ಪಾಠ 4
ಯೇಸು ಯಾರು?
1. ಯೇಸು ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟುವ ಮುಂಚೆ ಎಲ್ಲಿದ್ದನು?
ಯೇಸು ಭೂಮಿಯಲ್ಲಿ ಜನಿಸುವ ಮುಂಚೆ ಸ್ವರ್ಗದಲ್ಲಿ ದೇವದೂತನಾಗಿದ್ದನು. ಯೆಹೋವ ದೇವರು ಆಕಾಶ ಭೂಮಿ ಎಲ್ಲವನ್ನೂ ಸೃಷ್ಟಿಸುವ ಮೊದಲು ಯೇಸುವನ್ನು ಸೃಷ್ಟಿಮಾಡಿದನು. (ಯೋಹಾನ 8:23) ಅವನ ಮೂಲಕವೇ ಮಿಕ್ಕಿದೆಲ್ಲವನ್ನೂ ಸೃಷ್ಟಿಸಿದನು. ಯೇಸುವನ್ನು ದೇವರು ನೇರವಾಗಿ ಸೃಷ್ಟಿಸಿದ್ದರಿಂದ ಬೈಬಲ್ ಅವನನ್ನು ದೇವರ “ಏಕೈಕಜಾತ” ಪುತ್ರ ಎಂದು ಕರೆಯುತ್ತದೆ. (ಯೋಹಾನ 1:14) ತನ್ನ ಪ್ರತಿನಿಧಿಯಾಗಿ ಉಪಯೋಗಿಸಿದ್ದರಿಂದ “ವಾಕ್ಯ” ಎಂದು ಹೇಳುತ್ತದೆ.—ಜ್ಞಾನೋಕ್ತಿ 8:22, 23, 30; ಕೊಲೊಸ್ಸೆ 1:15, 16 ಓದಿ.
2. ಯೇಸು ಮನುಷ್ಯನಾಗಿ ಹುಟ್ಟಲು ಕಾರಣವೇನು?
ಸ್ವರ್ಗದಲ್ಲಿ ದೇವದೂತನಾಗಿದ್ದ ಯೇಸುವಿನ ಪ್ರಾಣವನ್ನು ಕನ್ಯೆ ಮರಿಯಳ ಗರ್ಭಕ್ಕೆ ದೇವರು ಸ್ಥಳಾಂತರಿಸಿದನು. ಹಾಗಾಗಿ ಅವನಿಗೆ ಮಾನವ ತಂದೆ ಇರಲಿಲ್ಲ. (ಲೂಕ 1:30-35) ಯೇಸು ಮನುಷ್ಯನಾಗಿ ಹುಟ್ಟಲು ಮುಖ್ಯವಾಗಿ ಮೂರು ಕಾರಣಗಳಿದ್ದವು. (1) ದೇವರ ಕುರಿತು ಸತ್ಯವನ್ನು ಬೋಧಿಸಲು (2) ಕಷ್ಟಸಮಸ್ಯೆ ಬಂದಾಗಲೂ ದೇವರ ಚಿತ್ತವನ್ನು ಬಿಡದೆ ಮಾಡುವುದು ಹೇಗೆಂದು ತೋರಿಸಲು (3) ಪ್ರಾಣವನ್ನು ಅರ್ಪಿಸಿ ನಮಗಾಗಿ “ವಿಮೋಚನಾ ಮೌಲ್ಯ” ಕೊಡಲು.—ಮತ್ತಾಯ 20:28 ಓದಿ.
3. ದೇವರು ಏಕೆ ವಿಮೋಚನಾ ಮೌಲ್ಯದ ಏರ್ಪಾಡು ಮಾಡಿದನು?
