧನಿಕನಲ್ಲದಿದ್ದರೂ ದೇವರಲ್ಲಿ ಬಲವಾದ ನಂಬಿಕೆಯಿದ್ದ ವ್ಯಕ್ತಿ. ಮುಂದೆ ಮದುವೆಯಾಗಿ ಮಕ್ಕಳನ್ನು ಬೆಳೆಸಿ ಗಂಡನಿಗೆ ಹೆಗಲು ಕೊಟ್ಟು ಸಾಧಾರಣ ಬದುಕು ಸಾಗಿಸುವುದು ಬಹುಶಃ ಮರಿಯಳ ಯೋಚನೆಯಾಗಿತ್ತು. ಆದರೆ ಅನಿರೀಕ್ಷಿತವಾಗಿ ಬಂದ ಈ ಸಂದರ್ಶಕನು ದೇವರು ಅವಳಿಗೆ ಕೊಟ್ಟ ಒಂದು ಜವಾಬ್ದಾರಿಯುತ ನೇಮಕದ ಬಗ್ಗೆ ತಿಳಿಸಿದನು. ಇದನ್ನು ಸ್ವೀಕರಿಸಿದರೆ ಆಕೆಯ ಜೀವನವೇ ಬದಲಾಗಲಿತ್ತು.
3, 4. (1) ನಾವು ಮರಿಯಳ ಪರಿಚಯ ಮಾಡಿಕೊಳ್ಳಬೇಕಾದರೆ ಏನನ್ನು ಮೂಲೆಗೊತ್ತಬೇಕು? (2) ಯಾವುದಕ್ಕೆ ಗಮನ ಕೊಡಬೇಕು?
3 ಬೈಬಲಿನಲ್ಲಿ ಮರಿಯಳ ಕುರಿತು ಹೆಚ್ಚು ಮಾಹಿತಿ ಇಲ್ಲ. ಇದನ್ನು ತಿಳಿದಾಗ ಬಹು ಮಂದಿಗೆ ಆಶ್ಚರ್ಯವಾಗುತ್ತದೆ. ಬೈಬಲ್ ಆಕೆಯ ಹಿನ್ನೆಲೆಯ ಬಗ್ಗೆ ತಿಳಿಸುವುದು ಕೊಂಚ, ವ್ಯಕ್ತಿತ್ವದ ಬಗ್ಗೆ ಇನ್ನೂ ಕಡಿಮೆ, ತೋರಿಕೆಯ ವಿಷಯದಲ್ಲಂತೂ ಏನೂ ಇಲ್ಲ. ಆದರೂ ದೇವರ ವಾಕ್ಯ ಆಕೆಯ ಬಗ್ಗೆ ಏನೇನು ಹೇಳುತ್ತದೊ ಅದರಿಂದಲೇ ನಾವು ತುಂಬ ವಿಷಯಗಳನ್ನು ತಿಳಿದುಕೊಳ್ಳಬಹುದು.
4 ಮರಿಯಳ ಪರಿಚಯ ಮಾಡಿಕೊಳ್ಳಬೇಕಾದರೆ ನಾವು ವಿವಿಧ ಧರ್ಮಗಳು ಆಕೆಯ ಕುರಿತು ಕಲಿಸಿರುವ ಆಧಾರವಿಲ್ಲದ ಕಲ್ಪನೆಗಳನ್ನು ಮೂಲೆಗೊತ್ತಬೇಕು. ಆದಕಾರಣ
ವರ್ಣಚಿತ್ರಗಳು, ಶಿಲೆ ಮತ್ತು ಪ್ಲಾಸ್ಟರ್ ಪ್ರತಿಮೆಗಳು ಮರಿಯಳ ಬಗ್ಗೆ ಕೊಡುವ ಚಿತ್ರಣಗಳನ್ನು ಮರೆತುಬಿಡೋಣ. ಕ್ಲಿಷ್ಟಕರ ದೇವತಾಶಾಸ್ತ್ರ ಮತ್ತು ಸಿದ್ಧಾಂತಗಳು ಈ ದೀನ ಮಹಿಳೆಗೆ ಕೊಟ್ಟಿರುವ “ದೇವಮಾತೆ,” “ಸ್ವರ್ಗದ ರಾಣಿ” ಎಂಬ ಉನ್ನತ ಬಿರುದುಗಳನ್ನು ಕೂಡ ಬದಿಗಿಡೋಣ. ಮರಿಯಳ ಕುರಿತು ಬೈಬಲ್ ನಿಜಕ್ಕೂ ಏನು ಹೇಳುತ್ತದೆಂದು ಗಮನ ಕೊಡೋಣ. ಇದು ಅವಳ ನಂಬಿಕೆಯ ಕುರಿತು ಹಾಗೂ ಆ ನಂಬಿಕೆಯನ್ನು ನಾವು ಹೇಗೆ ಅನುಕರಿಸಬೇಕೆಂಬುದರ ಕುರಿತು ಅಮೂಲ್ಯ ಒಳನೋಟವನ್ನು ಕೊಡುತ್ತದೆ.ದೇವದೂತನ ಭೇಟಿ
5. (1) ಗಬ್ರಿಯೇಲ ದೂತನ ವಂದನೆಗೆ ಮರಿಯಳು ತೋರಿಸಿದ ಪ್ರತಿಕ್ರಿಯೆಯಿಂದ ಅವಳ ಬಗ್ಗೆ ಏನು ಕಲಿಯುತ್ತೇವೆ? (2) ಮರಿಯಳಿಂದ ಯಾವ ಪ್ರಾಮುಖ್ಯ ಪಾಠ ಕಲಿಯುತ್ತೇವೆ?
5 ಮರಿಯಳ ಮನೆಗೆ ಬಂದಿದ್ದ ಆ ಸಂದರ್ಶಕ ಮನುಷ್ಯನಲ್ಲ, ದೇವದೂತನಾಗಿದ್ದ. ಅವನ ಹೆಸರು ಗಬ್ರಿಯೇಲ. ಅವನು ಮರಿಯಳನ್ನು, “ಅತ್ಯಂತ ಅನುಗ್ರಹಪಾತ್ರಳೇ” ಎಂದು ಕರೆದಾಗ ಆಕೆ ಆ ಮಾತಿಗೆ ‘ಬಹಳವಾಗಿ ಗಲಿಬಿಲಿಗೊಂಡಳು.’ ಆ ವಂದನೆ ಕೇಳಿ ಅಚ್ಚರಿಗೊಂಡಳು. (ಲೂಕ 1:29) ತಾನು ಯಾರ ಅನುಗ್ರಹಕ್ಕೆ ಪಾತ್ರಳು ಅಂತ ಆಕೆ ಯೋಚಿಸಿರಬಹುದು. ಮನುಷ್ಯರ ಅನುಗ್ರಹವನ್ನಂತೂ ಆಕೆ ನಿರೀಕ್ಷಿಸುತ್ತಿರಲಿಲ್ಲ. ಆಕೆ ದೇವರ ಅನುಗ್ರಹ ಪಡೆಯಲು ಮಹತ್ವ ಕೊಡುತ್ತಿದ್ದಳು. ವಾಸ್ತವದಲ್ಲಿ ದೇವದೂತ ಸೂಚಿಸುತ್ತಿದ್ದದ್ದು ಯೆಹೋವ ದೇವರ ಅನುಗ್ರಹಕ್ಕೆ. ಹಾಗಿದ್ದರೂ ಆಕೆ ದೇವರ ಅನುಗ್ರಹ ತನ್ನ ಮೇಲಿದೆಯೆಂದು ದೇವದೂತ ಹೇಳುತ್ತಿದ್ದಾನೆ ಅಂತ ತಾನಾಗಿ ತಾನೇ ಅಹಂಕಾರದಿಂದ ಭಾವಿಸಿಕೊಳ್ಳಲಿಲ್ಲ. ಇಲ್ಲಿ ನಮಗೊಂದು ಪಾಠವಿದೆ. ಮರಿಯಳಂತೆ ದೇವರ ಅನುಗ್ರಹ ಪಡೆಯಲು ನಾವು ಪ್ರಯತ್ನಿಸುತ್ತಾ ಇರಬೇಕು. ಆದರೆ ಅದು ನಮಗೆ ಈಗಾಗಲೇ ದೊರೆತಿದೆ ಎಂದು ಅಹಂಕಾರದಿಂದ ನೆನಸಬಾರದು. ಏಕೆಂದರೆ ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ. ನಮ್ರರೂ ದೀನರೂ ಆಗಿರುವವರನ್ನು ಪ್ರೀತಿಸಿ ಬೆಂಬಲಿಸುತ್ತಾನೆ.—ಯಾಕೋ. 4:6.
