ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 11

ಬೈಬಲ್‌ ತತ್ವಗಳಿಂದ ಯಾವ ಲಾಭವಿದೆ?

ಬೈಬಲ್‌ ತತ್ವಗಳಿಂದ ಯಾವ ಲಾಭವಿದೆ?

1. ಮಾನವರು ದೇವರ ಮಾರ್ಗದರ್ಶನ ಪಾಲಿಸುವುದು ಅತ್ಯಾವಶ್ಯಕ ಏಕೆ?

ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬೈಬಲ್‌ ತತ್ವ ಹೇಗೆ ಸಹಾಯ ಮಾಡುತ್ತದೆ?​—ಕೀರ್ತನೆ 36:9.

ನಮ್ಮ ಸೃಷ್ಟಿಕರ್ತನಿಗೆ ನಮಗಿಂತ ಎಷ್ಟೋ ಪಟ್ಟು ಹೆಚ್ಚು ಜ್ಞಾನ ವಿವೇಕವಿದೆ. ಆತ ಪ್ರೀತಿಯ ತಂದೆಯಂತೆ ನಮ್ಮ ಮೇಲೆ ಬಹಳ ಕಳಕಳಿ ತೋರಿಸುತ್ತಾನೆ. ಮಾನವರು ತನ್ನಿಂದ ದೂರವಾಗಿ ಬದುಕಬೇಕೆನ್ನುವುದು ಆತನ ಉದ್ದೇಶವಲ್ಲ. (ಯೆರೆಮೀಯ 10:23) ಚಿಕ್ಕ ಮಗುವಿಗೆ ತಂದೆತಾಯಿಯ ಆಸರೆ ಮಾರ್ಗದರ್ಶನದ ಅಗತ್ಯವಿರುವಂತೆ ನಮಗೆ ದೇವರ ಮಾರ್ಗದರ್ಶನ ಅತ್ಯಗತ್ಯ. (ಯೆಶಾಯ 48:17, 18) ಆ ಮಾರ್ಗದರ್ಶನವನ್ನು ಆತನು ತತ್ವಗಳ ರೂಪದಲ್ಲಿ ಬೈಬಲ್‌ನಲ್ಲಿ ಕೊಟ್ಟಿದ್ದಾನೆ. ಅದು ನಿಜಕ್ಕೂ ಆತನ ಪ್ರೀತಿಯ ಉಡುಗೊರೆ.​2 ತಿಮೊಥೆಯ 3:16 ಓದಿ.

ಯೆಹೋವ ದೇವರು ನೀಡಿರುವ ತತ್ವಗಳು ಮತ್ತು ನಿಯಮಗಳು ಉತ್ತಮ ಬದುಕನ್ನು ಕಟ್ಟಲು ನೆರವಾಗುತ್ತವೆ. ಅಷ್ಟೇ ಅಲ್ಲ, ಮುಂದೆ ಭವಿಷ್ಯದಲ್ಲಿ ಸದಾಕಾಲ ಬದುಕುವ ಅವಕಾಶವನ್ನು ಕಲ್ಪಿಸಿಕೊಡುತ್ತವೆ. ದೇವರು ನಮ್ಮ ಪ್ರಯೋಜನಕ್ಕೆಂದೇ ನಿಯಮಗಳನ್ನು ಹಾಗೂ ಮಾರ್ಗದರ್ಶನೆಗಳನ್ನು ನೀಡಿದ್ದಾನೆ. ಆದ್ದರಿಂದ ನಾವದನ್ನು ಪಾಲಿಸಿ ಆತನಿಗೆ ಚಿರಋಣಿಗಳಾಗಿರಬೇಕು.​ಕೀರ್ತನೆ 19:7, 11; ಪ್ರಕಟನೆ 4:11 ಓದಿ.

2. ಬೈಬಲ್‌ ತತ್ವ ಎಂದರೇನು?

