ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 10

ಯಾವ ರೀತಿಯ ಆರಾಧನೆ ಸರಿ?

ಯಾವ ರೀತಿಯ ಆರಾಧನೆ ಸರಿ?

1. ಎಷ್ಟು ಸತ್ಯ ಧರ್ಮಗಳಿವೆ?

“ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ.”​—ಮತ್ತಾಯ 7:15.

ಯೇಸು ತನ್ನ ಅನುಯಾಯಿಗಳಿಗೆ ಬೋಧಿಸಿದ್ದು ಒಂದೇ ಒಂದು ಸತ್ಯ ಧರ್ಮದ ಕುರಿತು. ಮಾನವರು ಸದಾಕಾಲ ಬಾಳಬೇಕಾದರೆ ಏನು ಮಾಡಬೇಕೆಂದು ಆ ಧರ್ಮ ದಾರಿ ತೋರಿಸುತ್ತದೆ. “ಅದನ್ನು ಕಂಡುಕೊಳ್ಳುವವರು ಕೊಂಚವೇ ಜನ” ಎಂದು ಯೇಸು ಹೇಳಿದನು. (ಮತ್ತಾಯ 7:14) ಬೈಬಲ್‌ನಲ್ಲಿ ತಿಳಿಸಿರುವ ರೀತಿಯಲ್ಲಿ ಸಲ್ಲಿಸಲಾಗುವ ಆರಾಧನೆಗೆ ಮಾತ್ರ ಸೃಷ್ಟಿಕರ್ತ ದೇವರು ಪ್ರಸನ್ನನಾಗುತ್ತಾನೆ. ಅಂಥ ಆರಾಧನೆ ಮಾಡುವವರ ನಂಬಿಕೆ ಸಹ ಒಂದೇ ರೀತಿ ಇರುತ್ತದೆ. ಅಲ್ಲದೆ ಅವರಲ್ಲಿ ಐಕ್ಯತೆ ಇರುತ್ತದೆ.​ಯೋಹಾನ 4:23, 24; 14:6; ಎಫೆಸ 4:4, 5 ಓದಿ.

ವಿಡಿಯೊ ನೋಡಿ ದೇವರು ಎಲ್ಲಾ ರೀತಿಯ ಆರಾಧನೆಗಳನ್ನು ಸ್ವೀಕರಿಸುತ್ತಾನಾ?

2. ಸುಳ್ಳು ಕ್ರೈಸ್ತರ ಬಗ್ಗೆ ಯೇಸು ನಮಗೆ ಯಾವ ಎಚ್ಚರಿಕೆ ನೀಡಿದ್ದಾನೆ?

’ತಾವು ದೇವರನ್ನು ತಿಳಿದಿದ್ದೇವೆಂದು ಅವರು ಬಹಿರಂಗವಾಗಿ ಪ್ರಕಟಿಸುತ್ತಾರೆ, ಆದರೆ ತಮ್ಮ ಕೃತ್ಯಗಳಿಂದ ಆತನನ್ನು ಅಲ್ಲಗಳೆಯುತ್ತಾರೆ.​—ತೀತ 1:16.

ಸುಳ್ಳು ಬೋಧಕರು ಕ್ರೈಸ್ತ ಧರ್ಮವನ್ನು ಭ್ರಷ್ಟಗೊಳಿಸುವರು ಎಂಬ ಎಚ್ಚರಿಕೆಯನ್ನು ಯೇಸು ನೀಡಿದ್ದನು. ಇವರು ಮೇಲ್ನೋಟಕ್ಕೆ ಸತ್ಯ ಆರಾಧಕರಂತೆ ಕಾಣುತ್ತಾರಷ್ಟೆ. ಚರ್ಚುಗಳಿಗೆ ಹೋಗುವ ಅವರ ಹಿಂಬಾಲಕರು ತಾವೇ ಕ್ರೈಸ್ತರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ನಿಜವಾದ ಕ್ರೈಸ್ತರಲ್ಲ ಎನ್ನುವುದನ್ನು ನೀವೇ ಕಂಡುಹಿಡಿಯಬಹುದು. ಹೇಗೆ? ಅವರ ನಡತೆ ಮತ್ತು ಕಾರ್ಯಗಳಿಂದ.​ಮತ್ತಾಯ 7:13-23 ಓದಿ.

