ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಪಾಠ 9

ಸಂಸಾರ ಆನಂದ ಸಾಗರವಾಗಲು ಏನು ಮಾಡಬೇಕು?

ಸಂಸಾರ ಆನಂದ ಸಾಗರವಾಗಲು ಏನು ಮಾಡಬೇಕು?

1. ಸುಖೀ ಸಂಸಾರಕ್ಕೆ ಕಾನೂನುಬದ್ಧ ವಿವಾಹ ಅಗತ್ಯವೇಕೆ?

ಯೆಹೋವನು ಸಂತೋಷವುಳ್ಳ ದೇವರು. ಹಾಗಾಗಿ ಕುಟುಂಬಗಳು ಸಹ ಸಂತೋಷವಾಗಿ ಇರಬೇಕೆಂದು ಇಷ್ಟಪಡುತ್ತಾನೆ. (1 ತಿಮೊಥೆಯ 1:11) ಗಂಡು ಹೆಣ್ಣು ನಡುವೆ ವಿವಾಹವೆಂಬ ಬಂಧವನ್ನು ಆರಂಭಿಸಿದ್ದು ಆತನೇ. ಕುಟುಂಬದಲ್ಲಿ ಸುಖ ನೆಮ್ಮದಿ ಇರಬೇಕಾದರೆ ವಿವಾಹ ಕಾನೂನುಬದ್ಧವಾಗಿ ನಡೆದಿರಬೇಕು. ಏಕೆಂದರೆ ಕಾನೂನುಬದ್ಧ ವಿವಾಹ ಮಾತ್ರ ಹೆತ್ತವರಿಗೂ ಮಕ್ಕಳಿಗೂ ಭದ್ರತೆ ಒದಗಿಸುತ್ತದೆ. ಮದುವೆ ನೋಂದಣಿಯ ವಿಷಯದಲ್ಲಿ ಆಯಾ ದೇಶದಲ್ಲಿರುವ ನಿಯಮವನ್ನು ನಾವು ಪಾಲಿಸಬೇಕು.​ಲೂಕ 2:1, 4, 5 ಓದಿ.

ವಿವಾಹ ಹೇಗೆ ಇರಬೇಕೆನ್ನುವುದು ದೇವರ ಇಚ್ಛೆ? ಒಬ್ಬ ಪುರುಷ ಒಬ್ಬ ಸ್ತ್ರೀಯನ್ನೇ ಮದುವೆಯಾಗಬೇಕು. ಆ ಬಂಧ ಶಾಶ್ವತವಾಗಿರಬೇಕು. ಗಂಡ ಹೆಂಡತಿ ಒಬ್ಬರಿಗೊಬ್ಬರು ನಿಷ್ಠೆ ತೋರಿಸಬೇಕೆಂದು ಯೆಹೋವ ದೇವರು ಬಯಸುತ್ತಾನೆ. (ಇಬ್ರಿಯ 13:4) ವಿವಾಹ ವಿಚ್ಛೇದನವನ್ನು ಆತನು ದ್ವೇಷಿಸುತ್ತಾನೆ. (ಮಲಾಕಿಯ 2:16) ಬಾಳಸಂಗಾತಿ ವ್ಯಭಿಚಾರ ಮಾಡುವುದಾದರೆ ಮಾತ್ರ ವಿಚ್ಛೇದನ ಕೊಟ್ಟು ಬೇರೆ ಮದುವೆ ಮಾಡಿಕೊಳ್ಳಬಹುದು.​ಮತ್ತಾಯ 19:3-6, 9 ಓದಿ.

2. ಗಂಡ ಹೆಂಡತಿ ಹೇಗೆ ನಡೆದುಕೊಳ್ಳಬೇಕು?

