ಪಾಠ 2
ಸೃಷ್ಟಿಕರ್ತ ದೇವರು ಯಾರು?
1. ಏಕೆ ನಾವು ದೇವರನ್ನು ಆರಾಧಿಸಬೇಕು?
ಭೂಮಿ ಆಕಾಶ ಎಲ್ಲವನ್ನು ಸೃಷ್ಟಿಸಿದವನು ಸತ್ಯದೇವರು. ಆತನಿಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. (ಕೀರ್ತನೆ 90:2) ಬೈಬಲಿನಲ್ಲಿ ನಮಗೋಸ್ಕರ ಸುವಾರ್ತೆಯನ್ನು ಬರೆಸಿದ್ದು ಆತನೇ. (1 ತಿಮೊಥೆಯ 1:11) ಆತನೇ ನಮಗೆ ಜೀವ ಕೊಟ್ಟಿರುವುದರಿಂದ ನಾವು ಆತನೊಬ್ಬನನ್ನೇ ಆರಾಧಿಸಬೇಕು.—ಪ್ರಕಟನೆ 4:11 ಓದಿ.
2. ದೇವರನ್ನು ನೋಡಸಾಧ್ಯವೇ?
ಸಾಧ್ಯವಿಲ್ಲ. ಏಕೆಂದರೆ ಸ್ವರ್ಗದಲ್ಲಿರುವ ಆತನು ಮಾನವರಿಗಿಂತ ಅತಿ ಉನ್ನತನಾಗಿದ್ದು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. (ಯೋಹಾನ 1:18; 4:24) ಆದರೆ ಆತನ ವ್ಯಕ್ತಿತ್ವ ಸ್ವಭಾವಗಳನ್ನು ನಾವು ತಿಳಿದುಕೊಳ್ಳಬಹುದು. ನಮ್ಮ ಸುತ್ತಲಿನ ಜಗತ್ತು ಆತನ ಗುಣಗಳನ್ನು ಸಾರಿಹೇಳುತ್ತಿದೆ. ಉದಾಹರಣೆಗೆ, ದೇವರು ಸೃಷ್ಟಿಸಿದ ವಿಧವಿಧವಾದ ಹಣ್ಣುಹಂಪಲು ಹೂವುಗಳು ಆತನ ಪ್ರೀತಿ ವಿವೇಕವನ್ನು ತೋರಿಸುತ್ತವೆ. ಈ ವಿಶ್ವದ ವಿಶಾಲತೆ ಆತನ ಶಕ್ತಿಗೆ ಸಾಕ್ಷ್ಯ ನೀಡುತ್ತದೆ.—ರೋಮನ್ನರಿಗೆ 1:20 ಓದಿ.
ಬೈಬಲನ್ನು ಓದುವಾಗ ನಾವು ದೇವರ ವ್ಯಕ್ತಿತ್ವವನ್ನು ಇನ್ನಷ್ಟು ತಿಳಿದುಕೊಳ್ಳುತ್ತೇವೆ. ಉದಾಹರಣೆಗೆ, ದೇವರಿಗೆ ಏನು ಇಷ್ಟ, ಏನು ಇಷ್ಟವಿಲ್ಲ ಎನ್ನುವುದು ಬೈಬಲಿನಲ್ಲಿದೆ. ಮಾತ್ರವಲ್ಲ, ಜನರನ್ನು ಹೇಗೆ ಕರುಣೆಯಿಂದ ನೋಡಿಕೊಳ್ಳುತ್ತಾನೆ, ಅವರು ಒಳ್ಳೇದು ಕೆಟ್ಟದು ಮಾಡಿದಾಗ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂದು ಸಹ ಬೈಬಲ್ ತಿಳಿಸುತ್ತದೆ.—ಕೀರ್ತನೆ 103:7-10 ಓದಿ.
3. ದೇವರಿಗೆ ಹೆಸರಿದೆಯಾ?
“ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ” ಎಂದು ಯೇಸು ಹೇಳಿದನು. (ಮತ್ತಾಯ 6:9) ಜನರು ದೇವರನ್ನು ಬೇರೆ ಬೇರೆ ಬಿರುದುಗಳಿಂದ ಕರೆಯುತ್ತಾರೆ. ಆದರೆ ಆತನಿಗೂ ಒಂದು ಹೆಸರಿದೆ. ಬೇರೆ ಬೇರೆ ಭಾಷೆಗಳಲ್ಲಿ ಅದನ್ನು ಬೇರೆ ಬೇರೆ ರೀತಿಯಲ್ಲಿ ಉಚ್ಚರಿಸುತ್ತಾರೆ. ಕನ್ನಡದಲ್ಲಿ “ಯೆಹೋವ” ಎಂದು ಉಚ್ಚರಿಸಲಾಗುತ್ತದೆ.—ಕೀರ್ತನೆ 83:18 ಓದಿ.