3. ಸತ್ಯ ಆರಾಧಕರು ಯಾರೆಂದು ಕಂಡುಹಿಡಿಯುವುದು ಹೇಗೆ?

ಈ ಕೆಳಗಿನ ಐದು ವಿಷಯಗಳು ಸಹಾಯ ಮಾಡುತ್ತವೆ:

  • ಸತ್ಯ ಆರಾಧಕರು ಬೈಬಲನ್ನು ದೇವರ ವಾಕ್ಯವೆಂದು ನಂಬುತ್ತಾರೆ. ಅದರಲ್ಲಿರುವ ತತ್ವಗಳನ್ನು ಜೀವನದಲ್ಲಿ ಪಾಲಿಸುತ್ತಾರೆ. ಹೀಗೆ ಸತ್ಯ ಧರ್ಮಕ್ಕೂ ಮಾನವ ವಿಚಾರಗಳ ಮೇಲೆ ಆಧರಿಸಿರುವ ಧರ್ಮಗಳಿಗೂ ತುಂಬ ವ್ಯತ್ಯಾಸವಿದೆ. (ಮತ್ತಾಯ 15:7-9) ಸತ್ಯ ಆರಾಧಕರು ‘ಹೇಳುವುದು ಒಂದು ಮಾಡುವುದು ಮತ್ತೊಂದಲ್ಲ.’ ತಾವು ಬೋಧಿಸುವುದನ್ನು ಪಾಲಿಸುತ್ತಾರೆ.​ಯೋಹಾನ 17:17; 2 ತಿಮೊಥೆಯ 3:16, 17 ಓದಿ.

  • ಸತ್ಯ ಆರಾಧಕರು “ಯೆಹೋವ” ದೇವರ ಹೆಸರನ್ನು ಮಹಿಮೆಪಡಿಸುತ್ತಾರೆ. ಯೇಸು ಕ್ರಿಸ್ತನು ದೇವರ ಹೆಸರನ್ನು ಮಹಿಮೆಪಡಿಸಿದನು. ಜನರಿಗೆ ದೇವರ ಹೆಸರನ್ನು ತಿಳಿಸಿದನು. ದೇವರ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡಿದನು. ದೇವರ ನಾಮ “ಪವಿತ್ರೀಕರಿಸಲ್ಪಡಲಿ” ಎಂದು ಪ್ರಾರ್ಥಿಸುವಂತೆ ಕಲಿಸಿದನು. (ಮತ್ತಾಯ 6:9) ನಿಮ್ಮ ಊರಲ್ಲಿ ಯಾವ ಧರ್ಮದ ಜನರು ಸೃಷ್ಟಿಕರ್ತ ದೇವರ ಹೆಸರು ಯೆಹೋವ ಎಂದು ಬೋಧಿಸುತ್ತಾರೆ?​ಯೋಹಾನ 17:26; ರೋಮನ್ನರಿಗೆ 10:13, 14 ಓದಿ.

  • ಸತ್ಯ ಆರಾಧಕರು ದೇವರ ಸರ್ಕಾರದ ಬಗ್ಗೆ ಸಾರುತ್ತಾರೆ. ತನ್ನ ಸರ್ಕಾರದ ಬಗ್ಗೆ ತಿಳಿಸಲು ದೇವರು ಯೇಸುವನ್ನು ಭೂಮಿಗೆ ಕಳುಹಿಸಿದನು. ದೇವರ ಸರ್ಕಾರ ಮಾತ್ರ ಮಾನವಕುಲದ ಸಮಸ್ಯೆಗಳನ್ನು ಪರಿಹರಿಸುತ್ತದೆ. ಆ ಸರ್ಕಾರದ ಬಗ್ಗೆ ಯೇಸು ಕೊನೆ ಉಸಿರಿನವರೆಗೂ ಸಾರಿದನು. (ಲೂಕ 4:43; 8:1; 23:42, 43) ತನ್ನ ಅನುಯಾಯಿಗಳು ಸಹ ದೇವರ ಸರ್ಕಾರದ ಬಗ್ಗೆ ಸಾರಬೇಕೆಂದು ತಿಳಿಸಿದನು. ಈಗ ಹೇಳಿ ಇವತ್ತು ಯಾವ ಧರ್ಮದವರು ದೇವರ ಸರ್ಕಾರ ಈ ಭೂಮಿ ಮೇಲೆ ಆಳ್ವಿಕೆ ನಡೆಸುವುದು ಎಂದು ಹೇಳುತ್ತಾರೆ?​ಮತ್ತಾಯ 24:14 ಓದಿ.