ಯೆಹೋವ ದೇವರು ಗಂಡು ಹೆಣ್ಣನ್ನು ಸೃಷ್ಟಿ ಮಾಡಿದು ಮದುವೆಯ ನಂತರ ಒಬ್ಬರಿಗೊಬ್ಬರು ಸಹಾಯಕರಾಗಿ ಇರಬೇಕೆಂಬ ಉದ್ದೇಶದಿಂದಲೇ. (ಆದಿಕಾಂಡ 2:18) ಗಂಡ ಕುಟುಂಬದ ಯಜಮಾನನಾಗಿದ್ದು ಕುಟುಂಬದಲ್ಲಿ ಮುಂದಾಳತ್ವ ವಹಿಸಬೇಕು. ಊಟ ಬಟ್ಟೆ ಇತ್ಯಾದಿಗಳನ್ನು ಒದಗಿಸಬೇಕು. ಮಾತ್ರವಲ್ಲ ಕುಟುಂಬಕ್ಕೆ ದೇವರ ಬಗ್ಗೆ ಕಲಿಸುವ ಜವಾಬ್ದಾರಿ ಸಹ ಆತನದ್ದು. ಆತ ಹೆಂಡತಿಯನ್ನು ನಿಸ್ವಾರ್ಥ ಭಾವದಿಂದ ಪ್ರೀತಿಸಬೇಕು. ಪತಿಪತ್ನಿ ಪರಸ್ಪರ ಪ್ರೀತಿ ಗೌರವದಿಂದ ನಡೆದುಕೊಳ್ಳಬೇಕು. ಎಲ್ಲರಲ್ಲೂ ತಪ್ಪು ಮಾಡುವ ಪ್ರವೃತ್ತಿ ಇರುವ ಕಾರಣ ಕ್ಷಮಾಗುಣ ಇದ್ದರೆ ಮಾತ್ರ ಸುಖೀ ಸಂಸಾರ ಸಾಧ್ಯ.​ಎಫೆಸ 4:31, 32; 5:22-25, 33; 1 ಪೇತ್ರ 3:7 ಓದಿ.

3. ಸಂಸಾರದಲ್ಲಿ ಸಮಸ್ಯೆಯಿದ್ದರೆ ಸಂಗಾತಿಯನ್ನು ತೊರೆಯಬಹುದೇ?

ದಾಂಪತ್ಯದಲ್ಲಿ ಸಮಸ್ಯೆಯಿದ್ದಲ್ಲಿ ಇಬ್ಬರೂ ಪ್ರೀತಿ ತೋರಿಸುತ್ತಾ ಬಾಂಧವ್ಯವನ್ನು ಬಲಪಡಿಸಿಕೊಳ್ಳಬೇಕು. (1 ಕೊರಿಂಥ 13:4, 5) ಕುಟುಂಬದಲ್ಲಿ ಸಮಸ್ಯೆ ಏಳುವಾಗ ಪತಿಪತ್ನಿ ದೂರ ಆಗುವುದನ್ನು ಬೈಬಲ್‌ ಪ್ರೋತ್ಸಾಹಿಸುವುದಿಲ್ಲ.​1 ಕೊರಿಂಥ 7:10-13 ಓದಿ.

 4. ಮಕ್ಕಳೇ, ನೀವು ಹೇಗಿರಬೇಕೆಂದು ದೇವರ ಇಷ್ಟ?

ನೀವು ಸದಾ ಖುಷಿಖುಷಿಯಾಗಿ ಇರಬೇಕೆಂಬುದು ಯೆಹೋವ ದೇವರ ಆಶೆ. ನಿಮ್ಮ ತಾರುಣ್ಯವನ್ನು ಆನಂದಿಸಲು ಬೇಕಾದ ಅಪೂರ್ವ ಸಲಹೆಗಳನ್ನು ಆತನು ಕೊಟ್ಟಿದ್ದಾನೆ. ನೀವು ತಂದೆತಾಯಿ ಮಾತನ್ನು ಕೇಳಿ ಅವರ ಜ್ಞಾನ ಅನುಭವದಿಂದ ಪ್ರಯೋಜನ ಪಡೆಯಬೇಕೆಂದು ಅಪೇಕ್ಷಿಸುತ್ತಾನೆ. (ಕೊಲೊಸ್ಸೆ 3:20) ಯೆಹೋವ ದೇವರು ಮತ್ತು ಯೇಸು ಕ್ರಿಸ್ತ ಹೇಳಿದಂತೆ ನಡೆಯುತ್ತಾ ನಿಮ್ಮ ಬದುಕನ್ನು ಸವಿಯಬೇಕೆಂಬುದು ಸೃಷ್ಟಿಕರ್ತನ ಆಸೆ.​ಪ್ರಸಂಗಿ 11:9–12:1; ಮತ್ತಾಯ 19:13-15; 21:15, 16 ಓದಿ.