ಒಬ್ಬ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಕಾಪಾಡಲು ಅಥವಾ ವಿಮೋಚಿಸಲು ತೆರುವ ಬೆಲೆಯೇ ವಿಮೋಚನಾ ಮೌಲ್ಯ. (ವಿಮೋಚನಕಾಂಡ 21:29, 30) ದೇವರು ಮನುಷ್ಯನನ್ನು ಸದಾಕಾಲ ಬದುಕುವಂಥ ರೀತಿಯಲ್ಲಿ ಸೃಷ್ಟಿಸಿದನು. ಮನುಷ್ಯರು ವೃದ್ಧರಾಗುವುದು ಸಾಯುವುದು ದೇವರ ಇಷ್ಟವಾಗಿರಲಿಲ್ಲ. ಇದು ಮೊದಲ ಮನುಷ್ಯನಾದ ಆದಾಮನನ್ನು ಸೃಷ್ಟಿಮಾಡಿದಾಗ ದೇವರು ಹೇಳಿದ ಮಾತಿನಿಂದ ಗೊತ್ತಾಗುತ್ತದೆ. ಆದಾಮ “ಪಾಪ” ಮಾಡಿದರೆ ಮಾತ್ರ ಅಂದರೆ ತನ್ನ ಮಾತನ್ನು ಮೀರಿದರೆ ಮಾತ್ರ ಸಾಯುವನೆಂದು ದೇವರು ಸ್ಪಷ್ಟವಾಗಿ ಹೇಳಿದ್ದನು. ಆದಾಮ ಪಾಪ ಮಾಡಿರದಿದ್ದರೆ ಸಾವೇ ಬರುತ್ತಿರಲಿಲ್ಲ. (ಆದಿಕಾಂಡ 2:16, 17; 5:5) ಆದರವನು ಪಾಪ ಮಾಡಿ ಆ ಪಾಪದ ಶಿಕ್ಷೆಯಾದ ಮರಣವನ್ನು ಎಲ್ಲ ಮಾನವರಿಗೆ ಬಳುವಳಿಯಾಗಿ ಕೊಟ್ಟನು. ಪಿತ್ರಾರ್ಜಿತವಾಗಿ ಪಡೆದ ಈ ಮರಣಶಿಕ್ಷೆಯಿಂದ ನಮ್ಮನ್ನು ಬಿಡಿಸುವುದಕ್ಕೆ ಯಾರಾದರೂ ವಿಮೋಚನಾ ಮೌಲ್ಯ ಅರ್ಪಿಸಬೇಕಿತ್ತು.—ರೋಮನ್ನರಿಗೆ 5:12; 6:23 ಓದಿ.
ಅಂಥ ವಿಮೋಚನಾ ಮೌಲ್ಯವನ್ನು ಯಾರು ಕೊಡಸಾಧ್ಯ? ನಾವು ಮೃತಪಟ್ಟಾಗ ನಮ್ಮ ಪಾಪದ ಫಲವನ್ನು ಅನುಭವಿಸುತ್ತೇವೆ. ಅಪರಿಪೂರ್ಣ ಮನುಷ್ಯರಾದ ನಮಗೆ ಇತರರನ್ನು ಪಾಪದ ಶಿಕ್ಷೆಯಿಂದ ಬಿಡಿಸಲು ಸಾಧ್ಯವಿಲ್ಲ.—ಕೀರ್ತನೆ 49:7-9 ಓದಿ.
ವಿಡಿಯೊ ನೋಡಿ ಯೇಸು ಏಕೆ ಜೀವಕೊಟ್ಟನು?
4. ಯೇಸು ಯಾಕೆ ಜೀವಕೊಟ್ಟನು?
ಯೇಸುವಿನಲ್ಲಿ ಪಾಪ ಇರಲಿಲ್ಲ. ಅವನು ಪರಿಪೂರ್ಣ ವ್ಯಕ್ತಿಯಾಗಿದ್ದನು. ಯಾವತ್ತೂ ಪಾಪ ಮಾಡದ ಕಾರಣ ನಮ್ಮಂತೆ ಆತ ಸಾಯಬೇಕಾಗಿರಲಿಲ್ಲ. ಅವನು ಜೀವ ಕೊಟ್ಟದ್ದು ಎಲ್ಲ ಮಾನವರನ್ನು ಪಾಪದಿಂದ ವಿಮೋಚಿಸುವುದಕ್ಕಾಗಿ. ದೇವರು ತನ್ನ ಮಗನಾದ ಯೇಸುವನ್ನು ಭೂಮಿಗೆ ಕಳುಹಿಸಲು ಕಾರಣ ನಮ್ಮ ಮೇಲೆ ಇಟ್ಟಿರುವ ಅಪಾರ ಪ್ರೀತಿ. ಯೇಸು ಸಹ ನಮ್ಮೆಲ್ಲರನ್ನು ತುಂಬ ಪ್ರೀತಿಸುತ್ತಾನೆ. ಹಾಗಾಗಿಯೇ ತಂದೆಯ ಮಾತನ್ನು ಪಾಲಿಸಿ ನಮಗೋಸ್ಕರ ಜೀವಕೊಟ್ಟನು.—ಯೋಹಾನ 3:16; ರೋಮನ್ನರಿಗೆ 5:18, 19 ಓದಿ.