ತನಗೆ ಯೆಹೋವ ದೇವರ ಅನುಗ್ರಹವಿದೆಯೆಂದು ಮರಿಯಳು ತಾನಾಗಿಯೇ ಅಹಂಕಾರದಿಂದ ಭಾವಿಸಿಕೊಳ್ಳಲಿಲ್ಲ
6. ದೇವದೂತ ಯಾವ ಸುಯೋಗವನ್ನು ಮರಿಯಳ ಮುಂದಿಟ್ಟನು?
6 ಮರಿಯಳು ಅಂಥ ದೀನ ಸ್ತ್ರೀಯಾಗಿದ್ದಳು. ಆ ಗುಣ ಆಕೆಗೆ ಅಗತ್ಯವೂ ಆಗಿತ್ತು. ಏಕೆಂದರೆ ದೇವದೂತನು ಆಕೆಯ ಮುಂದಿಟ್ಟಿದ್ದ ಸುಯೋಗ ಆಕೆ ಕನಸುಮನಸ್ಸಲ್ಲೂ ನೆನಸಲಾಗದಂಥದ್ದು. ಆಕೆ ಒಂದು ಮಗುವಿಗೆ ಜನ್ಮಕೊಡಲಿದ್ದಾಳೆ ಎಂದನು ದೇವದೂತ. ಆ ಮಗು ಮುಂದೆ ಎಲ್ಲಾ ಮಾನವರಲ್ಲಿ ಅತಿ ಮಹಾನ್ ವ್ಯಕ್ತಿಯಾಗಲಿದ್ದಾನೆ, “ಅವನ ತಂದೆಯಾದ ದಾವೀದನ ಸಿಂಹಾಸನವನ್ನು [ಯೆಹೋವನು] ಅವನಿಗೆ ಕೊಡುವನು ಮತ್ತು ಅವನು ಯಾಕೋಬನ ಮನೆತನದ ಮೇಲೆ ಸದಾಕಾಲಕ್ಕೂ ರಾಜನಾಗಿ ಆಳುವನು, ಅವನ ರಾಜ್ಯಕ್ಕೆ ಅಂತ್ಯವೇ ಇರದು” ಎಂದೂ ಗಬ್ರಿಯೇಲ ಹೇಳಿದ. (ಲೂಕ 1:32, 33) ಸಾವಿರಕ್ಕಿಂತ ಹೆಚ್ಚು ವರ್ಷಗಳ ಹಿಂದೆ ದೇವರು ದಾವೀದನಿಗೆ ಅವನ ವಂಶಜರಲ್ಲಿ ಒಬ್ಬನು ಸದಾಕಾಲ ಆಳುವನೆಂದು ಮಾಡಿದ ವಾಗ್ದಾನದ ಬಗ್ಗೆ ಮರಿಯಳಿಗೆ ತಿಳಿದಿತ್ತು. (2 ಸಮು. 7:12, 13) ಶತಮಾನಗಳಿಂದಲೂ ದೇವಜನರು ಕಾಯುತ್ತಿದ್ದ ಆ ಮೆಸ್ಸೀಯನಿಗೇ ಮರಿಯಳು ಜನ್ಮಕೊಡಲಿದ್ದಳು. ಎಂಥ ಒಂದು ಸುಯೋಗ!
7. (1) ಮರಿಯಳು ಕೇಳಿದ ಪ್ರಶ್ನೆಯಿಂದ ಅವಳ ಬಗ್ಗೆ ಏನು ಗೊತ್ತಾಗುತ್ತದೆ? (2) ಮರಿಯಳಿಂದ ಇಂದು ಯುವಜನರು ಏನು ಕಲಿಯಬಲ್ಲರು?
ಲೂಕ 1:34) ಗಮನಿಸಿ, ತನ್ನ ಕನ್ಯತ್ವದ ಬಗ್ಗೆ ಮರಿಯಳಿಗೆ ನಾಚಿಕೆ ಇರಲಿಲ್ಲ, ಹೆಮ್ಮೆ ಇತ್ತು. ಇಂದು ಅನೇಕ ಯುವಜನರು ವಿವಾಹಪೂರ್ವ ಲೈಂಗಿಕತೆಯಲ್ಲಿ ತೊಡಗಿ ನೈತಿಕ ಶುದ್ಧತೆಯನ್ನು ಬೇಗನೆ ಕಳೆದುಕೊಳ್ಳುತ್ತಾರೆ. ಹಾಗೆ ಮಾಡದಿರುವವರ ಪರಿಹಾಸ್ಯ ಮಾಡುತ್ತಾರೆ. ಹೌದು ಈ ಲೋಕ ಬದಲಾಗಿದೆ, ಆದರೆ ದೇವರಾದ ಯೆಹೋವನು ಬದಲಾಗಿಲ್ಲ. (ಮಲಾ. 3:6) ತನ್ನ ನೈತಿಕ ಮಟ್ಟಗಳನ್ನು ಪಾಲಿಸುವವರನ್ನು ಯೆಹೋವನು ಮರಿಯಳ ದಿನಗಳಲ್ಲಿ ಅಮೂಲ್ಯವೆಂದೆಣಿಸಿದನು. ಇಂದು ಕೂಡ ಅಮೂಲ್ಯವೆಂದಣಿಸುತ್ತಾನೆ.—ಇಬ್ರಿಯ 13:4 ಓದಿ.
