ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಪಾಠ 3

ಸಿಹಿಸುದ್ದಿ ನಿಜವಾಗ್ಲೂ ದೇವರಿಂದನಾ?

ಸಿಹಿಸುದ್ದಿ ನಿಜವಾಗ್ಲೂ ದೇವರಿಂದನಾ?

1. ಬೈಬಲನ್ನು ಯಾರು ಬರೆಸಿದರು?

ಜನರು ಸಾಯದೆ ಶಾಶ್ವತವಾಗಿ ಜೀವಿಸುವರು ಎಂಬ ಸಿಹಿಸುದ್ದಿ ಬೈಬಲ್‌ನಲ್ಲಿದೆ. (ಕೀರ್ತನೆ 37:29) ಬೈಬಲ್‌ 66 ಚಿಕ್ಕ ಚಿಕ್ಕ ಪುಸ್ತಕಗಳಿರುವ ಒಂದು ಗ್ರಂಥ. ಆ ಗ್ರಂಥವನ್ನು ದೇವರು 40 ಪುರುಷರಿಂದ ಬರೆಸಿದನು. ಬೈಬಲಿನ ಮೊದಲ ಐದು ಪುಸ್ತಕಗಳನ್ನು ಸುಮಾರು 3,500 ವರ್ಷಗಳ ಹಿಂದೆ ಮೋಶೆ ಎಂಬವನು ಬರೆದನು. ಕೊನೆಯ ಪುಸ್ತಕವನ್ನು 1,900 ವರ್ಷಗಳ ಹಿಂದೆ ಯೋಹಾನ ಎಂಬವನು ಬರೆದನು. ಬೈಬಲನ್ನು ಬರೆದವರು ಯಾರ ಮನೋವಿಚಾರಗಳನ್ನು ಬರೆದರು? ದೇವರ ವಿಚಾರಗಳನ್ನು. ಹಾಗೆ ಬರೆಯುವಂತೆ ಸ್ವತಃ ದೇವರೇ ಅವರಿಗೆ ತನ್ನ ಪವಿತ್ರಾತ್ಮ ಶಕ್ತಿ ಕೊಟ್ಟನು. (2 ಸಮುವೇಲ 23:2) ಹೀಗೆ ದೇವರು ಹೇಳಿದ ವಿಷಯವನ್ನು ಅವರು ಬರೆದರೇ ಹೊರತು ತಮ್ಮ ಮನಸ್ಸಿಗೆ ತೋಚಿದ್ದನ್ನಲ್ಲ. ಹಾಗಾಗಿ ಬೈಬಲನ್ನು ಬರೆಸಿದ ನಿಜವಾದ ಗ್ರಂಥಕರ್ತ ಯೆಹೋವ ದೇವರು.​2 ತಿಮೊಥೆಯ 3:16; 2 ಪೇತ್ರ 1:20, 21 ಓದಿ.

ವಿಡಿಯೊ ನೋಡಿ ಬೈಬಲನ್ನು ಯಾರು ಬರೆಸಿದರು?

2. ಬೈಬಲನ್ನು ದೇವರೇ ಬರೆಸಿದನು ಎನ್ನುವುದಕ್ಕೆ ಖಾತ್ರಿ ಇದೆಯೇ?

ಬೈಬಲ್‌ನಲ್ಲಿ ಭವಿಷ್ಯದ ಕುರಿತ ನಿಖರವಾದ ವಿವರಗಳಿವೆ. ಯಾವ ಮಾನವನೂ ಭವಿಷ್ಯ ಹೇಗಿರುತ್ತದೆ ಎಂದು ಖಂಡಿತ ಹೇಳಲಾರ. (ಯೆಹೋಶುವ 23:14) ಸರ್ವಶಕ್ತ ದೇವರಿಂದ ಮಾತ್ರ ಮಾನವಕುಲದ ಭವಿಷ್ಯವನ್ನು ನಿಖರವಾಗಿ ಹೇಳಸಾಧ್ಯ. ಹಾಗಾಗಿ ಬೈಬಲ್‌ ದೇವರಿಂದ ಬಂದ ಗ್ರಂಥ ಎನ್ನುವುದರಲ್ಲಿ ಎರಡು ಮಾತಿಲ್ಲ.​ಯೆಶಾಯ 42:9; 46:10 ಓದಿ.