5. ಯೇಸು ಈಗ ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ?
ಯೇಸು ಭೂಮಿಯಲ್ಲಿದ್ದಾಗ ಕಾಯಿಲೆ ಬಿದ್ದವರನ್ನು ವಾಸಿ ಮಾಡಿದನು. ಸತ್ತವರನ್ನು ಬದುಕಿಸಿದನು. ಜನರ ಕಷ್ಟಗಳಿಗೆ ಸ್ಪಂದಿಸಿ ನೆರವಾದನು. ಇವೆಲ್ಲ ಅವನು ಮುಂದೆ ಇಡೀ ಮಾನವಕುಲಕ್ಕಾಗಿ ಮಾಡಲಿದ್ದ ಸಂಗತಿಗಳ ನಸುನೋಟವಾಗಿತ್ತು. (ಮತ್ತಾಯ 15:30, 31; ಯೋಹಾನ 5:28) ಯೇಸು ಮೃತಪಟ್ಟಾಗ ದೇವರು ಅವನನ್ನು ಪುನರುತ್ಥಾನ ಮಾಡಿ ಬದುಕಿಸಿದನು. (1 ಪೇತ್ರ 3:18) ಪುನರುತ್ಥಾನಗೊಂಡ ಯೇಸು ಸ್ವರ್ಗಕ್ಕೆ ಹೋಗಿ ಯೆಹೋವ ದೇವರ ಬಲಗಡೆಯಲ್ಲಿ ಆಸೀನನಾದನು. ಸಮಯಾನಂತರ ದೇವರು ಅವನನ್ನು ಇಡೀ ಭೂಮಿಗೆ ರಾಜನನ್ನಾಗಿ ಮಾಡಿದನು. (ಇಬ್ರಿಯ 10:12, 13) ಈಗ ಯೇಸು ಸ್ವರ್ಗದಲ್ಲಿ ರಾಜನಾಗಿ ಆಳ್ವಿಕೆ ಮಾಡುತ್ತಿದ್ದಾನೆ. ಈ ಸಿಹಿಸುದ್ದಿಯನ್ನು ಯೇಸುವಿನ ಅನುಯಾಯಿಗಳು ಜಗತ್ತಿನ ಎಲ್ಲೆಡೆಯ ಜನರಿಗೆ ತಿಳಿಸುತ್ತಿದ್ದಾರೆ.—ದಾನಿಯೇಲ 7:13, 14; ಮತ್ತಾಯ 24:14 ಓದಿ.
ದೇವರಿಂದ ಅಧಿಕಾರ ಪಡೆದಿರುವ ಯೇಸು ಶೀಘ್ರದಲ್ಲೇ ನಮ್ಮ ಎಲ್ಲ ಕಷ್ಟಗಳನ್ನು ಹಾಗೂ ಕಷ್ಟಗಳಿಗೆ ಕಾರಣರಾದವರನ್ನು ಅಳಿಸಿ ಹಾಕುವನು. ಭೂಮಿಯನ್ನು ಸದಾ ಸುಖ ನೆಮ್ಮದಿಯ ಬೀಡಾಗಿಸುವನು. ಆ ಸಂತೋಷದ ಬಾಳ್ವೆಯನ್ನು ತಮ್ಮದಾಗಿಸಲು ಇಚ್ಛಿಸುವವರು ಯೇಸುವಿನಲ್ಲಿ ನಂಬಿಕೆಯಿಟ್ಟು ಆತನ ಮಾತನ್ನು ಪಾಲಿಸಬೇಕು.—ಕೀರ್ತನೆ 37:9-11 ಓದಿ.