ಅನೇಕ ಬೈಬಲ್ ಭಾಷಾಂತರಗಳಲ್ಲಿ ದೇವರ ಹೆಸರನ್ನು ತೆಗೆದುಹಾಕಿ ಕರ್ತನು ದೇವರು ಎಂಬ ಬಿರುದುಗಳನ್ನು ಉಪಯೋಗಿಸಿದ್ದಾರೆ. ಆದರೆ ಬೈಬಲನ್ನು ಬರೆದಾಗ ಅದರಲ್ಲಿ ಸುಮಾರು 7,000 ಬಾರಿ ದೇವರ ಹೆಸರಿತ್ತು. ಯೇಸು ಸಹ ಬೋಧಿಸುವಾಗ ದೇವರ ಹೆಸರನ್ನು ತಿಳಿಸಿದನು.—ಯೋಹಾನ 17:26 ಓದಿ.
ವಿಡಿಯೊ ನೋಡಿ ದೇವರಿಗೊಂದು ಹೆಸರಿದೆಯಾ?
4. ಯೆಹೋವ ದೇವರಿಗೆ ನಮ್ಮ ಬಗ್ಗೆ ಅಕ್ಕರೆ ಕಾಳಜಿ ಇದೆಯಾ?
ಈಗ ಪ್ರಪಂಚದಲ್ಲಿ ಎಲ್ಲಿ ನೋಡಿದರೂ ಕಷ್ಟ ತೊಂದರೆಗಳು ತುಂಬಿವೆ. ಅದರರ್ಥ ದೇವರಿಗೆ ನಮ್ಮ ಬಗ್ಗೆ ಅಕ್ಕರೆ ಇಲ್ಲವೆಂದಾ? ನಮ್ಮನ್ನು ಪರೀಕ್ಷಿಸಲೆಂದು ದೇವರು ಕಷ್ಟಸಂಕಟವನ್ನು ಕೊಡುತ್ತಾನೆ ಎನ್ನುವುದು ಕೆಲವರ ನಂಬಿಕೆ. ಆದರೆ ಅದು ಸತ್ಯವಲ್ಲ. ದೇವರು ಹಾಗೆ ಮಾಡುವುದಿಲ್ಲ.—ಯಾಕೋಬ 1:13 ಓದಿ.
ದೇವರು ಮನುಷ್ಯರಿಗೆ ಇಚ್ಛಾ ಸ್ವಾತಂತ್ರ್ಯ ಅಂದರೆ ಸ್ವತಃ ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯ ನೀಡಿದ್ದಾನೆ. ಈ ಇಚ್ಛಾ ಸ್ವಾತಂತ್ರ್ಯವನ್ನು ಉಪಯೋಗಿಸುವ ಒಂದು ಉತ್ತಮ ವಿಧ ದೇವರನ್ನು ಆರಾಧಿಸುವ ಆಯ್ಕೆ ಮಾಡುವುದೇ. (ಯೆಹೋಶುವ 24:15) ಆದರೆ ಇಂದು ಬಹುತೇಕ ಜನರು ಬೇರೆಯವರಿಗೆ ಕೆಡುಕು ಮಾಡುವ ಆಯ್ಕೆ ಮಾಡುತ್ತಾರೆ. ಭೂಮಿಯಲ್ಲಿ ಕಷ್ಟಕೋಟಲೆ ತುಂಬಿತುಳುಕಲು ಇದೇ ಕಾರಣ. ಇದನ್ನೆಲ್ಲ ನೋಡುವಾಗ ಯೆಹೋವ ದೇವರಿಗೆ ತುಂಬ ನೋವಾಗುತ್ತದೆ.—ಆದಿಕಾಂಡ 6:5, 6 ಓದಿ.