ಬೈಬಲನ್ನು ಬರೆಸಿದ್ದು ದೇವರು ಅಂದಮೇಲೆ ಅದು ಬೇರೆಲ್ಲ ಪುಸ್ತಕಗಳಿಗಿಂತ ವಿಶಿಷ್ಟವಾಗಿ ಇರಬೇಕಲ್ಲವೆ? ಹೌದು, ಬೈಬಲ್‌ ಅಪ್ರತಿಮವಾಗಿದೆ. ನೂರಾರು ಭಾಷೆಗಳಲ್ಲಿ ಲಭ್ಯವಿದೆ. ಕೋಟಿಗಟ್ಟಲೆ ಪ್ರತಿಗಳು ಮುದ್ರಣಗೊಂಡು ಜನರ ಕೈಸೇರುತ್ತಿವೆ. ತುಂಬಾ ವರ್ಷಗಳ ಹಿಂದೆ ಬರೆದ ಗ್ರಂಥವಾದರೂ ಸೃಷ್ಟಿಯ ಬಗ್ಗೆ ಅದರಲ್ಲಿರುವ ವಿವರಗಳು ಈಗಿನ ವಿಜ್ಞಾನ ಕಂಡುಹಿಡಿದಿರುವ ವಿಷಯಗಳಿಗೆ ಸಹಮತದಲ್ಲಿವೆ. ಬೈಬಲನ್ನು ಬರೆದ 40 ಪುರುಷರು ವಿಭಿನ್ನ ಕಾಲಘಟ್ಟದಲ್ಲಿ ಜೀವಿಸಿದರೂ ಅವರು ಬರೆದ ವಿಚಾರಗಳು ಒಂದಕ್ಕೊಂದು ಸಹಮತದಲ್ಲಿವೆ. * ಮಾತ್ರವಲ್ಲ ದೇವರ ಪ್ರೀತಿಯ ಬಗ್ಗೆ ಸುಂದರ ಚಿತ್ರಣ ನೀಡುತ್ತವೆ. ಖಂಡಿತ ಮಾನವರು ತಮ್ಮ ಸ್ವಂತ ಸಾಮರ್ಥ್ಯದಿಂದ ಆ ವಿವರಣೆ ನೀಡಸಾಧ್ಯವಿಲ್ಲ. ಇಂದಿಗೂ ಜನರನ್ನು ಒಳ್ಳೇ ವ್ಯಕ್ತಿಗಳಾಗಿ ಬದಲಿಸುವ ಶಕ್ತಿ ಬೈಬಲಿಗಿದೆ. ಈ ಸತ್ಯಾಂಶಗಳು ಬೈಬಲನ್ನು ದೇವರೇ ಬರೆಸಿದನು ಎಂದು ಪುರಾವೆ ನೀಡುತ್ತವೆ.​1 ಥೆಸಲೊನೀಕ 2:13 ಓದಿ.

ವಿಡಿಯೊ ನೋಡಿ ಬೈಬಲ್‌ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು?

 3. ಬೈಬಲಿನಲ್ಲಿ ಏನಿದೆ?

ಬೈಬಲಿನಲ್ಲಿ ನಾನಾ ವಿಷಯಗಳು ಅಡಕವಾಗಿವೆ. ಅದರಲ್ಲಿ ಒಂದು ದೇವರು ಮಾನವರನ್ನು ಏಕೆ ಸೃಷ್ಟಿಸಿದನು ಎನ್ನುವುದು. ದೇವರು ಈ ಭೂಮಿಯಲ್ಲಿ ಒಂದು ಸುಂದರ ಉದ್ಯಾನವನ ನಿರ್ಮಿಸಿ ಆ ಸುಖನೆಮ್ಮದಿಯ ತಾಣದಲ್ಲಿ ಶಾಶ್ವತವಾಗಿ ಬದುಕುವ ಅವಕಾಶವನ್ನು ಮನುಷ್ಯನಿಗೆ ಕೊಟ್ಟನೆಂದು ಅದು ತಿಳಿಸುತ್ತದೆ. ಆ ಸದವಕಾಶವನ್ನು ಅವನು ಕಳೆದುಕೊಂಡನೆಂದೂ ಆದರೆ ದೇವರು ಮತ್ತೆ ಇಡೀ ಭೂಮಿಯನ್ನು ಅಂತಹ ಉದ್ಯಾನವನವನ್ನಾಗಿ ಮಾಡುವನೆಂದೂ ಬೈಬಲ್‌ ವಿವರ ನೀಡುತ್ತದೆ.​ಪ್ರಕಟನೆ 21:4, 5 ಓದಿ.