5. ಹೆತ್ತವರೇ, ಮಕ್ಕಳು ಖುಷಿಯಿಂದಿರಲು ನೀವೇನು ಮಾಡಬೇಕು?

ಮಕ್ಕಳಿಗೆ ಊಟ ಬಟ್ಟೆ ವಸತಿ ಒದಗಿಸಬೇಕೇನೋ ನಿಜ. (1 ತಿಮೊಥೆಯ 5:8) ಅದೇ ಸಮಯದಲ್ಲಿ ಅವರಿಗೆ ದೇವರ ಬಗ್ಗೆಯೂ ಕಲಿಸಬೇಕು. ಬೈಬಲ್‌ನಿಂದ ಆತನ ಬಗ್ಗೆ ಕಲಿಯುವಂತೆ ಆತನನ್ನು ಪ್ರೀತಿಸುವಂತೆ ಅವರನ್ನು ಪ್ರೋತ್ಸಾಹಿಸಬೇಕು. (ಎಫೆಸ 6:4) ಈ ನಿಟ್ಟಿನಲ್ಲಿ ಮಕ್ಕಳ ಹೃದಯಕ್ಕೆ ಸ್ಫೂರ್ತಿ ನೀಡಬೇಕಾದರೆ ದೇವರನ್ನು ಪ್ರೀತಿಸುವ ವಿಷಯದಲ್ಲಿ ನೀವು ಅವರಿಗೆ ಆದರ್ಶರಾಗಿರಬೇಕು. ದೇವರ ವಾಕ್ಯದಿಂದ ನೀವು ಸಲಹೆಗಳನ್ನು ಕೊಡುವಲ್ಲಿ ನಿಮ್ಮ ಮಕ್ಕಳ ಯೋಚನಾಧಾಟಿ ಹಾಗೂ ವ್ಯಕ್ತಿತ್ವ ಉತ್ತಮವಾಗಿ ರೂಪುಗೊಳ್ಳುತ್ತದೆ.​ಧರ್ಮೋಪದೇಶಕಾಂಡ 6:4-7; ಜ್ಞಾನೋಕ್ತಿ 22:6 ಓದಿ.

ಮಕ್ಕಳ ಬೆಳವಣಿಗೆಗೆ ಪ್ರೋತ್ಸಾಹ ಶ್ಲಾಘನೆ ಅತ್ಯಾವಶ್ಯ. ಅದೇ ರೀತಿ ತಪ್ಪುಮಾಡಿದಾಗ ತಿದ್ದಬೇಕಾಗುತ್ತದೆ ಶಿಕ್ಷೆ ನೀಡಬೇಕಾಗುತ್ತದೆ. ಈ ರೀತಿಯ ತರಬೇತಿ ಕೆಟ್ಟ ದಾರಿಗೆ ಹೋಗದಂತೆ ಅವರನ್ನು ತಡೆದು ಸದಾ ಸಂತೋಷವಾಗಿರಲು ನೆರವಾಗುತ್ತದೆ. (ಜ್ಞಾನೋಕ್ತಿ 22:15) ಆದರೆ ಶಿಸ್ತು ಕಠೋರ ಶಿಕ್ಷೆಯಾಗಿರದಂತೆ ನೋಡಿಕೊಳ್ಳಿ.​ಕೊಲೊಸ್ಸೆ 3:21 ಓದಿ.

ಪೋಷಕರು ಹಾಗೂ ಮಕ್ಕಳಿಗೆಂದೇ ಯೆಹೋವನ ಸಾಕ್ಷಿಗಳು ಹಲವಾರು ಪುಸ್ತಕಗಳನ್ನು ಹೊರತಂದಿದ್ದಾರೆ. ಈ ಪುಸ್ತಕಗಳಲ್ಲಿ ಬೈಬಲಿನ ಅತ್ಯಮೂಲ್ಯ ಸಲಹೆಗಳು ಅಡಕವಾಗಿವೆ.​ಕೀರ್ತನೆ 19:7, 11 ಓದಿ.