ಯೆಹೋವ ದೇವರು ನಮ್ಮ ಬಗ್ಗೆ ಅಪಾರ ಕಾಳಜಿವಹಿಸುತ್ತಾನೆ. ನಾವು ಸುಖ ನೆಮ್ಮದಿಯಿಂದ ಬದುಕಬೇಕು ಎನ್ನುವುದು ಆತನ ಆಸೆ. ಹಾಗಾಗಿ ನಮ್ಮ ಕಷ್ಟವನ್ನು ಮತ್ತು ಅದಕ್ಕೆ ಕಾರಣರಾದ ಜನರನ್ನು ಬೇಗನೆ ಅಳಿಸಿಹಾಕುತ್ತಾನೆ. ಆದರೆ ಅವನು ಇಷ್ಟೊಂದು ಸಮಯ ಏಕೆ ತೆಗೆದುಕೊಳ್ಳುತ್ತಿದ್ದಾನೆ ಎಂಬ ಪ್ರಶ್ನೆ ಏಳಬಹುದು. ಅದಕ್ಕಿರುವ ಕಾರಣವನ್ನು 8ನೇ ಅಧ್ಯಾಯದಲ್ಲಿ ಕೊಡಲಾಗಿದೆ.—2 ಪೇತ್ರ 2:9; 3:7, 13 ಓದಿ.
5. ದೇವರ ಆಪ್ತ ಸ್ನೇಹಿತರಾಗಲು ಏನು ಮಾಡಬೇಕು?
ತನ್ನೊಂದಿಗೆ ಗೆಳೆತನ ಬೆಳೆಸಿಕೊಳ್ಳುವಂತೆ ದೇವರು ಮನುಷ್ಯರನ್ನು ಆಹ್ವಾನಿಸುತ್ತಾನೆ. ನಾವು ಪ್ರಾರ್ಥನೆ ಮಾಡುವಾಗ ಅಂದರೆ ದೇವರ ಹತ್ತಿರ ಮಾತಾಡುವಾಗ ಆತನೊಂದಿಗೆ ನಮ್ಮ ಗೆಳೆತನ ಬೆಳೆಯುತ್ತದೆ. ಮಾನವರೆಲ್ಲರೂ ತನ್ನಲ್ಲಿ ಪ್ರಾರ್ಥಿಸಬೇಕೆಂದು ಆತನು ಇಷ್ಟಪಡುತ್ತಾನೆ. (ಕೀರ್ತನೆ 65:2; 145:18) ಆತ ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ. ದೇವರು ಇಷ್ಟಪಡುವ ರೀತಿಯಲ್ಲಿ ನಾವು ಜೀವಿಸಲು ಪ್ರಯತ್ನಿಸುವುದಾದರೂ ಕೆಲವೊಮ್ಮೆ ಅವನಿಗೆ ಇಷ್ಟವಾಗದ ವಿಷಯಗಳನ್ನು ಮಾಡಿಬಿಡುತ್ತೇವೆ. ಆದರೆ ದೇವರು ನಮ್ಮ ತಪ್ಪುಗಳನ್ನಲ್ಲ ಪ್ರಯತ್ನವನ್ನು ನೋಡುತ್ತಾನೆ ಖುಷಿಪಡುತ್ತಾನೆ. ಹಾಗಾಗಿ ನಾವು ತಪ್ಪು ಮಾಡುವ ಅಪರಿಪೂರ್ಣ ಮಾನವರಾಗಿದ್ದರೂ ದೇವರ ಆಪ್ತ ಸ್ನೇಹಿತರಾಗಸಾಧ್ಯ.—ಕೀರ್ತನೆ 103:12-14; ಯಾಕೋಬ 4:8 ಓದಿ.
ನಮಗೆ ಜೀವ ಕೊಟ್ಟಿರುವುದು ದೇವರಾಗಿರುವುದರಿಂದ ಇತರರನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ನಾವು ದೇವರನ್ನು ಪ್ರೀತಿಸಬೇಕು. (ಮಾರ್ಕ 12:30) ಅಂಥ ಪ್ರೀತಿ ಇದ್ದರೆ ಮಾತ್ರ ನಾವು ದೇವರ ಬಗ್ಗೆ ಹೆಚ್ಚೆಚ್ಚು ಕಲಿಯುತ್ತೇವೆ. ಆತನು ಮೆಚ್ಚುವ ವಿಷಯಗಳನ್ನು ಮಾಡುತ್ತೇವೆ. ಹೀಗೆ ದೇವರಿಗೆ ಆತ್ಮೀಯ ಸ್ನೇಹಿತರಾಗುತ್ತೇವೆ.—1 ತಿಮೊಥೆಯ 2:4; 1 ಯೋಹಾನ 5:3 ಓದಿ.