7 ಅವಳಿಗೆ ಹುಟ್ಟಲಿರುವ ಮಗನನ್ನು “ಮಹೋನ್ನತನ ಪುತ್ರ” ಅಂದರೆ ದೇವರ ಪುತ್ರ ಎಂದು ಕರೆಯಲಾಗುವುದು ಎಂದನು ದೇವದೂತ. ಆದರೆ ಮನುಷ್ಯಳಾಗಿರುವ ಆಕೆಯಲ್ಲಿ ದೇವರ ಕುಮಾರನು ಹುಟ್ಟಲು ಹೇಗೆ ಸಾಧ್ಯ? ಅದು ಬಿಡಿ, ಮರಿಯಳು ಗರ್ಭಿಣಿಯಾಗಲಿಕ್ಕಾದರೂ ಹೇಗೆ ಸಾಧ್ಯ? ಆಕೆಗಿನ್ನೂ ಯೋಸೇಫನೊಟ್ಟಿಗೆ ಮದುವೆ ಆಗಿರಲಿಲ್ಲವಲ್ಲಾ, ನಿಶ್ಚಿತಾರ್ಥವಾಗಿತ್ತಷ್ಟೆ. ಇದನ್ನೇ ಆಕೆ ನೇರವಾಗಿ ಕೇಳಿಬಿಟ್ಟಳು. “ಇದು ಹೇಗಾದೀತು? ನಾನು ಪುರುಷನೊಂದಿಗೆ ಸಂಭೋಗಮಾಡಲಿಲ್ಲವಲ್ಲಾ.” (8. ಮರಿಯಳು ಅಪರಿಪೂರ್ಣಳಾಗಿದ್ದರೂ ಅವಳಲ್ಲಿ ಪರಿಪೂರ್ಣ ಶಿಶು ಹೇಗೆ ಹುಟ್ಟಸಾಧ್ಯವಿತ್ತು?
8 ಮರಿಯ ದೇವರ ನಂಬಿಗಸ್ತ ಸೇವಕಿಯಾಗಿದ್ದರೂ ಅಪರಿಪೂರ್ಣಳಾಗಿದ್ದಳು. ಹೀಗಿರುವಾಗ ಅವಳಲ್ಲಿ ಒಂದು ಪರಿಪೂರ್ಣ ಶಿಶು, ದೇವಕುಮಾರ ಹೇಗೆ ತಾನೇ ಹುಟ್ಟಸಾಧ್ಯ? ಹೇಗೆಂದು ಗಬ್ರಿಯೇಲ ವಿವರಿಸಿದನು. “ಪವಿತ್ರಾತ್ಮವು ನಿನ್ನ ಮೇಲೆ ಬರುವುದು ಮತ್ತು ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು. ಈ ಕಾರಣದಿಂದ ಹುಟ್ಟುವವನು ಪವಿತ್ರನೆಂದೂ ದೇವರ ಮಗನೆಂದೂ ಕರೆಯಲ್ಪಡುವನು.” (ಲೂಕ 1:35) ಪವಿತ್ರ ಅಂದರೆ “ಸ್ವಚ್ಛ,” “ನಿರ್ಮಲ,” “ಪರಿಶುದ್ಧ.” ಸಾಮಾನ್ಯವಾಗಿ ಮಾನವ ಹೆತ್ತವರು ಅಶುದ್ಧವಾದ ಪಾಪಪೂರ್ಣ ಸ್ಥಿತಿಯನ್ನು ಮಕ್ಕಳಿಗೆ ದಾಟಿಸುತ್ತಾರೆ. ಮರಿಯಳ ವಿಷಯದಲ್ಲಾದರೋ ಯೆಹೋವನು ಒಂದು ಅದ್ವಿತೀಯ ಪವಾಡ ಮಾಡಲಿದ್ದನು. ಆತನು ಸ್ವರ್ಗದಲ್ಲಿದ್ದ ತನ್ನ ಮಗನ ಜೀವವನ್ನು ಮರಿಯಳ ಗರ್ಭಕ್ಕೆ ವರ್ಗಾಯಿಸಿ ತನ್ನ ಕಾರ್ಯಕಾರಿ ಶಕ್ತಿಯಾದ ಪವಿತ್ರಾತ್ಮವು ಮರಿಯಳನ್ನು ‘ಆವರಿಸುವಂತೆ’ ಮಾಡಲಿದ್ದನು. ಇದು ಆ ಮಗುವಿಗೆ ಯಾವುದೇ ರೀತಿಯಲ್ಲಿ ಪಾಪವು ತಟ್ಟದಂತೆ ರಕ್ಷಿಸಲಿತ್ತು. ದೇವದೂತ ಕೊಟ್ಟ ಆ ಮಾತನ್ನು ಮರಿಯಳು ನಂಬಿದಳೊ? ಆಕೆಯ ಪ್ರತಿಕ್ರಿಯೆ ಏನಾಗಿತ್ತು?
ಗಬ್ರಿಯೇಲನಿಗೆ ಮರಿಯಳು ಕೊಟ್ಟ ಉತ್ತರ
9. (1) ಮರಿಯಳ ಕುರಿತ ವೃತ್ತಾಂತವನ್ನು ಸಂದೇಹವಾದಿಗಳು ಸಂಶಯಿಸುವುದು ತಪ್ಪಾಗಿದೆ ಏಕೆ? (2) ಮರಿಯಳ ನಂಬಿಕೆಯನ್ನು ಗಬ್ರಿಯೇಲ ದೂತ ಹೇಗೆ ಬಲಪಡಿಸಿದನು?
9 ಕನ್ಯೆಯೊಬ್ಬಳಿಗೆ ಮಗು ಆಗುವ ವಿಷಯವನ್ನು ಸಂದೇಹವಾದಿಗಳಿಗೆ ಮಾತ್ರವಲ್ಲ ಕ್ರೈಸ್ತಪ್ರಪಂಚದ ಕೆಲವು ದೇವತಾಶಾಸ್ತ್ರಜ್ಞರಿಗೂ ನಂಬಲು ಆಗುವುದಿಲ್ಲ. ಅವರು ಅಷ್ಟೊಂದು ವಿದ್ಯಾವಂತರಾಗಿದ್ದರೂ ಒಂದು ಸರಳ ಸತ್ಯವನ್ನು ಗ್ರಹಿಸಿಲ್ಲ. ಅದೇನು? ಗಬ್ರಿಯೇಲನು ಹೇಳಿದಂತೆ “ದೇವರಿಗೆ ಯಾವ ಮಾತೂ ನೆರವೇರಿಸಲು ಅಸಾಧ್ಯವಾದದ್ದಲ್ಲ.” (ಲೂಕ 1:37) ಯುವ ಸ್ತ್ರೀಯಾದ ಮರಿಯಳಾದರೋ ಗಬ್ರಿಯೇಲನ ಮಾತುಗಳನ್ನು ಸತ್ಯವೆಂದು ನಂಬಿದಳು ಏಕೆಂದರೆ ಆಕೆಗೆ ದೇವರಲ್ಲಿ ಬಲವಾದ ನಂಬಿಕೆಯಿತ್ತು. ಹಾಗಂತ ಏನು ಬೇಕಾದರೂ ನಂಬಿಬಿಡುವ ಕುರುಡು ನಂಬಿಕೆ ಅದಾಗಿರಲಿಲ್ಲ. ವಿವೇಚನಾಶಕ್ತಿಯುಳ್ಳ ಯಾವನೇ ವ್ಯಕ್ತಿ ಅಪೇಕ್ಷಿಸುವಂತೆ ಮರಿಯಳಿಗೂ ತನ್ನ ನಂಬಿಕೆಗೆ ಆಧಾರವಾಗಿ ಏನಾದರೂ ರುಜುವಾತು ಬೇಕಿತ್ತು. ಗಬ್ರಿಯೇಲ ದೂತನು ಆ ರುಜುವಾತು ಕೊಡುತ್ತಾ ಆಕೆಯ ಸಂಬಂಧಿಕಳಾಗಿದ್ದ ಎಲಿಸಬೇತಳ ಕುರಿತು ತಿಳಿಸಿದನು. ಬಂಜೆಯಾಗಿದ್ದ ಎಲಿಸಬೇತಳು ವೃದ್ಧೆಯಾಗಿದ್ದರೂ ಗರ್ಭವತಿಯಾಗುವ ಅದ್ಭುತವನ್ನು ದೇವರು ನಡೆಸಿದ್ದಾನೆಂದು ಹೇಳಿದನು.