ದೇವರ ನಿಯಮಗಳು, ತತ್ವಗಳು, ಸಲಹೆಗಳು ಬೈಬಲಿನಲ್ಲಿವೆ. ದೇವರು ಒಳ್ಳೇ ಜನರೊಂದಿಗೆ ಮತ್ತು ಕೆಟ್ಟ ಜನರೊಂದಿಗೆ ಹೇಗೆ ನಡೆದುಕೊಂಡನು ಎಂಬ ಸಾಕಷ್ಟು ಉದಾಹರಣೆಗಳು ಸಹ ಅದರಲ್ಲಿವೆ. ಅವು ದೇವರ ವ್ಯಕ್ತಿತ್ವ, ಗುಣಗಳನ್ನು ತಿಳಿದುಕೊಳ್ಳಲು ನಮಗೆ ನೆರವಾಗುತ್ತವೆ. ಮಾತ್ರವಲ್ಲ ದೇವರ ಸ್ನೇಹಿತರಾಗಲು ಏನು ಮಾಡಬೇಕೆಂದೂ ತಿಳಿಸುತ್ತವೆ.​ಕೀರ್ತನೆ 19:7, 11; ಯಾಕೋಬ 2:23; 4:8 ಓದಿ.

4. ಬೈಬಲನ್ನು ಓದಿ ಅರ್ಥಮಾಡಿಕೊಳ್ಳಲು ನಿಮಗೆ ಯಾವುದು ಸಹಾಯ ಮಾಡುವುದು?

ಈ ಕಿರುಹೊತ್ತಗೆ ಸಹಾಯ ಮಾಡುತ್ತದೆ. ಯೇಸು ಒಂದೊಂದು ವಚನವನ್ನು ತಿಳಿಸಿ ಅದರ ಅರ್ಥವನ್ನು ಜನರಿಗೆ ವಿವರಿಸಿ ಹೇಳುತ್ತಿದ್ದನು. ಅದೇ ವಿಧಾನವನ್ನು ಈ ಕಿರುಹೊತ್ತಗೆಯಲ್ಲಿ ಅನುಸರಿಸಲಾಗಿದೆ.​ಲೂಕ 24:27, 45 ಓದಿ.

ಬೈಬಲಿನಲ್ಲಿರುವ ಸಿಹಿಸುದ್ದಿ ಮತ್ತೆಲ್ಲೂ ಸಿಗುವುದಿಲ್ಲ. ಹಾಗಿದ್ದರೂ ಕೆಲವರು ಅದನ್ನು ಕೇಳಲು ಇಷ್ಟಪಡುವುದಿಲ್ಲ. ಬೈಬಲನ್ನು ಓದಲು ಆಸಕ್ತಿ ತೋರಿಸುವವರ ಮೇಲೆ ಅವರು ಸಿಟ್ಟಾಗುತ್ತಾರೆ. ಆ ರೀತಿ ಮಾಡುವಾಗ ಬೇಸರ ಮಾಡಿಕೊಳ್ಳಬೇಡಿ. ದೇವರ ಬಗ್ಗೆ ತಿಳಿದರೆ ನಿಮಗೆ ಸಿಗುವ ಆಶೀರ್ವಾದ ಅಂತಿಂತದ್ದಲ್ಲ. ಸಾವೇ ಇಲ್ಲದ ನಿತ್ಯಜೀವ!!​ಯೋಹಾನ 17:3 ಓದಿ.

 

^ ಪ್ಯಾರ. 3 ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಕಿರುಹೊತ್ತಗೆ ನೋಡಿ.