ಬೈಬಲ್‌ ತತ್ವಗಳು ಮೂಲಭೂತ ಸತ್ಯಗಳಾಗಿದ್ದು ಎಂದಿಗೂ ಬದಲಾಗುವುದಿಲ್ಲ. ಆದರೆ ನಿಯಮಗಳು ಸನ್ನಿವೇಶಕ್ಕೆ ತಕ್ಕಂತೆ ಕೆಲವೊಮ್ಮೆ ಬದಲಾಗಬಹುದು. (ಧರ್ಮೋಪದೇಶಕಾಂಡ 22:8) ಒಂದು ತತ್ವವನ್ನು ಬದುಕಿನಲ್ಲಿ ಹೇಗೆ ಅನ್ವಯಿಸಿಕೊಳ್ಳುವುದು ಎನ್ನುವುದನ್ನು ನಾವು ಆಲೋಚಿಸಿ ತಿಳಿದುಕೊಳ್ಳಬೇಕು. (ಜ್ಞಾನೋಕ್ತಿ 2:10-12) ಉದಾಹರಣೆಗೆ ಜೀವ ದೇವರ ಕೊಡುಗೆ ಎಂದು ಬೈಬಲ್‌ ತಿಳಿಸುತ್ತದೆ. ಆ ಸತ್ಯದಲ್ಲಿ ಅಡಗಿರುವ ತತ್ವವನ್ನು ಅನ್ವಯಿಸಿಕೊಳ್ಳುವುದು ಹೇಗೆ? ಜೀವ ಅಮೂಲ್ಯವಾಗಿರುವ ಕಾರಣ ಅದಕ್ಕೆ ಹಾನಿಯಾಗದ ರೀತಿಯಲ್ಲಿ ನಾವು ಸದಾ ಎಚ್ಚರಿಕೆ ವಹಿಸಬೇಕು. ಕೆಲಸದಲ್ಲಾಗಲಿ ಮನೆಯಲ್ಲಾಗಲಿ ಪ್ರಯಾಣದಲ್ಲಾಗಲಿ ಸುರಕ್ಷತೆಗೆ ಹೆಚ್ಚು ಗಮನಕೊಡಬೇಕು.​ಅಪೊಸ್ತಲರ ಕಾರ್ಯಗಳು 17:28 ಓದಿ.

3. ಯಾವೆರಡು ತತ್ವಗಳು ಅತೀ ಪ್ರಾಮುಖ್ಯ?

ಆ ಎರಡು ತತ್ವಗಳನ್ನು ಯೇಸು ತಿಳಿಸಿದನು. ಮೊದಲನೆಯದು ನಾವು ದೇವರನ್ನು ಅರಿತುಕೊಳ್ಳಬೇಕು, ಪ್ರೀತಿಸಬೇಕು ಮತ್ತು ಸೇವೆ ಸಲ್ಲಿಸಬೇಕು. ಇದೇ ನಮ್ಮ ಬದುಕಿನ ಉದ್ದೇಶವಾಗಿದೆ. ಹಾಗಾಗಿ ನಾವು ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳು ಈ ತತ್ವದ ಮೇಲೆ ಆಧಾರವಾಗಿರಬೇಕು. (ಜ್ಞಾನೋಕ್ತಿ 3:6) ಈ ತತ್ವಕ್ಕೆ ಅನುಸಾರವಾಗಿ ಜೀವಿಸುವವರು ದೇವರ ಸ್ನೇಹವನ್ನು, ಅನಂತ ಜೀವನವನ್ನು ಹಾಗೂ ನಿಜ ಸಂತೋಷವನ್ನು ಸಂಪಾದಿಸಿಕೊಳ್ಳುತ್ತಾರೆ.​ಮತ್ತಾಯ 22:36-38 ಓದಿ.

ಎರಡನೇ ತತ್ವ ಎಲ್ಲರೊಂದಿಗೆ ಒಳ್ಳೇ ಸಂಬಂಧ ಬೆಳೆಸಿಕೊಳ್ಳಲು ನೆರವಾಗುತ್ತದೆ. (1 ಕೊರಿಂಥ 13:4-7) ದೇವರು ಮಾನವರನ್ನು ಪ್ರೀತಿಸುವಂತೆಯೇ ನಾವು ಸಹ ಬೇರೆಯವರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವಾಗ ಎರಡನೇ ತತ್ವವನ್ನು ಅನ್ವಯಿಸಿಕೊಳ್ಳುತ್ತೇವೆ.​ಮತ್ತಾಯ 7:12; 22:39, 40 ಓದಿ.

4. ಬೈಬಲ್‌ ತತ್ವಗಳಿಂದ ಯಾವ ಲಾಭವಿದೆ?

ಕುಟುಂಬದಲ್ಲಿ ಪ್ರೀತಿ ಐಕ್ಯತೆ ಬೆಳೆಸಿಕೊಳ್ಳುವುದು ಹೇಗೆಂದು ಅವು ಕಲಿಸುತ್ತವೆ. (ಕೊಲೊಸ್ಸೆ 3:12-14) ಕುಟುಂಬ ಛಿದ್ರವಾಗದೆ ಸದಾ ಖುಷಿಯಿಂದ ಇರಲು ನೆರವಾಗುವ ಇನ್ನೊಂದು ತತ್ವವನ್ನು ಸಹ ಬೈಬಲ್‌ ಕೊಡುತ್ತದೆ. ವಿವಾಹಬಂಧ ಶಾಶ್ವತವಾಗಿರಬೇಕು ಎಂದು ಅದು ಹೇಳುತ್ತದೆ.​ಆದಿಕಾಂಡ 2:24 ಓದಿ.