10. ಮರಿಯಳಿಗೆ ಸಿಕ್ಕಿದ ಸುಯೋಗ ಸುಲಭದ್ದಾಗಿತ್ತೆಂದು ನಾವು ನೆನಸಬಾರದೇಕೆ?
10 ಮರಿಯ ಏನು ಮಾಡುವಳು? ಅವಳ ಮುಂದೆ ಒಂದು ನೇಮಕ ಇಡಲಾಗಿತ್ತು ಮತ್ತು ಗಬ್ರಿಯೇಲ ನುಡಿದದ್ದನ್ನೆಲ್ಲ ದೇವರು ಖಂಡಿತ ಮಾಡುವನೆಂಬುದಕ್ಕೆ ರುಜುವಾತು ಕೂಡ ಇತ್ತು. ಇದು ದೊಡ್ಡ ಸೌಭಾಗ್ಯವಾಗಿತ್ತಾದರೂ ಮರಿಯಳು ಅದನ್ನು ಸ್ವೀಕರಿಸಿದರೆ ಅವಳಿಗೆ ಯಾವುದೇ ತೊಡಕಿರುವುದಿಲ್ಲ ಎಂದರ್ಥವಲ್ಲ. ಆಕೆ ತಾನು ಕೈಹಿಡಿಯಲಿದ್ದ ಯೋಸೇಫನ ಬಗ್ಗೆ ಯೋಚಿಸಬೇಕಿತ್ತು. ತಾನು ಗರ್ಭಿಣಿಯೆಂದು ಅವನಿಗೆ ಗೊತ್ತಾದರೆ ಮದುವೆಯಾಗುವನೇ ಎಂಬ ಪ್ರಶ್ನೆ ಅವಳಿಗೆ ಬಂದಿರಬಹುದು. ಅಲ್ಲದೆ, ಆಕೆಗೆ ದೊರೆತಿದ್ದ ನೇಮಕ ತಾನೇ ಒಂದು ಭಾರೀ ಜವಾಬ್ದಾರಿಯಾಗಿತ್ತು. ಯಾಕೆಂದರೆ ದೇವರ ಎಲ್ಲ ಸೃಷ್ಟಿಜೀವಿಗಳಲ್ಲಿ ಅತ್ಯಮೂಲ್ಯ ಜೀವವನ್ನು ಅಂದರೆ ಆತನ ಅತಿಪ್ರಿಯ ಕುಮಾರನ ಜೀವವನ್ನೇ ಆಕೆ ಗರ್ಭದಲ್ಲಿ ಹೊರಬೇಕಾಗಿತ್ತು! ಅವನು ಅಸಹಾಯಕ ಶಿಶುವಾಗಿರುವಾಗ ಅವನನ್ನು ಪರಾಮರಿಸಿ, ದುಷ್ಟ ಲೋಕದಲ್ಲಿ ಅವನನ್ನು ಸಂರಕ್ಷಿಸಬೇಕಾಗಿತ್ತು. ಇದು ನಿಜಕ್ಕೂ ಒಂದು ದೊಡ್ಡ ಜವಾಬ್ದಾರಿಯಲ್ಲವೇ?
11, 12. (1) ದೇವರು ಕಷ್ಟಕರ ನೇಮಕಗಳನ್ನು ಕೊಟ್ಟಾಗ ಸದೃಢರೂ ನಂಬಿಗಸ್ತರೂ ಆಗಿದ್ದ ಪುರುಷರು ಕೆಲವೊಮ್ಮೆ ಹೇಗೆ ಪ್ರತಿಕ್ರಿಯಿಸಿದರು? (2) ಗಬ್ರಿಯೇಲನಿಗೆ ಮರಿಯಳು ಕೊಟ್ಟ ಉತ್ತರದಿಂದ ಅವಳ ಬಗ್ಗೆ ನಮಗೇನು ಗೊತ್ತಾಗುತ್ತದೆ?
11 ದೇವರು ಕಷ್ಟಕರ ನೇಮಕ ಕೊಟ್ಟಾಗ ಸದೃಢರೂ ನಂಬಿಗಸ್ತರೂ ಆಗಿದ್ದ ಪುರುಷರೇ ಅದನ್ನು ಸ್ವೀಕರಿಸಲು ಕೆಲವೊಮ್ಮೆ ಹಿಂಜರಿದಿರುವ ದಾಖಲೆ ಬೈಬಲಿನಲ್ಲಿದೆ. ಉದಾಹರಣೆಗೆ, ತನ್ನ ಪ್ರತಿನಿಧಿಯಾಗಿ ಮಾತಾಡುವ ನೇಮಕವನ್ನು ದೇವರು ಮೋಶೆಗೆ ಕೊಟ್ಟಾಗ ತನಗೆ ನಿರರ್ಗಳವಾಗಿ ಮಾತಾಡಲು ಬರುವುದಿಲ್ಲವೆಂದು ಮೋಶೆ ಆಕ್ಷೇಪವೆತ್ತಿದನು. (ವಿಮೋ. 4:10) ದೇವರು ಯೆರೆಮೀಯನಿಗೆ ಒಂದು ಕೆಲಸವನ್ನು ನೇಮಿಸಿದಾಗ ತಾನಿನ್ನೂ “ಬಾಲಕ,” ಆ ಕೆಲಸ ಪೂರೈಸಲು ಆಗದಿರುವಷ್ಟು ತೀರಾ ಚಿಕ್ಕವನು ಎಂದು ಹೇಳಿದನು. (ಯೆರೆ. 1:6) ಯೋನನ ವಿಷಯಕ್ಕೆ ಬರುವುದಾದರೆ ಅವನು ತನಗೆ ಕೊಡಲಾದ ನೇಮಕಕ್ಕೆ ಹೆದರಿ ಓಡಿಯೇ ಬಿಟ್ಟನು! (ಯೋನ 1:3) ಆದರೆ ಮರಿಯಳು?