  • ಯೇಸುವಿನ ಅನುಯಾಯಿಗಳು ಈ ಕೆಟ್ಟ ಲೋಕದ ಭಾಗವಾಗಿ ಇರುವುದಿಲ್ಲ. ಅಂದರೆ ರಾಜಕೀಯದಲ್ಲಿ ಅಥವಾ ಸಾಮಾಜಿಕ ಸಂಘರ್ಷಣೆಗಳಲ್ಲಿ ಭಾಗವಹಿಸುವುದಿಲ್ಲ. (ಯೋಹಾನ 17:16; 18:36) ಅವರು ಲೋಕದಲ್ಲಿರುವ ಕೆಟ್ಟ ವಿಚಾರ ಪ್ರವೃತ್ತಿಗಳಿಂದ ದೂರವಿರುತ್ತಾರೆ.​ಯಾಕೋಬ 4:4 ಓದಿ.

  • ಸತ್ಯ ಕ್ರೈಸ್ತರು ಎಲ್ಲರನ್ನೂ ಪ್ರೀತಿಸುತ್ತಾರೆ. ಅವರು ಎಲ್ಲಾ ಜಾತಿಯ ಜನರನ್ನು ಸಮಾನತೆಯಿಂದ ಕಾಣಲು ಬೈಬಲ್‌ನಿಂದ ಕಲಿತಿದ್ದಾರೆ. ಸುಳ್ಳು ಧರ್ಮಗಳು ದೇಶ-ದೇಶಗಳ ನಡುವಿನ ಯುದ್ಧಗಳಿಗೆ ಎಲ್ಲಾ ರೀತಿಯ ಬೆಂಬಲ ಕೊಟ್ಟಿವೆ. ಆದರೆ ಸತ್ಯ ಆರಾಧಕರು ಯುದ್ಧದಲ್ಲಿ ಭಾಗವಹಿಸುವುದೂ ಇಲ್ಲ ಬೆಂಬಲಿಸುವುದೂ ಇಲ್ಲ. (ಮೀಕ 4:1-3) ಅವರು ತಮ್ಮ ಸಮಯ ಸಂಪನ್ಮೂಲಗಳನ್ನು ಇತರರಿಗೆ ನೆರವು ನೀಡಲು ಹಾಗೂ ಪ್ರೋತ್ಸಾಹಿಸಲು ಉಪಯೋಗಿಸುತ್ತಾರೆ.​ಯೋಹಾನ 13:34, 35; 1 ಯೋಹಾನ 4:20 ಓದಿ.

4. ಸತ್ಯ ಧರ್ಮವನ್ನು ಕಂಡುಹಿಡಿಯಲು ಈಗ ನಿಮ್ಮಿಂದ ಸಾಧ್ಯವೇ?

ಯಾವ ಧರ್ಮ ಬೈಬಲ್‌ನಲ್ಲಿರುವ ಸತ್ಯಗಳನ್ನು ಬೋಧಿಸುತ್ತದೆ? ದೇವರ ಹೆಸರನ್ನು ಮಹಿಮೆಪಡಿಸುತ್ತದೆ? ಮಾನವಕುಲದ ಸಮಸ್ಯೆಗಳನ್ನು ದೇವರ ಸರ್ಕಾರ ಮಾತ್ರ ಪರಿಹರಿಸುತ್ತದೆ ಎಂದು ಸಾರುತ್ತದೆ? ಯಾವ ಧರ್ಮದ ಜನರು ಯುದ್ಧಗಳಲ್ಲಿ ಭಾಗವಹಿಸದೇ ಎಲ್ಲರನ್ನು ಸಮಾನವಾಗಿ ಪ್ರೀತಿಸುತ್ತಾರೆ? ನಿಮ್ಮ ಉತ್ತರವೇನು?​1 ಯೋಹಾನ 3:10-12 ಓದಿ.