ಬೈಬಲ್‌ ತತ್ವಗಳನ್ನು ಅನ್ವಯಿಸುವಾಗ ನಮಗೆ ಎಲ್ಲಾ ರೀತಿಯ ಭದ್ರತೆ ಸಿಗುತ್ತದೆ. ನೆಮ್ಮದಿಯೂ ಇರುತ್ತದೆ. ಉದಾಹರಣೆಗೆ, ಪ್ರಾಮಾಣಿಕ ವ್ಯಕ್ತಿಗಳಾಗಿರಬೇಕು ಶ್ರಮಜೀವಿಗಳಾಗಿರಬೇಕು ಎನ್ನುವ ಬೈಬಲ್‌ ತತ್ವವನ್ನು ಪಾಲಿಸುವುದಾದರೆ ನಿರುದ್ಯೋಗದ ಭೀತಿ ಇರುವುದಿಲ್ಲ. (ಜ್ಞಾನೋಕ್ತಿ 10:4, 26; ಇಬ್ರಿಯ 13:18) ಅತಿಯಾಸೆ ಪಡದೆ ಇದ್ದದ್ದರಲ್ಲೇ ಸಂತೃಪ್ತರಾಗುವಂತೆ ಮತ್ತು ಸುಖಭೋಗಕ್ಕಿಂತ ದೇವರೊಂದಿಗಿನ ಗೆಳೆತನಕ್ಕೆ ಹೆಚ್ಚು ಆದ್ಯತೆ ನೀಡುವಂತೆ ದೇವರ ವಾಕ್ಯವಾದ ಬೈಬಲ್‌ ತಿಳಿಸುತ್ತದೆ.​ಮತ್ತಾಯ 6:24, 25, 33; 1 ತಿಮೊಥೆಯ 6:8-10 ಓದಿ.

ಬೈಬಲ್‌ ತತ್ವಗಳನ್ನು ಅನ್ವಯಿಸುವುದು ನಮ್ಮ ಆರೋಗ್ಯವನ್ನು ಸಹ ಕಾಪಾಡುತ್ತದೆ. (ಜ್ಞಾನೋಕ್ತಿ 14:30; 22:24, 25) ಉದಾಹರಣೆಗೆ, ವಿಪರೀತ ಕುಡಿತವನ್ನು ಖಂಡಿಸುವ ಬೈಬಲ್‌ ನಿಯಮವನ್ನು ಪಾಲಿಸುವುದು ಮಾರಕ ಕಾಯಿಲೆ ಹಾಗೂ ಅಪಘಾತಕ್ಕೆ ತುತ್ತಾಗುವುದನ್ನು ತಪ್ಪಿಸುತ್ತದೆ. (ಜ್ಞಾನೋಕ್ತಿ 23:20) ಹಿತಮಿತವಾದ ಮದ್ಯ ಸೇವನೆಯನ್ನು ಯೆಹೋವ ದೇವರು ಖಂಡಿಸುವುದಿಲ್ಲ. (ಕೀರ್ತನೆ 104:15; 1 ಕೊರಿಂಥ 6:10) ನಮ್ಮ ವರ್ತನೆ ಮಾತ್ರವಲ್ಲ ಆಲೋಚನೆ ಸಹ ಒಳ್ಳೇದಾಗಿರುವಂತೆ ಬೈಬಲ್‌ ತತ್ವಗಳು ಮಾರ್ಗದರ್ಶಿಸುತ್ತವೆ. (ಕೀರ್ತನೆ 119:97-100) ನಿಜ ಕ್ರೈಸ್ತರು ದೇವರ ಮಟ್ಟಗಳನ್ನು ಗೌರವಿಸಿ ಪಾಲಿಸುವುದು ಸ್ವಪ್ರಯೋಜನದ ಉದ್ದೇಶದಿಂದ ಮಾತ್ರವಲ್ಲ ಯೆಹೋವ ದೇವರನ್ನು ಮಹಿಮೆಪಡಿಸುವ ಸಲುವಾಗಿಯೂ ಆಗಿದೆ.​ಮತ್ತಾಯ 5:14-16 ಓದಿ.