12 “ಇಗೋ, ನಾನು ಯೆಹೋವನ ದಾಸಿ! ನೀನು ಹೇಳಿದಂತೆಯೇ ನನಗೆ ಸಂಭವಿಸಲಿ” ಎಂದಳು ಆಕೆ ಗಬ್ರಿಯೇಲ ದೂತನಿಗೆ. (ಲೂಕ 1:38) ವಿಧೇಯತೆ ಹಾಗೂ ದೈನ್ಯತೆಯಿಂದ ಅವಳು ಕೊಟ್ಟ ಈ ಉತ್ತರವನ್ನು ಇವತ್ತಿಗೂ ನಂಬಿಗಸ್ತ ಜನರು ನೆನಪಿಸಿಕೊಳ್ಳುತ್ತಾರೆ. ದಾಸಿ ಅಂದರೆ ಸೇವಕಿಯರಲ್ಲಿ ಅತಿ ಕೆಳಗಿನವಳು. ಆಕೆಯ ಜೀವನ ಪೂರ್ಣವಾಗಿ ಅವಳ ಧಣಿಯ ಕೈಯಲ್ಲಿರುತ್ತಿತ್ತು. ಮರಿಯಳಿಗೂ ತನ್ನ ಧಣಿಯಾದ ಯೆಹೋವ ದೇವರ ಬಗ್ಗೆ ಅದೇ ಮನೋಭಾವವಿತ್ತು. ಆತನ ಹಸ್ತದಲ್ಲಿ ತಾನು ಸುಭದ್ರಳು ಮತ್ತು ಆತನಿಗೆ ನಂಬಿಗಸ್ತರಾಗಿರುವವರನ್ನು ಕಾಪಾಡುತ್ತಾನೆಂದು ಆಕೆಗೆ ತಿಳಿದಿತ್ತು. ಈ ಕಷ್ಟದ ನೇಮಕವನ್ನು ಪೂರೈಸಲು ತನ್ನಿಂದಾದುದ್ದೆಲ್ಲವನ್ನು ಮಾಡುತ್ತಿರುವಾಗ ಆತನು ತನ್ನನ್ನು ಆಶೀರ್ವದಿಸುವನೆಂಬ ನಂಬಿಕೆ ಅವಳಿಗಿತ್ತು.—ಕೀರ್ತ. 31:23.
ನಂಬಿಗಸ್ತರನ್ನು ಕಾಪಾಡುವ ತನ್ನ ದೇವರಾದ ಯೆಹೋವನ ಹಸ್ತದಲ್ಲಿ ತಾನು ಸುಭದ್ರಳು ಎಂದು ಮರಿಯಳಿಗೆ ತಿಳಿದಿತ್ತು
13. ದೇವರು ನಮಗೆ ಮಾಡಲು ಹೇಳುವಂಥದ್ದು ಕಷ್ಟ ಅಥವಾ ಅಸಾಧ್ಯವೆಂಬಂತೆ ತೋರುವಲ್ಲಿ ನಾವು ಮರಿಯಳಂತೆ ಏನು ಮಾಡಬಹುದು?
13 ಕೆಲವೊಮ್ಮೆ ದೇವರು ಮಾಡಲು ಹೇಳುವಂಥದ್ದು ನಮಗೆ ತುಂಬ ಕಷ್ಟ ಅಥವಾ ಅಸಾಧ್ಯ ಎಂಬಂತೆ ತೋರಬಹುದು. ಅಂಥ ಸಂದರ್ಭದಲ್ಲಿ ನಾವು ಮರಿಯಳಂತೆ ದೇವರಲ್ಲಿ ಭರವಸೆಯಿಟ್ಟು ಆತನ ಕೈಯಲ್ಲಿ ನಮ್ಮನ್ನು ಒಪ್ಪಿಸಿಕೊಡಬೇಕು. ಆತನಲ್ಲಿ ಭರವಸೆಯಿಡಲು ತನ್ನ ವಾಕ್ಯದಲ್ಲಿ ನಮಗೆ ಹೇರಳ ಕಾರಣಗಳನ್ನು ಕೊಟ್ಟಿದ್ದಾನೆ. (ಜ್ಞಾನೋ. 3:5, 6) ನಾವೂ ಮರಿಯಳಂತೆ ಮಾಡುವೆವೊ? ಹಾಗೆ ಮಾಡುವಲ್ಲಿ ಯೆಹೋವನು ನಮಗೆ ಪ್ರತಿಫಲ ನೀಡುವನು. ಇದನ್ನು ನೋಡಿ ನಮ್ಮ ನಂಬಿಕೆ ಇನ್ನಷ್ಟು ಬಲಗೊಳ್ಳುವುದು.
ಮರಿಯಳು ಎಲಿಸಬೇತಳನ್ನು ಭೇಟಿಯಾದಾಗ
14, 15. (1) ಮರಿಯಳು ಎಲಿಸಬೇತ ಜಕರೀಯರನ್ನು ಭೇಟಿಮಾಡಿದಾಗ ಯೆಹೋವನು ಅವಳನ್ನು ಹೇಗೆ ಆಶೀರ್ವದಿಸಿದನು? (2) ಲೂಕ 1:46-55 ರಲ್ಲಿರುವ ಮರಿಯಳ ಮಾತುಗಳು ನಮಗೆ ಅವಳ ಬಗ್ಗೆ ಏನು ತಿಳಿಸುತ್ತವೆ?
14 ಎಲಿಸಬೇತಳ ಕುರಿತು ಗಬ್ರಿಯೇಲ ಹೇಳಿದ ಮಾತು ಮರಿಯಳಿಗೆ ತುಂಬ ಪ್ರೋತ್ಸಾಹಕರವಾಗಿತ್ತು. ತಾನೀಗ ಇರುವ ಪರಿಸ್ಥಿತಿಯನ್ನು ಭೂಮಿಯಲ್ಲಿರುವ ಸ್ತ್ರೀಯರ ಪೈಕಿ ಎಲಿಸಬೇತಳೊಬ್ಬಳೇ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವೆಂದು ಮರಿಯಳಿಗೆ ತಿಳಿದಿತ್ತು. ಹಾಗಾಗಿ ತಡಮಾಡದೆ ಯೆಹೂದದ ಪರ್ವತ ಪ್ರದೇಶಕ್ಕೆ ಹೊರಟಳು. ಅದು ಸುಮಾರು ಮೂರ್ನಾಲ್ಕು ದಿನಗಳ ಪ್ರಯಾಣ. ಎಲಿಸಬೇತ್ ಮತ್ತು ಯಾಜಕನಾದ ಜಕರೀಯನ ಮನೆಗೆ ಆಕೆ ಕಾಲಿಡುತ್ತಿದ್ದಂತೆ ಯೆಹೋವನು ಆಕೆಯ ನಂಬಿಕೆಯನ್ನು ಬಲಪಡಿಸಲು ಇನ್ನಷ್ಟೂ ದೃಢ ರುಜುವಾತು ಕೊಟ್ಟನು. ಹೇಗೆ? ಮರಿಯಳ ವಂದನೆಯನ್ನು ಎಲಿಸಬೇತಳು ಕೇಳಿಸಿಕೊಳ್ಳುತ್ತಲೇ ಅವಳ ಗರ್ಭದಲ್ಲಿದ್ದ ಶಿಶು ಹರ್ಷದಿಂದ ಜಿಗಿಯಿತು. ಆಕೆ ಪವಿತ್ರಾತ್ಮಭರಿತಳಾಗಿ ಮರಿಯಳನ್ನು “ನನ್ನ ಕರ್ತನ ತಾಯಿ” ಎಂದು ಕರೆದಳು. ಹೌದು, ಮರಿಯಳಿಗೆ ಹುಟ್ಟಲಿರುವ ಮಗನು ಮುಂದೆ ಎಲಿಸಬೇತಳ ಕರ್ತನು, ಮೆಸ್ಸೀಯನು ಆಗಲಿದ್ದಾನೆಂದು ಅವಳಿಗೆ ದೇವರು ಪ್ರಕಟಪಡಿಸಿದ್ದನು. ಅದಲ್ಲದೆ, ಮರಿಯಳು ನಂಬಿಗಸ್ತಳಾಗಿದ್ದು ವಿಧೇಯತೆ ತೋರಿಸಿದ್ದಕ್ಕಾಗಿ ‘ನಂಬಿದವಳಾದ ನೀನು ಸಂತೋಷಿತಳು’ ಎಂದು ಆಕೆಯನ್ನು ಶ್ಲಾಘಿಸುವಂತೆ ಎಲಿಸಬೇತಳು ಪ್ರೇರಿಸಲ್ಪಟ್ಟಳು. (ಲೂಕ 1:39-45) ಯೆಹೋವನು ಮರಿಯಳಿಗೆ ಏನೆಲ್ಲಾ ವಾಗ್ದಾನಿಸಿದ್ದನೊ ಅದೆಲ್ಲ ಖಂಡಿತ ನೆರವೇರಲಿಕ್ಕಿದೆ ಎಂದು ಹೇಳಿದಳು.
15 ಪ್ರತಿಯಾಗಿ ಮರಿಯಳು ಹೇಳಿದ ಮಾತುಗಳು ಬೈಬಲಿನಲ್ಲಿ ಜೋಪಾನವಾಗಿವೆ. (ಲೂಕ 1:46-55 ಓದಿ.) ಬೈಬಲಿನಲ್ಲಿ ದಾಖಲಾಗಿರುವ ಮರಿಯಳ ಮಾತುಗಳಲ್ಲಿ ಇದೇ ಅತಿ ಉದ್ದದ್ದು. ಇದು ಆಕೆಯ ಬಗ್ಗೆ ನಮಗೆ ಬಹಳಷ್ಟನ್ನು ತಿಳಿಸುತ್ತದೆ. ಮೆಸ್ಸೀಯನ ತಾಯಿಯಾಗುವ ಸುಯೋಗ ಕೊಟ್ಟದ್ದಕ್ಕಾಗಿ ಯೆಹೋವನನ್ನು ಆಕೆ ಸ್ತುತಿಸಿದ್ದು ಅವಳಲ್ಲಿದ್ದ ಕೃತಜ್ಞತಾಭಾವವನ್ನು ತೋರಿಸುತ್ತದೆ. ಯೆಹೋವನು ಗರ್ವಿಷ್ಠರನ್ನೂ ಅಧಿಕಾರದಿಂದ ಉಬ್ಬಿದವರನ್ನೂ ತಗ್ಗಿಸುತ್ತಾನೆ ಮತ್ತು ಆತನನ್ನು ಸೇವಿಸಲು ಬಯಸುವ ದೀನದರಿದ್ರರಿಗೆ ಸಹಾಯಮಾಡುತ್ತಾನೆ ಎಂದು ಆಕೆ ಹೇಳಿದ್ದು ಯೆಹೋವನಲ್ಲಿ ಆಕೆಗಿದ್ದ ಗಾಢ ನಂಬಿಕೆಯನ್ನು ತೋರಿಸುತ್ತದೆ. ಶಾಸ್ತ್ರಗ್ರಂಥದ ವಿಸ್ತಾರ ಜ್ಞಾನವಿತ್ತೆಂದೂ ಅವಳ ಮಾತುಗಳಿಂದ ತಿಳಿಯುತ್ತೇವೆ. ಒಂದು ಅಂದಾಜಿಗನುಸಾರ ಆಕೆಯ ಮಾತುಗಳು ಹೀಬ್ರು ಶಾಸ್ತ್ರಗ್ರಂಥದ 20ಕ್ಕೂ ಹೆಚ್ಚು ಕಡೆಗಳಿಂದ ತೆಗೆದವುಗಳು! *
16, 17. (1) ಮರಿಯ ಮತ್ತು ಅವಳ ಮಗನ ಯಾವ ಮನೋಭಾವವನ್ನು ನಾವು ಅನುಕರಿಸಬೇಕು? (2) ಮರಿಯಳು ಎಲಿಸಬೇತಳಿಗೆ ನೀಡಿದ ಭೇಟಿ ನಮಗೆ ಯಾವುದನ್ನು ನೆನಪಿಸುತ್ತದೆ?
16 ಮರಿಯಳು ದೇವರ ವಾಕ್ಯದಲ್ಲಿರುವ ವಿಷಯಗಳ ಬಗ್ಗೆ ಆಳವಾಗಿ ಯೋಚಿಸುತ್ತಿದ್ದಳೆಂಬುದು ಸ್ಪಷ್ಟ. ಆ ಜ್ಞಾನವನ್ನು ಬಳಸಿ ಆಕೆ ತನ್ನದೇ ಆದ ವಿಚಾರಗಳನ್ನು ವ್ಯಕ್ತಪಡಿಸಬಹುದಿತ್ತು. ಆದರೆ ಹಾಗೆ ಮಾಡದೆ ದೀನತೆಯಿಂದ ಶಾಸ್ತ್ರವಚನಗಳಲ್ಲಿದ್ದ ಮಾತುಗಳನ್ನು ಬಳಸಿ ಮಾತಾಡಿದಳು. ಆಕೆಯ ಗರ್ಭದಲ್ಲಿ ಆಗ ಬೆಳೆಯುತ್ತಿದ್ದ ಮಗ ಸಹ ಮುಂದೊಂದು ದಿನ ಅದೇ ರೀತಿ ದೀನತೆ ತೋರಿಸುತ್ತಾ “ನಾನು ಏನನ್ನು ಬೋಧಿಸುತ್ತೇನೋ ಅದು ನನ್ನದಲ್ಲ, ನನ್ನನ್ನು ಕಳುಹಿಸಿದಾತನಿಗೆ ಸೇರಿದ್ದು” ಎಂದು ಹೇಳಿದನು. (ಯೋಹಾ. 7:16) ನಮ್ಮ ಕುರಿತೇನು? ಹೀಗೆ ಕೇಳಿಕೊಳ್ಳೋಣ: ‘ದೇವರ ವಾಕ್ಯದ ಕಡೆಗೆ ಮರಿಯಳಲ್ಲಿದ್ದಂಥ ಗೌರವ ಮತ್ತು ಪೂಜ್ಯ ಭಾವನೆ ನನ್ನಲ್ಲಿದೆಯೇ? ಇಲ್ಲವೆ ನನ್ನ ಸ್ವಂತ ವಿಚಾರಗಳನ್ನು ಮತ್ತು ಬೋಧನೆಗಳನ್ನೇ ನಾನು ಹೇಳುತ್ತಿದ್ದೇನೋ?’ ಮರಿಯಳಿಗಂತೂ ದೇವರ ವಾಕ್ಯಕ್ಕಾಗಿ ಗೌರವ ಇತ್ತೆಂಬುದು ಸ್ಪಷ್ಟ.
17 ಮರಿಯಳು ಎಲಿಸಬೇತಳೊಂದಿಗೆ ಹತ್ತಿರಹತ್ತಿರ ಮೂರು ತಿಂಗಳು ಕಳೆದಳು. ಅವರು ಒಬ್ಬರಿಗೊಬ್ಬರು ಬಹಳ ಪ್ರೋತ್ಸಾಹ ಕೊಟ್ಟರು ಎಂಬದರಲ್ಲಿ ಸಂದೇಹವಿಲ್ಲ. (ಲೂಕ 1:56) ಮರಿಯಳ ಭೇಟಿಯ ಕುರಿತ ಈ ವೃತ್ತಾಂತವು ಗೆಳೆತನ ಹೇಗೆ ಆಶೀರ್ವಾದದಾಯಕ ಆಗಿರಬಲ್ಲದೆಂದು ನೆನಪು ಹುಟ್ಟಿಸುತ್ತದೆ. ಯೆಹೋವ ದೇವರನ್ನು ನಿಜವಾಗಿಯೂ ಪ್ರೀತಿಸುವ ಸ್ನೇಹಿತರನ್ನು ಆರಿಸಿಕೊಂಡಲ್ಲಿ ನಾವು ಆಧ್ಯಾತ್ಮಿಕವಾಗಿ ಬೆಳೆದು ಆತನ ಸಮೀಪಕ್ಕೆ ಬರುವೆವು ಖಂಡಿತ. (ಜ್ಞಾನೋ. 13:20) ಮರಿಯಳು ತನ್ನ ಮನೆಗೆ ಹಿಂದೆರಳುವ ಸಮಯ ಬಂತು. ಆಕೆ ಗರ್ಭವತಿಯೆಂದು ಯೋಸೇಫನಿಗೆ ಗೊತ್ತಾಗುವಾಗ ಏನನ್ನುವನು?
ಮರಿಯ ಮತ್ತು ಯೋಸೇಫ
18. (1) ಮರಿಯಳು ಯೋಸೇಫನ ಬಳಿ ಯಾವ ವಿಷಯವನ್ನು ಹೇಳಿದಳು? (2) ಅವನು ಹೇಗೆ ಪ್ರತಿಕ್ರಿಯಿಸಿದನು?
18 ಮರಿಯಳಿಗೆ ಯೋಸೇಫನ ಬಳಿ ಹೋಗಿ ತನ್ನ ಬಸಿರಿನ ಬಗ್ಗೆ ಹೇಳಲೇಬೇಕೆಂದು ಅನಿಸಿತು. ತನ್ನ ದೇಹಸ್ಥಿತಿ ನೋಡಿದ ಮೇಲೆ ಅವನಿಗೆ ಗೊತ್ತಾಗಲಿ ಎಂದು ಆಕೆ ಸುಮ್ಮನೆ ಕೂತುಕೊಳ್ಳಲಿಲ್ಲ. ಒಂದುವೇಳೆ ಹೇಳಿದರೆ ದೇವಭಯವುಳ್ಳ ಆ ಸಭ್ಯ ವ್ಯಕ್ತಿ ಹೇಗೆ ಪ್ರತಿಕ್ರಿಯಿಸುವನೋ ಎಂಬ ತಳಮಳ ಆಕೆಗೆ ಇದ್ದಿರಬಹುದು. ಹೇಗೂ ಅವನ ಬಳಿ ಹೋಗಿ ನಡೆದದ್ದೆಲ್ಲವನ್ನೂ ತಿಳಿಸಿದಳು. ಯೋಸೇಫನಿಗೆ ಹೇಗಾಗಿರಬೇಕೆಂದು ಊಹಿಸುವುದು ಕಷ್ಟವಲ್ಲ. ಅವನು ತೀರ ಕಳವಳಗೊಂಡಿರಬೇಕು. ಅವನು ಮೆಚ್ಚಿದ ಈ ಹುಡುಗಿ ಹೇಳಿದ್ದನ್ನೆಲ್ಲ ನಂಬಲು ಮತ್ತಾ. 1:18, 19) ಈ ದಯಾಪರ ಪುರುಷನ ಉಭಯಸಂಕಟ ನೋಡಿ ಮರಿಯಳಿಗೆ ತುಂಬ ನೋವಾಗಿರಬೇಕು. ಹಾಗಿದ್ದರೂ ಯೋಸೇಫನು ತನ್ನನ್ನು ನಂಬದೆ ಇದ್ದುದಕ್ಕಾಗಿ ಅವಳು ಅವನನ್ನು ನಿಂದಿಸಲಿಲ್ಲ.
ಮನಸ್ಸಿದ್ದರೂ ಏಕೋ ಅವಳು ದ್ರೋಹಬಗೆದಂತೆ ಅವನಿಗೆ ಕಾಣುತ್ತಿತ್ತು. ಅವನ ಮನಸ್ಸಲ್ಲಿ ಏನೆಲ್ಲ ಯೋಚನೆ ಬಂದಿರಬಹುದು, ಹೇಗೆಲ್ಲ ತರ್ಕಿಸಿರಬಹುದೆಂದು ಬೈಬಲ್ ತಿಳಿಸುವುದಿಲ್ಲ. ಆದರೆ ಆಕೆಗೆ ವಿಚ್ಛೇದನ ಕೊಡಬೇಕೆಂದಿದ್ದನು ಎಂದಷ್ಟೆ ಹೇಳುತ್ತದೆ. ಏಕೆಂದರೆ ಆ ಕಾಲದಲ್ಲಿ ನಿಶ್ಚಿತಾರ್ಥವಾಗಿದ್ದವರನ್ನು ವಿವಾಹಿತರೆಂದೇ ಪರಿಗಣಿಸಲಾಗುತ್ತಿತ್ತು. ಆದರೂ ಆಕೆಯನ್ನು ಬಹಿರಂಗವಾಗಿ ಅವಮಾನಕ್ಕೆ ಒಳಪಡಿಸಿ, ಊರಿನವರೆಲ್ಲ ಅವಳ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡುವಂತೆ ಅವಕಾಶ ಕೊಡಲು ಅವನಿಗೆ ಮನಸ್ಸಿರಲಿಲ್ಲ. ಆದ್ದರಿಂದ ಗುಟ್ಟಾಗಿ ವಿಚ್ಛೇದನ ಕೊಡಲು ನಿರ್ಣಯಿಸಿದನು. (19. ಯೋಸೇಫನು ಸರಿಯಾದ ನಿರ್ಣಯಕ್ಕೆ ಬರಲು ಯೆಹೋವನು ಹೇಗೆ ನೆರವಾದನು?
19 ಯೋಸೇಫನು ಸರಿಯಾದ ನಿರ್ಣಯಕ್ಕೆ ಬರುವಂತೆ ಯೆಹೋವನು ದಯೆಯಿಂದ ಸಹಾಯಮಾಡಿದನು. ಮರಿಯಳು ಗರ್ಭಿಣಿಯಾದದ್ದು ಪವಿತ್ರಾತ್ಮದ ಸಹಾಯದಿಂದಲೇ ಎಂದು ಆತನು ದೇವದೂತನ ಮೂಲಕ ತಿಳಿಸಿದನು. ಅಬ್ಬಾ! ಯೋಸೇಫನಿಗೆ ಆಗ ನಿರಾಳವೆನಿಸಿರಬೇಕು. ಮರಿಯಳು ಹೇಗೆ ಯೆಹೋವನ ಮಾರ್ಗದರ್ಶನಕ್ಕೆ ಹೊಂದಿಕೆಯಲ್ಲಿ ನಡೆದಳೋ ಅದೇ ರೀತಿ ಯೋಸೇಫನೂ ನಡೆದನು. ಮರಿಯಳನ್ನು ತನ್ನ ಹೆಂಡತಿಯಾಗಿ ಸ್ವೀಕರಿಸಿದನು. ಯೆಹೋವನ ಕುಮಾರನನ್ನು ಪರಾಮರಿಸುವ ಅದ್ವಿತೀಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧನಾದನು.—20, 21. ವಿವಾಹಿತರೂ ವಿವಾಹವಾಗಲಿರುವವರೂ ಯೋಸೇಫ ಮತ್ತು ಮರಿಯಳಿಂದ ಯಾವ ಪಾಠಗಳನ್ನು ಕಲಿಯಬಲ್ಲರು?
20 ಇಂದು ವಿವಾಹಿತರೂ ವಿವಾಹವಾಗಲಿರುವವರೂ 2,000 ವರುಷಗಳ ಹಿಂದೆ ಜೀವಿಸಿದ್ದ ಈ ಯುವ ದಂಪತಿಯಿಂದ ಪಾಠಗಳನ್ನು ಕಲಿಯಸಾಧ್ಯವಿದೆ. ತನ್ನ ಯುವ ಪತ್ನಿ ತಾಯ್ತನದ ಕರ್ತವ್ಯಗಳನ್ನೂ ಹೊಣೆಗಾರಿಕೆಯನ್ನೂ ಮುತುವರ್ಜಿಯಿಂದ ನಿರ್ವಹಿಸುತ್ತಿರುವುದನ್ನು ಯೋಸೇಫ ನೋಡುತ್ತಿದ್ದಾಗೆಲ್ಲ ಯೆಹೋವನ ದೂತನು ತನ್ನನ್ನು ಮಾರ್ಗದರ್ಶಿಸಿದ್ದಕ್ಕಾಗಿ ಅವನು ನಿಶ್ಚಯವಾಗಿ ಆಭಾರಿಯಾಗಿದ್ದಿರಬೇಕು. ದೊಡ್ಡ ದೊಡ್ಡ ನಿರ್ಣಯಗಳನ್ನು ಮಾಡುವಾಗ ಯೆಹೋವನ ಮೇಲೆ ಹೊಂದಿಕೊಳ್ಳುವುದು ಎಷ್ಟು ಮಹತ್ವದ್ದೆಂದು ಯೋಸೇಫ ಮನಗಂಡಿರಬೇಕು. (ಜ್ಞಾನೋ. 16:3; 18:13) ಕುಟುಂಬದ ಶಿರಸ್ಸಾಗಿ ಮುಂದೆ ನಿರ್ಣಯಗಳನ್ನು ಮಾಡುವಾಗ ಅವನು ಖಂಡಿತ ಜಾಗ್ರತೆ ವಹಿಸಿರಬೇಕು. ಜೊತೆಗೆ ದಯೆಯಿಂದ ನಡೆದುಕೊಂಡಿರಬೇಕು.
21 ಯೋಸೇಫನನ್ನು ಮದುವೆಯಾಗಲು ಒಪ್ಪಿಕೊಂಡ ಮರಿಯಳಿಂದ ನಾವೇನು ಕಲಿಯಬಲ್ಲೆವು? ಅವಳ ಮಾತನ್ನು ಅವನು ಮೊದಲು ನಂಬಲಿಲ್ಲವಾದರೂ ಕುಟುಂಬದ ತಲೆಯಾಗಲಿದ್ದ ಅವನು ಮುಂದೇನು ಮಾಡಬೇಕೆಂಬ ನಿರ್ಣಯ ತಕ್ಕೊಳ್ಳುವ ವರೆಗೆ ತಾಳ್ಮೆಯಿಂದ ಕಾದಳು. ಅದು ಇಂದಿನ ಕ್ರೈಸ್ತ ಮಹಿಳೆಯರಿಗೂ ಒಂದು ಉತ್ತಮ ಮಾದರಿಯಾಗಿದೆ. ಕೊನೆಯದಾಗಿ, ಈ ಘಟನೆಗಳು ಯೋಸೇಫ ಮರಿಯ ಇಬ್ಬರಿಗೂ ಮುಚ್ಚುಮರೆಯಿಲ್ಲದೆ ಮುಕ್ತ ಸಂವಾದ ಮಾಡುವುದರ ಮಹತ್ವವನ್ನು ಕಲಿಸಿದ್ದಿರಬಹುದು.—ಜ್ಞಾನೋಕ್ತಿ 15:22 ಓದಿ.
22. (1) ಯೋಸೇಫ ಮತ್ತು ಮರಿಯಳ ವಿವಾಹಕ್ಕೆ ಯಾವುದು ಬುನಾದಿಯಾಗಿತ್ತು? (2) ಅವರ ಮುಂದಿದ್ದ ಪ್ರತೀಕ್ಷೆ ಯಾವುದು?
22 ಆ ಯುವ ದಂಪತಿಯ ವೈವಾಹಿಕ ಜೀವನಕ್ಕೆ ಅತ್ಯುತ್ತಮವಾದ ಬುನಾದಿಯಿತ್ತು. ಅದೇನೆಂದರೆ ಇಬ್ಬರಿಗೂ ಎಲ್ಲಕ್ಕಿಂತ ಹೆಚ್ಚಾಗಿ ಯೆಹೋವನ ಮೇಲೆ ಪ್ರೀತಿಯಿತ್ತು. ಹೆತ್ತವರಾಗಿ ತಮ್ಮ ಕರ್ತವ್ಯವನ್ನು ಹೊಣೆಗಾರಿಕೆಯಿಂದ ಮತ್ತು ಪ್ರೀತಿಯಿಂದ ನಿಭಾಯಿಸುವ ಮೂಲಕ ಆತನನ್ನು ಮೆಚ್ಚಿಸಲು ಬಯಸಿದರು. ಮುಂದಕ್ಕೆ ಅವರಿಗೆ ಇನ್ನೂ ಅಧಿಕ ಆಶೀರ್ವಾದಗಳು ಸಿಗಲಿದ್ದವು. ಹೆಚ್ಚಿನ ಸವಾಲುಗಳೂ ಎದುರಾಗಲಿದ್ದವು. ದೊಡ್ಡವನಾಗಿ ಲೋಕದ ಅತ್ಯಂತ ಮಹಾನ್ ಪುರುಷನಾಗಲಿದ್ದ ಯೇಸುವನ್ನು ಸಾಕಿಸಲಹುವ ಪ್ರತೀಕ್ಷೆ ಅವರ ಮುಂದಿತ್ತು.
^ ಪ್ಯಾರ. 15 ಕೆಲವು ವಿಷಯಗಳನ್ನು ನಂಬಿಗಸ್ತ ಸ್ತ್ರೀಯಾದ ಹನ್ನಳ ಪ್ರಾರ್ಥನೆಯಿಂದ ಉಲ್ಲೇಖಿಸಿದಳು. ಮಗುವನ್ನು ಪಡೆಯುವ ಸಂಬಂಧದಲ್ಲಿ ಹನ್ನ ಕೂಡ ಯೆಹೋವನಿಂದ ಆಶೀರ್ವಾದ ಹೊಂದಿದ್ದಳು.—ಅಧ್ಯಾಯ 6ರಲ್ಲಿರುವ “ಗಮನಸೆಳೆಯುವ ಎರಡು ಪ್ರಾರ್ಥನೆಗಳು” ಚೌಕ ನೋಡಿ.